ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಳೆದ ಮೂರು-ನಾಲ್ಕು ತಿಂಗಳುಗಳಿಂದ ವದಂತಿಗಳಿಗೆ ಗ್ರಾಸವಾಗಿದ್ದು, ಬ್ಯಾಂಕಿನಲ್ಲಿ ಇತ್ತೀಚೆಗೆ ಪೂರ್ಣಗೊಂಡ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಸಾರಾಸಗಟು ಉಲ್ಲಂಘಿಸಲಾಗಿದ್ದು, ಕೋಟ್ಯಂತರ ರೂಪಾಯಿಗಳ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಸುದ್ದಿ ಕರಾವಳಿಯ ಉಭಯ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣದ ವಿವರಗಳನ್ನು ಲಭ್ಯ ದಾಖಲೆಗಳೊಂದಿಗೆ ಪರಿಶೀಲಿಸಿದಾಗ ವಿವಾದದ ಹೊಗೆ ಎದ್ದಿರುವುದು ಬೆಂಕಿ ಇಲ್ಲದೇ ಅಲ್ಲ ಎಂಬುದು ಖಚಿತಗೊಳ್ಳುತ್ತಿದೆ.
ಬ್ಯಾಂಕಿನ ನೇಮಕಾತಿ ಪ್ರಕ್ರಿಯೆಯ ವೇಳೆ ಅರ್ಜಿದಾರರಿಂದ ಹಣ ಸುಲಿಗೆ ಆಗಿದ್ದು ಅನಾವಶ್ಯಕ ಖರ್ಚು ಮಾಡಿಸಲಾಗಿದೆ. ನೇಮಕಾತಿಯ ಮಾನದಂಡಗಳನ್ನೆಲ್ಲ ಉಲ್ಲಂಘಿಸಿ ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ನಿಯಮ ಬಾಹಿರ ತೀರ್ಮಾನಗಳ ಹಿನ್ನೆಲೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಕೆಲಸ ಮಾಡಿದೆ ಮತ್ತು ನಿಯಮಗಳನ್ನು SCDCC ಬ್ಯಾಂಕಿನ ಸ್ಥಾಪಿತ ಹಿತಾಸಕ್ತಿಗಳು ತಮ್ಮ ಮೂಗಿನ ನೇರಕ್ಕೆ ಬಗ್ಗಿಸಿಕೊಳ್ಳುವಲ್ಲಿ ಸಹಕಾರ ಸಂಘಗಳ ಇಲಾಖೆಯ ಅನೈತಿಕ ನಂಟು ಇದೆ ಎಂಬುದು ಈ ಇಡಿಯ ಹಗರಣದ ಒಟ್ಟು ಸಾರಾಂಶ.
ಈ ಎಲ್ಲ ವದಂತಿಗಳು ಎಷ್ಟು ಸತ್ಯ ಮತ್ತು ನಿಜವಾಗಿಯೂ ನಡೆದದ್ದೇನು ಎಂಬುದನ್ನು ದಾಖಲೆಗಳ ಸಹಿತ ನೋಡೋಣ.

ನೇಮಕಾತಿಯಲ್ಲಿ ಹಣ ಸುಲಿಗೆ
SCDCCಯಂತಹ ಸ್ಥಳೀಯ ಸಹಕಾರಿ ಬ್ಯಾಂಕೊಂದು ನೇಮಕಾತಿ ಪ್ರಕ್ರಿಯೆ ಆರಂಭಿಸಿದಾಗ, ಅದು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡುತ್ತದೆ ಎಂಬ ಆಸೆ ಇರುವುದು ಸಹಜ. ಹಾಗಾಗಿ 18-12-2017ರಂದು ಬ್ಯಾಂಕು ತನ್ನ 125ದ್ವಿತೀಯ ದರ್ಜೆ ಸಹಾಯಕರು ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಗಳ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಕರಾವಳಿಯ ಉಭಯ ಜಿಲ್ಲೆಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು, 8,751ಅರ್ಜಿಗಳು ಬ್ಯಾಂಕನ್ನು ತಲುಪಿದ್ದವು.
