ದೇಶಾದ್ಯಂತ ಸಾಂಕ್ರಾಮಿಕ ಕರೋನಾ ವೈರಸ್ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಅದರಲ್ಲೂ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 21 ದಿನಗಳ ಕಾಲ ಕರೋನಾ ಕರ್ಫ್ಯೂ, ಜನರ ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ. ಮನೆಯಿಂದ ಹೊರಕ್ಕೆ ಬಾರದಿರುವುದು ಅಷ್ಟೇ ಕರೋನಾ ಇರುವ ಏಕೈಕ ಮದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ. ಕರೋನಾ ತಡೆಗೆ ಮಾಸ್ಕ್ ಅತ್ಯವಶ್ಯಕ ವಸ್ತುಗಳಲ್ಲಿ ಪ್ರಮುಖವಾಗಿದೆ. ಒಂದು ವೇಳೆ ಕರೋನಾ ವೈರಸ್ ದಾಳಿ ಮಾಡಿದ ಬಳಿಕ ಓರ್ವ ವ್ಯಕ್ತಿಗೆ ಸೋಂಕು ಉಲ್ಬಣವಾದರೆ, ಮೊದಲಿಗೆ ಸಮಸ್ಯೆ ಆಗುವುದು ಶ್ವಾಸಕೋಶ. ಅಂದರೆ ಉಸಿರಾಟದ ಸಮಸ್ಯೆ. ಅದಕ್ಕೆ ಆಸ್ಪತ್ರೆಗಳಲ್ಲಿ ಬೇಕಿರುವ ಪ್ರಮುಖ ಸಲಕರಣೆಗಳು ಎಂದರೆ ವೆಂಟಿಲೇಟರ್ (ಜೀವ ರಕ್ಷಕ ಸಾಧನ). ಈ ವೆಂಟಿಲೇಟರ್ ಮೂಲಕ ಆಮ್ಲಜನಕವನ್ನು ರೋಗಿಗೆ ಪೂರೈಸಿ ಅತೀ ಶೀಘ್ರವಾಗಿ ಎದುರಾಗುವ ಸಾವನ್ನು ತಾತ್ಕಾಲಿಕವಾಗಿ ತಡೆಯುವ ಕೆಲಸ ಮಾಡಲಾಗುತ್ತದೆ. ಆದರೆ ಕರೋನಾ ವೈರಸ್‌ಗೆ ಬೇಕಾಗಿರುವ ಎರಡು ಅತ್ಯುತ್ತಮ ಸಾಧಗಳ ವಿಚಾರದಲ್ಲಿ ಪ್ರಧಾನಿ ಅಸಡ್ಡೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ.
ಇಟಲಿ, ಸರ್ಬಿಯಾ ಮತ್ತು ಇಸ್ರೇಲ್‌ನಲ್ಲಿ ಕರೋನಾ ಹಾವಳಿ ಹೆಚ್ಚಾಗುತ್ತಿದ್ದ ಹಾಗೆ ಭಾರತದ ವೆಂಟಿಲೇಟರ್, ಮಾಸ್ಕ್ ಹಾಗು ಮಾಸ್ಕ್ ತಯಾರಿಗೆ ಬೇಕಾದ ಕಚ್ಚಾ ಬಟ್ಟೆಗೆ ಭಾರೀ ಡಿಮ್ಯಾಂಡ್ ಬಂದಿತ್ತು. ಹಲವಾರು ಕಂಪನಿಗಳು ಕೂಡ ಲಾಭದ ಉದ್ದೇಶದಿಂದ ವಿದೇಶಕ್ಕೆ ಅತ್ಯವಶ್ಯಕ ವಸ್ತುಗಳನ್ನು ರಫ್ತು ಮಾಡುತ್ತಿದ್ದವು. ಅಂತಿಮವಾಗಿ ಮಾರ್ಚ್ 18 ರಂದು ನಮ್ಮ ದೇಶದಿಂದ ಮಾಸ್ಕ್ ಹಾಗೂ ವೆಂಟಿಲೇಟರ್ ಅನ್ನು ಬೇರೆ ದೇಶಗಳಿಗೆ ರಫ್ತು ಮಾಡದಂತೆ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಅಂದರೆ ಭಾರತಕ್ಕೆ ಕರೋನಾ ವೈರಸ್ ದಾಂಗುಡಿ ಇಟ್ಟ 47 ದಿನಗಳ ಬಳಿಕ ಮಾಸ್ಕ್ ಹಾಗೂ ವೆಂಟಿಲೇಟರ್ ರಫ್ತಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿಕೆ ಮಾಡಿದೆ. ಇದಾದ ಬಳಿಕ ಕರೋನಾ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ 15 ಸಾವಿರ ಕೋಟಿ ರೂಪಾಯಿ ವೈದ್ಯಕೀಯ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಕೆಲಸ ಮಾಡಿದ್ದು ಭಾರತಕ್ಕೆ ಕರೋನಾ ಹೆಮ್ಮಾರಿ ಬಂದ ಸರಿ ಸುಮಾರು 2 ತಿಂಗಳ ವೇಳೆಗೆ. ಭಾರತ ದೇಶಕ್ಕೆ ಕರೋನಾ ಬಂದಿದ್ದು ಜನವರಿ 30 ರಂದು. ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿರುವುದು ಮಾರ್ಚ್ 24 ರಂದು. ಅಂದರೆ ಒಟ್ಟು 53 ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಕರೋನಾ ವಿರುದ್ಧ ಕೈಗೊಂಡ ಕಾರ್ಯಕ್ರಮಗಳು ಎಂದರೆ ಶೂನ್ಯ.
