ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಛೇರಿ ಎದುರು ತಾಯಿ ಮಗಳು ಇಬ್ಬರು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಘಟನೆ ನಡೆದ ತಕ್ಷಣವೇ ತಾಯಿ ಮಗಳು ಇಬ್ಬರನ್ನು ಕಛೇರಿ ಹೊರಗಡೆ ಕರ್ತವ್ಯದಲ್ಲಿದ್ದ ಪೋಲಿಸರು ರಕ್ಷಿಸಿದ್ದಾರೆ. ಇಬ್ಬರು ಮಹಿಳೆಯರಿಗೂ ಸುಟ್ಟ ಗಾಯಗಳಾಗಿದ್ದು, ಪರಿಸ್ಥಿತಿ ಗಂಭೀರವಿದೆಯೆಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಮೇಥಿಯ ನಿವಾಸಿಗಳಾಗಿರುವ ಸಫಿಯಾ ತಮ್ಮ ಮಗಳೊಂದಿಗೆ ಭೂ-ವಿವಾದದ ಕುರಿತಂತೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಮುಖ್ಯಮಂತ್ರಿ ಕಛೇರಿಗೆ ಬಂದಿದ್ದಾರೆ. ಸತತವಾಗಿ ಯಾರೂ ಅವರ ಸಮಸ್ಯೆ ಆಲಿಸಲು ಸಿದ್ಧರಾಗಿರದ ಕಾರಣ ಹತಾಷೆಗೊಳಗಾದ ಅಮ್ಮ-ಮಗಳು ಮುಖ್ಯಮಂತ್ರಿ ಕಛೇರಿಯೆದುರೇ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ, ಅಪರಾಧಕ್ಕೆ ಷಡ್ಯಂತ್ರ ಎಂಬ ಆರೋಪದ ಮೇಲೆ ಮಾಜಿ ಕಾಂಗ್ರೆಸ್ ವಕ್ತಾರ ಅನೂಪ್ ಪಟೇಲ್, AIMIM ಜಿಲ್ಲಾಧ್ಯಕ್ಷ ಕಾದಿರ್ ಖಾನ್ ಹಾಗೂ ಆಸ್ಮ ಮತ್ತು ಸುಲ್ತಾನ್ ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಅಲ್ಲದೆ ಘಟನೆ ಜರುಗಿದ ಸ್ಥಳದಲ್ಲಿ ಕರ್ತವ್ಯ ನಿರತರಾಗಿದ್ದ ಮೂರು ಪೋಲಿಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಿದೆ. ಸಮಾಜವಾದಿ ಹಾಗೂ ಬಹುಜನ ಸಮಾಜವಾದಿ ಪಕ್ಷ ಘಟನೆ ಸಂಬಂಧಿಸಿದಂತೆ ಸರ್ಕಾರವನ್ನು ಟೀಕಿಸಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದೆ.