ದೇಶದ ಆರ್ಥಿಕ ಪರಿಸ್ಥಿತಿ ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿಯಲಿದೆ ಎಂಬ ವಿವಿಧ ವಿತ್ತೀಯ ಸಂಸ್ಥೆಗಳ ಮುನ್ನಂದಾಜುಗಳ ನಡುವೆ ಈ ವಾರಾಂತ್ಯದಲ್ಲಿ ಭಾರತ ಸರ್ಕಾರವು ಪ್ರಸಕ್ತ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ಅಂಕಿಅಂಶಗಳನ್ನು ಬಿಡುಗಡೆ ಮಾಡಲಿದೆ. ಈಗಾಗಲೇ ಜನರ ಖರೀದಿ ಶಕ್ತಿ ಕುಂದಿರುವ ಕುರಿತಾದ ಎನ್ಎಸ್ಎಸ್ಒ ವರದಿಯನ್ನು ಪ್ರಕಟಿಸದೇ ಹಾಗೆ ‘ಸುರಕ್ಷಿತ’ವಾಗಿಟ್ಟುಕೊಂಡಿರುವ ಮೋದಿ ಸರ್ಕಾರ ನಿಖರವಾದ ಜಿಡಿಪಿ ಅಂಕಿ ಅಂಶಗಳನ್ನು ತಿರುಚದೆಯೇ ಬಿಡುಗಡೆ ಮಾಡುತ್ತದೆಯೇ ಎಂಬುದು ಐದು ಟ್ರಿಲಿಯನ್ ಡಾಲರ್ ಪ್ರಶ್ನೆ!
ಆದರೆ, ಮೋದಿ ಆಡಳಿತದ ಅವಧಿಯಲ್ಲಿ ಜಿಡಿಪಿ ಕುಸಿಯುತ್ತಿರುವಂತೆಯೇ ದೇಶೀಯ ರುಪಾಯಿ ಮೌಲ್ಯವೂ ಕುಸಿಯುತ್ತಿದೆ. 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ರುಪಾಯಿ ಮೌಲ್ಯವು ಪ್ರತಿ ಡಾಲರ್ ಗೆ 58.52 ಇದ್ದದ್ದು ಪ್ರಸ್ತುತ (ನವೆಂಬರ್ 26 ರಂದು) 71.62ಕ್ಕೆ ಕುಸಿದಿದೆ. ಈ ಅವಧಿಯಲ್ಲಿ 13.2746 ರುಪಾಯಿಗಳಷ್ಟು ಮೌಲ್ಯ ಕುಸಿದಿದೆ. ಮೋದಿ ಆಡಳಿತದ ಅವಧಿಯಲ್ಲಿ ಇದುವರೆಗೆ ಆಗಿರುವ ರುಪಾಯಿ ಮೌಲ್ಯ ಕುಸಿತ ಶೇ. 22.68 ರಷ್ಟಾಗಿದೆ.
ಪ್ರಸಕ್ತ ತ್ರೈಮಾಸಿಕದಲ್ಲಿ ಭಾರತೀಯ ರುಪಾಯಿಯು ಏಷಿಯಾದ ಉದಯಿಸುತ್ತಿರುವ ಮಾರುಕಟ್ಟೆ ರಾಷ್ಟ್ರಗಳ ಪೈಕಿ ಅತ್ಯಂತ ದುರ್ಬಲ ಕರೆನ್ಸಿಯಾಗಿ ಹೊರ ಹೊಮ್ಮಿದೆ. ಪ್ರಸಕ್ತ ವರ್ಷದಲ್ಲಿ ಅತಿ ಗರಿಷ್ಠ ಮಟ್ಟಕ್ಕೆ ಮುಟ್ಟಿದ್ದ ಜುಲೈ ತಿಂಗಳ ವಿನಿಮಯ ಮೌಲ್ಯಕ್ಕೆ ಹೋಲಿಸಿದರೆ ಡಾಲರ್ ವಿರುದ್ಧ ಶೇ.5ರಷ್ಟು ಕುಸಿತ ಕಂಡಿದೆ. ಇಷ್ಟು ಕಡಮೆ ಅವಧಿಯಲ್ಲಿ ಶೇ.5ರಷ್ಟು ಕುಸಿತ ಕಂಡಿರುವುದು ಆತಂಕದ ಸಂಗತಿ.