ಹಾಗಂತ ಶೂನ್ಯ ಎಂದೂ ಹೇಳಲಾಗದು, ಆದರೆ ಜನರಿಗೆ ಶೀಘ್ರವಾಗಿ ಸ್ಪಂದನೆ ಸಿಗುವಂತಾ ಯಾವುದೇ ಕಾರ್ಯಕ್ರಮ ಹಾಕಿಕೊಳ್ಳಲಿಲ್ಲ. ಜನವರಿ 30ರಂದು ಕೇರಳಕ್ಕೆ ಕರೋನಾ ಸೋಂಕು ಪೀಡಿತ ಕಾಲಿಟ್ಟ ಕೂಡಲೇ ಅಂತಾರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಮಾನಯಾನವನ್ನು ಬಂದ್ ಮಾಡಿದ್ದರೆ, ಕಾಯಿಲೆ ಇಷ್ಟೊಂದು ಪ್ರಮಾಣದಲ್ಲಿ ಅಟ್ಟಹಾಸ ಮೆರೆಯುತ್ತಿರಲಿಲ್ಲ. ಒಂದಿಷ್ಟು ಜನರನ್ನು ನಿಗಾದಲ್ಲಿಟ್ಟು ಚಿಕಿತ್ಸೆ ಕೊಡಬಹುದಿತ್ತು. ಭಾರತೀಯರು ಬೇರೆ ದೇಶದಲ್ಲಿ ಸಿಲುಕಿ ಪರದಾಡುವಾಗ ರಕ್ಷಣೆ ಮುಂದಾಗಿದ್ದು ತಪ್ಪೇ ಎನ್ನುವ ಪ್ರಶ್ನೆಯೂ ನಿಮ್ಮಲ್ಲಿ ಎದುರಾಗಬಹುದು. ಆದರೆ, ಅದಕ್ಕೂ ಸುಲಭ ಪರಿಹಾರವಿತ್ತು. ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ನಾಗರಿಕರನ್ನು ಅಲ್ಲಿಂದ ಭಾರತಕ್ಕೆ ಕರೆತಂದು 14 ದಿನಗಳ ಕಾಲ ಪ್ರತ್ಯೇಕವಾಗಿ ಕ್ವಾರಂಟೈನ್ ಮುಗಿಸಿದ ಬಳಿಕ ಹೊರ ಪ್ರಪಂಚಕ್ಕೆ ಬಿಡುವಂತೆ ವ್ಯವಸ್ಥೆ ಮಾಡಬಹುದಿತ್ತು. ಪಕ್ಕದ ದೇಶದಲ್ಲಿ ಆರ್ಭಟಿಸುತ್ತಿದ್ದ ಕರೋನಾ ಮಹಾಮಾರಿಗೆ ಚೀನಾ ಮದ್ದು ಕಂಡುಕೊಂಡಿದ್ದು, ಕಣ್ಣೆದುರಿಗೆ ಇದ್ದರೂ ಭಾರತದಲ್ಲಿ ಸೋಂಕು ಹೆಚ್ಚಾಗಲು ಕಾರಣೀಭೂತರಾದರು ಎಂದರೆ ತಪ್ಪಾಗಲಾರದು. ಯಾಕಂದರೆ ಭಾರತ ವಿದೇಶಿ ಪ್ರಯಾಣಿಕರ ವೀಸಾ ಮೇಲೆ ನಿಷೇಧ ಹೇರಿದ್ದು, ಮಾರ್ಚ್ 11ರಿಂದ. ಅಂದರೆ ಭಾರತಕ್ಕೆ ಕರೋನಾ ಬಂದ 44 ದಿನಗಳ ಬಳಿಕ ಎಂದರೆ ಮೋದಿ ನಿರ್ಧಾರ ಅಚ್ಚರಿ ಮೂಡಿಸುತ್ತದೆ.
