ದೆಹಲಿಯಲ್ಲಿ ಮುಂದಿನ ಐದು ವರ್ಷ ಯಾರು ಅಧಿಕಾರ ನಡೆಸುತ್ತಾರೆ ಎಂಬ ಪ್ರಶ್ನೆಗೆ ಇಂದು (ಮಂಗಳವಾರ) ಉತ್ತರ ಸಿಗಲಿದೆ. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಆಪ್) ಭರ್ಜರಿ ಬಹುಮತ ಗಳಿಸಲಿದೆ ಎಂದು ಭವಿಷ್ಯ ನುಡಿದಿವೆ. ಈ ಮಧ್ಯೆ, ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ಹಾಗೂ ಸಂಭಾವ್ಯ ಮುಖ್ಯಮಂತ್ರಿ ಮನೋಜ್ ತಿವಾರಿ ಸೇರಿದಂತೆ ಬಿಜೆಪಿ ನಾಯಕರು ಬಿಜೆಪಿ ಸ್ಪಷ್ಟ ಬಹುಮತಗಳಿಸಲಿದೆ ಎಂದಿದ್ದಾರೆ. ಮನೋಜ್ ತಿವಾರಿ ಅವರು ಬಿಜೆಪಿ 70 ವಿಧಾನಸಭಾ ಕ್ಷೇತ್ರಗಳ ಪೈಕಲಿ 48ರಲ್ಲಿ ಗೆಲುವು ಸಾಧಿಸಲಿದೆ ಎಂದು ಟ್ವೀಟ್ ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ರಾಜಕೀಯ ಪಕ್ಷಗಳ ನಾಯಕರು ತಾವು ಗೆಲ್ಲುವ ಸ್ಥಾನಗಳ ಬಗ್ಗೆ ಹೇಳಿಕೊಳ್ಳುವುದು ಸಾಮಾನ್ಯ. ಆದರೆ, ತಿವಾರಿ ನಿರ್ದಿಷ್ಟವಾಗಿ ಇಷ್ಟೇ ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿರುವುದು, ಮತದಾನ ನಡೆದ ಶನಿವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಚುನಾವಣಾ ಉಸ್ತುವಾರಿಯಾದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಬಿಜೆಪಿಯ ಎಲ್ಲಾ ಏಳು ಸಂಸದರ ಜೊತೆ ಸಭೆ ನಡೆಸಿರುವುದರ ಬಗ್ಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆಪ್ ಅನುಮಾನ ವ್ಯಕ್ತಪಡಿಸಿವೆ.
ಇದೆಲ್ಲಕ್ಕೂ ಮಿಗಿಲಾಗಿ ಮತದಾನ ನಡೆದ 24 ತಾಸುಗಳ ಬಳಿಕ ದೆಹಲಿ ಚುನಾವಣಾ ಆಯೋಗ ಮತದಾನದ ಶೇಕಡಾವಾರು ಅಂಕಿ-ಅಂಶ ಬಿಡುಗಡೆ ಮಾಡಿದ್ದು, ಶೇಕಡಾ 62.59 ಮತದಾನವಾಗಿದೆ ಎಂದು ಹೇಳಿದೆ. ಸಾಮಾನ್ಯವಾಗಿ ಮತದಾನ ನಡೆದ ಕೆಲವೇ ತಾಸುಗಳಲ್ಲಿ ಶೇಕಡಾವಾರು ಮತದಾನದ ಅಂಕಿ-ಅಂಶ ನೀಡುತ್ತಿದ್ದ ಚುನಾವಣಾ ಆಯೋಗ ಹೀಗೇಕೆ ಮಾಡಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಘಾತ ವ್ಯಕ್ತಪಡಿಸಿದ್ದರು. ಇದರ ಬೆನ್ನಿಗೆ ಆತಂಕಿತವಾದ ಆಪ್, ವಿದ್ಯುನ್ಮಾನ ಮತಯಂತ್ರಗಳನ್ನು ಇಟ್ಟಿರುವ ಭದ್ರತಾ ಕೊಠಡಿಯ ಮೇಲೆ ನಿಗಾ ಇಡಲು ತನ್ನ ಕಾರ್ಯಕರ್ತರನ್ನು ನಿಯೋಜಿಸಿತ್ತು.
