
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜುಲೈ 29 ರ ಸಂಜೆ ಐದು ಗಂಟೆಗೆ ಹೊರಡಿಸಿದ ಕರೋನಾ ಸೋಂಕಿನ ಅಂಕಿ ಅಂಶದ ಪ್ರಕಾರ ಕಳೆದ 24 ಗಂಟೆಗಳಲ್ಲಿ 5,503 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ಒಟ್ಟು ಕರೋನಾ ಸೋಂಕಿತರ ಸಂಖ್ಯೆ 1,12,504 ಕ್ಕೇರಿದೆ. ಇದುವರೆಗೂ ರಾಜ್ಯದಲ್ಲಿ 42,901 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ರಾಜ್ಯದಲ್ಲಿ ಸಕ್ರಿಯವಾಗಿರುವ 67,448 ಪ್ರಕರಣಗಳಲ್ಲಿ, ಆರೋಗ್ಯ ಸ್ಥಿತಿ ಗಂಭೀರವಾಗಿರುವ 639 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ಇಂದು ರಾಜ್ಯದಲ್ಲಿ ಕರೋನಾ ಸೋಂಕಿನಿಂದಾಗಿ 92 ಮಂದಿ ಇಂದು ಅಸುನೀಗಿದ್ದಾರೆಂದು ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. ರಾಜ್ಯದಲ್ಲಿ ಇದುವರೆಗೂ ಕರೋನಾ ಸೋಂಕಿನಿಂದಾಗಿ 2,147 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರು ನಗರದಲ್ಲಿ ಕರೋನಾ ಹರಡುವಿಕೆಯ ವೇಗದಲ್ಲಿ ತೀವ್ರವಾಗಿ ಹೆಚ್ಚಿದ್ದು ದಿನವೊಂದಕ್ಕೆ 2 ಸಾವಿರಕ್ಕಿಂತಲೂ ಅಧಿಕ ಪ್ರಕರಣ ಪತ್ತೆಯಾಗುತ್ತಿದೆ. ನಗರದಲ್ಲಿ 2,270 ಹೊಸ ಕರೋನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಧೃಡಪಟ್ಟ ಪ್ರಕರಣಗಳ ಸಂಖ್ಯೆ 51,091 ತಲುಪಿದೆ. ಚೇತರಿಕೆಯ ಪ್ರಮಾಣ ತೀರಾ ಕಡಿಮೆಯಿದ್ದು, ಇದುವರೆಗೂ ಕೇವಲ 13,879 ಮಂದಿಯಷ್ಟೇ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೂ ನಗರವೊಂದರಲ್ಲೇ 987 ಮಂದಿ ಸೋಂಕಿತರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಕಳೆದ 24 ತಾಸುಗಳಲ್ಲಿ 48,513 ಹೊಸ ಕರೋನಾ ಪ್ರಕರಣಗಳು ದೇಶದಲ್ಲಿ ಕಂಡುಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 15,31,669 ತಲುಪಿದೆ. ಇದುವರೆಗೂ 9,88,029 ಮಂದಿ ಕರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 5,09,447 ಸಕ್ರಿಯ ಕರೋನಾ ಪ್ರಕರಣಗಳಿವೆ. ಒಟ್ಟು ಮೃತಪಟ್ಟವರ ಸಂಖ್ಯೆ 34,193 ತಲುಪಿದೆ.