ಈ ಎಲ್ಲ ಅರ್ಜಿಗಳಿಗೆ ತಲಾ 500ರೂ.ಗಳಂತೆ ಬ್ಯಾಂಕು ಅರ್ಜಿಶುಲ್ಕ ರೂಪದಲ್ಲಿ 40.98 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದೆ. ಇದಲ್ಲದೆ ಪ್ರತಿಯೊಬ್ಬ ಅರ್ಜಿದಾರರಿಗೂ ಜಾತಿ ಪ್ರಮಾಣಪತ್ರ, ಲಿಖಿತ ಪರೀಕ್ಷೆಗೆಂದು ಮೂಡಬಿದಿರಿಗೆ ಪ್ರಯಾಣ, ಸಂದರ್ಶನಕ್ಕೆಂದು ಮಂಗಳೂರಿಗೆ ಪ್ರಯಾಣಗಳ ಹೆಸರಿನಲ್ಲಿ ತಲಾ 2000-3000ರೂ. ಗಳ ವೆಚ್ಚ ಬಂದಿದೆ.
ನಿಗೂಢ ಆಯ್ಕೆ ಪ್ರಕ್ರಿಯೆ
ಬಂದ ಅರ್ಜಿಗಳಲ್ಲಿ, SCDCC ಬ್ಯಾಂಕು 6,973 ಮಂದಿಯನ್ನು ಆಯ್ದು ಅವರಿಗೆ ಮೂಡಬಿದಿರೆಯಲ್ಲಿ ಲಿಖಿತ ಪರೀಕ್ಷೆ ಬರೆಯಲು ಆಹ್ವಾನ ನೀಡಿತ್ತು. ಅವರಲ್ಲಿ 4,048 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ವಿಚಿತ್ರವೆಂಬಂತೆ, ಲಿಖಿತ ಪರೀಕ್ಷೆಗೆ ಹಾಜರಾದವರಿಗೆ ಬ್ಯಾಂಕು ತಾನು ನೀಡಿದ ಪೆನ್ನನ್ನೇ ಬಳಸಿ ಪರೀಕ್ಷೆ ಬರೆಯುವುದನ್ನು ಕಡ್ಡಾಯಗೊಳಿಸಿತ್ತು. ಇದು ಹಲವಾರು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದ್ದು, ಉದ್ಯೋಗ ನೀಡಿಕೆಯಲ್ಲಿ ಭ್ರಷ್ಟಾಚಾರಕ್ಕೆ ಇದನ್ನು ಹಾದಿಯಾಗಿ ಬಳಸಲಾಗಿದೆ ಎಂಬ ಸಂಶಯ ದಟ್ಟವಾಗಿದೆ. ನೇಮಕಾತಿ ಪ್ರಕ್ರಿಯೆಗಳು ನಿಗೂಢವಾಗಿವೆ ಎಂಬುದಕ್ಕೆ ಕೆಲವು ಅರ್ಜಿದಾರರು ನೀಡುತ್ತಿರುವ ಕಾರಣಗಳು ಹೀಗಿವೆ:
1. 85% ಲಿಖಿತ ಪರೀಕ್ಷೆಯ ಅಂಕಗಳು 15% ಸಂದರ್ಶನದ ಅಂಕಗಳ ಆಧಾರದಲ್ಲಿ ಆಯ್ಕೆ ನಡೆಯಲಿದೆ ಎಂದು ಹೇಳಲಾಗಿತ್ತಾದರೂ, ಮೆರಿಟ್ ನ್ನು ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಮೀರಿ ನೇಮಕಾತಿಗಳನ್ನು ಮಾಡಿರುವ ಬಗ್ಗೆ ಅರ್ಜಿದಾರರಲ್ಲಿ ತೀವ್ರ ಅಸಮಾಧಾನ ಇದೆ.