ಇಂಥ ಬೆಳವಣಿಗೆಗಳ ನಡುವೆಯೇ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಮೇಲೆ ಅಪನಂಬಿಕೆ ಮೂಡುವಂಥ ಮಹತ್ವದ ಬೆಳವಣಿಗೆಯೊಂದು ನಡೆದಿದೆ. “ಯಾವುದೇ ಚುನಾವಣೆ ನಡೆದ ಒಂದು ವರ್ಷದ ವರೆಗೆ ಬಳಸಿದ ಅಥವಾ ವಿವಿಪ್ಯಾಟ್ ನಲ್ಲಿ ಅಡಕವಾದ ಮುದ್ರಿತ ಚೀಟಿಗಳನ್ನು ಸಂಗ್ರಹಿಸಿಡಬೇಕು. ಆ ಬಳಿಕ ಅವುಗಳನ್ನು ನಾಶ ಮಾಡಬಹುದು” ಎಂದು 1961ರ ಚುನಾವಣಾ ಪ್ರಕ್ರಿಯೆಯ ನಿಯಮಗಳು ಹೇಳುತ್ತವೆ. ಆದರೆ, ಚುನಾವಣಾ ಆಯೋಗವು 2019ರ ಮೇ ನಲ್ಲಿ ನಡೆದ ಲೋಕಸಭಾ ಚುನಾವಣೆಯ ವಿವಿಪ್ಯಾಟ್ ಚೀಟಿಗಳನ್ನು ನಾಶಪಡಿಸಿದೆ. ಮೇನಲ್ಲಿ ಫಲಿತಾಂಶ ಪ್ರಕಟವಾದ ನಾಲ್ಕು ತಿಂಗಳ ಬಳಿಕ ವಿವಿಪ್ಯಾಟ್ ಗಳನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ ಎಂದು ಇಂಗ್ಲಿಷ್ ಅಂತರ್ಜಾಲ ತಾಣವಾದ “ದಿ ಕ್ವಿಂಟ್” ವರದಿ ಮಾಡಿದೆ.
ದೇಶದ ಯಾವುದೇ ಸಾಂವಿಧಾನಿಕ ಸಂಸ್ಥೆ ರೂಪಿತ ನೀತಿ-ನಿಯಮಗಳ ಅಡಿ ಕೆಲಸ ಮಾಡಬೇಕಾಗುತ್ತದೆ. ಆದರೆ, ಫಲಿತಾಂಶ ಪ್ರಕಟವಾದ ನಾಲ್ಕೇ ತಿಂಗಳಲ್ಲಿ ವಿವಿಪ್ಯಾಟ್ ಚೀಟಿಗಳನ್ನು ನಾಶಪಡಿಸುವ ಆತುರವನ್ನು ಕೇಂದ್ರ ಚುನಾವಣಾ ಆಯೋಗ ತೋರಿದ್ದೇಕೆ ಎಂಬ ಗಂಭೀರ ಪ್ರಶ್ನೆ ಎದ್ದಿದೆ. ಕಾಂಗ್ರೆಸ್ ಸೇರಿದಂತೆ ದೇಶದ ಬಹುತೇಕ ವಿರೋಧ ಪಕ್ಷಗಳು ಇವಿಎಂ ಬಗ್ಗೆ ಗಂಭೀರ ಆರೋಪ ಮಾಡುತ್ತಿರುವ ಸಂದರ್ಭದಲ್ಲಿ ಆಯೋಗದ ನಡೆ ಅನುಮಾನ ದ್ವಿಗುಣಗೊಳ್ಳುವಂತೆ ಮಾಡಿದೆ.

