ಕರ್ನಾಟಕ ವಿಧಾನಸಭೆಯ 17 ಶಾಸಕರನ್ನು ಅನರ್ಹಗೊಳಿಸಿರುವ ಕುರಿತಂತೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ತನ್ನ ತೀರ್ಪು ಪ್ರಕಟಿಸಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಲು ಕಾರಣರಾದ 17 ಶಾಸಕರನ್ನು 15ನೇ ವಿಧಾನಸಭೆ ಅವಧಿಗೆ (2023ರವರೆಗೆ) ಅನರ್ಹಗೊಳಿಸಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ಆದೇಶವನ್ನು ಎರಡು ಭಾಗಗಳಾಗಿ ವಿಂಗಡಿಸಿ ತೀರ್ಪು ನೀಡಿರುವ ಕೋರ್ಟ್, ಅನರ್ಹತೆ ಆದೇಶವನ್ನು ಎತ್ತಿಹಿಡಿದಿದೆಯಾದರೂ ಅನರ್ಹತೆಗೆ ಕಾಲಮಿತಿ ನಿಗದಿಪಡಿಸಿದ್ದ ಸ್ಪೀಕರ್ ಆದೇಶವನ್ನು ರದ್ದುಗೊಳಿಸಿದೆ. ಇದರ ಪರಿಣಾಮ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುವುದೇ ಎಂಬ ಅನರ್ಹ ಶಾಸಕರ ಆತಂಕ ದೂರವಾಗಿದ್ದು, ಚುನಾವಣೆಗೆ ಸ್ಪರ್ಧಿಸಲು ಯಾವುದೇ ಅಡ್ಡಿ ಇಲ್ಲದಂತಾಗಿದೆ.
ಅನರ್ಹಗೊಂಡಿರುವ 17 ಶಾಸಕರ ಪೈಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಿಗದಿಯಾಗಿದ್ದು, ಆ 15 ಕ್ಷೇತ್ರಗಳಲ್ಲೂ ಅನರ್ಹ ಶಾಸಕರು ಸ್ಪರ್ಧಿಸಬಹುದು. ಅಷ್ಟೇ ಅಲ್ಲ, ಸ್ಪರ್ಧಿಸಿ ಗೆದ್ದರೆ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಅವರು ಸಚಿವ ಸ್ಥಾನ ಸೇರಿದಂತೆ ಯಾವುದೇ ರೀತಿಯ ಅಧಿಕಾರ ಹೊಂದಲು ಅಡ್ಡಿ ಇಲ್ಲ. ಹೀಗಾಗಿ ಈ ತೀರ್ಪು ಅನರ್ಹ ಶಾಸಕರಿಗೆ ಗೆಲುವು ತಂದುಕೊಟ್ಟಿದೆ ಎಂದು ಹೇಳಬಹುದು. ಆದರೆ, ಅನರ್ಹತೆ ಅವಧಿಯನ್ನು ಮಾತ್ರ ರದ್ದುಗೊಳಿಸಿ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದರಿಂದ ಸ್ಪೀಕರ್ ಆದೇಶಕ್ಕೂ ಭಾಗಶಃ ಗೆಲುವು ಸಿಕ್ಕಂತಾಗಿದೆ.
ಅನರ್ಹ ಶಾಸಕರು ಬಿಜೆಪಿಗೆ ಸೇರಲೆಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟರು. ಅವರು ಬಿಜೆಪಿಗೆ ಸೇರಿ ತಮ್ಮ ಕ್ಷೇತ್ರಗಳಿಂದ ಪುನರಾಯ್ಕೆ ಬಯಸಿದ್ದರು ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಇನ್ನುಳಿದಿರುವುದು ಈ ಎಲ್ಲದ್ದಕ್ಕೂ ಅಧಿಕೃತ ಮುದ್ರೆ ಬಿದ್ದು ಅವರು ಬಿಜೆಪಿಯಿಂದ ಉಪ ಚುನಾವಣೆಗೆ ಸ್ಪರ್ಧಿಸುವುದೊಂದೇ ಬಾಕಿ. ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಅನರ್ಹ ಶಾಸಕರ ನೇತೃತ್ವ ವಹಿಸಿರುವ ರಮೇಶ್ ಜಾರಕಿಹೊಳಿ ಉಪಚುನಾವಣೆಯನ್ನು ಬಿಜೆಪಿಯಿಂದಲೇ ಎದುರಿಸುವುದಾಗಿಯೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳ ಪೈಕಿ ಎಷ್ಟು ಕಡೆ ಅನರ್ಹ ಶಾಸಕರು ಮತ್ತೆ ಗೆದ್ದು ಬಂದು ಬಿಜೆಪಿ ಸರ್ಕಾರವನ್ನು ಸುಭದ್ರಗೊಳಿಸುತ್ತಾರೆ ಎಂಬುದಷ್ಟೇ ಈಗ ಉಳಿದಿರುವ ಪ್ರಶ್ನೆ.
