ಬಾಯಿಗೆ ಬಟ್ಟೆ ತುರುಕಿದ್ದಾರೆ
ಬಿಗಿದು ಕೈಯ ಕಟ್ಟಿದ್ದಾರೆ
ಗಂಟಲೊತ್ತಿ ಹಿಸುಕಿದ್ದಾರೆ
ಸತ್ತೆ ಸತ್ತೆ ಅಯ್ಯೋ ಸತ್ತೆ
ನಾ… ನು…. ಪ್ರ…ಜಾ… ಸ….ತ್ತೆ!
ರಾಷ್ಟ್ರಕವಿ ಕುವೆಂಪು ಅವರು 1975 ರಲ್ಲಿ ತುರ್ತುಪರಿಸ್ಥಿತಿಯ ನಗ್ನ ಚಿತ್ರಣವನ್ನು ಚಿತ್ರಿಸಿದ್ದು ಹೀಗೆ.
ಆದರೆ, ಈಗಿನ ಪರಿಸ್ಥಿತಿಯೂ ವಿಭಿನ್ನವಾಗಿಲ್ಲ. ದೇಶದಲ್ಲಿ ಪೌರತ್ವ ತಿದ್ದುಪಡಿ ಕಾನೂನಿನ ವಿಚಾರದಲ್ಲಿ ತಲೆದೋರಿರುವ ಬಿಕ್ಕಟ್ಟನ್ನೇ ನೆಪವಾಗಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ತುರ್ತುಪರಿಸ್ಥಿತಿಯ ವಾತಾವರಣವನ್ನು ನಿರ್ಮಾಣ ಮಾಡಿದೆ. ತುರ್ತುಪರಿಸ್ಥಿತಿಯ ಘೋಷಣೆ ಮಾಡದಿದ್ದರೂ ದೇಶದೆಲ್ಲೆಡೆ ಅಶಾಂತಿ, ಆತಂಕ, ನಾಳೆ ಏನು ಎಂಬ ಭೀತಿ ಎದುರಾಗಿದೆ.
ಅಲ್ಪಸಂಖ್ಯಾತರನ್ನೇ ಅದರಲ್ಲೂ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಟ್ಟುಕೊಂಡು ಕಾನೂನುಗಳನ್ನು ರೂಪಿಸುತ್ತಿರುವ ಬಿಜೆಪಿ ಸರ್ಕಾರ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಆಡಳಿತ ನಡೆಸುತ್ತಿದೆ.
ಧ್ವನಿ ಎತ್ತಿದವರ ಧ್ವನಿಯನ್ನೇ ಅಡಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಬಿಜೆಪಿ ಈ ಮೂಲಕ ಅಧಿಕಾರವನ್ನು ಎಗ್ಗಿಲ್ಲದೇ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಮಂಗಳೂರಿನಲ್ಲಿ ಉಂಟಾದ ಗಲಭೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಅಲ್ಲಿ ಕರ್ಫ್ಯೂ ಹೇರಿದೆ. ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ, ಹಿಂಸಾಚಾರಕ್ಕೆ ಸಂಬಂಧಿಸಿದ ಸುದ್ದಿ, ಚಿತ್ರ, ವಿಡೀಯೋಗಳ ಬಿತ್ತರವನ್ನು ನಿರ್ಬಂಧಿಸಿದೆ. ಇದೆಲ್ಲಾ ಬಿಗುವಿನ ವಾತಾವರಣವನ್ನು ತಹಬದಿಗೆ ತರುವ ಪ್ರಯತ್ನವೆಂದು ಎಲ್ಲರೂ ಸುಮ್ಮನಾಗಿದ್ದರು.
ಆದರೆ, ಪ್ರತಿಪಕ್ಷ ಕಾಂಗ್ರೆಸ್ ನಾಯಕರು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸದಂತೆ ನಿರ್ಬಂಧ ಹೇರಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಪೊಲೀಸರ ಗೋಲಿಬಾರ್ ನಿಂದ ಬಲಿಯಾದ ಯುವಕರಿಬ್ಬರ ಮನೆಗಳಿಗೆ ತೆರಳಿ ಅವರ ಕುಟುಂಬಗಳಿಗೆ ಸಾಂತ್ವನ ಹೇಳಲೆಂದು ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದ ತಂಡ ನಿನ್ನೆ ಮಂಗಳೂರಿಗೆ ತೆರಳಿತ್ತು. ಆದರೆ, ಅವರನ್ನು ವಿಮಾನನಿಲ್ದಾಣದಿಂದ ಹೊರಗೆ ಬಿಡದೇ ಅವರನ್ನು ತಳ್ಳಿ, ವಾಪಸ್ ಬೆಂಗಳೂರಿನ ವಿಮಾನವನ್ನು ಹತ್ತಿಸಲಾಯಿತು. ಈ ಮೂಲಕ ಕಾಂಗ್ರೆಸ್ ನಾಯಕರಿಗೆ ಮಂಗಳೂರು ಪ್ರವೇಶವನ್ನು ನಿರಾಕರಿಸಲಾಗಿತ್ತು.
