ಸುಧಾರಿತ ಭೌತಿಕ ಸೌಲಭ್ಯ ಹಾಗೂ ಅರ್ಹ ಶಿಕ್ಷಕರ ಮೂಲಕ ಸಮಂಜಸ ಅಂತರದಲ್ಲಿ ಫ್ರೌಢಶಾಲೆ ಮತ್ತು ಪದವಿಪೂರ್ವ ಶಿಕ್ಷಣಕ್ಕೆ ಪ್ರವೇಶಾವಕಾಶ, ಗುಣಮಟ್ಟ ಮತ್ತು ಸಮಾನತೆಯನ್ನು ಸುಧಾರಿಸುವ ಉದ್ದೇಶದೊಂದಿಗೆ ಹಾಗೂ 14-18ರ ವಯೋಮಾನದ ಬಾಲಕಿಯರಿಗೆ, ಪರಿಶಿಷ್ಟ ಜಾತಿ ಮತ್ತು ಗಿರಿಜನ ಮತ್ತು ವಿಕಲಚೇತನ ಮಕ್ಕಳಿಗೆ ವಿಶೇಷ ಗಮನವನ್ನು ನೀಡಲು ಭಾರತ ಸರ್ಕಾರ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್ ಎಮ್ ಎಸ್ ಎ) ಪ್ರಾರಂಭಿಸಿತು. 2013-14ರಿಂದ 2017-18ರ ನಡುವಿನ ಅವಧಿಯಲ್ಲಿ ಆರ್ ಎಮ್ ಎಸ್ ಎ ಅಡಿ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದ್ದರೂ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಬಳಸಿಕೊಳ್ಳುವುದರಲ್ಲಿ ವಿಫಲವಾಗಿದೆ ಎಂದು ಭಾರತದ ಲೆಕ್ಕ ನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಕಂಡು ಬಂದಿದೆ.
ಸಾರಿಗೆ ವ್ಯವಸ್ಥೆ, ಶಾಲೆಗಳ ಉನ್ನತೀಕರಣ/ಬಲಪಡಿಸುವಿಕೆಯಲ್ಲಿ ವೈಫಲ್ಯ
ಮಾಧ್ಯಮಿಕ ಮತ್ತು ಪ್ರೌಢಶಾಲೆಯನ್ನು ತಲುಪಲು ಮಕ್ಕಳು ಪ್ರಯಾಣ ಮಾಡಬೇಕಿರುವ ದೂರವನ್ನು ಕಡಿಮೆಗೊಳಿಸುವುದು, ಸಾರಿಗೆ ಸೌಲಭ್ಯವನ್ನು ಸುಧಾರಿಸುವುದು ಮತ್ತು ತೆರೆದ ಶಾಲೆಯ ಮೂಲಕ ಪ್ರೌಢ ಶಿಕ್ಷಣಕ್ಕೆ ಸುಧಾರಿತ ಪ್ರವೇಶಾವಕಾಶವನ್ನು ನೀಡುವುದು ಆರ್ ಎಮ್ ಎಸ್ ಎ ಗುರಿ. ಇದಲ್ಲದೆ, ‘ಕರ್ನಾಟಕ ಮುನ್ನೋಟ ಯೋಜನೆ’ ಪ್ರಕಾರ ಮಾಧ್ಯಮಿಕ ಶಿಕ್ಷಣವನ್ನು ವಿಸ್ತರಿಸುವುದರ ಸಲುವಾಗಿ ಸಮಂಜಸವಾದ ಅಂತರದಲ್ಲಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿರಬೇಕು. ಅಂದರೆ ಐದು ಕಿ. ಮೀ. ದೂರದೊಳಗೆ ಪ್ರೌಢಶಾಲೆಗಳಿರಬೇಕೆಂಬುದು ಮುನ್ನೋಟ ಯೋಜನೆಯ ಉದ್ದೇಶ. ಮತ್ತು ಇದರ ಜೊತೆಗೆ ರಾಷ್ಟ್ರೀಯ ಮಟ್ಟದ ಮಾದರಿಯೊಂದಿಗೆ ಶಾಲಾ ಶಿಕ್ಷಣವನ್ನು ಸರಿಹೊಂದಿಸಬೇಕು. ಆದರೆ 4,361 ವಾಸಸ್ಥಳಗಳಲ್ಲಿ ಪರಿಣಾಮಕಾರಿ ಮತ್ತು ಸುರಕ್ಷಿತ ಸಾರಿಗೆ ಸೌಲಭ್ಯ ಹಾಗೂ ವಸತಿ ಶಾಲೆಗಳು ಇಲ್ಲದಿರುವುದು ಸಿಎಜಿ ವರದಿಯಿಂದ ಗೊತ್ತಾಗಿದೆ. ಚಾಮರಾಜನಗರ ಜಿಲ್ಲೆಯ ಪದಸಲನಾಥ, ಇಂಡಿಗನಾಥ, ತೇಕನಿ, ತೋಕರೆ, ತುಳಸಿ, ಕೊಕ್ಕಬಾರಿ, ದೊಡ್ಡಾನಿ ಮತ್ತು ಚಂಗಡಿ ಊರಿನಲ್ಲಿ ಯಾವುದೇ ಸಾರಿಗೆ ಸೌಲಭ್ಯಗಳಿಲ್ಲ. ಮಕ್ಕಳು ತಮ್ಮ ಶಾಲೆಗಳಿಗೆ ಹೋಗಲು ಕನಿಷ್ಠ ಆರು ಕಿ.ಮೀಗಳಷ್ಟು ದೂರ ನಡೆದುಕೊಂಡು ಹೋಗುತ್ತಿದ್ದಾರೆ.
ಕರ್ನಾಟಕ ಮುನ್ನೋಟ ಯೋಜನೆಯ ಪ್ರಕಾರ ಶಾಲೆಗಳಿಗೆ ಹೆಚ್ಚಿನ ಪ್ರವೇಶಾವಕಾಶವನ್ನು ಒದಗಿಸುವುದರ ಸಲುವಾಗಿ ಶಾಲೆಗಳ ಮ್ಯಾಪಿಂಗ್ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವುದು ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸುವುದು ಒಳಗೊಂಡಿತ್ತು. ಮುನ್ನೋಟ ಯೋಜನೆಯು 2012ರೊಳಗೆ 2,000 ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಬೇಕೆಂದು ಆಲೋಚಿತ್ತು. ಆದರೆ ರಾಜ್ಯದಲ್ಲಿ 2009-10ರಿಂದ 2017-18ರ ಅವಧಿಯಲ್ಲಿ ಕೇವಲ 558 ಶಾಲೆಗಳನ್ನು ಮಾತ್ರ ಉನ್ನತೀಕರಿಸುವುದಕ್ಕೆ ಪ್ರಸ್ತಾಪಿಸಿತ್ತು. ಇದರ ಪೈಕಿ ಯೋಜನಾ ಅನುಮೋದನಾ ಮಂಡಳಿಯು (ಪಿಎಬಿ) ಉನ್ನತೀಕರಣಕ್ಕಾಗಿ ಒಟ್ಟು 488 ಶಾಲೆಗಳನ್ನು ಮಾತ್ರ ಅನುಮೋದಿಸಿತು.
2009-10ರಿಂದ 2017-18ರ ಅವಧಿಯಲ್ಲಿ ಪಿಎಬಿ ಉನ್ನತೀಕರಣಕ್ಕಾಗಿ 488 ಶಾಲೆಗಳನ್ನು ಅನುಮೋದಿಸಿದಂತೆ, 1,908 ಶಾಲೆಗಳನ್ನು ಶಾಲೆಗಳನ್ನು ಬಲಪಡಿಸುವಿಕೆಗೆ ಅನುಮೋದನೆ ಕೊಟ್ಟಿತ್ತು. ಒಟ್ಟು 2,396 ಶಾಲೆಗಳನ್ನು ಉನ್ನತೀಕರಣ/ಬಲಪಡಿಸುವಿಕೆಗಾಗಿ ರೂ. 859.23ಕೋಟಿ ಹಣವನ್ನು ಸಹ ಬಿಡುಗಡೆ ಮಾಡಿತ್ತು. ಆದರೆ ಇವುಗಳಲ್ಲಿ ಆರು ವರ್ಷಗಳಿಗೂ ಹೆಚ್ಚಿನ ವಿಳಂಬದ ನಂತರ 1,740 ಶಾಲೆಗಳನ್ನು ಮಾತ್ರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪೂರ್ಣಗೊಳಿಸಿದೆ. ಇನ್ನು 140 ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ 516 ಶಾಲೆಗಳ ಟೆಂಡರ್ ಗಳನ್ನೇ ಆಹ್ವಾನಿಸಿಲ್ಲ ಎಂದು ಹೇಳಲಾಗಿದೆ.
