ಒಂದು ಕಡೆ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ರಾಷ್ಟ್ರೀಯ ಸುದ್ದಿ ವಾಹಿನಿಗಳು ನಡೆಸುತ್ತಿರುವ ‘ಮೀಡಿಯಾ ಟ್ರಯಲ್ (ಮಾಧ್ಯಮ ವಿಚಾರಣೆ)’ ವಿರುದ್ದ ಸಾಕಷ್ಟು ಟೀಕೆ, ಆತಂಕ ವ್ಯಕ್ತವಾಗುತ್ತಿದೆ. ಕಳೆದ ವಾರವೇ ಆ ಕುರಿತು ಬಾಂಬೆ ಹೈಕೋರ್ಟ್ ಮೊರೆಹೋಗಿದ್ದ ಕೆಲವು ಸಾಮಾಜಿಕ ಕಾರ್ಯಕರ್ತರು ಇದೀಗ ಪ್ರಕರಣದ ಪ್ರಮುಖ ಆರೋಪಿ ರಿಯಾ ಚಕ್ರವರ್ತಿ ಅವರನ್ನೂ ತಮ್ಮ ಅಹವಾಲಿನ ದೂರುದಾರರಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.
ಪ್ರಮುಖವಾಗಿ ಕೆಲವು ಇಂಗ್ಲಿಷ್ ಮತ್ತು ಹಿಂದಿ ಸುದ್ದಿವಾಹಿನಿಗಳು ಕಳೆದ ಮೂರು ತಿಂಗಳಿನಿಂದ ನಡೆಸುತ್ತಿರುವ ಮೀಡಿಯಾ ಟ್ರಯಲ್ ಅಥವಾ ಪರ್ಯಾಯ ವಿಚಾರಣೆಯಿಂದಾಗಿ ಪ್ರಕರಣದ ಕುರಿತು ನಡೆಯುತ್ತಿರುವ ಸಿಬಿಐ, ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಜಾರಿ ನಿರ್ದೇಶನಾಲಯಗಳ ತನಿಖೆಗೆ ಧಕ್ಕೆ ಬರುತ್ತದೆ. ಜೊತೆಗೆ ತನಿಖೆ ನಡೆದು, ನ್ಯಾಯಾಲಯದಲ್ಲಿ ಸತ್ಯಾಸತ್ಯತೆಯ ಶೋಧ ನಡೆದು ಅಪರಾಧಿಯ ಘೋಷಣೆಯಾಗುವ ಮುನ್ನವೇ ಮಾಧ್ಯಮಗಳು ಶಂಕಿತ ಆರೋಪಿಗಳನ್ನು ಮತ್ತು ಅವರ ಸಂಬಂಧಿಕರು, ಆಪ್ತರನ್ನು ಅಪರಾಧಿಗಳೆಂದು ತೀರ್ಪು ನೀಡುತ್ತಿರುವುದು ದೇಶದ ತನಿಖಾ ಮತ್ತು ನ್ಯಾಯಾಂಗ ವ್ಯವಸ್ಥೆಯ ಅಪಹಾಸ್ಯದಂತೆ ಭಾಸವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಸುಶಾಂತ್ ಸಿಂಗ್ ಸಾವಿನ ಕುರಿತು ಮಾಧ್ಯಮಗಳ ತೀರ್ಪುಗಳಿಗೆ, ಪರ್ಯಾಯ ವಿಚಾರಣೆಗೆ ತಡೆ ನೀಡಬೇಕು ಎಂದು ಮುಂಬೈ ಮೂಲದ ನಿಲೇಶ್ ನವಲೇಖಾ, ಎಂ ಡಿ ಶೇಖ್ ಮತ್ತು ಸುಭಾಶ್ ಚಂದರ್ ಛಾಬಾ ಎಂಬುವವರು ಆ.27ರಂದು ಬಾಂಬೆ ಹೈಕೋರ್ಟ್ ಮೊರೆಹೋಗಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ನಡುವೆ ಕಳೆದ ವಾರ ರಿಯಾ ಅವರನ್ನು ಸುತ್ತುವರಿದು, ಅವರ ಮೇಲೆ ಆಕ್ರಮಣಕಾರಿ ವರಸೆಯಲ್ಲಿ ದಾಳಿ ಮಾಡಿ ಅವರ ಪ್ರತಿಕ್ರಿಯೆ ಪಡೆಯುವ ನೆಪದಲ್ಲಿ ವಿಚಾರಣೆ ನಡೆಸಲು ಯತ್ನಿಸಿದ್ದವು. ಪೊಲೀಸ್ ವಶದಲ್ಲಿರುವಾಗಲೇ ಮಾಧ್ಯಮಗಳ ಈ ಉದ್ಧಟತನದ ವರ್ತನೆ ದೇಶದಲ್ಲಿ ಪತ್ರಿಕೋದ್ಯಮ ತಲುಪಿರುವ ಸ್ಥಿತಿಗೆ ಕನ್ನಡಿಯಾಗಿತ್ತು. ಯಾವುದೇ ಅಪರಾಧ ಪ್ರಕರಣದಲ್ಲಿ ಮಾಧ್ಯಮಗಳು ಸಂಯಮದಿಂದ ನಡೆದುಕೊಳ್ಳಬೇಕು, ತಮ್ಮ ವರದಿಗಾರಿಕೆಯಿಂದ, ಸಂವಾದಗಳಿಂದ ಪ್ರಕರಣದ ಕುರಿತ ತನಿಖಾ ಸಂಸ್ಥೆಗಳ ತನಿಖೆಗಾಗಲೀ, ಶಂಕಿತ ಆರೋಪಿಗಳು ಮತ್ತು ಸಂತ್ರಸ್ತರ ಖಾಸಗೀತನಕ್ಕಾಗಲೀ ಧಕ್ಕೆ ಬರಬಾರದು ಎಂದು ಈಗಾಗಲೇ ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆ ನೀಡಿದ್ದರೂ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಮಾಧ್ಯಮ ಕಣ್ಗಾವಲು ಸಂಸ್ಥೆಗಳು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದರೂ, ಮಾಧ್ಯಮಗಳ ಹದ್ದುಮೀರಿದ ವರ್ತನೆಗೆ ಬ್ರೇಕ್ ಬಿದ್ದಿಲ್ಲ.
ಸ್ವತಃ ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್, ಸೆ,3ರಂದು ಕೂಡ ಪ್ರಕರಣದ ಕುರಿತ ವರದಿಗಳಲ್ಲಿ ಸಂಯಮ ಕಾಯ್ದುಕೊಳ್ಳುವಂತೆ, ಯಾವುದೇ ರೀತಿಯಲ್ಲಿ ತನಿಖೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿತ್ತು. ಆದರೂ ಮಾಧ್ಯಮಗಳ ಏಕಪಕ್ಷೀಯ ವರದಿಗಾರಿಕೆ ಮತ್ತು ಸುದ್ದಿಯನ್ನು ರೋಚಕಗೊಳಿಸುವ ಭರದಲ್ಲಿ, ಪ್ರಕರಣದ ತನಿಖೆಯನ್ನು ಸ್ವತಃ ಕೈಗೊಂಡು ಆರೋಪಿಯನ್ನೇ ಅಪರಾಧಿ ಎಂದು ಕಟಕಟೆಗೆ ನಿಲ್ಲಿಸುವ ಯತ್ನಗಳನ್ನು ಸುದ್ದಿ ವಾಹಿನಿಗಳು ಮುಂದುವರಿಸಿವೆ. ಪ್ರಕರಣದ ಆರೋಪಿಗಳನ್ನು ಸಂದರ್ಶಿಸುವುದು, ಪ್ರಕರಣದ ಅಮೂಲ್ಯ ಸಾಕ್ಷ್ಯಗಳನ್ನು ಬಹಿರಂಗಪಡಿಸಿ ಆ ಕುರಿತು ತೀರ್ಮಾನಗಳನ್ನು ನೀಡುವುದು, ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲದೆಯೂ ಆರೋಪಿಯ ಕುರಿತು ಊಹಾಪೋಹದ, ಕಪೋಲಕಲ್ಪಿತ ಸಂಗತಿಗಳನ್ನು ಹೇಳಿ, ಹಸಿಸುಳ್ಳು ಮತ್ತು ವದಂತಿಗಳನ್ನೇ ತನಿಖಾ ವರದಿಗಳೆಂದು ತೋರಿಸಿ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಯತ್ನ ನಡೆಸುವುದು ಸೇರಿದಂತೆ ಕೇವಲ ಟಿಆರ್ ಪಿ ಮತ್ತು ಕೆಲವರ ರಾಜಕೀಯ ಲಾಭಕ್ಕಾಗಿ ಪ್ರಕರಣವನ್ನು ರೋಚಕಗೊಳಿಸಲಾಗುತ್ತಿದೆ.
