ವಿವಿಧತೆಯಿಲ್ಲದ ಏಕತೆ ನಮಗೇತಕೆ?

ಭಾರತ ಹಲವು ಸಂಸ್ಕೃತಿ, ಪರಂಪರೆ, ಜಾತಿ, ಧರ್ಮ, ಭಾಷೆಗಳ ಗೂಡು. “ವಿವಿಧತೆಯಲ್ಲಿ ಏಕತೆ” ಎಂಬ ಸೂತ್ರವೇ ಭಾರತವನ್ನು ಬೇರೆಲ್ಲಾ ರಾಷ್ಟ್ರಗಳಿಗಿಂತ ವಿಭಿನ್ನವಾಗಿಸಿರುವುದು. ಭಾರತೀಯತೆಯ ಗುಟ್ಟು ಅಡಗಿರುವುದೇ ಈ ವಿವಿಧತೆಯನ್ನು ಗೌರವಿಸುವುದರಲ್ಲಿ ಹಾಗೂ ಉಳಿಸಿಕೊಳ್ಳುವುದರಲ್ಲಿ. ಆದರೆ, ಪ್ರಸ್ತುತ ನಮ್ಮ ಪೀಳಿಗೆಯ ಮನಸ್ಥಿತಿ ಸಂಕುಚಿತಗೊಳ್ಳುತ್ತಿರುವ ಪರಿಣಾಮವಾಗಿ ವೈವಿಧ್ಯತೆಯನ್ನೇ ಅಲ್ಲಗಳೆಯುವ ಮಟ್ಟಕ್ಕೆ ಬಂದು ತಲುಪಿದ್ದೇವೆ. ಜಾತಿ, ಧರ್ಮ, ಭಾಷೆ ಹೀಗೆ ಪ್ರತಿಯೊಂದು ವಿಷಯದಲ್ಲೂ ಮೂಗು ತೂರಿಸುತ್ತಿರುವ ನಾವು ಭಾರತದ ನೈಜ ಸೊಗಡನ್ನೇ ಮರೆಮಾಚುವ ಭ್ರಮೆಯಲ್ಲಿದ್ದೇವೆ. ಮೇಲ್ನೋಟಕ್ಕೆ ಈ ವಿಚಾರ, ವಿವಾದಗಳೆಲ್ಲಾ ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಸಹಜ ಎನ್ನಿಸಿದರೂ, ಅದೊರಳಗಿನ ಸೂಕ್ಷ್ಮತೆಯನ್ನು ಅರಿತು ನಿಭಾಯಿಸದಿದ್ದಲ್ಲಿ ಇವುಗಳೇ ಮುಳುವಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ.

ಭಾರತದಲ್ಲಿ ಸುಲಲಿತ ಆಡಳಿತ ಹಾಗೂ ಜನಸಾಮಾನ್ಯರ ಅನುಕೂಲವನ್ನು ದೃಷ್ಟಿಯಲ್ಲಿರಿಸಿಕೊಂಡು ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾದ ಬಳಿಕ ಎಲ್ಲಾ ರಾಜ್ಯಗಳಲ್ಲೂ ಅವರದೇ ಆದ ಭಾಷೆಯನ್ನು ರಾಜ್ಯಭಾಷೆಯನ್ನಾಗಿ ಬಳಸಲಾಗುತ್ತಿದೆ. ಆಯಾ ರಾಜ್ಯಗಳ ಜನರಿಗೆ ಬೇರೆಲ್ಲಾ ಭಾಷೆಗಳಿಗಿಂತ ನಮ್ಮ ಭಾಷೆಯೇ ಹೆಚ್ಚು ಎಂಬ ಶ್ರೇಷ್ಠತೆಯ ವ್ಯಸನ ಕೂಡ ಸಹಜವಾಗಿಯೇ ಇದೆ. ಅದೇ ಕಾರಣಕ್ಕಾಗಿ ನಮ್ಮಲ್ಲಿ ಭಾಷೆಯ ವಿಚಾರಕ್ಕಾಗಿಯೇ ಹಲವು ಆಂದೋಲನಗಳಾಗಿವೆ ಕೂಡ. ಇತ್ತೀಚಿನ ವರ್ಷಗಳಲ್ಲಿ ಭಾಷೆಯ ಕುರಿತಾಗಿ ಅತಿ ಹೆಚ್ಚು ಚಾಲ್ತಿಯಲ್ಲಿರುವುದು “ಹಿಂದಿ ಹೇರಿಕೆ” ಕೂಗು. ನಾವುಗಳು ಶಾಲೆಯಲ್ಲಿರುವಾಗ ಕಲಿತಿದ್ದ “ಹಿಂದಿ ನಮ್ಮ ರಾಷ್ಟ್ರಭಾಷೆ” ಎಂಬ ವಿಚಾರವೇ ಈಗ ಅತಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಉತ್ತರ ಭಾರತದಲ್ಲಿ ಹಿಂದಿ ಪ್ರಧಾನ ಭಾಷೆಯಾಗಿ ಕಂಡುಬರುವುದರಿAದ ಅಲ್ಲಿಯ ಬಹುತೇಕ ಭಾಗದಲ್ಲಿ ಬಳಕೆಯಲ್ಲಿದೆ. ಆದರೆ, ದಕ್ಷಿಣ ಭಾಗದಲ್ಲಿ ಹಿಂದಿ ಇಂದಿಗೂ ಪರಭಾಷೆಯಂತೆಯೇ ಇದೆ.