ಕಂಪ್ಯೂಟರ್, ಪ್ರಯೋಗಶಾಲೆ, ಗ್ರಂಥಾಲಯ, ಶೌಚಾಲಯ ಒದಗಿಸುವಲ್ಲಿ ವಿಫಲ
ಮಾಹಿತಿ ಮತ್ತು ಸಂವಹವನ ತಂತ್ರಜ್ಞಾನವು ಪ್ರೌಢ ಶಿಕ್ಷಣ ವ್ಯವಸ್ಥೆಯ ಸಾರ್ವತ್ರಿಕ ಬೆಂಬಲವಾಗಿದೆ. ಮತ್ತು ಪ್ರತಿಯೊಂದು ಪ್ರೌಢಶಾಲೆಯೂ ವಿಜ್ಞಾನ ಪ್ರಯೋಗಶಾಲೆಯನ್ನು ಹೊಂದಿರಬೇಕೆಂಬುದು ಆರ್ ಎಮ್ ಎಸ್ ಎ ನಿಯಮ. ಆದರೆ 343 ಶಾಲೆಗಳ ಪೈಕಿ 65 ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಶಾಲೆ ಇಲ್ಲ. 101 ಶಾಲೆಗಳಲ್ಲಿ ಕಂಪ್ಯೂಟರ್ ಪ್ರಯೋಗಶಾಲಾ ಸೌಕರ್ಯಗಳಿರಲಿಲ್ಲವೆಂದು ಪರಿಕ್ಷಾ-ತನಿಖೆಯಿಂದ ಕಂಡು ಬಂದಿರುವುದಾಗಿ ಹೇಳಲಾಗಿದೆ. ಇದಲ್ಲದೆ, 342 ಶಾಲೆಗಳಲ್ಲಿ 199 ಶಾಲೆಗಳಲ್ಲಿ ಗ್ರಂಥಾಲಯಗಳಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿತ್ತು. ಆದರೆ ಭೌತಿಕ ತನಿಖೆ ನಡೆಸಿದಾಗ 99 ಶಾಲೆಗಳಲ್ಲಿ ಪ್ರತ್ಯೇಕ ಗ್ರಂಥಾಲಯ ಕೊಠಡಿಗಳಿರಲಿಲ್ಲ.
2013-14ರಿಂದ 2017-18ರ ಅವಧಿಯಲ್ಲಿ ‘ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಸಮಿತಿ-ಕರ್ನಾಟಕ (ಆರ್ ಎಮ್ ಎಸ್ ಎ ಎಸ್ ಕೆ) 186 ಶಾಲೆಗಳಲ್ಲಿ ರೂ. 4.32 ಕೋಟಿ ವೆಚ್ಚದಲ್ಲಿ ಶೌಚಾಲಯಗಳ ನಿರ್ಮಾಣ ಕೈಗೆತ್ತಿಕೊಂಡಿತ್ತು. ಲೆಕ್ಕಪರಿಶೋಧಕರು ಪರೀಕ್ಷಾ ತನಿಖೆ ನಡೆಸಿದ 163 ಶಾಲೆಗಳ ಪೈಕಿ 52 ಶಾಲೆಗಳಲ್ಲಿ ಶೌಚಾಲಯಗಳ ನಿರ್ವಹಣೆಯಲ್ಲಿ ಸಾಕಷ್ಟು ಕೊರತೆ ಕಂಡುಬಂದಿದೆ.