ಇಂತಹ ಪ್ರಚೋದನಕಾರಿ ಮತ್ತು ತೀರ್ಪು ನೀಡಿ ದ್ವೇಷಕಾರುವ ಮೂಲಕ ತತಕ್ಷಣಕ್ಕೆ ಸಿಕ್ಕ ದುರ್ಬಲರನ್ನು ‘ಬಲಿ ಪಶು’ಗಳನ್ನಾಗಿ ಮಾಡಿ, ಆಳಿಗೊಂದು ಕಲ್ಲು ಹಾಕುವ ಮತ್ತು ಕಲ್ಲು ಹಾಕುವಂತೆ ವೀಕ್ಷಕರಿಗೂ ಪ್ರಚೋದಿಸುವ ಪತ್ರಿಕೋದ್ಯಮದ ಪರಿಣಾಮವಾಗಿ, ಈಗಾಗಲೇ ಆರೋಪಿ ರಿಯಾ ಚಕ್ರವರ್ತಿ ಹಲವು ರೀತಿಯ ಬೆದರಿಕೆ, ದಾಳಿಗಳಿಗೆ ಒಳಗಾಗಿದ್ದಾರೆ. ಪೊಲೀಸರ ಕಣ್ಣೆದುರೇ ಮಾಧ್ಯಮದ ಮಂದಿಯೇ ನಡೆಸಿದ ಆಕ್ರಮಣಕಾರಿ ವರಸೆಗಳ ಹೊರತಾಗಿಯೂ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಅತ್ಯಾಚಾರ ಎಸಗುವ, ಜೀವ ತೆಗೆಯುವ ಬೆದರಿಕೆಗಳೂ ನಿರಂತರವಾಗಿ ಬರುತ್ತಿವೆ ಎಂದು ಆಕೆ ಈಗಾಗಲೇ ರಕ್ಷಣೆ ಕೋರಿ ದೂರು ಕೂಡ ನೀಡಿದ್ದಾರೆ.