ಇನ್ನು ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ನಿನ್ನೆ ಮಧ್ಯಾಹ್ನ 2 ಗಂಟೆಯ ವಿಮಾನದಲ್ಲಿ ಮಂಗಳೂರಿಗೆ ಹೋಗಬೇಕಿತ್ತು. ಆದರೆ, ಅಷ್ಟರೊಳಗೆ ಮಂಗಳೂರು ಪೊಲೀಸ್ ಆಯುಕ್ತರು ಸಿದ್ದರಾಮಯ್ಯನವರಿಗೆ ಒಂದು ನೊಟೀಸ್ ಕಳುಹಿಸಿ ಯಾವುದೇ ಕಾರಣಕ್ಕೂ ನೀವು ಮಂಗಳೂರಿಗೆ ಬರುವಂತಿಲ್ಲ. ಒಂದು ವೇಳೆ ಬಂದರೆ ಶಾಂತಿಗೆ ಭಂಗವಾಗುತ್ತದೆ ಎಂದು ಹೇಳಿ ಸಿದ್ದರಾಮಯ್ಯಗೆ ಮಂಗಳೂರು ಭೇಟಿಗೆ ನಿರ್ಬಂಧ ವಿಧಿಸಿದ್ದಾರೆ.
ಮಂಗಳೂರಿಗೆ ತೆರಳುವುದಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರಿಗೆ ನಿರ್ಬಂಧ ಹೇರಿಲ್ಲ. ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಎಂತಹ ಪರಿಸ್ಥಿತಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆಗೆ ಮಂಗಳೂರಿಗೆ ತೆರಳುವುದಕ್ಕೂ ಮುನ್ನ ಮಾತನಾಡಿದ ಅವರು, ‘ಮಂಗಳೂರಿಗೆ ತೆರಳಿ, ಅಲ್ಲಿನ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಲಿದ್ದೇವೆ. ಬಳಿಕ ಉಡುಪಿಗೆ ತೆರಳಿ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿ ಮತ್ತೆ ಮಂಗಳೂರಿಗೆ ಬರಲಿದ್ಗಿದೇವೆ’ ಎಂದು ತಿಳಿಸಿದರು. ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ವಿಷಯಗಳನ್ನು ಮಂಗಳೂರಿನಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ನೀವು ಮಂಗಳೂರಿಗೆ ಬಂದರೆ ಕಾನೂನು ಸುವ್ಯವಸ್ಥೆಗೆ ಭಂಗವುಂಟಾಗುವ ಸಾಧ್ಯತೆ ಇರುವುದರಿಂದ ಡಿಸೆಂಬರ್ 22 ರ ಮಧ್ಯರಾತ್ರಿ 12 ಗಂಟೆಯವರೆಗೆ ಇಲ್ಲಿಗೆ ಬರುವುದನ್ನು ನಿಷೇಧಿಸಲಾಗಿದೆ. ಅಲ್ಲದೇ, ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಗೋವಾ ವಿಮಾನನಿಲ್ದಾಣಗಳಿಂದ ನಿಮ್ಮನ್ನು ಮಂಗಳೂರು ನಗರಕ್ಕೆ ಕರೆ ತರಲು ಯಾವುದೇ ರೀತಿಯ ವಾಹನ, ರೈಲಿನ ಸಂಚಾರದ ಪ್ರಯಾಣಕ್ಕೆ ಸಹಕರಿಸುವುದನ್ನೂ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ರಾಜ್ಯದ ಒಬ್ಬ ಮಾಜಿ ಮುಖ್ಯಮಂತ್ರಿಗೆ ನೊಟೀಸ್ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ರಾಜ್ಯದ ಒಬ್ಬ ಜವಾಬ್ದಾರಿಯುತರಾದ ಮಾಜಿ ಮುಖ್ಯಮಂತ್ರಿಗೆ ಪೊಲೀಸ್ ಅಧಿಕಾರಿ ಪ್ರವೇಶ ನಿರಾಕರಿಸಿರುವುದು ಎಷ್ಟರ ಮಟ್ಟಿಗೆ ಸರಿ? ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವದ ಕೊಲೆ ಮಾಡಲು ಹೊರಟಂತಿದೆ.
ಸರ್ಕಾರ ಇಂತಹ ಪ್ರಜಾತಂತ್ರ ವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಪ್ರತಿಭಟನೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುವಂತಿದೆ.
ಸಾಂತ್ವನ ಹೇಳುವ ಹಕ್ಕಿಲ್ಲವೇ?