“ದಿ ಕ್ವಿಂಟ್” ಮಾಹಿತಿ ಹಕ್ಕು ಕಾಯ್ದೆ ಅಡಿ (RTI) ಸಲ್ಲಿಸಿದ್ದ ಅರ್ಜಿಗೆ ದೆಹಲಿ ಚುನಾವಣಾ ಆಯೋಗದ ಸಾರ್ವಜನಿಕ ಮಾಹಿತಿ ಅಧಿಕಾರಿಯು “ ಸಾರ್ವತ್ರಿಕ ಚುನಾವಣೆಯ ವಿವಿಪ್ಯಾಟ್ ಚೀಟಿಗಳನ್ನು ನಾಶಪಡಿಸಲಾಗಿದೆ” ಎಂದು ಉತ್ತರಿಸಿದ್ದಾರೆ. 2019ರ ಸೆಪ್ಟೆಂಬರ್ 24ರಂದು ಚುನಾವಣಾ ಆಯೋಗವು ರಾಜ್ಯದ ಎಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದು 2019ರ ಲೋಕಸಭಾ ಚುನಾವಣೆಯ ವಿವಿಪ್ಯಾಟ್ ಚೀಟಿಗಳನ್ನು ನಾಶಪಡಿಸುವಂತೆ ಸೂಚಿಸಿದೆ.
ಮತದಾರ ನಿರ್ದಿಷ್ಟ ಅಭ್ಯರ್ಥಿಗೆ ಹಾಕಿದ ಮತವನ್ನು ವಿವಿಪ್ಯಾಟ್ ಖಾತರಿಗೊಳಿಸುತ್ತದೆ. ಮತದಾರ ತನ್ನ ಇಚ್ಛೆಯ ಅಭ್ಯರ್ಥಿಗೆ ಹಾಕಿದ ಮತವನ್ನು ಮುದ್ರಿತ ಪ್ರತಿಯು ರುಜುವಾತುಪಡಿಸುತ್ತದೆ. ಇದರಲ್ಲಿ ವ್ಯತ್ಯಾಸ ಕಂಡುಬಂದರೆ ನಿರ್ದಿಷ್ಟ ಬೂತ್ ನಲ್ಲಿ ಬಳಸಿರುವ ವಿವಿಪ್ಯಾಟ್ ನಲ್ಲಿ ದೋಷವಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಮತದಾರ ದೂರು ಸಲ್ಲಿಸಬಹುದಾಗಿದೆ.
ಮತದಾನ ಪ್ರಕ್ರಿಯೆಯಲ್ಲಿ ಮತಯಂತ್ರ ತಿರುಚುವುದು ಅಥವಾ ವ್ಯತ್ಯಯ ಮಾಡುವುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ವಿವಿಪ್ಯಾಟ್ ಚೀಟಿಗಳು ಪ್ರಮುಖ ಪಾತ್ರವಹಿಸುತ್ತವೆ ಎಂಬುದರ ಕುರಿತು “ದಿ ಕ್ವಿಂಟ್” ಬಹುಹಿಂದೆಯೇ ವಿಸ್ತೃತ ವರದಿ ಪ್ರಕಟಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ. ಸಾಮಾನ್ಯವಾಗಿ ಮತ ಚಲಾಯಿಸಿದಾಗ ಮೊದಲಿಗೆ ಮತ ವಿವಿಪ್ಯಾಟ್ ಗೆ ಆನಂತರ ಬ್ಯಾಲೆಟ್ ಯೂನಿಟ್ ಗೆ ರವಾನೆಯಾಗುತ್ತದೆ. ಸರ್ಕಾರ ನೇಮಿಸಿದ ಎಂಜಿನಿಯರ್ ಗಳು ಎರಡು ವಾರಗಳ ಕಾಲ ಪ್ರತಿ ಕ್ಷೇತ್ರಗಳಲ್ಲಿ ಬಳಸಲಾಗುವ ಆಯ್ದ ವಿವಿಪ್ಯಾಟ್ ಗಳನ್ನು ಪರಿಶೀಲಿಸಿ, ನಿರ್ವಹಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ವಿವಿಪ್ಯಾಟ್ ಯಂತ್ರಗಳನ್ನು ತಿರುಚಲು ಸಾಧ್ಯವಿದೆ ಎಂಬುದರ ಕುರಿತೂ ಹಿಂದೆ “ದಿ ಕ್ವಿಂಟ್” ಸಮಗ್ರವಾದ ವರದಿ ಪ್ರಕಟಿಸಿತ್ತು.
