“ನಾನು ‘ಬೇಡರ ಕಣ್ಣಪ್ಪ’ ಚಿತ್ರವನ್ನು ಕಾಲೇಜಿನ ವಿದ್ಯಾರ್ಥಿ ದೆಸೆಯಲ್ಲಿ ಬೆಂಗಳೂರಿನ ಶಿವಾಜಿ ಟಾಕೀಸಿನಲ್ಲಿ ವೀಕ್ಷಿಸಿದ್ದೆ. ಇದಾದ ಬಳಿಕ ಸಾವಿರದ ಒಂಬೈನೂರಾ ಐವತ್ತರ ದಶಕದ ಮಧ್ಯ ಭಾಗದಲ್ಲಿರಬೇಕು. ಸೆಂಟ್ರಲ್ ಕಾಲೇಜಿನ ಹಾಸ್ಟೆಲಿನ ವಾಸಿಯಾಗಿದ್ದ ನನ್ನ ಸಹಪಾಠಿ ಮತ್ತು ಆಪ್ತ ಲೇಖಕ ಮಿತ್ರ ಲಂಕೇಶನ ಅಪೇಕ್ಷೆಯ ಮೇರೆಗೆ ಹತ್ತಿರದ ಕೆಂಪೇಗೌಡ ರಸ್ತೆಯಲ್ಲಿದ್ದ ಪ್ರಭಾತ್ ಚಿತ್ರಮಂದಿರದಲ್ಲಿ ‘ಚಂದವಳ್ಳಿಯ ತೋಟ’ವನ್ನು ನೋಡಿ ಆನಂದಿಸಿದ್ದೆ. ಮುಂದೆಯೂ ರಾಜ್ ಅವರ ಅಭಿನಯದ ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳನ್ನು ವೀಕ್ಷಿಸಿ, ಅವರ ಅಭಿನಯ ವೈವಿಧ್ಯ ಹಾಗೂ ಚಾತುರ್ಯಕ್ಕೆ ಮನಸೋತು ಅವರ ಅಭಿಮಾನಿಯಾಗಿದ್ದೆ”

ಡಾ.ರಾಜಕುಮಾರ್ ಸಮಗ್ರ ಚರಿತ್ರೆಯ ಮೊದಲ ಸಂಪುಟಕ್ಕೆ ಕವಿ ನಿಸಾರ್ ಅಹಮದ್ ಬರೆದಿರುವ ಮುನ್ನುಡಿಯ ಆಯ್ದ ಸಾಲುಗಳಿವು. ದೊಡ್ಡಹುಲ್ಲೂರು ರುಕ್ಕೋಜಿ ರಚಿಸಿರುವ ಈ ಬೃಹತ್ ಗ್ರಂಥದ ಮುನ್ನುಡಿಯಲ್ಲಿ ನಿಸಾರ್ ಅವರು ರಾಜ್ ಅವರೊಂದಿಗಿನ ತಮ್ಮ ಒಡನಾಟವನ್ನು ಆತ್ಮೀಯವಾಗಿ ಸ್ಮರಿಸಿ ವರನಟ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯಾಗಿ ಬೆಳೆದದ್ದು ಹೇಗೆ ಎಂದು ಬರೆದಿದ್ದಾರೆ. ರಾಜ್ರನ್ನು ಅಂತರಂಗದಿಂದ ಇಷ್ಟ ಪಡ್ತಾ ಇದ್ದರು ನಿಸಾರ್. ವರನಟನ ಮಾತು, ನಡವಳಿಕೆಗೆ ಅವರು ಮಾರು ಹೋಗಿದ್ದರು. ರಾಜ್ ಅವರಿಗೂ ಕವಿಯ ಬಗ್ಗೆ ಅಪಾರ ಅಭಿಮಾನ, ಪ್ರೀತಿ. ಪರಿಚಿತರಾದ ಮೊದಲ ಭೇಟಿಯಲ್ಲೇ ಇಬ್ಬರೂ ಆಪ್ತರಾಗಿದ್ದರು. ಮುಂದೆ ರಾಜ್ ಚಿತ್ರನಿರ್ಮಾಣ ಸಂಸ್ಥೆಯ ಸಿನಿಮಾಗಳ ಶತದಿನೋತ್ಸವ ಸಮಾರಂಭಕ್ಕೆ ನಿಸಾರ್ ಅತಿಥಿಯಾಗಿ ಭಾಗವಹಿಸಿದರು. “ರಾಜಕುಮಾರ್ ಅವರ ಕುರಿತಾಗಿ ನಾನು ರಚಿಸಿರುವ ಎರಡು ಸಂಪುಟಗಳ ಕೃತಿಯ ಮೊದಲ ಸಂಪುಟದಲ್ಲಿ ರಾಜ್ ಜೀವನದ ಚಿತ್ರಣವಿದೆ. ಇದಕ್ಕೆ ನಿಸಾರ್ ಅವರಿಂದಲೇ ಮುನ್ನುಡಿ ಬರೆಸಬೇಕೆಂದು ನಾನು ನಿಶ್ಚಯಿಸಿದ್ದೆ. ಕನ್ನಡ ಸಾಹಿತ್ಯಕ್ಕೆ ಜಾತ್ಯಾತೀತ ಗುಣ, ಪರಂಪರೆ ಇದೆ. ಕನ್ನಡ ಸಾಹಿತ್ಯದ ಸಾಕ್ಷಿಪ್ರಜ್ಞೆಯಂತಿರುವ ನಿಸಾರ್ ಅಹಮದ್ ಮುನ್ನುಡಿ ಬರೆದರೆ ಚೆನ್ನ ಎಂದು ನಾನು ಎಣಿಸಿದ್ದೆ. ನಿಸಾರ್ ಅವರೂ ತಮ್ಮ ಸ್ನೇಹಿತ ರಾಜಕುಮಾರರ ಬಗ್ಗೆ ಆತ್ಮೀಯವಾಗಿ ಬರೆದಿದ್ದಾರೆ” ಎನ್ನುತ್ತಾರೆ ಲೇಖಕ ರುಕ್ಕೋಜಿ.
ಕನ್ನಡ ಚಿತ್ರರಂಗದ ಕುಮಾರತ್ರಯರೊಲ್ಲಬ್ಬರಾದ ಉದಯಕುಮಾರ್ ಮತ್ತು ನಿಸಾರ್ ಆಪ್ತ ಸ್ನೇಹಿತರಾಗಿದ್ದರು. ಅರವತ್ತರ ದಶಕದಲ್ಲಿ ಉದಯಕುಮಾರ್ ನಾಟಕಗಳನ್ನು ರಚಿಸಿ, ನಟಿಸುವಾದಾಗಿನಿಂದ ಆರಂಭವಾದ ಸ್ನೇಹ ಉದಯಕುಮಾರ್ ಕೊನೆಯ ದಿನಗಳವರೆಗೂ ಆಪ್ತವಾಗಿತ್ತು. ನಟನೆ ಜೊತೆ ಬರವಣಿಗೆಯಲ್ಲೂ ಪಳಗಿದ್ದ ಉದಯ ಕುಮಾರ್ ಅವರ ಬಗ್ಗೆ ನಿಸಾರ್ ಅವರಿಗೆ ಅಭಿಮಾನವಿತ್ತು. ಕನ್ನಡದ ಮತ್ತೊಬ್ಬ ಪ್ರತಿಭಾವಂತ ನಟ ಶಿವರಾಂ ಕೂಡ ನಿಸಾರ್ರ ಆತ್ಮೀಯ ಗೆಳೆಯ. “ನಿಸಾರ್ ನನಗೆ ಹೋಗೋ, ಬಾರೋ ಗೆಳೆಯ. ನಮ್ಮ ಗೆಳೆತನ ಶುರುವಾಗಿದ್ದು ಐವತ್ತರ ದಶಕದ ಕೊನೆಯಲ್ಲಿ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ ಗೋಪಾಲಕೃಷ್ಣ ಅಡಿಗರು, ಸುಮತೀಂದ್ರ ನಾಡಿಗ್, ಲಂಕೇಶ್, ವೈಎನ್ಕೆ, ನಿರಂಜನ, ನಿಸಾರ್, ನಾನು ಎಲ್ಲರೂ ಬಸವನಗುಡಿಯಲ್ಲಿ ಸೇರಿ ಹರಟುತ್ತಿದ್ದೆವು. ಮಾತುಕತೆಯ ನಂತರ ವಿದ್ಯಾರ್ಥಿಭವನದಲ್ಲಿ ಮಸಾಲೆ ದೋಸೆ ತಿನ್ನುವುದರೊಂದಿಗೆ ನಮ್ಮ ದಿನದ ಭೇಟಿ ಮುಕ್ತಾಯವಾಗುತ್ತಿತ್ತು” ಎಂದು ನಿಸಾರ್ರನ್ನು ನೆನಪು ಮಾಡಿಕೊಳ್ಳುತ್ತಾರೆ ಹಿರಿಯ ನಟ ಶಿವರಾಂ.
