ಆಡಳಿತ ನಡೆಸುವವರಿಗೆ ಆದ್ಯತೆಗಳಿರಬೇಕು. ಯಾವಾಗ ಯಾವ ವಿಚಾರಗಳನ್ನು ಕೈಗೆತ್ತಿಕೊಳ್ಳಬೇಕು ಎಂಬ ಜ್ಞಾನವಿರಬೇಕು. ಅದು ಇಲ್ಲದೇ ಇದ್ದರೆ ಉತ್ತಮ ಆಡಳಿತ ನೀಡಿದರೂ ಜನರಿಗೆ ಅದು ಸಹ್ಯವಾಗುವುದಿಲ್ಲ. ಅಷ್ಟೇ ಅಲ್ಲ, ರಾಜಕೀಯ ವಿರೋಧಿಗಳಿಗೆ ಆಡಳಿತ ನಡೆಸುವವರ ವಿರುದ್ಧ ಹೋರಾಟಕ್ಕೆ ಅಸ್ತ್ರಗಳನ್ನು ಸಂಪಾದಿಸಿ ಕೊಟ್ಟಂತಾಗುತ್ತದೆ. ಆಗಬೇಕಾದ ಕೆಲಸಗಳು ಮೂಲೆಗೆ ಸರಿದು ಅನಗತ್ಯ ವಿಚಾರಗಳೇ ಪ್ರಾಮುಖ್ಯತೆ ಪಡೆಯುತ್ತದೆ.
ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತ ವೈಖರಿಯನ್ನು ಹೇಳಲು ಇಷ್ಟೆಲ್ಲಾ ಪೀಠಿಕೆ ಬೇಕಾಗುತ್ತದೆ.
ಹೌದು, ಯಡಿಯೂರಪ್ಪ ನೇತೃತ್ವದ ಸರ್ಕಾರ ಆದ್ಯತೆಗಳನ್ನು ಮರೆತು ಕೆಲಸ ಮಾಡುತ್ತಿರುವುದರಿಂದಲೇ ಅನಗತ್ಯವಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕಾಗಿದೆ. ಇನ್ನೊಂದೆಡೆ, ಬರಪೀಡಿತ ಪ್ರದೇಶಗಳ ಜನರಿಗೂ ಸ್ಪಂದಿಸಬೇಕಾಗಿದೆ. ಈ ಬಾರಿ ಮಳೆ ಹೆಚ್ಚಾಗಿ ಜಲಾಶಯಗಳು ಭರ್ತಿಯಾಗಿರುವುದರಿಂದ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಾಗಿದೆ. ಸಂಕಷ್ಟದಲ್ಲಿರುವ ಕೃಷಿ ಕ್ಷೇತ್ರಕ್ಕೆ ಕಾಯಕಲ್ಪ ನೀಡಬೇಕಾಗಿದೆ. ಕೇಂದ್ರದ ನೀತಿಗಳಿಂದ ಹಾನಿಯಾಗುತ್ತಿರುವ ಉದ್ಯೋಗ ಕ್ಷೇತ್ರವನ್ನು ಮೇಲೆತ್ತಬೇಕಾಗಿದೆ.
ಆದರೆ, ಅವೆಲ್ಲವನ್ನೂ ಮರೆತಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಳಾಂತರ, ಟಿಪ್ಪು ಸುಲ್ತಾನ್ ಕುರಿತ ಚರಿತ್ರೆಯನ್ನು ಪಠ್ಯದಿಂದ ತೆಗೆದುಹಾಕುವುದು ಮುಂತಾದ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ತನ್ನ ವೈಫಲ್ಯಗಳನ್ನು ಮರೆಮಾಚಲು ಭಾವನಾತ್ಮಕ ವಿಚಾರಗಳಲ್ಲಿ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ. ಸರ್ಕಾರದ ಉದ್ದೇಶ ಏನೇ ಇರಬಹುದು. ಆದರೆ, ಸದ್ಯಕ್ಕೆ ಇವಾವುದೂ ಜನರಿಗೆ ಬೇಡ. ಸಂಕಷ್ಟದಲ್ಲಿ ಸಿಲುಕಿರುವ ಅವರಿಗೆ ಬೇಕಾಗಿರುವುದು ಒಂದಷ್ಟು ನೆರವು ಮತ್ತು ಸಹಾನುಭೂತಿ ಅಷ್ಟೆ.
