ಸದನದ ಹೊರಗೆ ರಾಜಕೀಯ ಪಕ್ಷಗಳು, ಅದರಲ್ಲೂ ಆಡಳಿತ ಮತ್ತು ಪ್ರತಿಪಕ್ಷಗಳು ಎಷ್ಟರ ಮಟ್ಟಿಗೆ ಪರಸ್ಪರ ಮಾತನ ಸಮರ ನಡೆಸುತ್ತದೋ ಅದಕ್ಕಿಂತಲೂ ದುಪ್ಪಟ್ಟು ಮಾತಿನ ಯುದ್ಧಕ್ಕೆ ವಿಧಾನ ಮಂಡಲ ವೇದಿಕೆಯಾಗುತ್ತದೆ. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ, ಕಾಲೆಳೆಯುವುದು, ವ್ಯಂಗ್ಯ… ಹೀಗೆ ದಿನವಿಡೀ ವಿಶ್ರಾಂತಿಯಿಲ್ಲದ ಮಾತಿನ ಏಟುಗಳು ಮರುಕಳಿಸುತ್ತಲೇ ಇರುತ್ತವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿರುವ ಮೊದಲ ಅಧಿವೇಶನದಲ್ಲೂ ಇದೇ ರೀತಿಯ ಬೆಳವಣಿಗೆಗಳು ನಡೆಯುತ್ತಿದೆಯಾದರೂ ಪ್ರವಾಹ ಪರಿಹಾರ ವಿಚಾರದಲ್ಲಿ ಜೆಡಿಎಸ್, ಅದರಲ್ಲೂ ಮುಖ್ಯವಾಗಿ ಎಚ್. ಡಿ. ಕುಮಾರಸ್ವಾಮಿ ರಕ್ಷಣಾತ್ಮಕ ತಂತ್ರಗಳಿಗೆ ಮೊರೆ ಹೋಗಿದ್ದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಹಾಗೆ ನೋಡಿದರೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಗಿಂತ ಜೆಡಿಎಸ್ ಹೆಚ್ಚು ಆಕ್ರಮಣಕಾರಿಯಾಗಿ ಸದನದಲ್ಲಿ ಮುಗಿಬೀಳಬೇಕಿತ್ತು. ಏಕೆಂದರೆ, ಬಿಜೆಪಿಯ ಆಪರೇಷನ್ ಕಮಲದಿಂದ ಅಧಿಕಾರ ಕಳೆದುಕೊಂಡ ನೋವು, ಆಕ್ರೋಶ ಕಾಂಗ್ರೆಸ್ ಗಿಂತ ಹೆಚ್ಚಾಗಿ ಜೆಡಿಎಸ್ ಗೆ ಇದೆ. ಮೈತ್ರಿ ಸರ್ಕಾರ ಉರುಳಿದ ಮೇಲೆ ಕಾಂಗ್ರೆಸ್ ಹೆಚ್ಚು ಲವಲವಿಕೆಯಿಂದ ಇದೆ. ಆದರೆ, ಜೆಡಿಎಸ್ ಏಕೋ ಇನ್ನೂ ಆ ನೋವಿನಿಂದ ಹೊರಬಂದಿಲ್ಲವೋ ಅಥವಾ ಹೊಂದಾಣಿಕೆ ರಾಜಕಾರಣದ ಬೆನ್ನು ಬಿದ್ದಿರುವುದರ ಪರಿಣಾಮವೋ ಸದನದ ಹೊರಗೆ ಸರ್ಕಾರದ ವಿರುದ್ಧ ಇದ್ದ ಆಕ್ರೋಶ ಸದನದ ಒಳಗೆ ಇಲ್ಲ ಎಂಬುದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಮಾತಿನಲ್ಲಿ ವ್ಯಕ್ತವಾಗಿದೆ. ರಾಜಕಾರಣವನ್ನು ಬದಿಗಿಟ್ಟು ನೋಡಿದಾಗ ಕುಮಾರಸ್ವಾಮಿ ಅವರ ಈ ನಡವಳಿಕೆ ಸರಿ ಎಂದು ಕಂಡುಬಂದಿದ್ದರೂ ಈ ವ್ಯವಸ್ಥೆಯಲ್ಲೇ ರಾಜಕೀಯವಾಗಿ ಗಟ್ಟಿಯಾಗಬೇಕಾಗಿರುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆ ಅವರ ಮೃದು ಧೋರಣೆ ಪ್ರಶ್ನೆಗಳನ್ನು ಹುಟ್ಟುಹಾಕುವುದು ಸಹಜ.
