ತಮ್ಮ ತಂದೆ ತಾಯಿಯನ್ನು ಜಾತಿಯ ವಿಷಯಕ್ಕಾಗಿ ಕೊಂದರು. ತಾಯಿಯ ಸಹೋದರರು, ಮಾಮಾ, ಮಾವಂದಿರು ಆಗಬೇಕಾದವರೇ ಜೀವ ತೆಗೆದರು ಎಂದು ಆ ಮಕ್ಕಳಿಗೆ ದೊಡ್ಡವರಾದಾಗ ತಿಳಿದ ಮೇಲೆ ಅವರಿಗೆ ಈ ಸಮಾಜದ ಬಗ್ಗೆ ಏನು ಅಭಿಪ್ರಾಯ ಮೂಡಬಹುದು. ತಂತ್ರಜ್ಞಾನ ಇಂದು ಬಹು ಮುಂದೆ ಸಾಗಿದೆ. ಜಾತಿ ಎನ್ನುವುದು ಮನುಷ್ಯ ಮಾಡುವ ಕಸುಬಿನಿಂದಲೇ ಹೊರತು ಯಾವುದೇ ಯಾವುದೇ ಸೀಲ್ ಅಲ್ಲ. ಈ ವಿಷ ವರ್ತುಲಕ್ಕೆ ಸಿಕ್ಕು, ತಂದೆ ತಾಯಿಯನ್ನು ಕಳೆದುಕೊಂಡವರು ತಮಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಹೊರಟರೆ ಸಮಾಜ ಏನಾಗುತ್ತದೆ…ಇದು ಕಪ್ಪು ಚುಕ್ಕೆ ಅಲ್ಲವೇ….
2010 ರಲ್ಲಿ ಕನಕಪುರ, 2011 ರಲ್ಲಿ ಮದ್ದೂರು ತಾಲೂಕಿನ ಅಬಲವಾಡಿ, 2012 ರಲ್ಲಿ ಆಲನಹಳ್ಳಿ ಲೇಔಟ್ ಮೈಸೂರು ಮತ್ತು ಹಾಸನದಲ್ಲಿ, ಆನೆಕಲ್, 2014 ರಲ್ಲಿ ಮಂಡ್ಯ ಮತ್ತು ಧಾರವಾಡದ ಶಿವಳ್ಳಿ ಗ್ರಾಮದಲ್ಲಿ, 2015 ಬೆಂಗಳೂರಿನಲ್ಲಿ ಮತ್ತು ರಾಮನಗರದಲ್ಲಿ, 2016 ಮಂಡ್ಯ ಜಿಲ್ಲೆಯ ಗ್ರಾಮದಲ್ಲಿ….ಇವು ನಮಗೆಲ್ಲ ತಿಳಿದು ಬಂದ ಪ್ರಕರಣಗಳು. ತಿಳಿಯದೇ ಮರೇ ಮಾಚಿದ್ದವು ಎಷ್ಟೋ ಗೊತ್ತಿಲ್ಲ….ಇಂತಹ ಹಲವು ಘಟನೆಗಳಲ್ಲಿ ಜಾತಿ ಎಂಬುದಕ್ಕಿಂತ ಮಾನವೀಯತೆ ಕೊರತೆಯಿಂದ ನಡೆದ ಘಟನೆಗಳೆಂದು ಹೇಳಬಹುದು. ಇಂತಹದ್ದೊಂದು ಘಟನೆ ಗದಗ್ ನ ಗಜೇಂದ್ರಗಡ ಪಟ್ಟಣದ ಹತ್ತಿರವಿರುವ ಲಕ್ಕಲಕಟ್ಟೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಘಟನೆ ನಡೆದಿದ್ದು ಗದಗ್ ಜಿಲ್ಲೆಯ ಲಕ್ಕಲಗಟ್ಟಿ ಗ್ರಾಮದಲ್ಲಿ. ರಮೇಶ್ ಮಾದಾರ ಮತ್ತು ಗಂಗಮ್ಮ ರಾಠೋಡ್ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದರು. ಗಂಗಮ್ಮನ ಸಹೋದರರು ಅವಳಿಗೆ ಗ್ರಾಮದಲ್ಲಿರಬೇಡ, ತಮಗೆ ಅವಮಾನವಾಗುತ್ತದೆ, ಇದ್ದರೆ ಕೊಂದು ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಆಗ ಇವರ ಗೊಡವೆಯೇ ಬೇಡ ಎಂದು ಇಬ್ಬರೂ ಬದುಕಿನ ಬಂಡಿ ಸಾಗಿಸಲು ಊರು ಬಿಟ್ಟು ಬೆಂಗಳೂರಿಗೆ ತೆರಳಿದರು.
ಒಂದು ವರ್ಷದ ನಂತರ ಹಬ್ಬಕ್ಕೆಂದು ಗ್ರಾಮಕ್ಕೆ ಬಂದಾಗ ಬೆದರಿಕೆ ಒಡ್ಡಲಾಯಿತು. ಆಗಲೂ ಇಬ್ಬರೂ ತಕ್ಷಣ ಬೆಂಗಳೂರಿಗೆ ಮರಳಿದರು. ಎರಡು ವರ್ಷದ ಹಿಂದೆ ಮಗು ಹುಟ್ಟಿದೆ ಎಂದು ತೋರಿಸಲು ಬಂದಾಗಲೂ ಇದೇ ಮರುಕಳಿಸಿತು. ದಂಪತಿಗೆ ಮತ್ತೊಂದು ಮಗುವಾಯಿತು. ಅದಕ್ಕೆ ಎರಡು ತಿಂಗಳು. ಊರಿನಲ್ಲಿ ದೀಪಾವಳಿ ಆಚರಿಸೋಣ ಎಂದು ಬಂದರೆ ಮತ್ತದೇ ಬೆದರಿಕೆ. ಈ ಬಾರಿ ಸ್ವಲ್ಪ ಮಾತಿನ ಚಕಮಕಿಯೂ ಆಯಿತು.

ಆವತ್ತು ಮಧ್ಯಾಹ್ನ (ಬುಧವಾರ, ನವೆಂಬರ್ 6, 2019) ಗಂಗಮ್ಮನ ಸಹೋದರರು ಏಕಾಏಕಿ ಮನೆಗೆ ನುಗ್ಗಿ, ಮನೆಯ ಇತರ ಸದಸ್ಯರನ್ನು ಹೊರಗೆ ಹಾಕಿ, ರಮೇಶ್ ಮತ್ತು ಗಂಗಮ್ಮ ಗೆ ಕೊಡಲಿಯಿಂದ ಹೊಡೆದರು. ಆ ಹೊಡೆತಕ್ಕೆ ರಮೇಶ್ ಸ್ಥಳದಲ್ಲೇ ಮೃತಪಟ್ಟರೆ ಗಂಗಮ್ಮ ನನ್ನು ಗಜೇಂದ್ರಗಡದ ತಾಲೂಕು ಆಸ್ಪತ್ರೆಗೆ ಹಾಕಲಾಯಿತು. ಕೆಲ ಸಮಯದಲ್ಲಿ ಅವಳೂ ಮೃತಪಟ್ಟಳು.
ಆ ಸಹೋದದರಿಗೆ ತಂಗಿಯ ಬಗ್ಗೆ ಪ್ರೀತಿಗಿಂತ ಅವಳು ಅವಮಾನ ಮಾಡಿದಳು ಎಂಬ ರೋಷ ಎಷ್ಟಿತ್ತೆಂದರೆ ಅವಳನ್ನು ಕೊಡಲಿಯಿಂದ ಕೊಚ್ಚುವಷ್ಟು. ಈಗ ಆ ತಬ್ಬಲಿ ಮಕ್ಕಳಿಬ್ಬರೂ ಅನಾಥರಾಗಿದ್ದಾರೆ. ಎರಡು ವರ್ಷದ ಹಾಗೂ ಎರಡು ತಿಂಗಳ ಮಕ್ಕಳು.
ಈ ಕಾಲದಲ್ಲೂ ಮರ್ಯಾದಾ ಹತ್ಯೆಯಂತಹ ಕ್ರೂರ ಕೃತ್ಯಗಳು ಮಾನವನ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಲ್ಲವೆ. ಆ ಪ್ರೇಮಿಗಳು ಯಾರನ್ನೂ ಕಾಡದೇ ಬೇಡದೇ ತಮ್ಮ ಪುಟ್ಟ ಸಂಸಾರದೊಂದಿಗೆ, ದಿನಗೂಲಿ ಕೆಲಸ ಮಾಡುತ್ತ ಸುಖವಾಗಿ ಜೀವನ ಸಾಗಿಸುತ್ತಿದ್ದರು. ಊರಿನಲ್ಲಿ ಹಬ್ಬ ಮಾಡೋಣ, ಎಲ್ಲರಿಗೂ ತಮ್ಮ ಮಕ್ಕಳನ್ನು ತೋರಿಸೋಣ, ಸಂಭ್ರಮ ಪಡೋಣ ಎಂದು ನಾಲ್ಕು ದಿನಕ್ಕೆಂದು ಬಂದವರು ಮತ್ತೆ ಮರಳಲೇ ಇಲ್ಲ.
