ಬಿಜೆಪಿಯ ಹಣ ಮತ್ತು ಅಧಿಕಾರದ ಬಲದ ನಡುವೆಯೂ ಸತತ ಎರಡನೇ ಬಾರಿಗೆ ಆಮ್ ಆದ್ಮಿ ಪಕ್ಷಕ್ಕೆ (ಆಪ್) 70 ವಿಧಾನಸಭಾ ಕ್ಷೇತ್ರಗಳ ಪೈಕಿ 62 ಸ್ಥಾನ ಗೆದ್ದುಕೊಡುವ ಮೂಲಕ ದೆಹಲಿಯಲ್ಲಿ ಮತ್ತೆ ಅಧಿಕಾರ ಹಿಡಿದಿರುವ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಬಲ ಎದುರಾಳಿಯಾಗಬಲ್ಲರು ಎಂಬ ಬಿರುಸಿನ ಚರ್ಚೆ ಆರಂಭವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಮೋದಿಗಿಂತ ಹಲವು ಪಟ್ಟು ಮುಂದಿರುವ ಕೇಜ್ರಿವಾಲ್ 2024ರ ಲೋಕಸಭಾ ಚುನಾವಣೆ ವೇಳೆಗೆ ಮೋದಿಗೆ ಸವಾಲೊಡ್ಡುವ ಸಮರ್ಥ ನಾಯಕ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ದೆಹಲಿಯ ಸರ್ಕಾರಿ ಶಾಲೆಗಳನ್ನು ಮಾದರಿಯನ್ನಾಗಿ ರೂಪಿಸಿರುವುದು, ಶಿಕ್ಷಣ ಕ್ಷೇತ್ರಕ್ಕೆ 75 ಸಾವಿರ ಕೋಟಿ ರುಪಾಯಿ ವೆಚ್ಚದ ಬಜೆಟ್ನಲ್ಲಿ ಶೇ.25ರಷ್ಟು ಅನುದಾನ ಮೀಸಲಿಟ್ಟಿರುವುದು, ಮೊಹಲ್ಲಾ ಕ್ಲಿನಿಕ್ ಗಳ ಮೂಲಕ ಜನರ ಆರೋಗ್ಯಕ್ಕೆ ಆದ್ಯತೆ ನೀಡಿರುವುದು, ಉಚಿತವಾಗಿ ಕುಡಿಯುವ ನೀರು ಹಾಗೂ ವಿದ್ಯುತ್ ನೀಡುವ ಮೂಲಕ ಬಡವರು ಹಾಗೂ ಮಧ್ಯಮ ವರ್ಗದ ಜನರ ಬದುಕಿನ ಹೊರೆ ಇಳಿಸಿರುವುದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಮೆಟ್ರೊ ಹಾಗೂ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಓಡಾಟ, ನಾರಿಯರ ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ಕೇಜ್ರಿವಾಲ್ ಸರ್ಕಾರವು ಅಭಿವೃದ್ಧಿ ಮಾದರಿಯನ್ನು ದೇಶದ ಮುಂದಿಟ್ಟಿದೆ. ಇದಕ್ಕೆ ದೆಹಲಿಯ ಮತದಾರರು ಭಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೋದಿಯವರನ್ನೊಳಗೊಂಡ ಬಿಜೆಪಿಯು ಸತತ ಎರಡನೇ ಬಾರಿಗೆ ಕೇಜ್ರಿವಾಲ್ ವಿರುದ್ಧ ಸೋತು ಸುಣ್ಣವಾಗಿದೆ.
ದೆಹಲಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆ ಗಣನೀಯವಾಗಿ ಸುಧಾರಣೆ ಕಂಡಿರುವುದನ್ನು ವಿವಿಧ ರಾಜ್ಯಗಳ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸರ್ಕಾರಿ ಶಾಲೆ ಎಂದರೆ ಮೂಗುಮುರಿಯುವ ಕಾಲದಲ್ಲಿ ದೆಹಲಿಯಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪೋಷಕರು ಮುಗಿಬೀಳುತ್ತಿದ್ದಾರೆ ಎಂಬ ಮಟ್ಟಿಗೆ ಅಲ್ಲಿನ ಸರ್ಕಾರ ಸುಧಾರಣೆ ಮಾಡಿದೆ ಎನ್ನುವ ವಿಚಾರ ಕೇಜ್ರಿವಾಲ್ ಗೆ ಜನಮನ್ನಣೆ ಗಳಿಸಿಕೊಟ್ಟಿದೆ.