ಅದೇ ಕಾರಣಕ್ಕಾಗಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಿಕೊಳ್ಳುವುದಕ್ಕೆ ಹಾಗೂ ಹಿಂದಿ ಭಾಷೆಯನ್ನು ನಾಮಫಲಕಗಳಲ್ಲಿ, ವ್ಯವಹಾರದ ಸಂದರ್ಭಗಳಲ್ಲಿ ತೂರಿಸುವುದಕ್ಕೆ ಬಲವಾದ ವಿರೋಧ ವ್ಯಕ್ತವಾಗುತ್ತಿರುವುದು. ಅಂದಹಾಗೆ ಈ ವಿವಾದ ಒಂದೆರೆಡು ದಿನಗಳದ್ದೇನಲ್ಲ, ಭಾಷೆಯ ವಿಚಾರಕ್ಕಾಗಿ ದೇಶದಲ್ಲಿ ಆಗಾಗ ಒಂದಷ್ಟು ವಿವಾದ, ಚರ್ಚೆ, ಕೂಗು ಕೇಳಿಸುತ್ತಲೇ ಇರುತ್ತದೆ. ಕೆಲವು ತಿಂಗಳ ಹಿಂದೆಯಷ್ಟೇ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನಾಧರಿಸಿಕೊಂಡು “ಒಂದು ರಾಷ್ಟ್ರ, ಒಂದು ಭಾಷೆ” ಪರಿಕಲ್ಪನೆಯ ಕುರಿತು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈಗ ಕರ್ನಾಟಕ – ಬರೋಡ ರಣಜಿ ಪಂದ್ಯದ ಎರಡನೇ ದಿನದಾಟದ ಸಂದರ್ಭದಲ್ಲಿ ವೀಕ್ಷಕ ವಿವರಣೆಗಾರ ಸುಶೀಲ್ ದೋಶಿ “ಪ್ರತಿಯೊಬ್ಬ ಭಾರತೀಯನೂ ಹಿಂದಿ ಭಾಷೆ ಕಲಿಯಬೇಕು. ಅದು ನಮ್ಮ ಮಾತೃಭಾಷೆ, ಹಿಂದಿಗಿAತ ಉತ್ತಮ ಭಾಷೆ ಮತ್ತೊಂದಿಲ್ಲ” ಎಂದಿರುವುದು ಹಿಂದಿ ಹೇರಿಕೆ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿಟ್ಟಿದೆ.