ಇಂತಹ ಕೃತ್ಯಗಳಲ್ಲಿ ಆರೋಪಿತರಿಗೆ ಅಥವಾ ಅಪರಾಧಿಗಳಿಗೆ ಅಪರಾಧಿ ಭಾವನೆ ಇರುವುದಿಲ್ಲವೇ. ಅವರು ತಾವು ಮಾಡಿದ್ದೇ ಸರಿ. ತಮ್ಮ ಮಾನ ಮರ್ಯಾದೆ ತೆಗೆದವರಿಗೆ ಬದುಕುವ ಹಕ್ಕಿಲ್ಲ ಎಂದೇ ವಾದಿಸುತ್ತಾರೆ. ಹೀಗಾಗಿಯೇ ಇದು ಒಂದು ಪಿಡುಗು ಎಂದೇ ಹೇಳಬಹುದು. ಯಾರ ಹಂಗೂ ಬೇಡ ಎಂದು ದೂರ ಹೋದರೂ ಬೆಂಬಿಡದೇ ಹತ್ಯೆ ಮಾಡಲಾಗುತ್ತದೆ. ಇನ್ನೂ ಇಂತಹ ಹತ್ಯೆಗಳು ನಡೆಯುತ್ತಲೇ ಇವೆ.
ಮಾನವ ಹಕ್ಕುಗಳ ಹೋರಾಟಗಾರ ಕೆ. ಶ್ರೀಕಾಂತ್ ಅವರ ಪ್ರಕಾರ, “ಬದುಕುವ ಹಕ್ಕನ್ನೇ ಕಸಿದುಕೊಳ್ಳಲು ಇವರು ಯಾರು. ಕೊಂದರೆ ಮರ್ಯಾದೆ ಮರಳಿ ಬರುವುದೇ? ಸಾವೊಂದೇ ಇದಕ್ಕೆ ಪರಿಹಾರವೇ? ಅಂತಹ ಮಕ್ಕಳ ಬೆಳವಣಿಗೆಯಲ್ಲೂ ಇಂತಹ ಘಟನೆಗಳು ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಇಂತಹ ಕೊಲೆಗಳು ಮರ್ಯಾದೆಗೆಂದು ಮಾಡಿದ್ದರೂ ಅದು ಯಾರ ಮರ್ಯಾದೆಯನ್ನೂ ಉಳಿಸಲ್ಲ”.
ಪ್ರಶಾಂತ್ ಗಡಾದ್, ಲಕ್ಕಲಕಟ್ಟಿ ಗ್ರಾಮಸ್ಥರು ಹೇಳುವ ಪ್ರಕಾರ, “ಈಗ ಕೈಗೆ ಬಂದಿರುವ ಮಕ್ಕಳು ಊರು ಬಿಟ್ಟು ದುಡಿಯುತ್ತಿದ್ದವರು ಸತ್ತ ಮೇಲೆ ಆ ರಮೇಶ ಅವರ ತಾಯಿ ನೀಲವ್ವರ ಗತಿ ಏನು? ಬರದ ಬೇಗೆಯಿಂದ ತತ್ತರಿಸಿ ದಿನಗೂಲಿ ಮಾಡುತ್ತಿದ್ದ ಆ ವೃದ್ಧ ಜೀವವು ಈಗ ಎರಡು ಕೂಸುಗಳನ್ನು ಸಾಕಬೇಕು. ಅವರ ಒಂದು ನಿಮಿಷದ ಮರ್ಯಾದೆ ಮೇಲಿನ ಸಿಟ್ಟು, ಎಷ್ಟು ಜನರ ಬದುಕನ್ನು ಹಳಿ ತಪ್ಪಿಸಿದೆ. ಇದೆಲ್ಲವನ್ನೂ ಮಾಡಿದವರೂ ಓದು ಬರಹ ಕಲಿತವರು ಎಂಬುದು ಇನ್ನಷ್ಟು ಕಳವಳಕಾರಿ ”.