ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯೂ ತೀವ್ರಗೊಳ್ಳುತ್ತಲೇ ಇದೆ. ರೈತರ ಹೋರಾಟಕ್ಕೆ ದೇಶ ಮಾತ್ರವಲ್ಲದೇ ವಿದೇಶದಿಂದಲೂ ವ್ಯಾಪಕ ಬೆಂಬಲ ದೊರೆಯುತ್ತಿದೆ. ಒಂದೆಡೆ ಹಲವು ವಿದೇಶಿಗರು ರೈತರ ಹೋರಾಟ ಬೆಂಬಲಿಸಿ ದೇಣಿಗೆ ನೀಡುತ್ತಿದ್ದಾರೆ. ಇನ್ನೊಂದೆಡೆ ದೇಶದ ಸಣ್ಣಪುಟ್ಟ ವ್ಯಾಪರಿಗಳು, ಸ್ಥಳೀಯರು, ಹೋಟೆಲ್ ಮಾಲೀಕರು, ವಿದ್ಯಾವಂತ ಯುವಜನರು ಕೂಡ ರೈತರ ಬೆನ್ನಿಗೆ ನಿಂತಿದ್ದಾರೆ. ಈಗ ಗುರ್ನಾಮ್ ಸಿಂಗ್ ಎನ್ನುವರು ರೈತರಿಗಾಗಿ ಉಚಿತ ಚಹಾ ಸೇವೆ ಮಾಡುತ್ತಿದ್ದಾರೆ.
ಈ ಸಂಬಂಧ ಮಾಸ್ ಮೀಡಿಯಾ ಫೌಂಡೇಶನ್ ಪ್ರತಿನಿಧಿಯೊಂದಿಗೆ ಮಾತಾಡಿದ ಗುರ್ನಾಮ್ ಸಿಂಗ್ ಅವರು, ನಾನು ಪಂಜಾಬಿನಲ್ಲಿ ಸಿಹಿ ತಿನಿಸುಗಳನ್ನು ಮಾರಾಟ ಮಾಡುವ ಹಲವಾಯಿ. ನಮ್ಮದು ಸ್ವಂತ ಅಂಗಡಿಯಿದೆ. ನಾನು ನನ್ನ ಸಹೋದರರು ಅಂಗಡಿ ಮೇಲ್ವ್ವಿಚಾರಣೆ ನೋಡಿಕೊಳ್ಳುತ್ತೆವೆ. ಈಗ ನಮಗೆ ನಮ್ಮ ಅಂಗಡಿಗಳ ಬಗ್ಗೆ ಚಿಂತೆಯಿಲ್ಲ, ರೈತರು, ಅವರ ಹಕ್ಕುಗಳ ರಕ್ಷಣೆ ಮುಖ್ಯ. ಹಾಗಾಗಿ ನಾವು ಇಲ್ಲಿ ಸೇವೆ ನೀಡಲು ಬಂದಿದ್ದೇವೆ ಎಂದರು ಟಿಕ್ರಿ ಗಡಿಯಲ್ಲಿ ಪ್ರತಿಭಟನಾ ರೈತರಿಗೆ ಚಹಾ ಸೇವೆ ನೀಡುತ್ತಿರುವ ಗುರ್ನಾಮ್ ಸಿಂಗ್ ಹೇಳಿದ್ದಾರೆ.
ಪಂಜಾಬಿನ ಗುರ್ನಾಮ್ ಸಿಂಗ್, ಟಿಕ್ರಿ ಗಡಿಯಲ್ಲಿ ಕಳೆದ ಡಿಸೆಂಬರ್ ಐದನೇ ತಾರೀಖಿನಿಂದ ಸೇವೆ ಎಂದುಕೊಂಡು ಪ್ರತಿಭಟನಾ ನಿರತರಿಗೆ ಮತ್ತು ಪ್ರತಿಭಟನೆ ಬೆಂಬಲಿಸಿ ಬರುವವರಿಗೆ ಟೀ ಸರಬರಾಜು ಮಾಡುತ್ತಿದ್ದಾರೆ. ಎರಡು ದೊಡ್ಡ ಪಾತ್ರೆಗಳಲ್ಲಿ ಬೆಳಗ್ಗೆ ನಾಲ್ಕು ಗಂಟೆಗೆ ಟೀ ಮಾಡಲು ಶುರು ಮಾಡುವ ಇವರು ನಿರಂತರವಾಗಿ ರಾತ್ರಿ ಒಂಬತ್ತು ಗಂಟೆಯವರೆಗೆ ಟೀ ತಯಾರಿಸುತ್ತಾರೆ.
