ಶಾಸಕರ ಅನರ್ಹತೆ: ಐತಿಹಾಸಿಕ ತೀರ್ಪಿನ ಕುತೂಹಲ

ರಾಜ್ಯ ವಿಧಾನಸಭೆಯ 17 ಶಾಸಕರ ಅನರ್ಹತೆ ಕುರಿತ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಪೂರ್ಣಗೊಂಡಿದ್ದು, ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ. ಅನರ್ಹಗೊಂಡಿರುವ 17 ಶಾಸಕರ ಪೈಕಿ 15 ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಗೆ ನ. 11ರಂದು ಅಧಿಸೂಚನೆ ಹೊರಬೀಳಲಿದ್ದು, ಅದಕ್ಕೆ ಮುನ್ನ ತೀರ್ಪು ಹೊರಬೀಳಲಿದೆ. ಸುಪ್ರಿಂ ಕೋರ್ಟ್ ತೀರ್ಪು ಏನೇ ಇರಲಿ, ಅದು ಐತಿಹಾಸಿಕವಾಗಿರುವುದಂತೂ ಖಂಡಿತ. ಏಕೆಂದರೆ, ಶಾಸಕರನ್ನು ಅನರ್ಹಗೊಳಿಸುವ ಸಂದರ್ಭದಲ್ಲಿ ಸ್ಪೀಕರ್ ಹಲವು ಪ್ರಥಮಗಳನ್ನು ಹುಟ್ಟುಹಾಕಿದ್ದು, ಇವೆಲ್ಲಕ್ಕೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಉತ್ತರ ನೀಡಲಿದೆ. ಮೇಲಾಗಿ ಸ್ಪೀಕರ್ ಅವರ ವಿವೇಚನಾಧಿಕಾರದ ಪರಿಮಿತಿ ಎಷ್ಟು ಎಂಬ ಬಗ್ಗೆಯೂ ನಿರ್ಧಾರವಾಗಲಿದೆ. ಹೀಗಾಗಿ ಸುಪ್ರೀಂ ತೀರ್ಪಿನ ಬಗ್ಗೆ ಕರ್ನಾಟಕ ಮಾತ್ರವಲ್ಲ, ದೇಶದ ಕಾನೂನು ತಜ್ಞರು ಕೂಡ ಎದುರು ನೋಡುತ್ತಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ (2008-13) ಸ್ಪೀಕರ್ ಆಗಿದ್ದ ಕೆ.ಜಿ.ಬೋಪಯ್ಯ ಅವರು 16 ಶಾಸಕರನ್ನು ಅನರ್ಹಗೊಳಿಸಿದ್ದನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದು ಹೊರತುಪಡಿಸಿ ಅನರ್ಹತೆ ಪ್ರಕರಣಗಳಲ್ಲಿ ಸ್ಪೀಕರ್ ಆದೇಶಗಳಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸ್ಪೀಕರ್ ಆದೇಶ ರದ್ದುಗೊಳಿಸಿದ ಉದಾಹರಣೆಗಳು ತೀರಾ ಕಡಿಮೆ. ಹೀಗಾಗಿ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಯಾವ ರೀತಿಯಲ್ಲಿ ತನ್ನ ನಿಲುವು ತೆಗೆದುಕೊಳ್ಳುತ್ತದೆ ಎಂಬ ಕುತೂಹಲವೂ ತೀರ್ಪಿನ ಬಗ್ಗೆ ಹೆಚ್ಚು ಆಸಕ್ತಿ ಮೂಡಲು ಕಾರಣವಾಗಿದೆ.

ಶಾಸಕರ ಅನರ್ಹತೆ ವಿಚಾರ, ಸ್ಪೀಕರ್ ಅವರ ವಿವೇಚಾನಾಧಿಕಾರ ಮತ್ತು ಪರಮಾಧಿಕಾರಕ್ಕೆ ಸಂಬಂಧಿಸಿದಂತೆ ಇರುವ ಗೊಂದಲಗಳ ಕುರಿತಾದ ಪ್ರಕರಣಗಳು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ಮುಂದಿದೆ. ಅದು ಇತ್ಯರ್ಥವಾಗದೆ ಸ್ಪೀಕರ್ ಕೈಗೊಂಡ ನಿಲುವಿನ ಬಗ್ಗೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಪ್ರಶ್ನೆಗೆ ತೀರ್ಪಿನಲ್ಲಿ ಉತ್ತರ ಸಿಗಲಿದೆ. ಹೀಗಾಗಿ ಈ ತೀರ್ಪು ಸ್ಪೀಕರ್ ಆದೇಶವನ್ನು ಎತ್ತಿಹಿಡಿಯಲಿ ಇಲ್ಲವೇ ಆದೇಶ ರದ್ದುಗೊಳಿಸುವ ಅಥವಾ ಭಾಗಷಃ ಸರಿ ಎನ್ನುವಂತೆ ಬರಲಿ, ಅದು ಐತಿಹಾಸಿಕ ತೀರ್ಪು ಆಗಿರುತ್ತದೆ.

