ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೆಟ್ ತೆರಿಗೆ ಕಡಿತ ಮಾಡಿ ಕಾರ್ಪೊರೆಟ್ ದಿಗ್ಗಜಗಳಿಗೆ ರೂ 1.45 ಲಕ್ಷ ಕೋಟಿ ಉಡುಗೊರೆ ನೀಡಿದಾಗ, ‘ಪ್ರತಿಧ್ವನಿ’ ಸೇರಿದಂತೆ ದೇಶದ ವಿತ್ತ ಪತ್ರಿಕೆಗಳು ಎತ್ತಿದ ಮುಖ್ಯ ಪ್ರಶ್ನೆ ಎಂದರೆ – ಈ ಬೃಹತ್ ಮೊತ್ತವನ್ನು ಎಲ್ಲಿಂದ ಮತ್ತು ಹೇಗೆ ಸರಿದೂಗಿಸಲಾಗುವುದು? ಆರ್ಥಿಕ ಚೇತರಿಕೆ ಉದ್ದೀಪಿಸಬೇಕಾದ ಗ್ರಾಹಕನಿಗೆ ಈ ಕೊಡುಗೆಯಿಂದ ದೊರೆಯುವ ಲಾಭವಾದರೂ ಏನು ಎಂಬುದಾಗಿತ್ತು.
ಕಾರ್ಪೊರೆಟ್ ದಿಗ್ಗಜಗಳ ಹೊಗಳಿಕೆಗಳು ಬಂಡವಾಳ ಪೇಟೆಯಲ್ಲಿ ಮಾರ್ದನಿಸುತ್ತಿದ್ದಂತೆ ಈ ಮೂಲಭೂತ ಪ್ರಶ್ನೆಗಳು ಹಿನ್ನೆಲೆ ಸರಿದಿದ್ದವು. ಆದರೆ, ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ವಿತ್ತೀಯ ಕೊರತೆ ಪ್ರಮಾಣವನ್ನು ಜಿಡಿಪಿಯ ಶೇ. 3.3ರಷ್ಟು ಕಾಯ್ದುಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಬಹುತೇಕ ಆರ್ಥಿಕ ಚಿಂತಕರು ಕಳವಳ ವ್ಯಕ್ತಪಡಿಸಿದ್ದರೂ ಸರ್ಕಾರ ಈ ಬಗ್ಗೆ ಜಾಣ ಮೌನ ವಹಿಸಿತ್ತು.
ವಿತ್ತೀಯ ಕೊರತೆ ಮಿತಿ ಕಾಯ್ದುಕೊಳ್ಳುವುದು ಹೇಗೆ? ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ (2003) ಜಾರಿಗೆ ಬಂದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯಾ ವಿತ್ತೀಯ ವರ್ಷದಲ್ಲಿ ಬಜೆಟ್ ನಲ್ಲಿ ಘೋಷಣೆ ಮಾಡಿದ ಪ್ರಮಾಣದ ವಿತ್ತೀಯ ಕೊರತೆ ಕಾಯ್ದುಕೊಳ್ಳುವುದು ಅತ್ಯಗತ್ಯ. ಬಹುತೇಕ ಸಂದರ್ಭಗಳಲ್ಲಿ ಶೇ. 0.2ರಿಂದ ಶೇ. 1ರಷ್ಟು ವಿತ್ತೀಯ ಕೊರತೆ ಪ್ರಮಾಣ ಹಿಗ್ಗುವುದು ಸಾಮಾನ್ಯವಾಗಿದೆ. ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿರುವ ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯು ವಿತ್ತೀಯ ಕೊರತೆ ಪ್ರಮಾಣವನ್ನು ಅತಿಯಾಗಿ ಹಿಗ್ಗಿಸುವುದಕ್ಕೆ ಅವಕಾಶ ನೀಡುತ್ತಿಲ್ಲ. ವಿತ್ತೀಯ ಜವಾಬ್ದಾರಿ ನಿರ್ವಹಿಸುವುದು ಆಯಾ ಸರ್ಕಾರಗಳ ಸಾಂವಿಧಾನಿಕ ಜವಾಬ್ದಾರಿಯೂ ಹೌದು.
