ರಾಜ್ಯ ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕತೆಯರು, ಬಿಸಿಯೂಟ ಕಾರ್ಯಕತೆಯರು, ಆಶಾ ಕಾರ್ಯಕತೆಯರು ಸೇರಿದಂತೆ ಒಂದಲ್ಲ ಒಂದು ಸಂಘಟನೆ ಪ್ರತಿಭಟನೆ ನಡೆಸುತ್ತಿರುವುದು ಸಾಮಾನ್ಯ. ಆದರೆ ಪ್ರ೫ತಿಭಟನೆ ಮಾಡಿದ ಬಳಿಕ ಸರ್ಕಾರ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತದೆ ಎನ್ನುವ ನಂಬಿಕೆ ಇರಲ್ಲ. ಆದರೂ ಪ್ರತಿಭಟನಾಕಾರರು ಸರ್ಕಾರಕ್ಕೆ ತಮ್ಮ ಕೂಗು ಕೇಳಿಸ ಬೇಕು ಎನ್ನುವ ಕಾರಣದಿಂದ ಸಾವಿರಾರು ಜನರು ಜಮಾಯಿಸಿ ಪ್ರತಿಭಟನೆ ಮಾಡುತ್ತಾರೆ. ಇವತ್ತು ರಾಜ್ಯ ಬಿಸಿಯೂಟ ತಯಾರಕ ಸಂಘದಿಂದ ಪ್ರಭಟನೆಗೆ ಕರೆ ಕೊಡಲಾಗಿತ್ತು, ಪೊಲೀಸರ ಬಳಿ ಪ್ರತಿಭಟನೆಗೆ ಅನುಮತಿಯನ್ನೂ ಕೇಳಲಾಗಿತ್ತು. ಪೊಲೀಸ್ ಇಲಾಖೆ ಮಾತ್ರ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿದೆ. ಅಲ್ಲದೆ ಬಿಸಿಯೂಟ ಕಾರ್ಯಕರ್ತರು ಬೆಂಗಳೂರು ಪ್ರವೇಶ ಮಾಡದಂತೆ ತಮ್ಮ ತಮ್ಮ ಜಿಲ್ಲೆಗಳಲ್ಲೇ ತಡೆಯಲು ಜಿಲ್ಲಾಡಳಿತಗಳಿಗೆ ಸೂಚನೆ ಕೊಡಲಾಗಿದೆ.
ಪ್ರತಿಭಟನಾ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದರೂ ರಾಜಧಾನಿಯತ್ತ ಸಾವಿರಾರು ಜನ ಬಿಸಿಯೂಟ ಕಾರ್ಯಕರ್ತೆಯರು ಜಮಾಯಿಸಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿರುವ ಸಾವಿರಾರು ಕಾರ್ಯಕರ್ತೆಯರು ಅಲ್ಲಿಂದ ಹೊರಬಾರದಂತೆ ತಡೆಯಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತರಿಂದ ಅಹೋರಾತ್ರಿ ಧರಣಿಗೂ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಿಐಟಿಯು ವರಲಕ್ಷ್ಮೀ ನೇತೃತ್ವದಲ್ಲಿ ಮುಷ್ಕರಕ್ಕೆ ಕರೆ ಕೊಟ್ಟ ಬಳಿಕ ಬೆಂಗಳೂರಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ 144 ಸೆಕ್ಷನ್ ಜಾರಿ ಮಾಡಿದ್ದಾರೆ. ವರಲಕ್ಷ್ಮೀಯನ್ನು ಮುಂಜಾಗ್ರತಾ ಕ್ರಮವಾಗಿ ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
7 ಕ್ರೂಸರ್ ವಾಹನಗಳಲ್ಲಿ ಬಂದ ನೂರಾರು ಬಿಸಿಯೂಟ ಕಾರ್ಯಕರ್ತೆಯರನ್ನು ಪೀಣ್ಯದ ಬಳಿಯೇ ಬಾಗಲಗುಂಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸುಮಾರು ನಾಲ್ಕೈದು ಸಾವಿರ ಬಿಸಿಯೂಟ ಕಾರ್ಯಕರ್ತೆಯರನ್ನು ತಡೆದು ನಿಲ್ಲಿಸಲಾಗಿದೆ. ಕ್ಷಣ ಕ್ಷಣಕ್ಕೂ ಬಿಸಿಯುಟ ಕಾರ್ಯಕರ್ತೆಯರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹೆಚ್ಚಿಸಲಾಗ್ತಿದೆ. ಡಿಸಿಪಿ, ೩ ಜನ ಎಸಿಪಿ, ೧೨ಪಿಎಸ್ಐ, ೫೦೦ ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ʻಬಿಸಿಯೂಟʼ ಬೇಡಿಕೆಗಳೇನು..?
ಖಾಸಗೀಕರಣ ಮಾಡುವ ಆಲೋಚನೆಯನ್ನು ಕೈ ಬಿಡಬೇಕು, ಕನಿಷ್ಟ ಕೂಲಿ ಹೆಚ್ಚಳ ಮಾಡಬೇಕು. ನಮ್ಮ ಮುಂದಿನ ಜೀವನಕ್ಕಾಗಿ ನಿವೃತ್ತಿ ವೇತನ ನೀಡಬೇಕು ಎನ್ನುವುದಾಗಿದೆ. ಆದರೆ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಗೆ ಪರ್ಮಿಶನ್ ಕೊಟ್ಟಿಲ್ಲ ಎಂದು ಡಿಸಿಪಿ ರಮೇಶ್ ಬಾನೋತ್ ಹೇಳಿದ್ದಾರೆ. ಈ ಹಿಂದೆ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದಾಗ ನಡೆದ ಕೆಲವು ಘಟನೆಗಳನ್ನು ಆಧರಿಸಿ ಪ್ರತಿಭಟನೆಗೆ ಅವಕಾಶ ನೀಡಿಲ್ಲ ಎಂದಿದ್ದಾರೆ.