1970ರಿಂದ 85ರವರೆಗೆ ಕನ್ನಡದಲ್ಲಿ ಬಹಳಷ್ಟು ಉತ್ತಮ, ಪ್ರಯೋಗಶೀಲ ಚಿತ್ರಗಳು ತಯಾರಾಗಿದ್ದವು. ಆಗೆಲ್ಲಾ ಈ ಚಿತ್ರಗಳು, ನಿರ್ದೇಶಕರು, ಚಿತ್ರಸಾಹಿತ್ಯದ ಬಗ್ಗೆ ನಿಸಾರ್ ಅವರು ಶಿವರಾಂ ಅವರೊಂದಿಗೆ ಚರ್ಚಿಸುತ್ತಿದ್ದರಂತೆ. “ಒಳ್ಳೆಯ ಚಿತ್ರಗಳ ಬಗ್ಗೆ ನಿಸಾರ್ ಉತ್ಸಾಹದಿಂದ ಮಾತನಾಡುತ್ತಿದ್ದರು. ಚಿತ್ರಗಳಿಗೆ ಹಾಡು, ಸಂಭಾಷಣೆ ಬರೆಯುವಂತೆ ನಾನು ಒತ್ತಾಯಿಸುತ್ತಿದ್ದೆ. ಅದೇಕೋ ಅದು ಅವರಿಗೆ ಅಷ್ಟಾಗಿ ಹೊಂದಿಕೆಯಾಗುತ್ತಿರಲಿಲ್ಲ. ಮೈಸೂರು ಅನಂತಸ್ವಾಮಿ ಅವರ ಸಂಯೋಜನೆಗೆ ನಿಸಾರ್ ಹಾಡು ಬರೆಯುವುದು ಎಂದು ನಿಗದಿಯಾಗಿತ್ತು. ಕೊನೆಯ ಹಂತದಲ್ಲಿ ಅದು ಕೈಗೂಡಲಿಲ್ಲ. ಕುವೆಂಪು ಅವರ ‘ಕಾನೂರು ಹೆಗ್ಗಡತಿ’ಯನ್ನು ಸಿನಿಮಾ ಮಾಡು ಎಂದು ಒಮ್ಮೆ ನನಗೆ ದುಂಬಾಲು ಬಿದ್ದಿದ್ದರು. ಸಿನಿಮಾದಲ್ಲಿ ನೇರವಾಗಿ ತೊಡಗಿಸಿಕೊಳ್ಳದಿದ್ದರೂ ಬೆಳ್ಳಿತೆರೆ ಕುರಿತಾಗಿ ನಿಸಾರ್ಗೆ ಅಪಾರ ಆಸಕ್ತಿಯಿತ್ತು. ಹೊಸ ಹುಡುಗರು ಬರೆಯುವ ಕನ್ನಡ ಚಿತ್ರಗಳ ಗೀತಸಾಹಿತ್ಯದ ಬಗ್ಗೆ ಒಂದೆರೆಡು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದೂ ಇದೆ” ಎಂದು ಅಗಲಿದ ಗೆಳೆಯನನ್ನು ಸ್ಮರಿಸುತ್ತಾರೆ ಶಿವರಾಂ.