ಪ್ರಸ್ತುತ ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗ ಭಾರೀ ಮಳೆ ಮತ್ತು ಭೀಕರ ಪ್ರವಾಹದಿಂದ ತತ್ತರಿಸಿದೆ. ಅವರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ಸಿಗಬೇಕಾಗಿದೆ. ಪುನರ್ವಸತಿ ಕಲ್ಪಿಸಬೇಕಾಗಿದೆ. ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಈ ಜನರಿಗೆ ಹೊಟ್ಟೆತುಂಬಾ ಊಟ, ಮಾಡಲು ಕೆಲಸ, ಬದುಕಲು ಸೂರು ಒದಗಿಸಬೇಕಾಗಿದೆ. ಜತೆಗೆ ಬರಗಾಲದಿಂದ ಪರದಾಡುತ್ತಿರುವವರ ಬೆನ್ನಿಗೆ ನಿಂತು ಅವರನ್ನೂ ಅಪಾಯದಿಂದ ಪಾರು ಮಾಡಬೇಕಾಗಿದೆ. ಅದಕ್ಕಾಗಿ ಹಣ ಕ್ರೋಢೀಕರಿಸುವುದರೊಂದಿಗೆ ಕೇಂದ್ರ ಸರ್ಕಾರದಿಂದಲೂ ಹಣಕಾಸಿನ ನರೆವು ತರುವಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕಾಗಿದೆ. ಆದರೆ, ಅದಕ್ಕಿಂತ ವಿವಾದಗಳೇ ಸರ್ಕಾರದ ಆದ್ಯತೆಯಾಗಿದೆ.
ವೈದ್ಯಕೀಯ ಕಾಲೇಜು ಸ್ಥಳಾಂತರ
ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಬಗ್ಗೆ ಈ ಹಿಂದೆ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಸ್ಥಾಪಿಸುವ ಬಗ್ಗೆ ಘೋಷಿಸಿದ್ದರು. ಆದರೆ, ಸರ್ಕಾರದ ಅವಧಿ ಮುಗಿಯುವವರೆಗೆ ಇದಕ್ಕೆ ಯಾವುದೇ ಅನುದಾನ ಬಿಡುಗಡೆಯಾಗದ ಕಾರಣ ಪ್ರಸ್ತಾಪ ನೆನೆಗುದಿಗೆ ಬಿದ್ದಿತ್ತು. ನಂತರ ಬಂದ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್ ಅವರು ವೈದ್ಯಕೀಯ ಖಾತೆಯನ್ನೂ ಹೊಂದಿದ್ದರಿಂದ ತಮ್ಮ ಪ್ರಭಾವ ಬಳಸಿ ಚಿಕ್ಕಬಳ್ಳಾಪುರಕ್ಕೆ ಮಂಜೂರಾಗಿದ್ದ ಕಾಲೇಜನ್ನು ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಇದಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವೇ ಸ್ಥಾಪನೆಯಾಗುತ್ತಿರುವಾಗ ಬೇರೆ ಜಿಲ್ಲೆಗೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಅದೇ ಜಿಲ್ಲೆಯಲ್ಲಿ ಸ್ಥಾಪನೆ ಮಾಡುವುದೇಕೆ ಎಂಬ ಪ್ರಶ್ನೆ ಎದ್ದಿತ್ತು. ಆದರೆ, ಅಷ್ಟರಲ್ಲಿ ಸರ್ಕಾರವೇ ಉರುಳುವ ಪರಿಸ್ಥಿತಿ ಬಂದಿದ್ದರಿಂದ ವಿವಾದ ತಣ್ಣಗಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಕನಕಪುರದಲ್ಲಿ ಸ್ಥಾಪಿಸಲು ಉದ್ದೇಸಿಸಿದ್ದ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಮತ್ತೆ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು.
ಈ ನಿರ್ಧಾರವೇ ಈಗ ವಿವಾದವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಕನಕಪುರ ಕ್ಷೇತ್ರ ಒಕ್ಕಲಿಗ ಸಮುದಾಯದ ನಾಯಕ, ಪ್ರಭಾವಿ ರಾಜಕಾರಣಿ ಡಿ. ಕೆ. ಶಿವಕುಮಾರ್ ಅವರ ಕ್ಷೇತ್ರವಾಗಿದ್ದು, ಇವರೀಗ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ನನ್ನ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ತರಬೇಕೆಂಬ ಉದ್ದೇಶದಿಂದಲೇ ನಾನು ಹಿಂದೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ಕೇಳಿ ಪಡೆದಿದ್ದೆ. ವಿಧಾನಸೌಧದಲ್ಲೇ ನನ್ನ ಪ್ರಾಣ ಹೋದರೂ ಪರವಾಗಿಲ್ಲ. ಕನಕಪುರಕ್ಕೆ ಮೆಡಿಕಲ್ ಕಾಲೇಜು ತಂದೇ ತರುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇನ್ನೊಂದೆಡೆ ಬಿಜೆಪಿಗೆ ಬರಲು ಸಿದ್ಧವಾಗಿ ನಿಂತಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ, ಈ ಕಾಲೇಜನ್ನು ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸದಿದ್ದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಘೋಷಿಸಿದ್ದಾರೆ. ಇದರಿಂದ ಸರ್ಕಾರದ ಪರಿಸ್ಥಿತಿ ಒಬ್ಬ ಪ್ರಭಾವಿ ವ್ಯಕ್ತಿ ಮತ್ತು ಇನ್ನೊಬ್ಬ ತನಗೆ ಬೇಕಾದ ವ್ಯಕ್ತಿಯ ನಡುವೆ ಸಿಲುಕಿ ಒದ್ದಾಡುವಂತಾಗಿದೆ.