2. ಮೀಸಲಾತಿ ವರ್ಗಗಳಲ್ಲೇ ಎಂ.ಕಾಮ್., ಬಿಬಿಎಂ ಸ್ನಾತಕೋತ್ತರ ಪದವೀಧರರಿರುವಾಗ ಅವರನ್ನು ಬಿಟ್ಟು ಸಾಮಾನ್ಯವರ್ಗದ ಬಿ.ಎ. ಪದವೀಧರರನ್ನು ಪರಿಗಣಿಸಲಾಗಿದೆಯಲ್ಲದೇ ಪ್ರತೀ ಸೀಟು ನೀಡಿಕೆಯಲ್ಲಿ ಲಕ್ಷಾಂತರ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ. ಒಟ್ಟಿನಲ್ಲಿ ಇದು ಹತ್ತಾರು ಕೋಟಿ ರೂಪಾಯಿಗಳಿಗೂ ಮಿಕ್ಕಿದ ಹಗರಣವಾಗಿದೆ.
3. 2017ರಲ್ಲಿ ಪ್ರಕಟಣೆ ನೀಡಿದ್ದು 125 ಹುದ್ದೆಗಳಿಗೆ, ಆದರೆ ಆ ಬಳಿಕ 2019ರ ಮೇ ತನಕ ಖಾಲಿಯಾಗುವ ಹುದ್ದೆಗಳಿಗೆಂದು ಒಟ್ಟು 159 ಹುದ್ದೆಗಳಿಗೆ ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ಬದಲಾವಣೆಯನ್ನು ಸಂಪೂರ್ಣವಾಗಿ ಕಾನೂನು ಉಲ್ಲಂಘನೆ ಮಾಡಿ ನಡೆಸಲಾಗಿದೆ.
4. ಬ್ಯಾಂಕಿನ ವೆಬ್ ಸೈಟ್ ನಲ್ಲಿ ನೇಮಕಾತಿ ಪ್ರಕ್ರಿಯೆಯ ವಿವರಗಳನ್ನು ನೀಡುವಾಗ ತೀರಾ ಅಪಾರದರ್ಶಕ ಮಾರ್ಗಗಳನ್ನು ಅನುಸರಿಸಲಾಗಿದ್ದು, ಅಗತ್ಯ ಮಾಹಿತಿಗಳನ್ನು ಬಚ್ಚಿಡಲಾಗಿದೆ.

ನಿಯಮಗಳ ಸಾರಾಸಗಟು ಉಲ್ಲಂಘನೆ
ನೇಮಕಾತಿಗೆ ಸಂಬಂಧಿಸಿ SCDCC ಬ್ಯಾಂಕು ನಿಯಮಗಳನ್ನು ಸಾರಾಸಗಟು ಉಲ್ಲಂಘಿಸಿದೆ ಎಂದು ಆಪಾದಿಸಿರುವ ಅರ್ಜಿದಾರರು ಇದಕ್ಕೆ ನೇರವಾಗಿ ಸಹಕಾರ ಸಂಘಗಳ ನಿಬಂಧಕರ ಸಹಕಾರ ಇದೆ ಎಂದು ದಾಖಲೆಗಳ ಸಮೇತ ಆಪಾದಿಸಿದ್ದಾರೆ.