ಗುರುವಾರ ವಿಧಾನ ಮಂಡಲ ಕಲಾಪ ಆರಂಭವಾದಾಗಿನಿಂದಲೂ ಸದನದಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನವೇ ಆಗುತ್ತಿದೆ ಹೊರತು ಜೆಡಿಎಸ್ ತನ್ನ ಶಕ್ತಿ ತೋರಿಸುತ್ತಿಲ್ಲ. ಎರಡೂ ದಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ನ ಕೃಷ್ಣ ಬೈರೇಗೌಡ, ಎಂ. ಬಿ. ಪಾಟೀಲ್, ಎಚ್. ಕೆ. ಪಾಟೀಲ್ ಅವರ ಧ್ವನಿ ಮಾತ್ರ ಗಟ್ಟಿಯಾಗಿ ಕೇಳಿಸುತ್ತಿದೆ. ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಧ್ವನಿ ಇನ್ನೂ ಗಟ್ಟಿಯಾಗಿಲ್ಲ. ಆಗುವ ಲಕ್ಷಣವೂ ಕಾಣಿಸುತ್ತಿಲ್ಲ. ಪ್ರವಾಹ ಪರಿಹಾರ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಇದ್ದ ಅವಕಾಶವನ್ನು ಕಾಂಗ್ರೆಸ್ ಸಮರ್ಪಕವಾಗಿ ಬಳಸಿಕೊಂಡರೆ, ಜೆಡಿಎಸ್ ಪರಿಣಾಮಕಾರಿಯಾಗಿ ಬಳಸಿಕೊಳ್ಳಲೇ ಇಲ್ಲ.

ಸಿದ್ದರಾಮಯ್ಯಗೆ ಅಡ್ಡಿಯಾದ ಕಾಂಗ್ರೆಸ್ ಶಾಸಕರು
ಅಚ್ಚರಿಯಾದರೂ ಇದು ನಿಜ. ಪ್ರವಾಹ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವನ್ನು ತೀಕ್ಷ್ಣ ಮಾತುಗಳಲ್ಲಿ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಅವರು, ತಮ್ಮ ಮಾತಿನ ಓಘಕ್ಕೆ ಅಡ್ಡಿ ಬಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನೂ ಬಿಡಲಿಲ್ಲ. ಸ್ಪೀಕರ್ ಅವರಿಗೇ ನಿಯಮಾವಳಿಗಳ ಪಾಠ ಮಾಡುತ್ತಾ, ನಿಮ್ಮ ಮಾತು ಕೇಳಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಮಾತು ಮುಂದುವರಿಸಿದ್ದರು. ಸಿದ್ದರಾಮಯ್ಯ ಅವರ ಮಾತುಗಳು ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಅವಕಾಶವಿತ್ತಾದರೂ ಪದೇ ಪದೇ ಮಧ್ಯೆಪ್ರವೇಶಿಸುತ್ತಿದ್ದ ಕೃಷ್ಣ ಬೈರೇಗೌಡ ಮತ್ತು ಎಂ. ಬಿ. ಪಾಟೀಲ್ ಅವರು ಕುಳಿತಲ್ಲೇ ಸಿದ್ದರಾಮಯ್ಯ ಅವರಿಗೆ ಸಲಹೆಗಳನ್ನು ಕೊಡುತ್ತಾ ಅವರ ಮಾತಿನ ವೇಗಕ್ಕೆ, ತೀಕ್ಷ್ಣತೆಗೆ ಅಡ್ಡಿಯಾಗುತ್ತಿದ್ದರು. ಇವರ ಈ ಮಧ್ಯಪ್ರವೇಶ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು ಎಂಬುದನ್ನು ಹೊರತುಪಡಿಸಿದರೆ ಸಿದ್ದರಾಮಯ್ಯ ಅವರಿಗಂತೂ ಹೆಚ್ಚು ಲಾಭ ತರಲಿಲ್ಲ. ಕೃಷ್ಣ ಬೈರೇಗೌಡ ಮತ್ತು ಎಂ. ಬಿ. ಪಾಟೀಲರ ಮಧ್ಯಪ್ರವೇಶದಿಂದಾಗಿ ತಾವು ಏನನ್ನು ಹೇಳಬೇಕಿತ್ತೋ ಅದನ್ನು ಮರೆತು ಬೇರೆಯದ್ದೇ ವಿಚಾರಗಳನ್ನು ಸಿದ್ದರಾಮಯ್ಯ ಪ್ರಸ್ತಾಪಿಸುತ್ತಿದ್ದರು. ಇದು ಒಂದು ರೀತಿಯಲ್ಲಿ ಆಡಳಿತ ಪಕ್ಷಕ್ಕೆ ಲಾಭ ತಂದುಕೊಟ್ಟಿತು. ಇಲ್ಲವಾದಲ್ಲಿ ಇನ್ನಷ್ಟು ಕಠೋರ ಟೀಕೆಗಳನ್ನು ಸರ್ಕಾರ ಎದುರಿಸಬೇಕಾಗಿತ್ತು.
ಕುಮಾರಸ್ವಾಮಿ ಮೃದು ಧೋರಣೆ
ಸಿದ್ದರಾಮಯ್ಯ ಅವರ ನಂತರ ಮಾತು ಆರಂಭಿಸಿದ ಎಚ್. ಡಿ. ಕುಮಾರಸ್ವಾಮಿ ಆರಂಭದಿಂದಲೂ ರಕ್ಷಣಾತ್ಮಕವಾಗಿಯೇ ಬ್ಯಾಟಿಂಗ್ ಮಾಡಿದರು. ಕಾಂಗ್ರೆಸ್ ಕೇಂದ್ರದ ಬಿಜೆಪಿ ಸರ್ಕಾರವನ್ನು ಕಟು ಮಾತುಗಳಲ್ಲಿ ತರಾಟೆಗೆ ತೆಗೆದುಕೊಂಡರೆ, ಕುಮಾರಸ್ವಾಮಿ ಕೇಂದ್ರದ ಪರವಾಗಿ ಮಾತನಾಡಿದರು. ಕೇಂದ್ರ ಸರ್ಕಾರವನ್ನು ದೂರಿ ಪ್ರಯೋಜನವಿಲ್ಲ. ನಿಯಮಗಳ ಬದಲಾವಣೆಗಳಾಗಬೇಕು ಎಂಬಿತ್ಯಾದಿ ಮಾತುಗಳನ್ನು ಹೇಳಿದರು. ತಮ್ಮ ಮಾತಿನಲ್ಲಿ ಸರ್ಕಾರ ಏನು ಮಾಡಿಲ್ಲ ಎನ್ನುವುದಕ್ಕಿಂತ ಏನು ಮಾಡಬಹುದು ಮತ್ತು ಏನು ಮಾಡಬೇಕು ಎಂಬುದನ್ನೇ ಪ್ರಸ್ತಾಪಿಸಿದರು.