ಕೇಂದ್ರ ಸರ್ಕಾರ ಕಾರ್ಪೊರೆಟ್ ವಲಯಕ್ಕೆ ನೀಡಿರುವ 1.46 ಲಕ್ಷ ಕೋಟಿ ರುಪಾಯಿಗಳನ್ನು ಸರಿದೂಗಿಸಲು ಮತ್ತೆ ಭಾರತೀಯ ರಿಸರ್ವ್ ಬ್ಯಾಂಕ್ ಜೋಳಿಗೆ ಕೈ ಹಾಕಲು ಮುಂದಾಗಿದೆ. ಈಗ ಪ್ರಕಟಿತ ವರದಿಗಳ ಪ್ರಕಾರ ಇನ್ನೂ 30,000 ಕೋಟಿ ರುಪಾಯಿಗಳನ್ನು ಪ್ರಸಕ್ತ ವಿತ್ತೀಯ ವರ್ಷದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಮೀಸಲು ಲಾಭದಲ್ಲಿ ಪಡೆಯಲಿದೆ. ಪ್ರಸಕ್ತ ವಿತ್ತೀಯ ವರ್ಷದ ಉತ್ತರಾರ್ಧದಲ್ಲಿ 2.68 ಲಕ್ಷ ಕೋಟಿ ರುಪಾಯಿ ಸಾಲ ಎತ್ತಲು ನಿರ್ಧರಿಸಿರುವುದರ ಜತೆಗೆ ಮತ್ತೆ ಆರ್ ಬಿ ಐ ನಿಂದ ಮತ್ತಷ್ಟು ಪಡೆಯುವುದು ಕೇಂದ್ರದ ಉದ್ದೇಶ.
ಅಂಕಿ-ಅಂಶ ತೋರುವುದೇನನ್ನು?
ಈಗ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕಿನಿಂದ ಹೆಚ್ಚುವರಿ ಲಾಭ ನಿಧಿಯಿಂದ ರೂ 1.76 ಲಕ್ಷ ಕೋಟಿಯನ್ನು ಪಡೆದು ತನ್ನ ಬೊಕ್ಕಸಕ್ಕೆ ಸೇರಿಸಿದ ನಂತರವೂ ವಿತ್ತೀಯ ಕೊರತೆ ಮಿತಿ ಶೇ. 3.3ರಷ್ಟು ಕಾಯ್ದುಕೊಳ್ಳುವುದು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಆರ್ ಬಿ ಐ ನಿಂದ ಹೆಚ್ಚುವರಿ ಲಾಭ ನಿಧಿಯನ್ನು ಪಡೆಯುವಲ್ಲಿ ಭಾರಿ ಜಾಣ್ಮೆ ಮೆರೆದಿದೆ. 2018-19 ವಿತ್ತೀಯ ವರ್ಷಕ್ಕೆ ಸಂದಾಯವಾಗುವಂತೆ ಅಂದರೆ 2019 ಮಾರ್ಚ್ 31ಕ್ಕೆ ಮುಗಿದ ವರ್ಷಕ್ಕೆ ಪೂರ್ವಾನ್ವಯವಾಗಿ ಸಂದಾಯವಾಗುವಂತೆ 1.23 ಲಕ್ಷ ಕೋಟಿ ರುಪಾಯಿಗಳನ್ನು ಪಡೆದುಕೊಂಡಿದೆ. ಪ್ರಸಕ್ತ ವಿತ್ತೀಯ ವರ್ಷದ ಲೆಕ್ಕದಲ್ಲಿ 52,637 ಕೋಟಿ ರುಪಾಯಿ ಜಮೆ ಆಗಲಿದೆ. ಇದರ ಜತೆಗೆ ಸರ್ಕಾರ ಹೆಚ್ಚುವರಿಯಾಗಿ 30,000 ಕೋಟಿ ರುಪಾಯಿ ಪಡೆಯಲು ಮುಂದಾಗಿದೆ.