ನಿಮಗೆ ಗೊತ್ತಿರಬಹುದು. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಅಂದರೆ 122. ಕೇರಳದಲ್ಲಿ 118, ಕರ್ನಾಟಕದಲ್ಲಿ 51, ತೆಲಂಗಾಣ 41, ಗುಜರಾತ್ 38 ಕೇಸ್‌ಗಳು ಸೇರಿದಂತೆ ದೇಶದಲ್ಲಿ ಒಟ್ಟು 647 ಕರೋನಾ ವೈರಸ್ ಕೇಸ್‌ಗಳು ಪತ್ತೆಯಾಗಿವೆ. ಕೇಂದ್ರ ಸರ್ಕಾರದ ನೆರವಿಗೆ ಕಾಯದ ಕೇರಳ ಸರ್ಕಾರ, ವಾರದ ಹಿಂದೆಯೇ 20 ಸಾವಿರ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು. ಆ 20 ಸಾವಿರ ಕೋಟಿ ಪ್ಯಾಕೇಜ್‌ನಲ್ಲಿ 500 ಕೋಟಿ ರೂಪಾಯಿ ಆರೋಗ್ಯ ಪ್ಯಾಕೇಜ್, 200 ಕೋಟಿ ರೂಪಾಯಿ ಸಾಲ ಹಾಗೂ ಉಚಿತ 10 ಕೆ.ಜಿ ರೇಷನ್, 1,000 ಕೋಟಿ ರೂಪಾಯಿ ಉದ್ಯೋಗ ಖಾತ್ರಿ ಯೋಜನೆ ಜೊತೆಗೆ ಏಪ್ರಿಲ್ ಆರಂಭಕ್ಕೂ ಮುನ್ನವೇ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ 20 ರೂಪಾಯಿಗೆ ಊಟ, ತಿಂಡಿ ನೀಡುವ 1 ಸಾವಿರ ಹೋಟೆಲ್ ತೆರಯುವ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಘೋಷಣೆ ಮಾಡಿದ್ದರು. ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು ಕೇವಲ 15 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್.
ಫೆಬ್ರವರಿ 12ರಂದು ಒಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕರೋನಾ ವೈರಸ್ ಎನ್ನುವುದನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಕರೋನಾ ವೈರಸ್ನಿಂದ ನಮ್ಮ ಜನ ಹಾಗೂ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಲಿದೆ ಎಂದೆನಿಸುತ್ತದೆ. ಆದರೆ ನಮ್ಮ ಕೇಂದ್ರ ಸರ್ಕಾರ ಇನ್ನೂ ಕೂಡ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಚಾಟಿ ಬೀಸಿದ್ದರು. ಅಂದ್ರೆ ಭಾರತಕ್ಕೆ ಕರೋನಾ ಬಂದು ಕೇವಲ 12 ದಿನಗಳಲ್ಲೇ ರಾಹುಲ್ ಗಾಂಧಿ ಟೀಕಿಸಿದ್ದರು. ಮತ್ತೊಮ್ಮೆ ಮಾರ್ಚ್ 3ರಂದು ಕೂಡ ವಾಗ್ದಾಳಿ ಮಾಡಿ ಟ್ವೀಟ್ ಮಾಡಿದ್ದರು. ಆದರೂ ಕೇಂದ್ರ ಸರ್ಕಾರ ವಿರೋಧ ಪಕ್ಷದ ಟೀಕೆ ಕಡೆಗೆ ಗಮನ ಕೊಡಲಿಲ್ಲ ಎಂದೆನಿಸುತ್ತದೆ. ಆ ಬಳಿಕ ಸಾರ್ಕ್ ಸದಸ್ಯ ರಾಷ್ಟ್ರಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಪ್ರಧಾನಿ ನರೇಂದ್ರ ಮೋದಿ ತುರ್ತು ನಿಧಿ ಸ್ಥಾಪನೆ ಬಗ್ಗೆ ಗಮನಸೆಳೆದರು. ಭಾರತದ ಪರವಾಗಿ 74 ಕೋಟಿ ರೂಪಾಯಿ ಕೊಡುವುದಾಗಿಯೂ ಘೋಷಿಸಿದ್ರು. ನಂತರ ಮಾರ್ಚ್ 22 ರಂದು ಜನತಾ ಕರ್ಫ್ಯೂ ಘೋಷಣೆ ಮಾಡಿ ಚಪ್ಪಾಳೆ ತಟ್ಟಿಸಿದರು. ಈ ಚಪ್ಪಾಳೆಗೆ ವೈದ್ಯಲೋಕವೇ ಬೇಸರ ವ್ಯಕ್ತಪಡಿಸಿತು. ಕರೋನಾ ವೈರಸ್ ವಿರುದ್ಧ ವೈದ್ಯಲೋಕ ಸಮರ ಸಾರಿದೆ. ಈ ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರಗಳ ಜೊತೆಗೆ ಕಳುಹಿಸಿ, ಶಸ್ತ್ರಾಸ್ತ್ರಗಳಿಲ್ಲ ರಣರಂಗಕ್ಕೆ ಕಳುಹಿಸಬೇಡಿ ಎಂದು ಡಾ. ಕಾಮ್ನಾ ಕಕ್ಕರ್ ಎಂಬುವವರು ಸ್ವತಃ ಪ್ರಧಾನಿಗೇ ಟ್ವೀಟ್ ಮಾಡಿದ್ದರು.