ಕುಮಾರಸ್ವಾಮಿ ಮಾತುಗಳನ್ನು ಗಮನಿಸಿದಾಗ ಅವರು ಕೇಂದ್ರ ಸರ್ಕಾರವನ್ನು ಓಲೈಸಲು ಹೊರಟಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದ್ದು ಸಹಜ. ಏಕೆಂದರೆ, ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದರೆ ಅಥವಾ ಸಮರ್ಥವಾಗಿ ವಾದ ಮಂಡಿಸಿದರೆ ಈ ಕೇಂದ್ರ ಸರ್ಕಾರ ಸ್ಪಂದಿಸುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಬೇಡಿಕೆಗಳಿಗೂ ಸ್ಪಂದಿಸಿತ್ತು. ಎಲ್ಲಾ ರೀತಿಯ ನೆರವು ನೀಡಿತ್ತು ಎಂದು ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಮಾಡಿದ್ದ ಆರೋಪಗಳಿಗೆ ಉತ್ತರ ನೀಡಿದ್ದರು. ರಾಜ್ಯ ಸರ್ಕಾರ ಪ್ರವಾಹದ ವಿಚಾರದಲ್ಲಿ ರಾಜ್ಯ ಸರ್ಕಾರ ಕೆಲಸವನ್ನೇ ಮಾಡಿಲ್ಲ ಎಂದು ಹೇಳಲೇ ಇಲ್ಲ. ಬದಲಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ಕೆಲಸ ಮಾಡಬೇಕು ಎಂದು ಸಲಹೆಗಳನ್ನು ನೀಡಿದರು.
ಕುಮಾರಸ್ವಾಮಿ ಅವರ ಈ ಮೃದು ಧೋರಣೆ ಗಮನಿಸಿದಾಗ ಎಲ್ಲೋ ಒಂದು ಕಡೆ ಅವರು ಹೊಂದಾಣಿಕೆ ರಾಜಕಾರಣ ಮಾಡುವ ಲಕ್ಷಣ ಕಾಣಿಸುತ್ತಿದ್ದುದು ಸುಳ್ಳಲ್ಲ. ಈಗಾಗಲೇ ಡಿ. ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್ ಅವರ ಮೇಲೆ ಐಟಿ ದಾಳಿ ನಡೆದಿದೆ. ಶಿವಕುಮಾರ್, ಅವರ ಸಹೋದರ ಡಿ. ಕೆ. ಸುರೇಶ್ ಸೇರಿದಂತೆ ಅನೇಕ ಕಾಂಗ್ರೆಸ್ ಪ್ರಮುಖರು ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದಾರೆ. ಇದರ ಮಧ್ಯೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿತ್ತು ಎನ್ನಲಾದ ದೂರವಾಣಿ ಕದ್ದಾಲಿಕೆ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಹೀಗಿರುವಾಗ ತಾವು ಕೂಡ ಕಾಂಗ್ರೆಸ್ ನಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರಮಣಕಾರಿಯಾಗಿ ಹೋದರೆ ತಮಗೂ ಎಲ್ಲಿ ಸಮಸ್ಯೆಯಾಗುವುದೋ ಎಂಬ ಆತಂಕದಿಂದ ಅವರು ಈ ರೀತಿ ನಡೆದುಕೊಂಡಿದ್ದಾರೆಯೇ ಎಂಬ ಪ್ರಶ್ನೆ ಏಳುವುದು ಸಹಜ. ಆದರೆ, ರಾಜಕಾರಣ ಹೊರತಾಗಿ ನೋಡಿದರೆ ಪ್ರವಾಹ ಪರಿಸ್ಥಿತಿ ಕುರಿತಂತೆ ಸದನದಲ್ಲಿ ಕುಮಾರಸ್ವಾಮಿ ಅವರ ನಡೆ, ಮಾತುಗಳಲ್ಲಿ ಜನರ ಪರಿಸ್ಥಿತಿ ಬಗ್ಗೆ ಅವರಿಗಿರುವ ನೋವಿನ ಪ್ರತಿಫಲನ ಕಾಣಿಸಿದ್ದು ಮಾತ್ರ ಸತ್ಯ.