ಚಿಕ್ಕಬಳ್ಳಾಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರಿಸಿದ ವಿಚಾರದಲ್ಲಿ ಹಿಂದಿನ ಸರ್ಕಾರ ತಪ್ಪು ಮಾಡಿತ್ತು. ಅದನ್ನು ನಾವು ಸರಿ ಮಾಡಿದ್ದೇವೆ ಎಂದು ಬಿಜೆಪಿ ಸರ್ಕಾರ ಹೇಳಿಕೊಳ್ಳಬಹುದು. ಆದರೆ, ಅದರ ಬದಲು ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬಹುದಿತ್ತು. ಆದರೆ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿರುವುದರಿಂದ ಅಲ್ಲಿನ ಜನರನ್ನು ಭಾವನಾತ್ಮಕವಾಗಿ ಸೆಳೆದುಕೊಳ್ಳಲು ಸ್ಥಳಾಂತರ ತೀರ್ಮಾನ ಕೈಗೊಂಡು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಪಠ್ಯಗಳಲ್ಲಿ ಟಿಪ್ಪು ಸುಲ್ತಾನ್ ವಿಚಾರ ರದ್ದು
ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ಕಾರದಿಂದ ಆಚರಿಸುತ್ತಿದ್ದ ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದುಗೊಳಿಸಿ ವಿವಾದ ಸೃಷ್ಟಿಸಿದ್ದ ಬಿಜೆಪಿ ಸರ್ಕಾರ ಇದೀಗ ಟಿಪ್ಪು ಕುರಿತ ವಿಚಾರಗಳನ್ನು ಶಾಲಾ-ಕಾಲೇಜು ಪಠ್ಯದಿಂದ ತೆಗೆದುಹಾಕಲು ಮುಂದಾಗಿ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಕೊಡಗು ಜಿಲ್ಲೆಯ ಶಾಸಕ ಅಪ್ಪಚ್ಚು ರಂಜನ್ ಅವರ ಮನವಿ ಆಧರಿಸಿ ಶಿಕ್ಷಣ ಸಚಿವರು ಈಗಾಗಲೇ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ವಿಚಾರಗಳ ಅಗತ್ಯತೆ ಹಾಗೂ ಅದನ್ನು ಉಳಿಸಿಕೊಳ್ಳುವ ಇಲ್ಲವೇ ತೆಗೆದುಹಾಕುವ ಕುರಿತು ಸಾಧಕ ಬಾಧಕಗಳ ಕುರಿತಂತೆ ಮೂರು ದಿನಗಳಲ್ಲಿ ವರದಿ ಸಲ್ಲಿಸಲು ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಇನ್ನೊಂದೆಡೆ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೂಡ ಟಿಪ್ಪು ಓರ್ವ ಮತಾಂಧ. ಆತ ಸ್ವಾತಂತ್ರ್ಯ ಹೋರಾಟಗಾರನಲ್ಲ. ಅಲ್ಲದೆ, ತನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಹಿಂದೂಗಳ ಹತ್ಯೆ ಮಾಡಿದ್ದಾನೆ. ಮತಾಂತರ ಮಾಡಿದ್ದಾನೆ. ಹೀಗಾಗಿ ಆತನ ಜಯಂತಿ ಆಚರಣೆಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಅಲ್ಲದೆ, ಪಠ್ಯ ಪುಸ್ತಕಗಳಿಂದಲೂ ಟಿಪ್ಪು ಕುರಿತ ಪಾಠಕ್ಕೆ ಬ್ರೇಕ್ ಹಾಕಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಟಿಪ್ಪು ಕುರಿತು ಪಠ್ಯ ಆರಂಭವಾಗಿರುವುದು ಇತ್ತೀಚೆಗೆ ಅಲ್ಲ. ಮೊದಲಿನಿಂದಲೂ ಇದೆ. ಅದರಿಂದ ಮತೀಯ ಬಾವನೆಗಳು ಕೆರಳಿದ್ದಾಗಲೀ, ಕೋಮು ಸಂಘರ್ಷ ನಡೆದಿದ್ದಾಗಲೀ ಇಲ್ಲ. ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಆತ ಎಲ್ಲಾ ಸಮುದಾಯದವರನ್ನು ಉತ್ತಮವಾಗಿ ನೋಡಿಕೊಂಡಿದ್ದ ಎಂಬಂತಹ ಮಾಹಿತಿಗಳಿವೆಯೇ ಹೊರತು ಟಿಪ್ಪು ಬಗ್ಗೆ ಅಥವಾ ಟಿಪ್ಪುವಿನಿಂದ ರಾಷ್ಟ್ರಕ್ಕೆ ಅನ್ಯಾಯವಾದ ಯಾವ ಅಂಶಗಳೂ ಇಲ್ಲ. ಹೀಗಿರುವಾಗ ಪಠ್ಯದಿಂದ ಟಿಪ್ಪು ವಿಚಾರಗಳನ್ನು ತೆಗೆಯುವ ಅಗತ್ಯವೂ ಇಲ್ಲ. ಹೀಗಿದ್ದರೂ ರಾಜ್ಯ ಸರ್ಕಾರ ಆ ಬಗ್ಗೆ ಯೋಚಿಸುತ್ತಿದೆ ಎಂದರೆ ಅದರ ಹಿಂದೆ ಒಂದು ಸಮುದಾಯವನ್ನು ಓಲೈಸುವುದರ ಜತೆಗೆ ಇನ್ನೊಂದು ಸಮುದಾಯವನ್ನು ನೋಯಿಸುವ ಉದ್ದೇಶವಿರುವುದು ಸ್ಪಷ್ಟ.
ಈ ರೀತಿಯ ಮತೀಯ ಭಾವನಾತ್ಮಕ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಆಡಳಿತ ನಡೆಸುವವರು ಯೋಚಿಸಬೇಕಾಗುತ್ತದೆ. ಇದಕ್ಕೆ ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಉದಾಹರಣೆ. ಬಿಜೆಪಿಗೆ ಸ್ಪಷ್ಟ ಬಹುಮತ ಇದ್ದರೂ ಮುಸ್ಲಿಮರ ತ್ರಿವಳಿ ತಲಾಖ್ ನಿಷೇಧ ಕುರಿತು ಕೇಂದ್ರ ಸರ್ಕಾರ ಮಸೂದೆ ಮಂಡಿಸಿ ಅಂಗೀಕರಿಸಿದ್ದು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳ ನಂತರ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಕುರಿತು ಮೊದಲಿನಿಂದ ಹೇಳುತ್ತಾ ಬಂದಿದ್ದರೂ ನಿರ್ಧಾರ ಕೈಗೊಂಡಿದ್ದು ಮೋದಿ-2 (2019) ಸರ್ಕಾರದಲ್ಲಿ. ಅಂದರೆ, ಈ ನಿರ್ಧಾರಗಳಿಂದ ಆಗಬಹುದಾದ ಸಾದಕ-ಭಾದಕಗಳ ಬಗ್ಗೆ ಪರಾಮರ್ಷಿಸಿದ ಬಳಿಕವೇ ಸರ್ಕಾರ ಒಂದು ನಿರ್ಧಾರಕ್ಕೆ ಬಂದಿತ್ತು.
ಅದೇ ರೀತಿ ರಾಜ್ಯದಲ್ಲೂ ಮಾಡಬಹುದಿತ್ತು. ಟಿಪ್ಪು ಕುರಿತ ಪಠ್ಯವನ್ನು ತೆಗೆದುಹಾಕಬೇಕು ಎಂಬ ಉದ್ದೇಶವಿದ್ದರೆ ಅದಕ್ಕೆ ಬೇಕಾದ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ನಂತರ ಬಹಿರಂಗಪಡಿಸಬಹುದಿತ್ತು. ಆದರೆ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಎಲ್ಲದರಲ್ಲೂ ತರಾತುರಿ ತೋರಿಸುತ್ತಿದೆ. ಇದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಒತ್ತಟ್ಟಿಗಿರಲಿ, ರಾಜ್ಯದಲ್ಲಿ ಮತೀಯ ಭಾವನೆಗಳನ್ನು ಕೆರಳಿಸಿ ಅಶಾಂತಿಗೆ ಕಾರಣವಾದರೆ ಅದರ ಫಲವನ್ನು ಸರ್ಕಾರಕ್ಕಿಂತ ಹೆಚ್ಚಾಗಿ ಸಾಮಾನ್ಯ ಜನತೆ ಉಣ್ಣಬೇಕಾಗುತ್ತದೆ. ಆ ಬಗ್ಗೆ ಯೋಚನೆಯನ್ನೂ ಮಾಡದ ಸರ್ಕಾರ ಏಕಾಏಕಿ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ರಾಜ್ಯದ ಮಟ್ಟಿಗೆ ಅಪಾಯಕಾರಿ ಬೆಳವಣಿಗೆಯೇ ಸರಿ.