ಇದಲ್ಲದೆ ಮಾನದಂಡಗಳ ಅನ್ವಯ, ಶಾಲಾಕೊಠಡಿಯ ಬಲವು 50 ಮಕ್ಕಳನ್ನು ಮೀರಿದರೆ ಮತ್ತೊಂದು ವಿಭಾಗವನ್ನು ರಚಿಸಬೇಕೆಂಬ ನಿಯಮವಿದೆ. ಆದರೆ ಬೆಳಗಾವಿ, ಬೆಂಗಳೂರು ಚಾಮರಾಜನಗರ, ಚಿತ್ರದುರ್ಗ, ಹಾಸನ, ಕಲಬುರಗಿ, ವಿಜಯಪುರ ಮತ್ತು ಯಾದಗಿರಿಯ ಕೆಲ ಶಾಲೆಗಳಲ್ಲಿ 50ರಿಂದ 145ರವಗೆ ಶಾಲೆಯ ಬಲವಿದ್ದರೂ ಸಹ ಮಕ್ಕಳನ್ನು ಒಂದೇ ತರಗತಿಯಲ್ಲಿ ಸ್ಥಳಾವಕಾಶ ಮಾಡಲಾಗಿದ್ದು, ತತ್ಪರಿಣಾಮವಾಗಿ ಬೆಂಚುಗಳಿಗೆ/ಡೆಸ್ಕ್ ಗಳಿಗೆ ಹಾಗೂ ಮಕ್ಕಳಿಗೆ ಸಾಕಷ್ಟು ಸ್ಥಳವಿರಲಿಲ್ಲವೆಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ
ಶಿಕ್ಷಕರ ಕೊರತೆ
ಒಂದು ಶಾಲೆಯಲ್ಲಿ ಐದು ನಿರ್ದಿಷ್ಟ ಶಿಕ್ಷಕರು ಮತ್ತು ಓರ್ವ ಮುಖ್ಯೋಪಾಧ್ಯಾಯರ ಲಭ್ಯತೆ ಅವಶ್ಯವೆಂದು ಆರ್ ಎಮ್ ಎಸ್ ಎ ಹೇಳುತ್ತದೆ. ಆದರೆ ರಾಜ್ಯದಲ್ಲಿ ಮಂಜೂರಾದ 1,16,999 ಶಿಕ್ಷಕರಿಗೆ ಪ್ರತಿಯಾಗಿ 1,02,865 ಶಿಕ್ಷಕರಿದ್ದಾರೆ. ಅಂದರೆ ಶೇಕಡಾ 12ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರ ಜೊತೆಗೆ 1,712 ಶಾಲೆಗಳ ಪೈಕಿ 706 ಸರ್ಕಾರಿ ಶಾಲೆಗಳಲ್ಲಿ ಮತ್ತು 570 ಅನುದಾನಿತ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ಹುದ್ದೆ ಖಾಲಿ ಇವೆ. ವಿಷಯ ನಿರ್ದಿಷ್ಟ ಶಿಕ್ಷಕರ ಸಂಬಂಧವಾಗಿ 42,337 ಶಿಕ್ಷಕರ ಮಂಜೂರಾದ ಹುದ್ದೆಗಳಿಗೆ ಪ್ರತಿಯಾಗಿ ಸರ್ಕಾರಿ ಶಾಲೆಗಳಲ್ಲಿ 5,633 ಹುದ್ದೆಗಳು ಖಾಲಿ ಉಳಿದಿವೆ. ಮತ್ತು ಅನುದಾನಿತ ಶಾಲೆಗಳಲ್ಲಿ 33,470 ಹುದ್ದೆಗಳು ಮಂಜೂರಾಗಿದ್ದರೆ 5,909 ಹುದ್ದೆಗಳು ಖಾಲಿ ಇವೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ವೃತ್ತಿಪರ ಶಿಕ್ಷಣ
