ಲಾಕ್ಡೌನ್ 5.0 ಎಂದು ಭಾರತ ಸರ್ಕಾರ ಅಧಿಕೃತವಾಗಿ ಹೇಳಿಲ್ಲ. ಆದರೆ ಕಂಟೈನ್ಮೆಂಟ್ ಝೋನ್ಗಳಲ್ಲಿ ಜೂನ್ 30ರ ತನಕ ಯಾವುದೇ ಚಟುವಟಿಕೆ ಆರಂಭ ಮಾಡಬಾರದು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ ಜೂನ್ 1 ಅಂದರೆ ಸೋಮವಾರದಿಂದ ಲಾಕ್ಡೌನ್ ಬಿಟ್ಟು ಕ್ರಮೇಣ ಅನ್ಲಾಕ್ ವ್ಯವಸ್ಥೆ ಜಾರಿ ಮಾಡಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ಕೊಟ್ಟಿದೆ. ಇದೀಗ ಕೇಂದ್ರ ಸರ್ಕಾರ ಲಾಕ್ಡೌನ್ ತೆರವಿನ ಒಂದನೇ ಹಂತದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕಳೆದ 2 ತಿಂಗಳಿಂದ ಲಾಕ್ಡೌನ್ ಎಂದು ಬಂಧಿಯಾಗಿದ್ದ ಭಾರತೀಯರಿಗೆ ಗರಿ ಬಿಚ್ಚಲು ಕಳೆದ 15 ದಿನಗಳ ಹಿಂದೆಯೇ ಭಾರತ ಸರ್ಕಾರ ವಿನಾಯ್ತಿ ಕೊಟ್ಟಿತ್ತು. ಇದೀಗ ಹಾರಾಟ ನಡೆಸಲು ಅನುಮತಿ ಕೊಟ್ಟಂತಾಗಿದೆ.
ಕರೋನಾ ಸೋಂಕು ಮಿತಿ ಮೀರಿ ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಿರುವ ಪ್ರದೇಶಗಳಲ್ಲಿ ಮಾತ್ರ ಜೂನ್ 30 ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿದೆ. ಉಳಿದ ಕಡೆ ಲಾಕ್ಡೌನ್ ಇರಲ್ಲ. ಕಂಟೈನ್ಮೆಂಟ್ ಝೋನ್ಗಳಲ್ಲೂ ಅಗತ್ಯ ಸೇವೆಗಳನ್ನು ಕಲ್ಪಿಸಲು ಅವಕಾಶ ಮಾಡಿಕೊಡಲಾಗಿದೆ. ಜೂನ್ 8 ರಿಂದ ಅನ್ಲಾಕ್ ಜಾರಿಯಾಗಲಿದ್ದು, ಧಾರ್ಮಿಕ ಕೇಂದ್ರಗಳು, ಶಾಪಿಂಗ್ ಮಾಲ್, ಹೋಟೆಲ್ ಮತ್ತು ರೆಸ್ಟೋರೆಂಟ್ ಶುರು ಮಾಡಬಹುದು. ಸಾಮಾಜಿಕ ಅಂತರ ಪಾಲನೆ, ಕರೋನಾ ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಪಾಲನೆ ಕಡ್ಡಾಯವಾಗಿದೆ.
ಇನ್ನುಳಿದಂತೆ ಶಾಲಾ- ಕಾಲೇಜು, ಕೋಚಿಂಗ್ ಸಂಸ್ಥೆ, ತರಬೇತಿ ಕೇಂದ್ರಗಳು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳ ಆರಂಭದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳದ ಕೇಂದ್ರ ಸರ್ಕಾರ ಜುಲೈನಲ್ಲಿ ತೆರವಿನ ಬಗ್ಗೆ ಚಿಂತನೆ ಮಾಡುವ ಬಗ್ಗೆ ಸುಳಿವು ನೀಡಿದೆ. ಜೊತೆಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರನ್ನು ಕೇಂದ್ರ ರಾಜ್ಯ ಸರ್ಕಾರಗಳಿಗೂ ಬಿಟ್ಟಿದೆ. ನಂತರವಷ್ಟೇ ವಿಮಾನಯಾನ, ರೈಲು, ಮೆಟ್ರೋ, ಸಿನಿಮಾ ಥಿಯೇಟರ್, ಜಿಮ್, ಸ್ವಿಮ್ಮಿಂಗ್ ಪೂಲ್, ಪಾರ್ಕ್ಗಳು, ರಂಗಮಂದಿರ, ಬಾರ್ ಮತ್ತು ರೆಸ್ಟೋರೆಂಟ್, ಅಸೆಂಬ್ಲಿ ಹಾಲ್, ಸೇರಿದಂತೆ ಹೆಚ್ಚು ಜನ ಸೇರುವ ಕಾರ್ಯಕ್ರಮಗಳಾದ ಧಾರ್ಮಿಕ, ಸಾಮಾಜಿಕ, ಕ್ರೀಡಾ, ರಾಜಕೀಯ ಕ್ಷೇತ್ರಗಳಿಗೆ ವಿನಾಯ್ತಿ ಸಿಗಲಿದೆ ಎನ್ನಲಾಗಿದೆ.
ಇದರ ಜೊತೆಗೆ ಈಗಿದ್ದ ಸಂಜೆ7 ರಿಂದ ಬೆಳಗ್ಗೆ 7 ತನಕ ಕರ್ಫ್ಯೂ ಅವಧಿಯನ್ನು ಬದಲಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಮಾಡಿದೆ. ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಅವಧಿ ಜಾರಿಯಲ್ಲಿರಲಿದೆ. ಅಂದರೆ ರಾತ್ರಿ 9ರ ತನಕ ಕೂಡ ವ್ಯವಹಾರ ಚಟುವಟಿಕೆಗಳು ತೆರೆದಿರಲಿದೆ. ಆ ಬಳಿಕ ಯಾರೂ ಓಡಾಡುವಂತಿಲ್ಲ. ಅಗತ್ಯವಿಲ್ಲದ ಚಟುವಟಿಕೆ, ಸಂಚಾರ ನಡೆಸುವಂತಿಲ್ಲ. ಉಳಿದಂತೆ ಗರ್ಭಿಣಿಯರು, ಮಕ್ಕಳು, ವಯೋವೃದ್ಧರು ಮನೆಯಿಂದ ಹೊರಬರುವಂತಿಲ್ಲ. ತುರ್ತು ಆರೋಗ್ಯ ಸೇವೆಗಳಿಗಷ್ಟೇ ಹೊರಬರಬೇಕು. ಮದುವೆ, ಅಂತ್ಯಸಂಸ್ಕಾರ ಕಾರ್ಯಕ್ರಮಗಳಿಗೆ ಈ ಮುಂಚೆ ಇದ್ದ ನಿಯಮಗಳೇ ಮುಂದುವರಿಯಲಿವೆ. ಅಂತರ್ ರಾಜ್ಯ, ಅಂತರ್ ಜಿಲ್ಲಾ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ.
ಲಾಕ್ಡೌನ್ 4 ನಾಮಕಾವಸ್ತೆಗೆ ಜಾರಿಯಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಲಾಕ್ಡೌನ್ ವಿನಾಯ್ತಿ ಕೊಟ್ಟ ಬಳಿಕ ದೇಶದಲ್ಲಿ ಏನಾಗ್ತಿದೆ ಎನ್ನುವ ಅಂಕಿ ಅಂಶಗಳನ್ನು ನೋಡಿದ್ರೆ ಕರೋನಾ ಸೋಂಕು ಎಲ್ಲಿಗೆ ಮುಟ್ಟುತ್ತದೆಯೋ ಎನ್ನುವ ದಿಗಿಲು ಮೂಡಿಸುವುದು ಸಾಮಾನ್ಯ. ಶುಕ್ರವಾರ ಒಂದೇ ದಿನ ಇಡೀ ದೇಶದಲ್ಲಿ ಸರಿ ಸುಮಾರು 8 ಸಾವಿರ ಹೊಸ ಕೇಸ್ಗಳು ಪತ್ತೆಯಾಗಿವೆ. ಶನಿವಾರ 8 ಸಾವಿರದ ಗಡಿ ದಾಟಿ ಮುಂದೆ ಬಂದಿದೆ. ಜಾಗತಿಕ ಮಟ್ಟದಲ್ಲಿ ಭಾರತ 9ನೇ ಸ್ಥಾನದಲ್ಲಿದ್ದರೂ ಸದ್ಯಕ್ಕೆ ಸಕ್ರಿಯವಾಗಿರುವ ಪ್ರಕರಣಗಳನ್ನು ಪರಿಗಣಿಸಿದರೆ 5ನೇ ಸ್ಥಾನದಲ್ಲಿದೆ. ಭಾರತದ ಪರಿಸ್ಥಿತಿ ಹೀಗಿದ್ದರೂ ಭಾರತ ಸರ್ಕಾರ ಲಾಕ್ಡೌನ್ಗೆ ಕೌಂಟರ್ ಆಗಿ ಅನ್ಲಾಕ್ ಮಾಡುತ್ತಿರುವುದು ಜನರಲ್ಲೇ ಆತಂಕ ಮೂಡುವಂತೆ ಮಾಡಿದೆ. ಜೀವ.. ಜೀವನ.. ಆಯ್ಕೆಯಲ್ಲಿ ನಮ್ಮದು ಜೀವ ಆಗಿರಲಿ ಎಂದು ಮೊದಲಿಗೆ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಜೀವನಕ್ಕೆ ಪ್ರಾಮುಖ್ಯತೆ ಕೊಟ್ಟು ಮೌನಕ್ಕೆ ಶರಣಾಗಿರುವುದು ಕರೋನಾ ಸೃಷ್ಟಿಸಬಹುದಾದ ದುರಂತದ ಚಿತ್ರಣ ಕಣ್ಣಮುಂದೆ ಬರುವಂತಿದೆ. ಜನರೇ ಎಚ್ಚರದಿಂದ ಇರಬೇಕಾಗಿದೆ. ಅದರಲ್ಲೂ ವಯಸ್ಸಾದ ವಯೋವೃದ್ಧ ತಂದೆ ತಾಯಿಗಳನ್ನು ಮನೆಯಲ್ಲೇ ಸಾಮಾಜಿಕ ಅಂತರದಲ್ಲಿ ಇಡುವ ಮೂಲಕ ಉಳಿಸಿಕೊಳ್ಳಬೇಕು.