ಒಂದೊಮ್ಮೆ 2019ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ-ವಿವಿಪ್ಯಾಟ್ ಯಂತ್ರಗಳನ್ನು ತಿರುಚಿದ್ದೇ ಆದಲ್ಲಿ ವಿವಿಪ್ಯಾಟ್ ಚೀಟಿಗಳಲ್ಲಿ ಮತದಾರ ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರು ನಮೂದಾಗಿರುವುದರಿಂದ ಆರೋಪವನ್ನು ಸಾಬೀತುಪಡಿಸಲು ವಿವಿಪ್ಯಾಟ್ ಚೀಟಿಗಳು ಸಾಕ್ಷ್ಯವಾಗುತ್ತವೆ. ಚುನಾವಣಾ ಆಯೋಗದ ಸೂಚನೆಯಂತೆ ದೇಶಾದ್ಯಂತ ವಿವಿಪ್ಯಾಟ್ ಚೀಟಿಗಳನ್ನು ಕಸದ ಬುಟ್ಟಿಗೆ ಹಾಕಿರುವುದರಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಮತಯಂತ್ರ ತಿರುಚುವಿಕೆ ಆರೋಪವನ್ನು ಸಾಬೀತುಪಡಿಸಲು ಅಗತ್ಯವಾದ ಸಾಕ್ಷ್ಯ ಇಲ್ಲವಾಗಿದೆ. ಇಷ್ಟೊಂದು ಆತುರಾತುರವಾಗಿ ಚುನಾವಣಾ ಆಯೋಗವು ವಿವಿಪ್ಯಾಟ್ ಅರ್ಜಿಗಳನ್ನು ನಾಶಪಡಿಸಿದ್ದೇಕೆ ಎಂಬ ಗಂಭೀರ ಪ್ರಶ್ನೆ ಎದ್ದಿದೆ. ಇದು ಚುನಾವಣಾ ಆಯೋಗದ ನೀತಿ-ನಿಯಮಕ್ಕೆ ವಿರುದ್ಧವಾದ ನಡವಳಿಕೆಯಾಗಿದೆ ಎಂಬುದು ಆರ್ ಟಿಐ ಅರ್ಜಿಗೆ ದೊರೆತಿರುವ ಉತ್ತರದಿಂದ ಸಾಬೀತಾಗಿದೆ.

“ನಾಲ್ಕೇ ತಿಂಗಳ ಅವಧಿಯಲ್ಲಿ ವಿವಿಪ್ಯಾಟ್ ಚೀಟಿಗಳನ್ನು ನಾಶಪಡಿಸುವ ಅಗತ್ಯ ಚುನಾವಣಾ ಆಯೋಗಕ್ಕೆ ಏನಿತ್ತು? ಇದು ಆಯೋಗದ ನಿಯಮಕ್ಕೆ ವಿರುದ್ಧವಾಗಿದೆ. ನಿರ್ದಿಷ್ಟ ಕಾರಣಗಳಿದ್ದಾಗ ಮಾತ್ರ ಆಯೋಗವು ವಿವಿಪ್ಯಾಟ್ ಚೀಟಿಗಳನ್ನು ನಾಶಪಡಿಸಬಹುದು. ಆದ್ದರಿಂದ ನಾಲ್ಕೇ ತಿಂಗಳ ಅಂತರದಲ್ಲಿ ವಿವಿಪ್ಯಾಟ್ ಚೀಟಿಗಳನ್ನು ನಾಶಪಡಿಸಿದ್ದೇಕೆ ಎಂಬುದಕ್ಕೆ ಚುನಾವಣಾ ಆಯೋಗ ಉತ್ತರಿಸಬೇಕು” ಎಂದು ಕಾನೂನು ತಜ್ಞರು ಆಗ್ರಹಿಸಿದ್ದಾರೆ.