ಈ ಮೊತ್ತವನ್ನು ಕೇಂದ್ರ ಸರ್ಕಾರ ಮಧ್ಯಂತರ ಲಾಭಾಂಶವೆಂದು ಸ್ವೀಕರಿಸಲಿದೆ.
ಈಗಾಗಲೇ ಕೇಂದ್ರ ಸರ್ಕಾರ ಪ್ರಸಕ್ತ ವಿತ್ತೀಯ ವರ್ಷದಲ್ಲಿ 95,414 ಕೋಟಿ ರುಪಾಯಿಗಳನ್ನು ಆರ್ ಬಿ ಐ ನಿಂದ ಲಾಭಾಂಶವಾಗಿ ಪಡೆದಿದೆ. ಇದು ಬಜೆಟ್ ನಲ್ಲಿ ಘೋಷಿಸಿದ್ದ ಅಂದಾಜು ಲಾಭಾಂಶ ಮೊತ್ತ 90,000 ಕೋಟಿಗೆ ಹೋಲಿಸಿದರೆ 5,414 ಕೋಟಿ ಹೆಚ್ಚುವರಿಯಾಗಿ ಪಡೆದಂತಾಗಿದೆ. ಈಗ ಇನ್ನೂ 30,000 ಕೋಟಿ ರುಪಾಯಿ ಪಡೆಯುವುದರಿಂದ ಕೇಂದ್ರ ಸರ್ಕಾರವು ಪ್ರಸಕ್ತ ವಿತ್ತೀಯ ವರ್ಷದಲ್ಲಿ ಆರ್ ಬಿ ಐ ನಿಂದ ಲಾಭಾಂಶ ರೂಪದಲ್ಲಿ ಪಡೆಯುವ ಮೊತ್ತವು ರೂ. 1,25,414 ಕೋಟಿಗಳಾಗುತ್ತದೆ. ಕಳೆದ ವಿತ್ತೀಯ ವರ್ಷದಲ್ಲಿ ಆರ್ ಬಿ ಐ ನಿವ್ವಳ ಆದಾಯದ ಪ್ರಮಾಣವನ್ನು (ಅಂದರೆ, ರೂ 1,23,414 ಕೋಟಿ) ಮೀರಿ ಲಾಭಾಂಶವನ್ನು ಕೇಂದ್ರ ಸರ್ಕಾರ ಪಡೆಯುತ್ತಿದೆ. ಸಾಂವಿಧಾನಿಕ ಔಪಚಾರಿಕತೆಗಳ ಅನುಸಾರ ಕೇಂದ್ರ ಸರ್ಕಾರಕ್ಕೆ ಎಷ್ಟು ಲಾಭಾಂಶ ನೀಡಬೇಕು ಎಂಬುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸುತ್ತದೆ. ಕೇಂದ್ರ ಸರ್ಕಾರವೇ ಅದನ್ನು ನಿರ್ಧರಿಸಿ, ಪಡೆಯುವುದು ಸ್ವಾಯತ್ತತೆಗೆ ಧಕ್ಕೆ ತಂದಂತಾಗುತ್ತದೆ.
ಎಲ್ಲಿದೆ ಆರ್ ಬಿ ಐ ಸ್ವಾಯತ್ತತೆ?
ಆರ್ ಬಿ ಐ ಸ್ವಾಯತ್ತತೆಯನ್ನು ಪ್ರತಿಪಾದಿಸಿದ ರಘುರಾಮ್ ರಾಜನ್ ಅವರನ್ನು ಮೋದಿ ಸರ್ಕಾರ ಎರಡನೇ ಅವಧಿಗೆ ಪರಿಗಣಿಸಲೇ ಇಲ್ಲ. ಸ್ವಾಯತ್ತತೆ ಪ್ರತಿಪಾದಿಸಿದ ಊರ್ಜಿತ್ ಪಟೇಲ್ ಅವರು ಮೊದಲನೇ ಅವಧಿ ಪೂರ್ಣಗೊಳ್ಳುವ ಮುನ್ನವೇ ಆರ್ಬಿಐ ಗವರ್ನರ್ ಸ್ಥಾನ ತ್ಯಜಿಸಿ ಹೋದರು. ಮೋದಿ ಸರ್ಕಾರದಲ್ಲಿ ಹಣಕಾಸು ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಶಕ್ತಿಕಾಂತ ದಾಸ್ ಅವರು ಮೋದಿ ಸರ್ಕಾರದ ಬಗ್ಗೆ ಉದಾರ ನೀತಿ ತಳೆದಿರುವಂತಿದೆ. ಆರ್ ಬಿ ಐ ಸ್ವಾಯತ್ತತೆಯನ್ನು ಒತ್ತೆ ಇಟ್ಟಾದರೂ ಮೋದಿ ಸರ್ಕಾರದ ಗೌರವ ಕಾಪಾಡುವುದಕ್ಕೆ ಆದ್ಯತೆ ನೀಡಿದಂತಿದೆ.