ರುಪಾಯಿ ಮೌಲ್ಯ ಕುಸಿತವು ದೇಶದ ಆರ್ಥಿಕತೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಆಮದು ಮತ್ತು ರಫ್ತುಗಳ ನಡುವಿನ ಸಮತೋಲನ ತಪ್ಪಿದ್ದು, ವ್ಯಾಪಾರ ಕೊರತೆ (ಆಮದು ಪ್ರಮಾಣ ಹೆಚ್ಚಳವಾಗಿ ರಫ್ತು ಪ್ರಮಾಣ ತಗ್ಗುವುದು) ತೀವ್ರಗತಿಯಲ್ಲಿ ಏರುತ್ತಿದೆ. ಒಂದು ಕಡೆ ಆಮದು ಪ್ರಮಾಣ ಹೆಚ್ಚುತ್ತಿರುವಂತೆಯೇ ರುಪಾಯಿ ಮೌಲ್ಯವು ಕುಸಿದಾಗ ಆರ್ಥಿಕತೆ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಭಾರತ ಆಮದು ಮಾಡಿಕೊಳ್ಳುವ ಎಲ್ಲಾ ಸರಕು ಮತ್ತು ಸೇವೆಗಳಿಗೂ ಡಾಲರ್ ರೂಪದಲ್ಲಿಯೇ ಪಾವತಿ ಮಾಡಬೇಕಿರುವುದರಿಂದ ರುಪಾಯಿಯ ಡಾಲರ್ ಖರೀದಿ ಶಕ್ತಿ ಕುಂದಿದಾಗ ನಾವು ಆಮದು ಮಾಡಿಕೊಳ್ಳುವ ಸರಕು ಮತ್ತು ಸೇವೆಗಳಿಗೆ ವಾಸ್ತವಿಕ ಬೆಲೆಗಿಂತ ಹೆಚ್ಚಿನ ಬೆಲೆ ಪಾವತಿಸಿದಂತಾಗುತ್ತದೆ. ಸರಳವಾಗಿ ಹೇಳಬೇಕೆಂದರೆ 100 ರುಪಾಯಿಗೆ ಖರೀದಿಸಬಹುದಾದ ಪೆನ್ನನ್ನು ನಾವು 108-110 ರುಪಾಯಿ ಕೊಟ್ಟು ಖರೀದಿಸುತ್ತೇವೆ. ಅಂದರೆ ಮೇಲ್ನೋಟಕ್ಕೆ ನಮಗೆ ಶೇ.8 ರಿಂದ 10 ರಷ್ಟು ಹೊರೆ ಬೀಳುತ್ತದೆ.
ಬ್ಲೂಮ್ಬರ್ಗ್ ವರದಿ ಪ್ರಕಾರ, ಸರ್ಕಾರದ ಸಾಲದ ಪ್ರಮಾಣ ಗಣನೀಯವಾಗಿ ಏರುತ್ತಿರುವುದರಿಂದ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ನಗದು ಕೊರತೆಯಿಂದಾಗಿ ಸಾಲದ ಬಿಕ್ಕಟ್ಟು ತೀವ್ರವಾಗಿರುವುದರಿಂದ ಕರೆನ್ಸಿ ಮಾರುಕಟ್ಟೆಯಲ್ಲಿ ರುಪಾಯಿ ಮಾರಾಟದ ಒತ್ತಡ ಹೆಚ್ಚಿದೆ. ಐಎಲ್ಅಂಡ್ಎಫ್ಎಸ್ ಹಗರಣ ಹೊರಬಿದ್ದ ನಂತರ ಉದ್ಭವಿಸಿದ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ನಗದು ಕೊರತೆ ಸಮಸ್ಯೆ ಹಾಗೆಯೇ ಇದೆ. ಇದು ಸಹ ರುಪಾಯಿ ಮೇಲಿನ ಒತ್ತಡಕ್ಕೆ ಕಾರಣವಾಗಿದೆ.
ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ದ್ವಿತೀಯ ತ್ರೈಮಾಸಿಕದ ಜಿಡಿಪಿ ಮುನ್ನಂದಾಜನ್ನು ಶೇ.4.2ಕ್ಕೆ ತಗ್ಗಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸಹ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಜಿಡಿಪಿ ಮುನ್ನಂದಾಜನ್ನು ಗಣನೀಯವಾಗಿ ತಗ್ಗಿಸಿದೆ. ಈ ನಡುವೆ ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿ ಸಾವರಿನ್ ರೇಟಿಂಗ್ ಅನ್ನು ತಗ್ಗಿಸಿದೆ. ದೇಶೀಯ ರೇಟಿಂಗ್ ಏಜೆನ್ಸಿಗಳ ಜತೆಗೆ ವಿಶ್ವಬ್ಯಾಂಕ್, ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಹ ಜಿಡಿಪಿ ಮುನ್ನಂದಾಜನ್ನು ಶೇ.5ಕ್ಕಿಂತ ಕಳಮಟ್ಟಕ್ಕೆ ಇಳಿಸಿವೆ. ಈ ಎಲ್ಲಾ ಏಜೆನ್ಸಿಗಳು, ವಿತ್ತೀಯ ಸಂಸ್ಥೆಗಳು ಭಾರತದ ಜಿಡಿಪಿ ಶೇ.7ರ ಆಜುಬಾಜಿನಲ್ಲಿ ಇರುತ್ತದೆಂದು ಮುನ್ನಂದಾಜು ಮಾಡಿದ್ದವು. ಇಷ್ಟು ಕಡಮೆ ಅವಧಿಯಲ್ಲಿ ಶೇ.2ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜಿಡಿಪಿ ಕುಸಿಯುತ್ತಿದೆ. ಒಂದು ವೇಳೆ ಎಸ್ಬಿಐ ಮುನ್ನಂದಾಜು ಮಾಡಿದಂತೆ ಶೇ.4.2ಕ್ಕೆ ಕುಸಿದರೆ, ಅದು ದಶಕಗಳ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಂತಾಗುತ್ತದೆ.