ಉತ್ತರ ಸಿಗುವ ಪ್ರಶ್ನೆಗಳು

ಹದಿನೇಳು ಶಾಸಕರ ಅನರ್ಹತೆ ಕುರಿತು ಆದೇಶ ಹೊರಡಿಸಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು ಅವರನ್ನು 15ನೇ ವಿಧಾನಸಭೆ ಅವಧಿಗೆ ಅನರ್ಹ ಎಂದು ಘೋಷಿಸಿದ್ದರು. ಇದುವರೆಗೆ ಯಾವುದೇ ಸ್ಪೀಕರ್ ಈ ರೀತಿ ಅನರ್ಹತೆಗೆ ಸಮಯ ನಿಗದಿ ಮಾಡಿರಲಿಲ್ಲ. ಈ ಅಂಶವನ್ನೇ ಅನರ್ಹ ಶಾಸಕರ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಪ್ರಬಲವಾಗಿ ಆಕ್ಷೇಪಿಸಿದ್ದಾರೆ. ನಿಯಮಾನುಸಾರ ಸ್ಪೀಕರ್ ಅವರಿಗೆ ಅನರ್ಹಗೊಳಿಸಲು ಮಾತ್ರ ಅಧಿಕಾರವಿದೆಯೇ ಹೊರತು ಸಮಯ ನಿಗದಿಪಡಿಸಲು ನಿಯಾವಳಿಯಲ್ಲಿ ಅವಕಾಶವಿಲ್ಲ ಎಂದು ವಕೀಲರು ಹೇಳುತ್ತಾರೆ. ಇದಕ್ಕೆ ಪೂರಕವಾದ ಅಭಿಪ್ರಾಯವನ್ನು ಚುನಾವಣಾ ಆಯೋಗದ ಪರ ವಕೀಲರೂ ವ್ಯಕ್ತಪಡಿಸಿದ್ದಾರೆ. ಅನರ್ಹಗೊಂಡ ಶಾಸಕರನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲು ಸಾಧ್ಯವಿಲ್ಲ. ಸ್ಪೀಕರ್ ಅವರೂ ಈ ರೀತಿಯ ಆದೇಶಗಳನ್ನು ಹೊರಡಿಸುವಂತಿಲ್ಲ ಎಂದು ಹೇಳಿದ್ದರು. ಹೀಗಾಗಿ ಶಾಸಕರನ್ನು ಅನರ್ಹಗೊಳಿಸುವಾಗ ಸ್ಪೀಕರ್ ಅವರು ಇಂತಿಷ್ಟು ಅವಧಿಗೆ ಎಂದು ಸಮಯ ನಿಗದಿಪಡಿಸಬಹುದೇ? ಮುಂತಾದ ಹಲವು ಪ್ರಶ್ನೆಗಳಿಗೆ ಸುಪ್ರೀಂ ತೀರ್ಪಿನಲ್ಲಿ ಉತ್ತರ ಸಿಗಲಿದೆ.