ಅದೇನೇ ಇರಲಿ, ಕೇಂದ್ರ ಸರ್ಕಾರವು ಆರ್ ಬಿ ಐ ನಿಂದ ಪಡೆದಿದ್ದಷ್ಟೂ ಸಾಲದೆಂಬಂತೆ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯಿಂದ (ಎನ್ಎಸ್ಎಸ್ಎಫ್) ಯಿಂದಲೂ ಸಾಕಷ್ಟು ಮೊತ್ತವನ್ನು ಪಡೆಯುವ ಚಿಂತನೆ ಮಾಡಿದೆ. 1999 ರಲ್ಲಿ ರಚನೆಯಾಗಿರುವ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯು ದೇಶದಲ್ಲಿರುವ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಸಂಗ್ರಹ. ಎಂಟರಿಂದ ಹತ್ತು ವರ್ಷಗಳ ಸುದೀರ್ಘ ಅವಧಿಗೆ ಕೋಟ್ಯಂತರ ಜನಸಾಮಾನ್ಯರು ಮಾಡುವ ಹೂಡಿಕೆಯ ನಿಧಿ ಇದು. ವಿತ್ತೀಯ ಕೊರತೆ ಸರಿದೂಗಿಸಲು ಆಗಾಗ್ಗೆ ಈ ನಿಧಿಯನ್ನು ಬಳಸುವುದು ಉಂಟು. ಆದರೆ, ಬಳಸಿದ ನಿಧಿಯನ್ನು ಮರುಪಾವತಿಸಿ ನಿಧಿಯ ಒಟ್ಟು ಮೌಲ್ಯದ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಕೇಂದ್ರದ ಜಬಾವ್ದಾರಿಯೂ ಹೌದು.
ಆದರೆ, ಕುಸಿಯುತ್ತಿರುವ ತೆರಿಗೆ ಸಂಗ್ರಹ, ಕಾರ್ಪೊರೆಟ್ ತೆರಿಗೆ ಕಡಿತದಿಂದ ವಾರ್ಷಿಕ 1.45 ಲಕ್ಷ ಕೋಟಿಯ ಹೊರೆಯನ್ನು ಹೊರಬೇಕಾದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಣ್ಣ ಉಳಿತಾಯ ನಿಧಿಯಿಂದ ಪಡೆದ ಮೊತ್ತವನ್ನು ಸಕಾಲದಲ್ಲಿ ಭರ್ತಿ ಮಾಡುತ್ತದಾ ಎಂಬ ಪ್ರಶ್ನೆಯೂ ಇದೆ. ಜತೆಗೆ ಆರ್ ಬಿ ಐ ನಲ್ಲಿ ಉಳಿದಿರುವ ಹೆಚ್ಚುವರಿ ಲಾಭ ನಿಧಿ ಏಳೆಂಟು ಕೋಟಿಗಳನ್ನೂ ಕೇಂದ್ರ ಸರ್ಕಾರ ಬರುವ ವರ್ಷಗಳಲ್ಲಿ ಬಳಸಿಕೊಂಡು ಕೇಂದ್ರ ಬ್ಯಾಂಕನ್ನು ಬರಿದು ಮಾಡುವ ಆಪಾಯವೂ ಇದೆ.