ಟೀ ತಯಾರಿಸಲು ಬೇಕಾಗುವ ಹಾಲು ಪಂಜಾಬ್ ಮತ್ತು ಹರಿಯಾಣದ ರೈತರು ಸರಬರಾಜು ಮಾಡುತ್ತಾರೆ, ಟೀ ಪುಡಿ ಮತ್ತು ಸಕ್ಕರೆ ಇಲ್ಲಿಯೇ ಇರುವ ಅನೇಕ ಲಂಗರ್ಗಳು ಮತ್ತು ಹಲವು ಸೇವಾ ಸಂಸ್ಥೆಗಳು ನೀಡುತ್ತವೆ. ಸೇವೆ ಮಾಡುವ ಮನಸ್ಸು ಇದ್ದರೇ ಸಾಕು ಎಲ್ಲಾ ಸೌಲಭ್ಯಗಳು ತಾವಾಗಿಯೇ ದೊರೆಯುತ್ತವೆ ಎಂದು ಹೇಳುತ್ತಾರೆ ಗುರ್ನಾಮ್.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಾನು, ನನ್ನ ಸಹೋದರರು ಪಂಜಾಬಿನಲ್ಲಿ ನಮ್ಮ ಕುಟುಂಬನ್ನು ಬಿಟ್ಟು ಇಲ್ಲಿಗೆ ಬಂದಿದ್ದೇವೆ. ಅವರ ಚಿಂತೆ ನಮಗಿಲ್ಲ ಎಂದಲ್ಲ, ಅದಕ್ಕೂ ಹೆಚ್ಚು ರೈತರ ಈಗೀನ ಪರಿಸ್ಥಿತಿಯಲ್ಲಿ ಅವರ ಜೊತೆಗೆ ನಿಲ್ಲುವುದು ನಮ್ಮ ಜವಾಬ್ದಾರಿ. ಅದೆಷ್ಟೇ ದಿನವಾಗಲಿ ನಾವು ರೈತರ ಜೊತೆ ಇರುತ್ತೇವೆ. ಅವರೆ ಇಲ್ಲ ಎಂದರೇ ದೇಶ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ.
ಚಳಿ, ಮಳೆ ಹೆಚ್ಚಾಗಿದೆ ಇಂತಹ ಸ್ಥಿತಿಯಲ್ಲೂ ಕಿಸಾನ್ ಹಿಂದೆ ಸರಿಯುತ್ತಿಲ್ಲ. ನಾವು ರೈತರ ಮಕ್ಕಳು, ಅವರ ನೋವು ನಮ್ಮ ನೋವು ಒಂದೇ. ಚಳಿ ಹೆಚ್ಚಾದಾಗ ಒಂದು ಲೋಟ ಚಹ ಕೂಡ ಕೊಂಚ ನೆಮ್ಮದಿ ನೀಡಬಲ್ಲದು. ಹಾಗಾಗಿ ಈ ಸೇವೆ ಸಲ್ಲಿಸುತ್ತಿದ್ದೆನೆ. ನನ್ನ ಸಹೋದರರು ಇಬ್ಬರು ಅಡಿಗೆ ಮಾಡಿ ಬಡಿಸುತ್ತಿದ್ದಾರೆ. ಅವರದ್ದು ಮತ್ತೊಂದು ರೀತಿಯ ಸೇವೆ. ಮೋದಿ ಸರ್ಕಾರ ನಮ್ಮ ಮಾತುಗಳನ್ನು ಕೇಳಬೇಕು. ನಮ್ಮ ಪ್ರತಿಭಟನೆ ಕೇವಲ ಪಂಜಾಬ್ ಮತ್ತು ಹರಿಯಾಣದ ರೈತರಿಗಾಗಿ ಮಾತ್ರವಲ್ಲ, ಇಡೀ ದೇಶದ ರೈತರಿಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಗುರ್ನಾಮ್ ಸಿಂಗ್ ಎನ್ನುತ್ತಾರೆ.
(ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್ʼ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ ಸಿದ್ಧಪಡಿಸಲಾಗಿದೆ)