ಬೇಡಿಕೆ ಚಾಲಿತ, ಸಾಮರ್ಥ್ಯ ಆಧಾರಿತ ಮಾಡ್ಯುಲರ್ ವೃತ್ತಿಪರ ಶಿಕ್ಷಣ ಕೋರ್ಸ್ ಗಳ ಮೂಲಕ ಯುವಕರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಅದೇ ಸಮಯದಲ್ಲಿ ಪ್ರೌಢ ಹಂತದಲ್ಲಿ ಶಾಲೆ ಬಿಡುವವರನ್ನು ಕಡಿಮೆ ಮಾಡುವುದು ಮಾಧ್ಯಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ವೃತ್ತಿಪರ ಶಿಕ್ಷಣವನ್ನು ಪರಿಚಯಿಸಬೇಕೆಂಬ ನಿಯಮವಿದೆ. ನಾಲ್ಕು ರಾಷ್ಟ್ರೀಯ ಉದ್ಯೋಗ ಮಾನದಂಡಗಳಲ್ಲಿ ವೃತ್ತಿಪರ ಶಿಕ್ಷಣವನ್ನು ಅಂದರೆ ಆಟೋಮೊಬೈಲ್ (ಸೇವಾ ತಂತ್ರಜ್ಞತೆ), ಐಟಿ ಮತ್ತು ಐಟಿಇಎಸ್ (ಐಟಿ ಸೇವಾ ಡೆಸ್ಕ್ ಅಟೆಂಡೆಂಟ್), ರೀಟೆಲ್ (ಸೇಲ್ಸ್ ಅಸೋಸಿಯೇಟ್) ಮತ್ತು ಭದ್ರತೆ (ನಿರಾಯುಧ ಸೆಕ್ಯುರಿಟಿ ಗಾರ್ಡ್), ಇವುಗಳನ್ನು ಪರಿಚಯಿಸಲು 250 ಶಾಲೆಗಳನ್ನು 2013ರಲ್ಲಿ ಪಿಎಬಿ ಅನುಮೋದಿಸಿತು. ಮತ್ತು ರೂ.134.26 ಕೋಟಿಗಳನ್ನು ಹಂಚಿಕೆ ಮಾಡಿತು. ಅಲ್ಲದೆ, ವೃತ್ತಿಪರ ಶಿಕ್ಷಣದ ಅನುಷ್ಠಾನಕ್ಕಾಗಿ, ಮಾರ್ಚ್ 2018ರಲ್ಲಿ ಭಾರತ ಸರ್ಕಾರವು ರೂ.22.44 ಕೋಟಿಗಳನ್ನು ಬಿಡುಗಡೆ ಮಾಡಿದರೆ, ರಾಜ್ಯ ಸರ್ಕಾರವು ರೂ.10.18 ಕೋಟಿಗಳನ್ನು ಬಿಡುಗಡೆ ಮಾಡಿತು.
ವೃತ್ತಿಪರ ಶಿಕ್ಷಣವನ್ನು ನೀಡಬೇಕಾದರೆ ಪ್ರಸ್ತಾವಿತ ಶಾಲೆಗಳು ಪ್ರೌಢ ಮತ್ತು ಪದವಿಪೂರ್ವ ತರಗತಿಗಳೆರಡನ್ನೂ ಹೊಂದಿರಬೇಕಿತ್ತು. ಆದರೆ ರಾಜ್ಯದಲ್ಲಿ ಪ್ರಸ್ತಾವಿಸಿದ 250 ಶಾಲೆಗಳಿಗೆ ಪ್ರತಿಯಾಗಿ 119 ಶಾಲೆಗಳು ಕೇವಲ ಪ್ರೌಢಶಾಲೆ ಅಥವಾ ಪದವಿಪೂರ್ವ ಕಾಲೇಜುಗಳಾಗಿದ್ದರಿಂದ ಪಿಎಬಿ ಅವುಗಳನ್ನು ರದ್ದುಗೊಳಿಸಿ ಕೇವಲ 100 ಶಾಲೆಗಳಲ್ಲಿ ಮಾತ್ರ ವೃತ್ತಿಪರ ಶಿಕ್ಷಣವನ್ನು ಅನುಷ್ಠಾನಗೊಳಿಸಿದೆ