ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಔಷಧಿ ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ನಾಲ್ವರು ಅನಿಲ ಸೇವನೆಯಿಂದ ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ವರದಿಯಾಗಿದೆ.
ಮೃತಪಟ್ಟ ಇಬ್ಬರೂ ವ್ಯಕ್ತಿಗಳು ಅನಿಲ ಸೋರಿಕೆಯಾದ ಸ್ಥಳದಲ್ಲೇ ಇದ್ದರು. ಅದೃಷ್ಟವಶಾತ್ ಅನಿಲವು ಹೊರಗಡೆಗೆ ಎಲ್ಲಿಯೂ ಹಬ್ಬಿಲ್ಲ, ಎಂದು ಪರ್ವಾಡ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ಉದಯ್ ಕುಮಾರ್ ಹೇಳಿದ್ದಾರೆ.
ಸೈನರ್ ಲೈಫ್ ಸೈನ್ಸಸ್ ಲಿಮಿಟೆಡ್ ಕಂಪೆನಿಗೆ ಸೇರಿದ್ದ ಔಷಧ ತಯಾರಿಕಾ ಘಟಕವು ಇದಾಗಿದ್ದು, ಬೆನ್ಝಿಮಿಡಝೋಲ್ (Benzimidazole) ಎಂಬ ಅನಿಲವು ಸೋರಿಕೆಯಾಗಿದೆ.
ಸೋಮವಾರ ತಡರಾತ್ರಿ ಸುಮಾರು 11.30ರ ವೇಳೆಗೆ ಈ ಘಟನೆ ಸಂಭವಿಸಿದ್ದು ಆಂಧ್ರ ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ಈ ಕುರಿತಾಗಿ ವಿಚಾರಣೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಔಷಧ ತಯಾರಿಕಾ ಘಟಕವನ್ನು ಮುಚ್ಚಲಾಗಿದೆ ಎಂದು ಸಿಎಂ ಕಚೇರಿಯ ಮೂಲಗಳು ತಿಳಿಸಿವೆ.