2008ರ ಆರುಷಿ ತಲ್ವಾರ್ ನಿಗೂಢ ಸಾವಿನ ಪ್ರಕರಣದ ವಿಷಯದಲ್ಲಿ ಕೂಡ ಬಹುತೇಕ ಇದೇ ಮಾಧ್ಯಮಗಳು ರೋಚಕತೆ ಮತ್ತು ಅದು ತಂದುಕೊಡುವ ಟಿಆರ್ ಪಿಯ ಬೆನ್ನುಬಿದ್ದು ಇಡೀ ಪ್ರಕರಣವನ್ನು ಹಳ್ಳಹಿಡಿಸಿದ್ದವು. ಸಿಬಿಐ, ಸ್ಥಳೀಯ ಪೊಲೀಸ್ ತನಿಖೆಗಳು ಪ್ರಗತಿಯಲ್ಲಿರುವಾಗಲೇ ಆರುಷಿಯ ಕೊಲೆಗಾರರನ್ನು ಘೋಷಿಸಿದ್ದ ಮಾಧ್ಯಮಗಳು, ಅವರಿಗೆ ಶಿಕ್ಷೆಯನ್ನೂ ಘೋಷಿಸಿ ಸಂಭ್ರಮಿಸಿದ್ದವು. ಆದರೆ, ಪ್ರಕರಣದ ತನಿಖೆ ನಡೆಸಿದ ಉತ್ತರಪ್ರದೇಶ ಪೊಲೀಸರು ಮತ್ತು ಸಿಬಿಐನ ಎರಡು ತಂಡಗಳು ಸೇರಿ ಒಟ್ಟು ಮೂರು ತಂಡಗಳು ಕೂಡ ನಿಜವಾದ ಆರೋಪಿಗಳನ್ನು ಪತ್ತೆ ಮಾಡಿ ಶಿಕ್ಷೆ ಕೊಡಿಸುವಲ್ಲಿ ವಿಫಲವಾದವು. ಮನೆ ಕೆಲಸಗಾರ ಹೇಮರಾಜ್, ಆರುಷಿ ತಂದೆತಾಯಿ ತಲ್ವಾರ್ ದಂಪತಿ ಕೂಡ ನಿರಪರಾಧಿಗಳು ಎಂದು ಬಿಡುಗಡೆಯಾದರು! ಆ ಪ್ರಕರಣದಲ್ಲಿ ಕೂಡ ಸುಶಾಂತ್ ಮತ್ತು ರಿಯಾ ವಿಷಯದಲ್ಲಿ ಈಗ ಮಾಡುತ್ತಿರುವಂತೆಯೇ ಸಿನಿಮೀಯ ಕೋನಗಳಲ್ಲಿ ಮಾಧ್ಯಮಗಳು ಕಥೆ ಕಟ್ಟಿದ್ದವು. ಹೇಮರಾಜ್ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ, ಹೇಮರಾಜ್ ಜೊತೆ ಮಗಳ ಸಂಬಂಧ ತಿಳಿದು ತಲ್ವಾರ್ ದಂಪತಿಯೇ ಮರ್ಯಾದಾ ಹತ್ಯೆ ನಡೆಸಿದ್ದಾರೆ, ತನ್ನ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮಗಳನ್ನು ಆಕೆಯ ತಂದೆಯೇ ಕೊಲೆಮಾಡಿದ್ದಾರೆ. ಆರುಷಿ ತಲ್ವಾರ್ ದಂಪತಿಯ ಸ್ವಂತ ಮಗಳಲ್ಲ, ಟಿವಿಗಳ ಮುಂದೆ ತಲ್ವಾರ್ ದಂಪತಿ ಅಳಲೇ ಇಲ್ಲ,.. ಮುಂತಾದ ಬಗೆಬಗೆಯಲ್ಲಿ ವರ್ಣರಂಜಿತವಾಗಿ ಕಥೆ ಕಟ್ಟಲಾಗಿತ್ತು. ವಿಚಾರಣೆ ನಡೆಸಿ, ತೀರ್ಪು ನೀಡಲಾಗಿತ್ತು!
ಆ ಪ್ರಕರಣದಲ್ಲಿ ಮಾಧ್ಯಮಗಳ ಈ ನಿರ್ಲಜ್ಜ ನಡೆಯ ಬಗ್ಗೆ ಕಿಡಿಕಾರಿದ್ದ ಸುಪ್ರೀಂಕೋರ್ಟ್, ಸಂತ್ರಸ್ತೆಯ ಘನತೆಗೆ ಧಕ್ಕೆ ತರುವಂತಹ ಕಪೋಲಕಲ್ಪಿತ ವರದಿಗಾರಿಕೆಯ ಬಗ್ಗೆ ಎಚ್ಚರಿಕೆ ನೀಡಿತ್ತು. ಈಗ ಸುಶಾಂತ್ ಸಿಂಗ್ ವಿಷಯದಲ್ಲಿಯೂ ಮತ್ತೊಮ್ಮೆ ಅದೇ ರೀತಿಯಲ್ಲಿ ಮೃತ ವ್ಯಕ್ತಿಯ ಘನತೆಗೆ, ಖಾಸಗೀತನಕ್ಕೆ ಧಕ್ಕೆ ತರುವಂತಹ ಯತ್ನ ರಾಜಾರೋಷವಾಗಿ ನಡೆಯುತ್ತಿದೆ.