1. ಅನರ್ಹಗೊಂಡಿರುವ 17 ಶಾಸಕರ ಪೈಕಿ 14 ಶಾಸಕರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ವಿರುದ್ಧ ಅನರ್ಹತೆ ದೂರು ದಾಖಲಾಗಿತ್ತು. ಇನ್ನು ಅನಾರೋಗ್ಯದ ಕಾರಣ ನೀಡಿ ಸದನಕ್ಕೆ ಗೈರು ಹಾಜರಾಗಿದ್ದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ವಿಚಾರಣೆಗೊಳಪಡಿಸದೆ, ಅವರಿಂದ ಆಕ್ಷೇಪಣೆಗಳನ್ನು ಪಡೆಯದೆ ಅನರ್ಹಗೊಳಿಸಲಾಗಿತ್ತು. ಅಲ್ಲದೆ, ಇನ್ನಿಬ್ಬರು ಶಾಸಕರನ್ನು ಹಿಂದೆ ಯಾವತ್ತೋ ನೀಡಿದ್ದ ಅನರ್ಹತೆ ದೂರನ್ನು ತಿಂಗಳುಗಳ ಕಾಲ ಮೂಲೆಯಲ್ಲಿಟ್ಟು ಬಳಿಕ ಏಕಾಏಕಿ ಆ ದೂರು ಆಧರಿಸಿ ಅನರ್ಹಗೊಳಿಸಲಾಗಿದೆ. ಇಲ್ಲಿ ರಾಜೀನಾಮೆ ನೀಡಿದ ಬಳಿಕ ಅನರ್ಹತೆ ದೂರು ದಾಖಲಾದರೆ ರಾಜೀನಾಮೆ ಮತ್ತು ಅನರ್ಹತೆ ದೂರುಗಳ ಪೈಕಿ ಯಾವುದನ್ನು ಮೊದಲು ಪರಿಗಣಿಸಬೇಕು ಎಂಬುದು ಪ್ರಶ್ನೆಯಾಗಿದೆ. ನಿಯಮದ ಪ್ರಕಾರ ಮೊದಲು ಬಂದಿದ್ದನ್ನು ಮೊದಲು ಇತ್ಯರ್ಥಗೊಳಿಸಬೇಕು. ಹೀಗಿರುವಾಗ ಶಾಸಕರ ರಾಜೀನಾಮೆ ತಮ್ಮ ಬಳಿ ಇದ್ದರೂ ಅದನ್ನು ಪರಿಗಣಿಸದೆ ಸ್ಪೀಕರ್ ಅವರು ನಂತರ ಬಂದ ಅನರ್ಹತೆ ದೂರು ಆಧರಿಸಿ ಶಾಸಕರನ್ನು ಅನರ್ಹಗೊಳಿಸಿದ್ದು ಸರಿಯೇ? ಶ್ರೀಮಂತ ಪಾಟೀಲ್ ಅವರನ್ನು ವಿಚಾರಣೆ ಮಾಡದೆ ಅನರ್ಹಗೊಳಿಸಲು ಸಾಧ್ಯವೇ? ಹಿಂದೆ ಯಾವತ್ತೋ ನೀಡಿರುವ ದೂರನ್ನು ಪರಿಗಣಿಸಲು ಸ್ಪೀಕರ್ ಅವರಿಗೆ ಅವಕಾಶವಿದೆಯೇ? ತಮ್ಮ ಬಳಿ ಬಂದ ರಾಜೀನಾಮೆ ಅಥವಾ ಅನರ್ಹತೆ ದೂರನ್ನು ಇತ್ಯರ್ಥಪಡಿಸಲು ಸ್ಪೀಕರ್ ಅವರಿಗೆ ಕಾಲಮಿತಿ ಇಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೂ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉತ್ತರ ಸಿಗಬೇಕಾಗುತ್ತದೆ.

2. ಶಾಸಕರು ವಿಪ್ ಉಲ್ಲಂಘಿಸಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಸ್ಪೀಕರ್ ಆದೇಶದಲ್ಲಿ ಹೇಳಲಾಗಿದೆ. ಶಾಸಕರು ರಾಜೀನಾಮೆ ನೀಡಿದ ಬಳಿಕ ಅವರಿಗೆ ವಿಪ್ ಅನ್ವಯವಾಗುತ್ತದೆಯೇ? ಅಲ್ಲದೆ, ತಮಗೆ ವಿಪ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ರಾಜೀನಾಮೆ ನೀಡಿದ್ದ ಶಾಸಕರು ಸುಪ್ರೀಂ ಮೆಟ್ಟಿಲೇರಿದ್ದರು. ಈ ಸಂದರ್ಭದಲ್ಲಿ ಶಾಸಕರನ್ನು ಸದನಕ್ಕೆ ಬರುವಂತೆ ಬಲವಂತ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಹೀಗಿರುವಾಗ ವಿಪ್ ಉಲ್ಲಂಘನೆ ಆಧಾರದ ಮೇಲೆ ಶಾಸಕರನ್ನು ಅನರ್ಹಗೊಳಿಸಿದ್ದು ಕೋರ್ಟ್ ತೀರ್ಪಿನ ಉಲ್ಲಂಘನೆಯಲ್ಲವೇ? ಎಂಬ ಪ್ರಶ್ನೆಗಳು ತೀರ್ಪಿನಿಂದ ಬಗೆಹರಿಯಲಿವೆ.