* ಪರಿಶಿಷ್ಟ ಜಾತಿ, ಪ್ರವರ್ಗ-2, ಮಾಜಿ ಸೈನಿಕರಿಗೆ ಮೀಸಲಾದ ಹುದ್ದೆಗಳನ್ನು ಮೀಸಲಾತಿ ವರ್ಗದವರು ಅರ್ಹತೆಯೊಂದಿಗೆ ಲಭ್ಯರಿದ್ದರೂ ಅವರನ್ನು ಕಡೆಗಣಿಸಿ, ಸಹಕಾರ ಸಂಘಗಳ ನಿಬಂಧಕರ ಸಹಕಾರದಿಂದ ರಾತ್ರೋರಾತ್ರಿ ಮೀಸಲಾತಿಯನ್ನು ತೆಗೆದುಹಾಕಿ ಸಾಮಾನ್ಯವರ್ಗಕ್ಕೆ ಉದ್ಯೋಗ ನೀಡುವಂತೆ ನಿಯಮವನ್ನು ಪರಿವರ್ತಿಸಿಕೊಳ್ಳಲಾಗಿದೆ. ಇದು ಮೀಸಲಾತಿ ನಿಯಮಗಳ ವಿರುದ್ಧವಾಗಿದೆ. ಈ ಬಗ್ಗೆ ಸಹಕಾರ ಸಂಘಗಳ ನಿಬಂಧಕರಿಗೆ, ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರೂ, ಏನೂ ಆಗಿಲ್ಲ ಎಂದು ಅರ್ಜಿದಾರರು ಅಲವತ್ತುಕೊಂಡಿದ್ದಾರೆ.
* ಸ್ಥಳೀಯರಿಗೆ ಉದ್ಯೋಗ ನೀಡುವ ಬದಲು ಹೊರ ರಾಜ್ಯದ 5 ಮತ್ತು ಹೊರ ಜಿಲ್ಲೆಗಳ 32 ಮಂದಿಗೆ ಉದ್ಯೋಗ ನೀಡುವ ಮೂಲಕ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಲಾಗಿದೆ. ಎಲ್ಲ ಹುದ್ದೆಗಳನ್ನೂ ದುಬಾರಿ ಮೊತ್ತಕ್ಕೆ ಮಾರಲಾಗಿದೆ ಎಂದು ಆಪಾದಿಸಿದ್ದಾರೆ.
* ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದಕ್ಕೆ ಅನುಮತಿ ಪಡೆಯುವುದಕ್ಕಾಗಿ ಬ್ಯಾಂಕಿನ ಲಾಭಾಂಶವನ್ನು ಅಕ್ರಮವಾಗಿ ಏರಿಸಿ ತೋರಿಸಲಾಗಿದೆ. ಚಿನ್ನಾಭರಣಗಳ ಈಡಿನ ಸಾಲದ ಇನ್ನೂ ವಸೂಲಾಗದ ಬಡ್ಡಿಯನ್ನು “ಬರಬೇಕಾದ ಬಡ್ಡಿ” ಎಂದು ತೋರಿಸಿ, ಮೇಲ್ನೋಟಕ್ಕೆ ಹೆಚ್ಚುವರಿ ಲಾಭ ತೋರುವಂತೆ ಮಾಡಲಾಗಿದೆ. 2014 ರಲ್ಲಿ ಕೇವಲ 6.5 ಕೋಟಿ ರೂಗಳಷ್ಟು ಇದ್ದ ಈ ಬರಬೇಕಾದ ಬಡ್ಡಿ 2019ರ ಹೊತ್ತಿಗೆ ಹಠಾತ್ ಆಗಿ 239.41 ಕೋಟಿ ರೂ. ಗಳಿಗೆ ಏರಿದೆ. ಇದರಲ್ಲಿ ಬಹುಪಾಲು ಇನ್ನಷ್ಟೇ ವಸೂಲಾಗಿ ಬರಬೇಕಿರುವ ಬಡ್ಡಿ ಎಂದು ಹೇಳಲಾಗಿದೆ.
ನ್ಯಾಯಾಂಗ ಹೋರಾಟದತ್ತ
ಈ ಎಲ್ಲ ವಿಚಾರಗಳಿಂದ ನೊಂದಿರುವ ಉದ್ಯೋಗಾಕಾಂಕ್ಷಿಗಳು SCDCCಬ್ಯಾಂಕಿನ ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಅಣಿಯಾಗಿದ್ದು, ಬ್ಯಾಂಕಿನ ಎಲ್ಲ ಅಕ್ರಮಗಳೂ ಅಮೂಲಾಗ್ರವಾಗಿ ಪರಿಶೀಲನೆಗೆ ಒಳಪಡಬೇಕೆಂದು ಆಗ್ರಹಿಸಿದ್ದಾರೆ.