ಇಂತಹ ಹಲವು ಹೇಳಿಕೆಗಳು ಈ ಹಿಂದೆ ಕೂಡ ವ್ಯಕ್ತವಾಗಿವೆ. ಅವುಗಳನ್ನೆಲ್ಲಾ ಒಟ್ಟಾಗಿ ನೋಡಿದಾಗ ಕಾಣುವ ಸಾಮಾನ್ಯ ಅಂಶವೆAದರೆ ಹಿಂದಿ ಭಾರತದಲ್ಲಿ ಅತ್ಯವಶ್ಯಕ ಎಂದು ನಂಬಿಸುವ ಪ್ರಯತ್ನ. ಪ್ರಸ್ತುತ ನಮ್ಮ ಪ್ರಾದೇಶಿಕ ಭಾಷೆಗಳನ್ನು ಕಲಿಸುವುದು ಹಾಗೂ ಉಳಿಸುವುದೇ ಸವಾಲು ಎನ್ನಿಸುತ್ತಿರುವ ಸಂದರ್ಭದಲ್ಲಿ ಹಿಂದಿ ಭಾಷೆಗೆ ಪ್ರಾಶಸ್ತ್ಯ ನೀಡುವ ಪ್ರಯತ್ನ ಒಳ್ಳೆಯದೂ ಅಲ್ಲ. ನಾವಿಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದದ್ದೇನೆಂದರೆ ವಿರೋಧ ಇರುವುದು ಬೇರೆ ಭಾಷೆಗಳನ್ನು ಕಲಿಯುವುದಕ್ಕಲ್ಲ ಪರಭಾಷೆಗಳನ್ನು ನಮ್ಮ ನೆಲದಲ್ಲಿ ತಂದು ಬೇರೂರುವಂತೆ ಮಾಡುವ ಯತ್ನಕ್ಕೆ. ಸಾಧಾರಣವಾಗಿ ಶಾಲೆಗಳಲ್ಲಿ ಹಿಂದಿಯನ್ನು ತೃತೀಯ ಭಾಷೆಯನ್ನಾಗಿ ಕಲಿಸಲಾಗುತ್ತದೆ. ಹಿಂದಿಯನ್ನಾಗಲೀ, ಇನ್ನಿತರ ಯಾವುದೇ ಭಾಷೆಗಳಾಗಳನ್ನಾಗಲೀ ನಮ್ಮ ಸ್ವಂತ ಇಚ್ಛೆಯಿಂದ ಕಲಿತರೆ ಖಂಡಿತವಾಗಿಯೂ ತೊಂದರೆ ಇಲ್ಲ. ಆದರೆ, ಅದೇ ಭಾಷೆಗಳನ್ನು ನೀವು ಕಲಿಯಲೇಬೇಕು ಎಂದು ಒತ್ತಾಯಿಸುವುದರಲ್ಲಿ, ಅನಾವಶ್ಯಕವಾಗಿ ತಂದು ನಮ್ಮ ಮೇಲೆ ಹೇರುವುದರಲ್ಲಿ ಅಪಾಯವಿದೆ.

ಒಂದು ವೇಳೆ, ಇಡೀ ಭಾರತಕ್ಕೆ ಹಿಂದಿ ಅಗತ್ಯ ಎಂಬ ನಿಯಮ ರೂಪಿತವಾಯಿತು ಎಂದಿಟ್ಟಕೊಳ್ಳಿ, ಆಗ ಅಳಿಯುವುದು ಪ್ರಾದೇಶಿಕ ಭಾಷೆಗಳಷ್ಟೇ ಅಲ್ಲ, ಅಲ್ಲಿಯ ಸಂಸ್ಕೃತಿ, ಆಚರಣೆ, ವೈವಿಧ್ಯತೆ ಎಲ್ಲವೂ ಅಲ್ಲಿಯ ಭಾಷೆಯೊಟ್ಟಿಗೇ ಮಣ್ಣಾಗುತ್ತವೆ. ವಿವಿಧತೆಯನ್ನು ಅಳಿಸುವ ಪ್ರಯತ್ನ ಯಾವ ವಲಯದಲ್ಲೂ ಆಗದೇ ಇರಲಿ. ವಿವಿಧತೆಯಿಲ್ಲದ ಏಕತೆ ನಮಗೇತಕೆ?

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...