3. ಶಾಸಕರು ಅನರ್ಹಗೊಂಡು ಪ್ರಕರಣ ಸುಪ್ರೀಂ ಕೋರ್ಟ್ ಏರಿದ ಬಳಿಕ ಸ್ಪೀಕರ್ ಪರ ವಕೀಲರು ಬದಲಾಗಿದ್ದಾರೆ. ವಕೀಲರ ಜತೆಗೆ ಅವರ ನಿಲುವು ಕೂಡ ಬದಲಾಗಿದೆ. ಈ ಹಿಂದೆ ಅನರ್ಹತೆಯನ್ನು ಬಲವಾಗಿ ಸಮರ್ಥಿಸಿ ಸ್ಪೀಕರ್ ಅವರ ವಿವೇಚನಾಧಿಕಾರ, ಪರಮಾಧಿಕಾರದ ಬಗ್ಗೆ ವಕೀಲರು ಪ್ರಸ್ತಾಪಿಸಿದ್ದರು. ಆದರೆ, ಸರ್ಕಾರ ಬದಲಾಗಿ ಬೇರೆಯವರು ಸ್ಪೀಕರ್ ಸ್ಥಾನದಲ್ಲಿ ಕುಳಿತ ಮೇಲೆ ಸ್ಪೀಕರ್ ಪರ ವಕೀಲರ ವಾದ ಸರಣಿಯೂ ಬದಲಾಗಿದೆ. ಅನರ್ಹತೆ ಪ್ರಕರಣವನ್ನು ವಾಪಸ್ ಕಳುಹಿಸಿದಲ್ಲಿ ರಾಜೀನಾಮೆ ಮತ್ತು ಅನರ್ಹತೆ ದೂರುಗಳನ್ನು ಆಧರಿಸಿ ತೀರ್ಪು ಮರುಪರಿಶೀಲಿಸುವುದಾಗಿ ಸ್ಪೀಕರ್ ಪರ ವಕೀಲರು ಸುಪ್ರೀಂ ಕೋರ್ಟ್ ಮುಂದೆ ಹೇಳಿದ್ದಾರೆ. ಸ್ಪೀಕರ್ ಕಚೇರಿ ಈ ರೀತಿ ನಿಲುವು ಬದಲಿಸಲು ಸಾಧ್ಯವೇ? ಎಂಬುದು ಕೂಡ ತೀರ್ಪಿನಿಂದ ಇತ್ಯರ್ಥಗೊಳ್ಳುತ್ತದೆ.

ಚುನಾವಣಾ ಆಯೋಗದ ವಾದ ಅನರ್ಹರಿಗೆ ವರವೇ?

ಈ ಮಧ್ಯೆ ಅನರ್ಹ ಶಾಸಕರನ್ನು ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಎಂಬ ನಿರ್ಬಧ ಹೇರುವಂತಿಲ್ಲ. ಅವರು ಚುನಾವಣೆಗೆ ಸ್ಪರ್ಧಿಸಲು ನಮ್ಮ ಆಕ್ಷೇಪಣೆ ಇಲ್ಲ ಎಂಬ ಚುನಾವಣಾ ಆಯೋಗದ ವಾದ ಅನರ್ಹ ಶಾಸಕರಿಗೆ ವರವಾಗುವುದೇ ಎಂಬ ಅನುಮಾನ ಉಂಟುಮಾಡಿದೆ. ಅನರ್ಹರನ್ನು ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದಾದರೆ ಸ್ಪೀಕರ್ ಅವರು 17 ಶಾಸಕರನ್ನು 15ನೇ ವಿಧಾನಸಭೆ ಅವಧಿಗೆ ಅನರ್ಹಗೊಳಿಸಿದ ಆದೇಶವೇ ಅಸಿಂಧುವಾಗುತ್ತದೆ. ಹೀಗಾಗಿ ಆಯೋಗದ ವಾದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದರೆ ಸ್ಪೀಕರ್ ಅವರ ಅನರ್ಹತೆ ಆದೇಶವನ್ನು ಎತ್ತಿಹಿಡಿದರೂ ಸಮಯ ನಿಗದಿಪಡಿಸಿದ್ದು ರದ್ದಾಗುತ್ತದೆ. ಅಂದರೆ, ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಹೀಗಾಗಿ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಅನರ್ಹ ಶಾಸಕರ ಭವಿಷ್ಯ ನಿರ್ಧರಿಸುವುದರ ಜತೆಗೆ ಸ್ಪೀಕರ್ ಅವರ ಕಾರ್ಯವ್ಯಾಪ್ತಿಯ ಬಗ್ಗೆಯೂ ವಿಶ್ಲೇಷಣೆ ಮಾಡಲಿದೆ. ಈ ಕಾರಣಕ್ಕಾಗಿಯೇ ಕಾನೂನು ವಿಶ್ಲೇಷಕರು ತೀರ್ಪನ್ನು ಆಸಕ್ತಿಯಿಂದ ಎದುರು ನೋಡುತ್ತಿದ್ದಾರೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...