ಸ್ಥಳೀಯ ಸಂಸ್ಥೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ನಂತರ ಆಡಳಿತದತ್ತ ಗಮನಹರಿಸಿದ ಕೇಜ್ರಿವಾಲ್ ಅವರು ಸೀಮಿತ ಅವಧಿ, ಸಂಪನ್ಮೂಲ ಹಾಗೂ ಮಿತಿಯಲ್ಲಿ ದೆಹಲಿ ಅಭಿವೃದ್ಧಿ ಮಾದರಿಯ ಮುಂದೆ ಗುಜರಾತ್ ಮಾದರಿ ವಿಫಲವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿ ಚುಕ್ಕಾಣಿ ಹಿಡಿದಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ರಾಷ್ಟ್ರೀಯ ವೇದಿಕೆ ಪ್ರವೇಶಿಸಿದ ಮೋದಿಯವರ ಹಿನ್ನೆಲೆ ಹಲವು ವಿರೋಧಾಭಾಸಗಳಿಂದ ಕೂಡಿದೆ. ಬಿಜೆಪಿ ಬಿಕ್ಕಟ್ಟು ಎದುರಿಸುತ್ತಿದ್ದ 2001ರ ಸಂದರ್ಭದಲ್ಲಿ ಗುಜರಾತ್ ನಲ್ಲಿ ಬಿಜೆಪಿಯ ನೇತೃತ್ವ ವಹಿಸಿಕೊಂಡ ನರೇಂದ್ರ ಮೋದಿಯವರು ಮುಂದಿನ ವರ್ಷ ಅಂದರೆ 2002ರಲ್ಲಿ ಗುಜರಾತ್ ಹತ್ಯಾಕಾಂಡ ನಡೆದಾಗ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಜನರ ಮಾರಣಹೋಮವಾಗಿತ್ತು. ಈ ಪೈಕಿ ಬಹುತೇಕರು ಮುಸ್ಲಿಮರು ಎಂಬುದನ್ನು ಹಲವು ತನಿಖಾ ಸಂಸ್ಥೆಗಳ ವರದಿಗಳು ಪ್ರಚುರಪಡಿಸಿವೆ. ಇದಾದ ಬಳಿಕ ಮೂರು ಬಾರಿ ಗುಜರಾತ್ ಮುಖ್ಯಮಂತ್ರಿಯಾದ ನರೇಂದ್ರ ಮೋದಿಯವರು “ಅಭಿವೃದ್ಧಿಯ ಹರಿಕಾರ” ಎಂಬ ಇಮೇಜ್ ಮೂಲಕ ರಾಷ್ಟ್ರ ರಾಜಕಾರಣ ಪ್ರವೇಶಿಸಿ, ಸತತ ಎರಡನೇ ಬಾರಿಗೆ ಪ್ರಧಾನಿಯಾಗಿದ್ದಾರೆ.
ಗುಜರಾತ್ ಹತ್ಯಾಕಾಂಡವನ್ನು ಮುಚ್ಚಿಡುವ ಉದ್ದೇಶದಿಂದಲೇ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿಯವರನ್ನು ಗುಜರಾತ್ ಅಭಿವೃದ್ಧಿಯ ಹರಿಕಾರ ಎಂದು ಬಿಜೆಪಿ ಬಿಂಬಿಸಿತ್ತು. ಇದು ಕಮಲ ಪಾಳೆಯದ ಮಾರ್ಕೆಟಿಂಗ್ ತಂತ್ರ ಎಂಬುದು ಗುಟ್ಟೇನು ಅಲ್ಲ.