ಮಂತ್ರಕ್ಕೆ ಮಾವಿನ ಕಾಯಿ ಉದುರಲ್ಲ ಅಲ್ಲವೇ..?
ಪ್ರಧಾನಿ ನರೇಂದ್ರ ಮೋದಿ ಕಳೆದೊಂದು ವಾರದಲ್ಲಿ 2 ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ವಿಶೇಷ ಎಂದರೆ ಎರಡು ಭಾಷಣಗಳು ರಾತ್ರಿ 8 ಗಂಟೆಗೆ ಎನ್ನುವುದು. ಪ್ರಧಾನಿಯೊಬ್ಬರು ಸಂದೇಶ ಕೊಡುವುದು ತಪ್ಪಲ್ಲ. ಆದರೆ ಪ್ರಧಾನಿ ಮಾತನ್ನು ಘೋಷಣೆ ಮಾಡಿ, ನಾಳೆ ರಾತ್ರಿ 8 ಗಂಟೆಗೆ ನೋಡಿ ಎಂದು ಹೇಳುವ ಪರಿಸ್ಥಿತಿಯಲ್ಲಿ ನಾವಿದ್ದೇವೆಯೇ ಎನ್ನುವುದನ್ನು ನೋಡಬೇಕಲ್ಲವೇ. ವೈದ್ಯಕೀಯ ವಿಚಾರ ಎಂದರೆ ತುರ್ತು ಎನ್ನುವುದು ಸಾಮಾನ್ಯ ಸಂಗತಿ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯಕೀಯ ವಿಚಾರಗಳಲ್ಲೂ ಸಮಯ ನಿಗದಿ ಮಾಡಿ ಮಾತನಾಡುವುದನ್ನು ಕಂಡರೆ ಅಯ್ಯೋ ಎನಿಸುತ್ತದೆ. ಮಾರ್ಚ್ 25ರಂದು ಸ್ವಕ್ಷೇತ್ರ ಉತ್ತರ ಪ್ರದೇಶದ ವಾರಣಸಿ ಜನರನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಮಹಾಭಾರತ ಯುದ್ಧವನ್ನು 18 ದಿನದಲ್ಲಿ ಗೆದ್ದಿದ್ದೇವೆ. ಕರೋನಾ ವೈರಸ್ ವಿರುದ್ಧದ ಯುದ್ಧವನ್ನು 21 ದಿನದಲ್ಲಿ ಗೆಲ್ಲುತ್ತೇವೆ ಎಂದು ಪೌರಾಣಿಕ ವಿಚಾರಕ್ಕೆ ಬೆಸುಗೆ ಹಾಕಿದ್ದಾರೆ. ಆದರೆ ನಮ್ಮ ಭಾರತದಲ್ಲಿ ಹೋಂ ಕ್ವಾರಂಟೈನ್ ಸಾಧ್ಯವೇ ಇಲ್ಲ ಎನ್ನುತ್ತಿದೆ ವಿಜ್ಞಾನ ಲೋಕ. ಆದರೂ ಕೇವಲ ಮಾತಿನಿಂದ ಮಾವಿನ ಕಾಯಿ ಉದುರುವುದಿಲ್ಲ ಎನ್ನುವ ಸತ್ಯವನ್ನು ದೇಶವನ್ನು ಆಳುವ ನಾಯಕ ಅರ್ಥ ಮಾಡಿಕೊಂಡು ಟೀಕೆಗಳ ಕಡೆಗೂ ನೋಡಬೇಕು ಎನ್ನುವುದು ಇದರಿಂದ ಅರ್ಥವಾಗುತ್ತದೆ.