ರುಕ್ಕೋಜಿ ರಚನೆಯ ಡಾ.ರಾಜಕುಮಾರ ಕೃತಿಯ ಮೊದಲ ಸಂಪುಟಕ್ಕೆ ನಿಸಾರ್ ಆತ್ಮೀಯ ಮುನ್ನುಡಿ ಬರೆದಿದ್ದಾರೆ. ಅವರ ಅಕ್ಷರಗಳಲ್ಲಿ ನಾಡಿನ ಸಾಂಸ್ಕøತಿಕ ಪ್ರತಿನಿಧಿ ರಾಜ್ ಕುರಿತಾದ ಪ್ರೀತಿ ವ್ಯಕ್ತವಾಗುತ್ತದೆ. ಅವರ ಮುನ್ನುಡಿಯ ಆಯ್ದ ಒಂದು ಟಿಪ್ಪಣಿ ಇಲ್ಲಿದೆ –

“ಊಟೋಪಚಾರದ ಬಳಿಕ, ನಮ್ಮ ಮನೆಯವರು ವರದರಾಜ್ ಹಾಗೂ ಪಾರ್ವತಮ್ಮನವರ ಕೈಗಳನ್ನು ಸಾಬೂನು ಬಳಸಿ ತೊಳೆಸಿದರು. ರಾಜ್ ಅವರ ಬಳಿ ಹೋದಾಗ, ಅವರು ಬರಿ ನೀರಿನಲ್ಲೇ ಕೈ ತೊಳೆದುಕೊಂಡರು. ಸಾಬೂನನ್ನು ನೀಡಲು ಹೋದಾಗ ಬೇಡವೆಂದು ಟವೆಲಿನಿಂದ ಒರೆಸಿಕೊಂಡರು. ಅದನ್ನು ಗಮನಿಸಿದ ನನಗೆ ಅಚ್ಚರಿಯಾಗಿ, ಮೆಲ್ಲಗೆ ಪಾರ್ವತಮ್ಮನವರನ್ನು ಕೇಳಿದೆ. ಅವರು ನಸುನಕ್ಕು “ಅವರು ಯಾವಾಗಲೂ ಹಾಗೇ ಮಾಡುವುದು. ಒಳ್ಳೆಯ ಭೋಜನವಾದ ಮೇಲೆ, ಆ ಕೈಯನ್ನು ಆಗಾಗ್ಗೆ ಮೂಸಿ ನೋಡಿ, ‘ಭಗವಂತ, ಎಂತಹ ರುಚಿಯ ಔತಣ ನೀಡಿದೆಯಪ್ಪ. ಅನ್ನದಾತರ ಹೊಟ್ಟೆ ತಣ್ಣಗಿರಲಿ ಎಂದು ಸಂತೋಷದಿಂದ ಉದ್ಗರಿಸುತ್ತಾರೆ’ ಎಂದಾಗ, ನನಗೆ ಎಂತಹ ಅಪೂರ್ವ ವ್ಯಕ್ತಿ ಈ ವರನಟ ಅನ್ನಿಸಿತ್ತು.

ಬಹುಶಃ ಅವರು ತಮ್ಮ ಪ್ರಾರಂಭದ ದಿನಗಳಲ್ಲಿ ಮದ್ರಾಸಿನಲ್ಲಿದ್ದಾಗ ಸಾಧಾರಣ ಊಟಕ್ಕೂ ಪಡುತ್ತಿದ್ದ ಕಷ್ಟ ಅವರಿಗೆ ಇಂತಹ ಭೋಜನವನ್ನು ಸೇವಿಸಿದಾಗ ಜ್ಞಾಪಕಕ್ಕೆ ಬರುತ್ತಿರಬೇಕೆಂದು ತೋರುತ್ತದೆ. ಹಾಗೆಯೇ, ಊಟ ಮಾಡುವಾಗ ಕೆಳಗೆ ಉದುರಿದ ಅನ್ನದ ಅಗುಳುಗಳನ್ನು ಬೆರಳುಗಳಿಂದ ಎತ್ತಿ ಕಣ್ಣಿಗೆ ಒತ್ತಿಕೊಂಡು ತಟ್ಟೆಯಲ್ಲಿ ಹಾಕಿದ್ದನ್ನೂ ನಾನು ಅವರ ಜೊತೆ ಒಂದೆರಡು ಸಲ ಊಟ ಮಾಡುವಾಗ ಗಮನಿಸಿದ್ದೇನೆ. ‘ಅನ್ನಬ್ರಹ್ಮ’ವೆಂಬ ಉದಾತ್ತ ಭಾವನೆ ಬೇರೂರಿರುವ ಸಂಸ್ಕಾರವಂತ ವ್ಯಕ್ತಿಗೆ ಮಾತ್ರ ಇದು ಶಕ್ಯವೆನಿಸುತ್ತದೆ.”