ರಾಜಸ್ಥಾನ, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯ ಮತ್ತು ಆಂಧ್ರಪ್ರದೇಶದ ಎಂಟು ಕಡೆಗಳಲ್ಲಿ ಇವಿಎಂ ಮತಕ್ಕೂ ಮತ್ತು ವಿವಿಪ್ಯಾಟ್ ಮತಕ್ಕೂ ವ್ಯತ್ಯಾಸ ಕಂಡುಬಂದಿದ್ದನ್ನು “ದಿ ಕ್ವಿಂಟ್” ಪತ್ತೆ ಹಚ್ಚಿತ್ತು. ಈ ಸಂಬಂಧ 2019ರ ಜೂನ್ ನಲ್ಲಿ ಚುನಾವಣಾ ಆಯೋಗವು ತನಿಖೆಗೆ ಆದೇಶಿಸಿತ್ತು. ಈ ಸಂಬಂಧ “ದಿ ಕ್ವಿಂಟ್” ಆರ್ ಟಿಐ ಮೂಲಕ ಕೇಳಿದ್ದ ಪ್ರಶ್ನೆಗೆ ಚುನಾವಣಾ ಆಯೋಗವು “ಪ್ರಕರಣವು ಇನ್ನೂ ಆಯೋಗದ ತಾಂತ್ರಿಕ ತಜ್ಞರ ಸಮಿತಿಯ ಮುಂದಿದ್ದು, ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು 2019ರ ನವೆಂಬರ್ ನಲ್ಲಿ” ಪ್ರತಿಕ್ರಿಯಿಸಿತ್ತು. ಮೇಲಿನ ರಾಜ್ಯಗಳಲ್ಲಿ ವರದಿಯಾದ ಎಂಟು ಪ್ರಕರಣಗಳಿಗೆ ಸಂಬಂಧಿಸಿದ ವಿವಿಪ್ಯಾಟ್ ಚೀಟಿಗಳನ್ನು ಆಯೋಗವು ನಾಶಪಡಿಸಿದೆಯೇ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಕೇಂದ್ರ ಚುನಾವಣಾ ಆಯೋಗವು 2019ರ ಸೆಪ್ಟೆಂಬರ್ ನಲ್ಲಿ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರದ ಮೂಲಕ ವಿವಿಪ್ಯಾಟ್ ಚೀಟಿ ನಾಶಪಡಿಸುವಂತೆ ಸೂಚಿಸಿರುವುದಕ್ಕೆ ಆಯೋಗವೇ ಬರೆದ ಪತ್ರ ಸಾಕ್ಷಿಯಾಗಿದೆ.
ಈ ಹಿನ್ನೆಲೆಯಲ್ಲಿ ಮೇಲಿನ ಎಂಟು ಪ್ರಕರಣಗಳಿಗೆ ಸಂಬಂಧಿಸಿದ ವಿವಿಪ್ಯಾಟ್ ಚೀಟಿಗಳನ್ನು ನಾಶಪಡಿಸಿದ್ದರೆ ಇವಿಎಂ ಮತ್ತು ವಿವಿಪ್ಯಾಟ್ ಮತಗಳ ವ್ಯತ್ಯಾಸವನ್ನು ಪತ್ತೆ ಹಚ್ಚುವುದು ಹೇಗೆ ಎಂಬ ಗಂಭೀರ ಪ್ರಶ್ನೆಗೆ ಉತ್ತರವಿಲ್ಲ. ಚುನಾವಣಾ ಆಯೋಗದ ನಿಯಮಕ್ಕೆ ವಿರುದ್ಧವಾಗಿ ನಾಲ್ಕೇ ತಿಂಗಳಲ್ಲಿ ವಿವಿಪ್ಯಾಟ್ ಚೀಟಿಗಳನ್ನು ಆಯೋಗ ನಾಶಪಡಿಸಲು ಆದೇಶಿಸಿದ್ದು ಏಕೆ? ಮತ ತಿರುಚಿರುವ ಸಾಧ್ಯತೆಯನ್ನು ಮುಚ್ಚಿಹಾಕಲು ಆಯೋಗ ಈ ಕೆಲಸ ಮಾಡಿರಬಹುದೇ? ಎಂಬ ಅನುಮಾನಗಳು ಸಹಜವಾಗಿ ಎದ್ದಿವೆ. ವಿಶ್ವಾಸಾರ್ಹತೆಯನ್ನು ಪಣಕ್ಕಿಟ್ಟಿರುವ ಚುನಾವಣಾ ಆಯೋಗವು ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಕುತೂಹಲಕಾರಿಯಾಗಿದೆ.