ಸರ್ಕಾರಕ್ಕೆ ಎಷ್ಟು ಜವಾಬ್ದಾರಿ ಇರುತ್ತದೋ ಪ್ರತಿಪಕ್ಷಕ್ಕೂ ಅಷ್ಟೇ ಜವಾಬ್ದಾರಿ ಇರುತ್ತದೆ, ಸಮಾಜದ ಬಗ್ಗೆ ಕಳಕಳಿಯೂ ಇರುತ್ತದೆ. ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿರುವ ಒಬ್ಬ ನಾಯಕ ಗೋಲಿಬಾರ್ ಒಂದೇ ಅಲ್ಲ, ರಾಜ್ಯದಲ್ಲಿ ಎಲ್ಲೇ ಅನಾಹುತಗಳು ನಡೆದರೂ ಅಲ್ಲಿಗೆ ಹೋಗಿ ಸಂತ್ರಸ್ತರಿಗೆ ನೆರವು ಹೇಳುವುದು ಅವರ ಆದ್ಯ ಕರ್ತವ್ಯವಾಗಿರುತ್ತದೆ ಮತ್ತು ಮಾನವೀಯ ಅಂಶವೂ ಆಗಿರುತ್ತದೆ.
ಮಂಗಳೂರಿನಲ್ಲಿ ನಡೆದ ಗೋಲಿಬಾರ್ ನಲ್ಲಿ ಸಾವಿಗೀಡಾದ ಯುವಕರ ಕುಟುಂಬಕ್ಕೆ ಸಾಂತ್ವನ ಹೇಳಲು ಸಿದ್ದರಾಮಯ್ಯ ಅಲ್ಲಿಗೆ ಹೋಗುವ ನಿರ್ಧಾರ ಮಾಡಿದ್ದರು. ಸಾವಿನ ಮನೆಗೆ ಹೋದರೆ ಅದು ಅಶಾಂತಿಗೆ ಹೇಗೆ ಕಾರಣವಾಗುತ್ತದೆ?
ಇದೇ ಪ್ರಶ್ನೆಯನ್ನು ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಕೇಳಿದ್ದಾರೆ. ಗಲಭೆ ಪೀಡಿತ ಮಂಗಳೂರಿಗೆ ಹೋಗುವುದನ್ನು ಕೇವಲ ಪ್ರತಿಪಕ್ಷದ ನಾಯಕರಿಗೆ ನಿರ್ಬಂಧಿಸಲಾಗಿದೆ. ನಾವೇನೂ ಅಲ್ಲಿ ಗಲಭೆ ಸೃಷ್ಟಿಸಲು ಹೋಗುತ್ತಿದ್ದೇವೆಯೇ? ಸಾವಿನ ಮನೆಗಳಿಗೆ ಹೋಗಿ ಬದುಕಿಗೆ ಆಸರೆಯಾಗಿದ್ದ ಸದಸ್ಯನನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಸಾಂತ್ವನ ಹೇಳಲು ಮಂಗಳೂರಿಗೆ ಹೋಗಲು ನಿರ್ಧರಿಸಿದ್ದೆವು. ಆದರೆ, ಈ ಜನವಿರೋಧಿ ಸರ್ಕಾರವು ನಮಗೆ ಅದಕ್ಕೂ ಅವಕಾಶವನ್ನು ನೀಡಲಿಲ್ಲ. ಸಾವಿನ ಮನೆಯಲ್ಲೂ ಬಿಜೆಪಿ ರಾಜಕಾರಣ ಮಾಡಲು ಹೊರಟಿದೆ. ಬಿಜೆಪಿ ಸರ್ಕಾರದ ಈ ನಿರ್ಧಾರ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಟಿ ಬೀಸಿರುವ ನ್ಯಾಯಾಲಯ
ಇನ್ನು ರಾಜ್ಯ ಸರ್ಕಾರದ ಪ್ರಜಾತಂತ್ರ ವಿರೋಧಿ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ. ನ್ಯಾಯಾಲಯ ಕೂಡ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದೆ.
ಪೌರತ್ವ ತಿದ್ದುಪಡಿ ಕಾನೂನಿನ ಜಾರಿ ಮಾತುಗಳು ಕೇಳಿ ಬರುತ್ತಿದ್ದಂತೆಯೇ ರಾಜ್ಯದಲ್ಲಿ ಹಲವಾರು ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಇದನ್ನು ಹತ್ತಿಕ್ಕಲು ರಾಜ್ಯ ಬಿಜೆಪಿ ಸರ್ಕಾರ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿತ್ತು.
ಇದಕ್ಕೆ ಸರ್ಕಾರ ಕೊಟ್ಟ ಕಾರಣ:- ಪ್ರತಿಭಟನೆ ವೇಳೆ ಅಹಿತಕರ ಘಟನೆಗಳು ನಡೆಯಬಹುದು. ಈ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಬಗ್ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ಪ್ರತಿಯೊಂದು ಪ್ರತಿಭಟನೆಗಳು ಹಿಂಸಾತ್ಮಕವಾಗಿರುತ್ತವೆ ಎಂದು ಊಹೆ ಮಾಡಲು ಸಾಧ್ಯವೇ? ಈ ಊಹೆಯ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೇಗೆ ಸಾಧ್ಯ? ಸರ್ಕಾರದ ನಿರ್ಧಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಬಾರದೇ? ಎಂದು ಪ್ರಶ್ನಿಸಿದೆ.