ಕೈಗಾರಿಕಾ ಅಭಿವೃದ್ಧಿ, ಮಹಿಳೆ-ಮಕ್ಕಳ ಸುರಕ್ಷತೆ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ರೈತರು ಹಾಗೂ ವಿದ್ಯಾರ್ಥಿಗಳ ಕಲ್ಯಾಣ, ಉದ್ಯೋಗ ಸೃಷ್ಟಿ, ದೀನ-ದಲಿತ ಜೀವನ ಸುಧಾರಣೆ ಸೇರಿದಂತೆ ಹಲವಾರು ವಿಷಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ಹಿಂದಿದ್ದ ಗುಜರಾತ್ ರಾಜ್ಯವನ್ನು ಮಾದರಿ ರಾಜ್ಯ ಎನ್ನುವ ರೀತಿಯಲ್ಲಿ ಬಿಂಬಿಸಲಾಗಿತ್ತು. ಇತ್ತೀಚೆಗಷ್ಟೇ ಗುಜರಾತ್ ನ ಸರ್ಕಾರಿ ಆಸ್ಪತ್ರೆಯಲ್ಲಿ ನೂರಾರು ಹಸುಳೆಗಳು ಪ್ರಾಣಬಿಟ್ಟಿದ್ದವು. 2013 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗುಜರಾತ್ ಅಭಿವೃದ್ಧಿ ದೇಶಕ್ಕೆ ಮಾದರಿ ಎಂದು ಬಿಂಬಿಸಿದ್ದು ದಿಟವಾದರೆ ಹಸುಳೆಗಳು ಪ್ರಾಣಬಿಟ್ಟಿದ್ದೇಕೆ? ಮೋದಿಯವರು ತಮ್ಮ ಅವಧಿಯಲ್ಲಿ ಅಥವಾ ಪ್ರಧಾನಿಯಾದ ನಂತರ ಗುಜರಾತ್ ಅನ್ನು ಮಾದರಿಯನ್ನಾಗಿ ರೂಪಿಸಲು ಆದ್ಯತೆ ನೀಡಿದ್ದರೆ ಅಪಾರ ಪ್ರಮಾಣದಲ್ಲಿ ಹಸುಳೆಗಳು ಏಕೆ ಅಸುನೀಗುತ್ತಿದ್ದವು. ಅಧಿಕಾರಕ್ಕಾಗಿ “ಗುಜರಾತ್ ಅಭಿವೃದ್ಧಿ ಮಾದರಿ”ಯನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತೇ ವಿನಾ ವಾಸ್ತವದಲ್ಲಿ ಯಾವುದೇ ಅಭಿವೃದ್ಧಿ ಮಾದರಿ ಇರಲಿಲ್ಲ ಎಂಬುದು ಕಾಲಕ್ರಮೇಣ ಬಹಿರಂಗಗೊಂಡಿದೆ.
ಉಗ್ರ ಹಿಂದುತ್ವ ಪ್ರತಿಪಾದನೆಯ ಮೂಲಕ ಧ್ರುವೀಕರಣ ರಾಜಕಾರಣ ನಡೆಸುತ್ತಿರುವ ಮೋದಿ ನೇತೃತ್ವದ ಬಿಜೆಪಿಯು ದೇಶದ ಆರ್ಥಿಕತೆಯನ್ನು ಅತ್ಯಂತ ಕೆಟ್ಟ ಸ್ಥಿತಿಗೆ ಕೊಂಡೊಯ್ದಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೋದಿಯವರು ಆರು ವರ್ಷಗಳ ಹಿಂದೆ ಪ್ರತಿ ವರ್ಷ ಎರಡು ಕೋಟಿ ಹೊಸ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಕಾಳಧನವನ್ನು ಭಾರತಕ್ಕೆ ಮರಳಿ ತರುವುದಾಗಿ ಘೋಷಿಸಿದ್ದರು. ಈ ಭರವಸೆಗಳು ವಾಸ್ತವಕ್ಕೆ ಬಂದಿಲ್ಲ. ಇದರ ಮಧ್ಯೆ, ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದಾರೆ. ದೇಶದ ಆರ್ಥಿಕತೆ ತುರ್ತುಪರಿಸ್ಥಿತಿಯಲ್ಲಿದ್ದು, ಆಟೊಮೊಬೈಲ್ ಸೇರಿದಂತೆ ಹಲವು ಕ್ಷೇತ್ರಗಳು ಸತತವಾಗಿ ಕುಸಿಯುತ್ತಿವೆ. ನಿರುದ್ಯೋಗ ಸಮಸ್ಯೆಯು 45 ವರ್ಷಗಳಲ್ಲೇ ಅಧಿಕ ಮಟ್ಟಕ್ಕೆ ತಲುಪಿದೆ ಎಂದು ಸರ್ಕಾರಿ ದಾಖಲೆಗಳೆ ಹೇಳುತ್ತಿವೆ. ದೇಶವನ್ನು ಸಮರ್ಥವಾಗಿ ಮುನ್ನಡೆಸಲು ವಿಫಲವಾಗಿರುವ ಮೋದಿಯುವರು ಹಿಂದೂ-ಮುಸ್ಲಿಂ ವಿಚಾರ ಪ್ರಸ್ತಾಪ, ವಿರೋಧ ಪಕ್ಷಗಳನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡುವ ಮೂಲಕ ಗಂಭೀರ ವಿಚಾರಗಳ ಬಗ್ಗೆ ಚರ್ಚೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಅಧಿಕಾರ ಕೇಂದ್ರೀಕರಿಸುವ ವ್ಯವಸ್ಥೆ ಜಾರಿಗೊಳಿಸುವ ಮೂಲಕ ವಿವಿಧ ಸಚಿವಾಲಯಗಳ ಕಾರ್ಯಭಾರವನ್ನು ಕಡಿತಗೊಳಿಸಲಾಗಿದೆ ಎಂಬ ಆರೋಪ ಮೋದಿಯವರ ಮೇಲಿದೆ. ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರಕ್ಕೆ ಬದಲಾಗಿ ವಿಭಜನಕಾರಿ ಅಂಶಗಳನ್ನು ಪ್ರಸ್ತಾಪಿಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ. ಒಂದೊಮ್ಮೆ ಗುಜರಾತ್ ಅಭಿವೃದ್ಧಿ ಮಾದರಿ ಅಸ್ತಿತ್ವದಲ್ಲಿದ್ದರೆ ಅದನ್ನು ಆರು ವರ್ಷ ಕಳೆದರೂ ದೇಶದ ಎಲ್ಲಾ ರಾಜ್ಯಗಳಿಗೆ ಏಕೆ ವಿಸ್ತರಿಸಿಲ್ಲ ಎನ್ನುವ ಪ್ರಶ್ನೆ ಎದ್ದಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಡೆಸಿದ ಪ್ರಚಾರದ ವಿಚಾರಗಳ ಮೇಲೆ ಗಮನ ಹರಿಸಿದರೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವು ಅಧಿಕಾರಕ್ಕಾಗಿ ಎಷ್ಟು ಬದಲಾಗಿದೆ ಎಂಬುದು ಆಘಾತ ಉಂಟುಮಾಡುವಂತಿದೆ. ಚುನಾಯಿತ ಮುಖ್ಯಮಂತ್ರಿಯನ್ನು ‘ಭಯೋತ್ಪಾದಕ’ ಎಂದು ಬಿಜೆಪಿ ನಾಯಕರು ಕರೆದರೂ ನರೇಂದ್ರ ಮೋದಿಯವರು ಯಾವುದೇ ಮಾತನಾಡುವುದಿಲ್ಲ. ಅಷ್ಟರಮಟ್ಟಿಗೆ ರಾಜಕಾರಣದ ಭಾಷೆಯನ್ನು ಪಾತಾಳಕ್ಕೆ ಕೊಂಡೊಯ್ಯಲಾಗಿದೆ.
ಅಭಿವೃದ್ಧಿ ಹರಿಕಾರ ಎಂದು ಬಿಂಬಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿಯವರು ಜನರ ಬದುಕನ್ನು ಸುಧಾರಿಸುವಲ್ಲಿ ಸೋತು ಹೋಗಿದ್ದಾರೆ. ಇದಕ್ಕೆ ಪರ್ಯಾಯವಾಗಿ ಅರವಿಂದ್ ಕೇಜ್ರಿವಾಲ್ ಅವರು ಸರ್ಕಾರಿ ಸೇವೆಗಳು ಜನರಿಗೆ ಸುಲಭ ಮತ್ತು ಉಚಿತವಾಗಿ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ದೆಹಲಿಯ ಮುಖ್ಯಮಂತ್ರಿಯಾಗಿ ಹ್ಯಾಟ್ರಿಕ್ ಬಾರಿಸಿದ್ದಾರೆ. ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು ಅವರನ್ನು ನರೇಂದ್ರ ಮೋದಿಗೆ ವಿಪಕ್ಷಗಳ ಪೈಕಿ ಸವಾಲೊಡ್ಡಬಲ್ಲ ಸಮರ್ಥ ನಾಯಕ ಎನ್ನುವಲ್ಲಿಗೆ ತಂದು ನಿಲ್ಲಿಸಿವೆ. 2014ರಲ್ಲಿ ವಾರಾಣಸಿಯಲ್ಲಿ ಮೋದಿಯವರ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ತಾವು ಜಾರಿಗೊಳಿಸಿದ ಕ್ರಮಗಳ ಮೂಲಕ ಮೋದಿಯವರಿಗೆ ಎದುರಾಗಿ ನಿಲ್ಲುವಷ್ಟರ ಮಟ್ಟಿಗಿನ ವರ್ಚಸ್ಸು ವೃದ್ಧಿಸಿಕೊಂಡಿದ್ದಾರೆ. ಪ್ರಸಕ್ತ ಅವಧಿಯಲ್ಲಿ ಆಪ್ ಬೆಳವಣಿಗೆ ಹಾಗೂ ಮುಂದೆ ನಡೆಯುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನವು ಕೇಜ್ರಿವಾಲ್ ಅವರ ರಾಷ್ಟ್ರಮಟ್ಟದ ಗುರಿಯನ್ನು ಖಾತರಿಪಡಿಸಲಿದೆ.