ಅನರ್ಹ ಶಾಸಕರ ನೆರವಿಗೆ ಬಂದಿದ್ದು ಚುನಾವಣಾ ಆಯೋಗದ ನಿಯಮ
ಈ ಪ್ರಕರಣದಲ್ಲಿ ಅನರ್ಹ ಶಾಸಕರ ನೆರವಿಗೆ ಬಂದಿದ್ದು ಅನರ್ಹ ಶಾಸಕರು ಉಪ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಚುನಾವಣಾ ಆಯೋಗದ ನಿಯಮ. ಸಾಮಾನ್ಯವಾಗಿ ಶಾಸಕರನ್ನು ಅನರ್ಹಗೊಳಿಸುವ ಸ್ಪೀಕರ್ ಆದೇಶದಲ್ಲಿ ನ್ಯಾಯಾಲಯಗಳು ಮಧ್ಯೆಪ್ರವೇಶಿಸಿದ ಉದಾಹರಣೆ ಕಡಿಮೆ. ಅದರಂತೆ ಸ್ಪೀಕರ್ ಆದೇಶ ಕೇವಲ ಅನರ್ಹತೆಗೆ ಮಾತ್ರ ಸೀಮಿತವಾಗಿದ್ದರೆ ಅನರ್ಹ ಶಾಸಕರಿಗೆ ಯಾವುದೇ ಭೀತಿ ಇರಲಿಲ್ಲ. ಕೋರ್ಟ್ ಮಧ್ಯೆಪ್ರವೇಶಿಸುವ ಅಗತ್ಯವೂ ಅನರ್ಹ ಶಾಸಕರಿಗೆ ಇರಲಿಲ್ಲ. ಆದರೆ, 15ನೇ ವಿಧಾನಸಭೆ ಅವಧಿಗೆ (2023ರವರೆಗೆ) ಅನರ್ಹಗೊಳಿಸಿದ ಸ್ಪೀಕರ್ ಆದೇಶವೇ ಇಷ್ಟೊಂದು ಗೊಂದಲಕ್ಕೆ ಕಾರಣವಾಯಿತು.
ಚುನಾವಣಾ ಆಯೋಗದ ನಿಯಮಾವಳಿ ಪ್ರಕಾರ ಅನರ್ಹಗೊಂಡ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದಾದರೆ 15ನೇ ವಿಧಾನಸಭೆ ಅವಧಿಗೆ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ಅವರಿಗೆ ಅಧಿಕಾರವಿದೆಯೇ ಎಂಬ ಒಂದು ಪ್ರಶ್ನೆಯಷ್ಟೇ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಮುಖ ಅಂಶವಾಗಿತ್ತು. ಇದಕ್ಕೆ ಸೂಕ್ತ ಉತ್ತರ ನೀಡಿರುವ ಸುಪ್ರೀಂ ಕೋರ್ಟ್, ಅನರ್ಹತೆ ಅರ್ಜಿ ಮತ್ತು ರಾಜೀನಾಮೆ ಅರ್ಜಿಯನ್ನು ಬೇರೆ ಬೇರೆಯಾಗಿ ನೋಡಿದ್ದೇವೆ. ಅವೆರಡರ ಹಿನ್ನೆಲೆಯನ್ನೂ ನಾವು ಪರಿಶೀಲಿಸಿದ್ದೇವೆ. ಹೀಗಾಗಿ 17 ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಹೊರಡಿಸಿದ ಆದೇಶ ಸರಿಯಾಗಿಯೇ ಇದೆ. ಹೀಗಾಗಿ ಅದನ್ನು ನಾವು ಎತ್ತಿಹಿಡಿಯುತ್ತೇವೆ ಎಂದು ಹೇಳಿತ್ತು. ಆದರೆ, ಅನರ್ಹತೆ ಅವಧಿಯನ್ನು ನಿರ್ಧರಿಸುವ ಹಕ್ಕು ಸ್ಪೀಕರ್ ಅವರಿಗೆ ಇಲ್ಲ. ಹೀಗಾಗಿ ಅನರ್ಹತೆಗೆ ಅವಧಿ ನಿಗದಿಪಡಿಸಿದ್ದನ್ನು ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಸುಪ್ರೀಂ ಕೋರ್ಟ್ ಈ ತೀರ್ಮಾನಕ್ಕೆ ಬರುವಲ್ಲಿ ‘ಅನರ್ಹಗೊಂಡ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು’ ಎಂಬ ಆಯೋಗದ ಹೇಳಿಕೆಯೇ ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಸ್ಪಷ್ಟ.

ತೀರ್ಪು ಬಿಜೆಪಿಗೆ ಅನುಕೂಲ, ಕಾಂಗ್ರೆಸ್ ಗೆ ನೈತಿಕ ಗೆಲುವು
ಈ ತೀರ್ಪು ಉಪ ಚುನಾವಣೆ ಸಿದ್ಧತೆಯಲ್ಲಿ ಗೊಂದಲಕ್ಕೆ ಸಿಲುಕಿದ್ದ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದೆ. ಶಾಸಕರ ಅನರ್ಹತೆಯೇ ರದ್ದುಗೊಂಡಿದ್ದರೆ ಆಗ ಆ ಶಾಸಕರ ಮುಂದಿನ ನಿಲುವೇನು? ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಗೆ ಬದ್ಧರಾಗಿರುತ್ತಾರೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತಿತ್ತು. ಶಾಸಕರ ರಾಜೀನಾಮೆಯನ್ನು ಮತ್ತೊಮ್ಮೆ ಸ್ಪೀಕರ್ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕಿತ್ತು. ಇದಕ್ಕೆ ಸಮಯವೂ ಬೇಕಿತ್ತು. ಆದರೆ, ಅನರ್ಹತೆ ಎತ್ತಿಹಿಡಿದು ಅವಧಿ ಮಾತ್ರ ರದ್ದುಗೊಳಿಸಿದ್ದರಿಂದ ಈ ಶಾಸಕರು ಮತ್ತೆ ಕಾಂಗ್ರೆಸ್ ನತ್ತ ಮುಖ ಮಾಡಬಹುದು ಎಂಬ ಆತಂಕ ದೂರವಾಗಿದೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂದು ಸರ್ಕಾರವನ್ನು ಭದ್ರಪಡಿಸಿಕೊಳ್ಳುವುದಷ್ಟೇ ಮುಂದಿರುವ ಕೆಲಸ.
ಇನ್ನು ಈ ತೀರ್ಪು ಕಾಂಗ್ರೆಸ್ ಪಾಲಿಗೆ ತಾಂತ್ರಿಕವಾಗಿ ಸೋಲಾದರೂ ನೈತಿಕವಾಗಿ ಗೆಲುವು ತಂದುಕೊಟ್ಟಿದೆ. ವೈಯಕ್ತಿಕ ಲಾಭದ ಉದ್ದೇಶಕ್ಕಾಗಿ ಅವರು ಪಕ್ಷಕ್ಕೆ ದ್ರೋಹವೆಸಗಿದ್ದು, ಅಧಿಕಾರಕ್ಕಾಗಿ ಮೈತ್ರಿ ಸರ್ಕಾರ ಉರುಳಿಸಿದ್ದು, ಮತದಾರರಿಗೆ ವಂಚನೆ ಮಾಡಿದ್ದು…ಹೀಗೆ ಅನರ್ಹ ಶಾಸಕರ ವಿರುದ್ಧ ಮಾಡಿದ ಆರೋಪಗಳನ್ನು ಅನರ್ಹತೆ ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ಮಾನ್ಯ ಮಾಡಿದಂತಾಗಿದೆ. ಇದನ್ನೇ ಮುಂದಿಟ್ಟುಕೊಂಡು ಅವರು ಚುನಾವಣಾ ಪ್ರಚಾರದ ವೇಳೆ ಅನರ್ಹ ಶಾಸಕರ ವಿರುದ್ಧ ಹೋರಾಟ ಮಾಡಬಹುದು. ಆದರೆ, ಅದರ ಲಾಭ ಸಿಗುತ್ತದೆಯೇ ಎಂಬುದು ಚುನಾವಣೆ ಫಲಿತಾಂಶ ಬಂದ ಬಳಿಕವಷ್ಟೇ ಗೊತ್ತಾಗಬೇಕು.