ಜಿಡಿಪಿ ಕುಸಿತದ ಅಂಕಿ ಅಂಶಗಳು ವಾರಾಂತ್ಯದಲ್ಲಿ ಅಂದರೆ ಶುಕ್ರವಾರ ಪ್ರಕಟವಾಗಲಿದ್ದು, ಶೇ.5ಕ್ಕಿಂತ ಕೆಳಮಟ್ಟದಲ್ಲಿದ್ದರೆ ರುಪಾಯಿ ಮೌಲ್ಯವು ಮತ್ತಷ್ಟು ಸಮಯದವರೆಗೆ ಇಳಿಜಾರಿನಲ್ಲಿ ಸಾಗಬಹುದು. ಕಳೆದ ವರ್ಷ ಅಕ್ಟೋಬರ್ 19ರಂದು ರುಪಾಯಿ ಮೌಲ್ಯವು ಡಾಲರ್ ವಿರುದ್ಧ 73.44ಕ್ಕೆ ಕುಸಿದು ಅತ್ಯಂತ ಕನಿಷ್ಠ ಮಟ್ಟವೆಂದು ದಾಖಲಾಗಿತ್ತು. ಬರುವ ದಿನಗಳಲ್ಲಿ ರುಪಾಯಿ ಮೌಲ್ಯವು ಮತ್ತಷ್ಟು ಕುಸಿದು 74ರ ಮಟ್ಟವನ್ನು ಮುಟ್ಟಲೂ ಬಹುದು.
ರುಪಾಯಿ ಮೌಲ್ಯ ಕುಸಿದಾಗ ರಫ್ತು ಮಾಡುವ ಸಂಸ್ಥೆಗಳಿಗೆ ಹೆಚ್ಚಿನ ಲಾಭವಾಗುತ್ತದೆ. ನಿಜಾ. ಆದರೆ, ಭಾರತದ ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ಸಮತೋಲನ ಇಲ್ಲ. ಆಮದು ಹಿಗ್ಗಿದ್ದು, ರಫ್ತು ಕುಗ್ಗಿದೆ. 2017-18ರಲ್ಲಿ ಒಟ್ಟಾರೆ ವ್ಯಾಪಾರ ಕೊರತೆಯು ಅಂದರೆ ಆಮದು ಮಾಡಿಕೊಂಡ ಪ್ರಮಾಣಕ್ಕಿಂತ ರಫ್ತು ಪ್ರಮಾಣದಲ್ಲಿನ ಕೊರತೆಯು 84 ಬಿಲಿಯನ್ ಡಾಲರ್ ಗಳಷ್ಟು ಇತ್ತು. ಇದು 2018-19ರಲ್ಲಿ 103.63 ಬಿಲಿಯನ್ ಡಾಲರ್ ಜಿಗಿದಿತ್ತು. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಇದು 120 ಬಿಲಿಯನ್ ಡಾಲರ್ ಮುಟ್ಟುವ ಅಂದಾಜು ಇದೆ. ದೇಶದ ಆರ್ಥಿಕತೆಯ ಆರೋಗ್ಯದ ದೃಷ್ಟಿಯಿಂದ ಇಷ್ಟೊಂದು ಪ್ರಮಾಣದಲ್ಲಿನ ವ್ಯಾಪಾರ ಕೊರತೆ ಒಳ್ಳೆಯದಲ್ಲ. ದೀರ್ಘಕಾಲದಲ್ಲಿ ಇದು ಬೃಹದಾರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ದೇಶದ ಸಾಲದ ಹೊರೆಯು ತ್ವರಿತಗತಿಯಲ್ಲಿ ಜಿಗಿಯುವ ಅಪಾಯ ಇದೆ.