ಇದು ಉತ್ತರದ ಕಥೆಯಾದರೆ, ಕರ್ನಾಟಕದಲ್ಲಿ ಸದ್ಯ ನಡೆಯುತ್ತಿರುವ ಡ್ರಗ್ಸ್ ಪ್ರಕರಣದ ವಿಷಯದಲ್ಲಿ ಕೂಡ ಕನ್ನಡ ಸುದ್ದಿವಾಹಿನಿಗಳು ಮಾಡುತ್ತಿರುವುದು ಕೂಡ ಇದನ್ನೇ. ನಾಡಿನ ಯುವ ಜನತೆ ಮತ್ತು ಎಳೆಯರ ಭವಿಷ್ಯದ ಮೇಲೆ ಪರಿಣಾಮ ಬೀರುವ ಗಂಭೀರ ಪ್ರಕರಣದ ವಿಷಯದಲ್ಲಿ ಕರಾರುವಕ್ಕಾದ ತನಿಖಾ ವರದಿಯ ಬದಲಿಗೆ, ಬಹುತೇಕ ವಾಹಿನಿಗಳು ರೋಚಕ ಮಾಹಿತಿ ತುಣುಕುಗಳನ್ನೇ ಆಧಾರವಾಗಿಟ್ಟುಕೊಂಡು ಕಥೆ ಹೆಣೆಯುತ್ತಿವೆ. ಪೊಲೀಸರು ವಿಚಾರಣೆ ನಡೆಸುತ್ತಿರುವ ನಟಿಯರು ಮತ್ತು ಅವರ ಸಂಪರ್ಕದ ವ್ಯಕ್ತಿಗಳ ಕುರಿತ ಆಧಾರರಹಿತ ಮಾಹಿತಿ ಮತ್ತು ವಿವರಗಳನ್ನೇ ಹೆಣೆದು ರೋಚಕ ಬ್ರೇಕಿಂಗ್ ನ್ಯೂಸ್ ನೀಡುವ ಮೂಲಕ ಟಿಆರ್ ಪಿ ಪೈಪೋಟಿ ಮುಗಿಲುಮುಟ್ಟಿದೆ. ತನಿಖೆ ಪೂರ್ಣಗೊಳ್ಳುವ ಮುನ್ನವೇ ತನಿಖೆಯ ವಿವರಗಳನ್ನು, ಸಾಕ್ಷ್ಯದ ತುಣುಕುಗಳನ್ನು ಬಹಿರಂಗಪಡಿಸುವ ಮೂಲಕ ಮತ್ತು ಅದೇ ಅರೆಬರೆ ಮಾಹಿತಿಯ ಮೇಲೆ ನಾಳೆಯ ಬಂಧನ ಇವರು, ಮುಂದಿನ ಬೇಟೆ ಇವರು ಎಂದು ಊಹಾಪೋಹದ ವರದಿಗಾರಿಕೆಯನ್ನೇ ತನಿಖಾ ಪತ್ರಿಕೋದ್ಯಮವೆಂದು ಜನರಿಗೆ ಉಣಬಡಿಸಲಾಗುತ್ತಿದೆ. ಇದು ಖಂಡಿತವಾಗಿಯೂ ತನಿಖೆಗೆ ಧಕ್ಕೆ ತರದೇ ಇರದು. ಅದೇ ಹೊತ್ತಿಗೆ, ತನಿಖೆ ನಡೆದು, ಸಾಕ್ಷ್ಯಾಧಾರಗಳ ಮೂಲಕ ಸಾಬೀತಾದ ಬಳಿಕ ಆರೋಪಿಯೊಬ್ಬರು ಅಪರಾಧಿಯಾಗಿ ಘೋಷಣೆಯಾಗುವ ಬದಲು, ಟಿವಿ ಸ್ಟುಡಿಯೋಗಳಲ್ಲೇ ‘ಅಪರಾಧಿ’ಯೂ, ಶಿಕ್ಷೆಯೂ ನಿಂತ ನಿಲುವಲ್ಲೇ ಘೋಷಣೆಯಾಗುತ್ತಿದೆ!