ಅವರು ಕೊಟ್ಟಿರುವ ಕಾರಣಗಳೆಂದರೆ, ಬೆಂಗಳೂರಿನಲ್ಲಿ 15 ರಿಂದ 20 ಸಾವಿರ ಜನ ಬಂದರೆ ಪ್ರತಿಭಟನೆಗೆ ಜಾಗದ ಕೊರತೆ ಇದೆ. ಕಳೆದ ಬಾರಿ ಪ್ರತಿಭಟನೆ ವೇಳೆ ಶೇಷಾದ್ರಿ ರಸ್ತೆಯಲ್ಲಿ ಸಾಕಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಆಂಬುಲೆನ್ಸ್ ಓಡಾಟಕ್ಕೂ ಸಹ ಅಡ್ಡಿಯಾಗಿತ್ತು. ಯಾವುದೇ ಕಾರಣಕ್ಕೂ ಇಂದಿನ ಬಿಸಿಯೂಟ ಕಾರ್ಯಕರ್ತೆಯ ಜಾಥಾ ಮತ್ತು ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಆದರೆ ಪ್ರತಿಭಟನೆಗೆ ಸಜ್ಜಾಗಿ ಬಂದಿರುವ ಕಾರ್ಯಕರ್ತೆಯರು ಏನೇ ಆದರೂ ಸರಿ ಪ್ರತಿಭಟನೆ ಕೈಬಿಡಲ್ಲ. ವಶಕ್ಕೆ ಪಡೆದಿರುವ ಮುಖ್ಯಸ್ಥೆ ವರಲಕ್ಷ್ಮಿ ಬಿಡುಗಡೆ ಮಾಡಬೇಕು. ಶಿಕ್ಷಣ ಸಚಿವರೇ ಖುದ್ದು ಬಂದು ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆ ನಡೆಸಲು ಭಾರತದ ಸಂವಿಧಾನದಲ್ಲೇ ಅವಕಾಶ ಇದೆ. ಆಳುವ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದು ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಪ್ರತಿಭಟನೆ ವೇಳೆ ವಿದ್ವಂಸಕ ಕೃತ್ಯಗಳನ್ನು ಎಸಗಿದರೆ, ಸಾರ್ವಜಮಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡಿದರೆ ಪ್ರತಿಭಟನೆಯನ್ನು ಪೊಲೀಸರು ತಡೆಯಬಹುದು. ಬಿಸಿಯೂಟ ಕಾರ್ಯಕರ್ತೆಯರು ಯಾವುದೇ ಬಸ್‌ಗೆ ಕಲ್ಲು ಹೊಡೆದಿಲ್ಲ. ಸರ್ಕಾರಿ ಕಚೇರಿಗೆ ನುಗ್ಗಿ ದಾಂಧಲೆಯನ್ನೂ ಮಾಡಿಲ್ಲ. ಆದರೂ ಪೊಲೀಸರು ಕುಂಟು ನೆಪ ಹೇಳಿ ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವುದು ಸಂವಿಧಾನ ಮೂಲ ಆಶಯಕ್ಕೆ ಧಕ್ಕೆ ತಂದಂತಾಗಿದೆ.
ಸಾವಿರಾರು ಜನರು ಪ್ರತಿಭಟನೆ ಮಾಡಲು ಸ್ಥಳಾವಕಾಶದ ಕೊರತೆ ಇದೆ ಎಂದರೆ, ಸರ್ಕಾರ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು, ಟ್ರಾಫಿಕ್ ಜಾಮ್ ಆಗುತ್ತೆ, ಆಂಬ್ಯುಲೆನ್ಸ್ ಓಡಾಟಕ್ಕೆ ಅಡ್ಡಿಯಾಗುತ್ತೆ ಎನ್ನುವುದು ಸೂಕ್ತ ಸಕಾರಣವಲ್ಲ. ಪ್ರತಿಭಟನೆ ವೇಳೆ ಗುಂಡಾವರ್ತನೆ ಮಾಡಿದ್ದರೆ, ಉದ್ದೇಶಪೂರ್ವಕವಾಗಿ ದೊಂಬಿ, ಗಲಾಟೆ ಸೃಷ್ಟಿಸಿದ ಆರೋಪವಿದ್ದರೂ ಪ್ರತಿಭಟನೆಗೆ ಅವಕಾಶ ನಿರಾಕರಿಸುವ ಅಧಿಕಾರ ಪೊಲೀಸರಿಗೆ ಇದೆ. ಅದನ್ನು ಬಿಟ್ಟು ಪೊಲೀಸರು ಮನಸೋಇಚ್ಛೆ ಅನುಮತಿ ನಿರಾಕರಿಸುವಂತಿಲ್ಲ. ಬಿಸಿಯೂಟ ಕಾರ್ಯಕರ್ತೆಯಸ ಮುಖಂಡರು ಪೊಲೀಸರ ಕ್ರಮದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದರೆ ಖಾಕಿಪಡೆಗೆ ಛೀಮಾರಿ ಕಟ್ಟಿಟ್ಟ ಬುತ್ತಿ.