ಆ ಹಿನ್ನೆಲೆಯಲ್ಲಿ ನೋಡಿದರೆ, ತನಿಖೆ ಮತ್ತು ಪ್ರಕರಣದ ವಿಚಾರಣೆಯ ದೃಷ್ಟಿಯಿಂದ ಅತಿ ಸೂಕ್ಷ್ಮವಾದ ಮತ್ತು ಅಪರಾಧದ ನಿರ್ಣಯದಲ್ಲಿ, ನ್ಯಾಯ ದಾನ ಪ್ರಕ್ರಿಯೆಯಲ್ಲಿ ನಿರ್ಣಾಯಕವಾದ ವಾಟ್ಸಪ್ ಸಂದೇಶಗಳು, ಫೋಟೋ, ವೀಡಿಯೋ ತುಣುಕು, ಕಾಲ್ ರೆಕಾರ್ಡಿಂಗ್ ಮುಂತಾದ ಸಾಕ್ಷ್ಯಗಳನ್ನು ತನಿಖೆ ಪೂರ್ಣಗೊಳ್ಳುವ ಮುನ್ನವೇ ಮಾಧ್ಯಮಗಳಿಗೆ ಸರಬರಾಜು ಮಾಡುವ ತನಿಖಾ ಅಧಿಕಾರಿಗಳ ನಿಜವಾದ ಉದ್ದೇಶವೇನು? ನಿಜವಾಗಿಯೂ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ತಾವು ನಡೆಸುವ ತನಿಖೆಯ ಉದ್ದೇಶವೆಂದುಕೊಂಡಿದ್ದರೆ ಹೀಗೆ ನಿರ್ಣಾಯಕ ಮಾಹಿತಿಯನ್ನು ಬಹಿರಂಗಪಡಿಸುವುದು ಯಾಕೆ? ಎಂಬ ಅನುಮಾನಗಳೂ ಇವೆ.
ಗಮನಿಸಬೇಕಾದ ಸಂಗತಿ ಎಂದರೆ; ಹೀಗೆ ಮಾಧ್ಯಮ ವಿಚಾರಣೆ ಅಥವಾ ಮೀಡಿಯಾ ಟ್ರಯಲ್ ನಡೆಯುವ ಹೈ ಪ್ರೊಫೈಲ್ ಪ್ರಕರಣಗಳಲ್ಲಿ ಬಹುತೇಕ ರಾಜಕೀಯ ಹಿತಾಸಕ್ತಿ ಇರುತ್ತದೆ. ಹಾಗೆ ಒಂದಿಲ್ಲೊಂದು ಅಧಿಕಾರರೂಢ ಪಕ್ಷದ ರಾಜಕೀಯ ಲಾಭನಷ್ಟದ ಹಿನ್ನೆಲೆ ಹೊಂದಿರುವ ಪ್ರಕರಣಗಳಲ್ಲೇ ಮಾಧ್ಯಮಗಳು ಇಂತಹ ‘ಆಸಕ್ತಿ’ ತೋರುತ್ತವೆ ಎಂಬುದು ಭಾರತದ ಮಟ್ಟಿಗೆ ನೂರಕ್ಕೆ ನೂರು ನಿಜ. ಇದೀಗ ಸುಶಾಂತ್ ಸಿಂಗ್ ವಿಷಯದಲ್ಲಿಯೂ ಅದು ನಿಜ. ಏಕೆಂದರೆ, ಆ ನಟನ ಸಾವು ಈಗ ಒಬ್ಬ ಭರವಸೆಯ ನಟನ ದುರಂತ ಸಾವಿನ ಘಟನೆಯಾಗಿ ಮಾತ್ರ ಉಳಿದಿಲ್ಲ. ಬಿಜೆಪಿಯ ಪಾಲಿಗೆ ಅಧಿಕಾರ ಹಿಡಿಯಲೇಬೇಕಾದ ಬಿಹಾರದ ವಿಧಾನಸಭಾ ಚುನಾವಣೆಯ ಅತ್ಯಂತ ಪ್ರಮುಖ ವಿಷಯವಾಗಿ ಆ ಪ್ರಕರಣ ಈಗಾಗಲೇ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಆವರಿಸಿದೆ. ಅದೇ ಹೊತ್ತಿಗೆ ಮಹಾರಾಷ್ಟ್ರದ ಬಿಜೆಪಿಯ ವಿರೋಧಿ ಮೈತ್ರಿ ಬಣದ ಸರ್ಕಾರವನ್ನು ಬಿಕ್ಕಟ್ಟಿಗೆ ಸಿಲುಕಿಸುವ ಯತ್ನಕ್ಕೂ ಆ ಪ್ರಕರಣ ಬಳಕೆಯಾಗುತ್ತಿದೆ. ಅಲ್ಲಿನ ಆಡಳಿತರೂಢ ಮೈತ್ರಿ ಕೂಡ ತನ್ನ ರಾಜಕೀಯ ಉದ್ದೇಶಕ್ಕೆ ಪ್ರಕರಣವನ್ನು ಬಳಸಿಕೊಂಡಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಕರ್ನಾಟಕದ ಡ್ರಗ್ಸ್ ಪ್ರಕರಣ ಕೂಡ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಝಗಮಗಿಸುವ ಜಗತ್ತು ದಾಟಿ ರಾಜಧಾನಿಯ ರಾಜಕಾರಣದ ಪಡಸಾಲೆಗೆ ಪ್ರವೇಶ ಪಡೆದಿದೆ. ಈಗಾಗಲೇ ಆರೋಪಿಗಳ ರಾಜಕೀಯ ನಂಟು ದೊಡ್ಡಮಟ್ಟದಲ್ಲಿ ಚರ್ಚೆಗೆ ಬಂದಿದೆ. ಸ್ವತಃ ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಮಕ್ಕಳೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅದೇ ಟಿವಿ ವಾಹಿನಿಗಳೇ ಗಂಟಲು ಹರಿದುಕೊಳ್ಳುತ್ತಿವೆ.
ಹಾಗಾಗಿ, ಮಾಧ್ಯಮಗಳ ಸ್ವಯಂ ತನಿಖೆ, ತೀರ್ಪಿನ ಅತ್ಯುತ್ಸಾಹ, ಉಮೇದು ಮತ್ತು ತನಿಖಾ ವಿವರಗಳನ್ನು ಈ ಮಾಧ್ಯಮಗಳ ಮೂಲಕ ಸೋರಿಕೆ ಮಾಡುವ ತನಿಖಾಧಿಕಾರಿಗಳ ಅತಿ ಜಾಣತನಗಳ ಹಿಂದೆ ಕೂಡ ಆಯಾ ಪ್ರಕರಣಗಳ ರಾಜಕೀಯ ಲಾಭದ ಫಸಲು ಕೊಯ್ಯುವ ಕೈಗಳ ಸೂತ್ರವಿರದೇ ಇಲ್ಲ! ಆದರೆ, ಪತ್ರಿಕಾವೃತ್ತಿಯ ಹೆಸರಿನಲ್ಲಿ ಇಂತಹದ್ದೆಲ್ಲಾ ನಡೆಯುತ್ತಿರುವುದು ಮಾತ್ರ ದುರಂತ!