ದೇಶದ ರಾಜಧಾನಿ ದೆಹಲಿ ವಿಧಾನಸಭೆಗೆ ಫೆಬ್ರವರಿ 8 ರಂದು ಚುನಾವಣೆ ನಡೆಯಲಿದೆ. ನಾನಾ ದೃಷ್ಟಿಕೋನದಿಂದ ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತೆ ಗೆದ್ದು ಅಧಿಕಾರಕ್ಕೆ ಬರುವುದು ಅತ್ಯಂತ ಪ್ರಮುಖವಾಗಿದೆ. ಇದಕ್ಕಿಂತ ಹೆಚ್ಚಾಗಿ ಆಮ್ ಆದ್ಮಿ ಪಾರ್ಟಿಗಿಂತ ಇಡೀ ದೇಶಕ್ಕೆ ಪ್ರಮುಖವಾಗಿದೆ. ಇದಕ್ಕೆ ಪ್ರಮುಖ ಕಾರಣ ಸಂವಿಧಾನದ ಉಳಿವಿಗಾಗಿ ಆಮ್ ಆದ್ಮಿ ಪಾರ್ಟಿ ಗೆದ್ದು ಬರಬೇಕೆಂಬ ವಿಶ್ಲೇಷಣೆಗಳು ನಡೆಯುತ್ತಿವೆ.
ದೆಹಲಿ ವಿಧಾನಸಭೆಯಲ್ಲಿ ಕೇವಲ 70 ಸೀಟುಗಳಿದ್ದು, 14 ದಶಲಕ್ಷ ಮತದಾರರಿದ್ದಾರೆ (ದೇಶದ ಒಟ್ಟು ಮತದಾರರ ಶೇ.2 ಕ್ಕಿಂತ ಕಡಿಮೆ) ಮತ್ತು ಅಷ್ಟೇ ಅಲ್ಲದೇ, ಇದೇನೂ ಪೂರ್ಣಪ್ರಮಾಣದ ರಾಜ್ಯವೂ ಅಲ್ಲ. ಇಲ್ಲಿ ಎಲ್ಲಾ ದೇಶಗಳ ರಾಯಭಾರ ಕಚೇರಿಗಳಿದ್ದು, ಎಲ್ಲಾ ಮಾಧ್ಯಮಗಳ ಕಚೇರಿಗಳು ಇರುವುದರಿಂದ ಮಾಧ್ಯಮದ ಹಬ್ ಎನಿಸಿದೆ. ಇಲ್ಲಿನ ನಿವಾಸಿಗಳು ಭಾರತೀಯ ರಾಜಕಾರಣ, ಐಡಿಯಾಲಜಿಗಳು, ಅಭಿಪ್ರಾಯಗಳು, ಧರ್ಮಗಳು, ಪ್ರಾದೇಶಿಕತೆ, ಜಾತಿಗಳು ಸೇರಿದಂತೆ ಇನ್ನಿತರೆ ವಿಚಾರಗಳ ಪ್ರತಿನಿಧಿಗಳಂತಾಗಿದ್ದಾರೆ. ಚುಟುಕಾಗಿ ಹೇಳಬೇಕೆಂದರೆ ಭಾರತದ ನಾಡಿಮಿಡಿತ ಈ ದೆಹಲಿಯಾಗಿದೆ. ಈ ಕಾರಣಕ್ಕಾಗಿಯೇ ಇಲ್ಲಿನ ವಿಧಾನಸಭೆ ಚುನಾವಣೆ ಇಡೀ ವಿಶ್ವದ ಗಮನ ಸೆಳೆಯುತ್ತದೆ ಮತ್ತು ಇದು ದೇಶದ ರಾಜಕಾರಣದ ಮಾಪಕವೆನಿಸಿದೆ.
ಆದರೆ, ಈ ಮಾಪಕವು ಕ್ಷಿಪ್ರಗತಿಯಲ್ಲಿ ಕೆಳಗಿಳಿಯುತ್ತಿದೆ ಎಂದು ಕಾಣಿಸುತ್ತಿದೆ. ದೇಶವು ಹಲವಾರು ವಿವಾದಗಳು, ಆರ್ಥಿಕ ಕುಸಿತ, ಪ್ರತಿಭಟನೆಗಳಲ್ಲಿ ಸಿಲುಕಿ ನಲುಗಿ ಹೋಗುತ್ತಿದೆ. ಉದಾಹರಣೆಗೆ ಕಾಶ್ಮೀರ ವಿಚಾರ, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕರ ನೋಂದಣಿ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ, ವಿಶ್ವವಿದ್ಯಾಲಯಗಳಲ್ಲಿನ ಹಿಂಸಾಚಾರ ಪ್ರಕರಣಗಳು, ಪೊಲೀಸ್ ದೌರ್ಜನ್ಯಗಳು ಮತ್ತು ವಿದ್ಯಾರ್ಥಿಗಳ ಸಂಘಟನೆಗಳ ಪ್ರತಿಭಟನೆಗಳು… ಹೀಗೆ ದೇಶಾದ್ಯಂತ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ.
ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಸಂಭವಿಸುತ್ತಿರುವ ಅಶಾಂತಿಯನ್ನು ಒಪ್ಪಿಕೊಳ್ಳಲು ತಯಾರಿಲ್ಲ ಅಥವಾ ಜನಪರವಾದ ನಿಲುವುಗಳನ್ನು ತೆಗೆದುಕೊಳ್ಳಲು ಸಿದ್ಧವಿಲ್ಲ. ಇವರ ಆಡಳಿತ ಒಂದು ರೀತಿಯಲ್ಲಿ ಕುರುಡಾಗಿ ಸುರಂಗ ಕೊರೆಯುವ ಯಂತ್ರದಂತೆ ಕಾಣುತ್ತಿದೆ ಮತ್ತು ಇದಕ್ಕೆ ಹಿಮ್ಮುಖವಾಗಿ ಚಲಿಸಲು ಸಾಧ್ಯವೇ ಆಗುತ್ತಿಲ್ಲ. ಕೇವಲ ಸುಳ್ಳುಗಳನ್ನು, ಅರ್ಧ ಸತ್ಯಗಳನ್ನು ಸಮರ್ಥಿಸಿಕೊಳ್ಳುವುದರಲ್ಲಿ ಮತ್ತು ಪ್ರತಿಯೊಂದು ವಿಚಾರಕ್ಕೂ ಪ್ರತಿಪಕ್ಷಗಳಿಗೆ ದೇಶ ವಿರೋಧಿ ಹಣೆ ಪಟ್ಟಿ ಕಟ್ಟುವುದರಲ್ಲೇ ಮಗ್ನವಾಗಿದೆ. ಸಂಸತ್ತಿನಲ್ಲಿ ತನಗಿರುವ ಬಹುಮತವನ್ನು ಬಳಸಿಕೊಂಡು ರಾಜ್ಯ ಸರ್ಕಾರಗಳ ಮೇಲೆ ಸವಾರಿ ಮಾಡುವುದನ್ನು ಕರಗತ ಮಾಡಿಕೊಂಡಿದೆ. ಈ ಮೂಲಕ ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುವಂತೆ ರಾಜ್ಯಗಳ ಮೇಲೆ ಒತ್ತಡ ಹೇರುತ್ತಿದೆ.
ಭಾರತೀಯ ಜನತಾ ಪಕ್ಷಕ್ಕೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದೆ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಸೋಲಿನ ಸೇಡನ್ನು ಪ್ರತಿಕಾರವಾಗಿ ತೀರಿಸಿಕೊಳ್ಳುವತ್ತ ಗಮನಹರಿಸಿದೆ. ಹೀಗಾಗಿ ದೇಶದೆಲ್ಲೆಡೆ ಅಶಾಂತಿಯ ವಾತಾವರಣ ನಿರ್ಮಾಣಕ್ಕೆ ಕಾರಣವಾಗುತ್ತಿದೆ.
ಈ ಚುನಾವಣೆಗಳ ಬೆನ್ನಲ್ಲೇ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಗೆದ್ದು ಅಧಿಕಾರವನ್ನು ಉಳಿಸಿಕೊಳ್ಳಬೇಕೆಂಬ ಇರಾದೆಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಇದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ದೆಹಲಿ ಚುನಾವಣೆ ಕೇಜ್ರಿವಾಲ್ ಅವರ ಸಾಧನೆಗಿಂತ ನರೇಂದ್ರ ಮೋದಿಯವರ ದುರಾಡಳಿತ ಮತ್ತು ಜನವಿರೋಧಿ ನೀತಿಗಳಿಗೆ ಜನಾದೇಶವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ನೇತೃತ್ವದ ಪಕ್ಷ ಯಾವುದೇ ತಪ್ಪು ಹೆಜ್ಜೆ ಇಡದೇ ಗೆದ್ದು ಬರಬೇಕಿದೆ. ಈ ಚುನಾವಣೆಯ ಫಲಿತಾಂಶವು ನಮ್ಮ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ನಾಂದಿ ಹಾಡಲಿದೆ.
ವಿವಾದಿತ ಸಿಎಎ-ಎನ್ಆರ್ ಸಿ-ಎನ್ಆರ್ ಪಿ ಗಳು ದೇಶದಲ್ಲಿ ಕಾರ್ಮೋಡದಂತೆ ಬಂದೆರಗಿವೆ. ಇದು ದೇಶದ ನಾಗರಿಕರನ್ನು ವಿಚಲಿತರನ್ನಾಗಿ ಮಾಡುತ್ತಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಜೆಎನ್ ಯು ವಿಶ್ವವಿದ್ಯಾಲಯ, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ, ಮೀರತ್, ಬಿಜ್ನೋರ್, ಮುಜಾಫರ್ ನಗರ, ಬೆಂಗಳೂರು, ಮಂಗಳೂರಿನಲ್ಲಿ ನಡೆದಿರುವ ಪೊಲೀಸ್ ದೌರ್ಜನ್ಯಗಳು ಜನತೆಯನ್ನು ಕಂಗೆಡಿಸಿದೆ. ಈ ಎಲ್ಲಾ ಘಟನೆಗಳು ದೇಶದ ಯುವ ಜನರನ್ನು ಬೀದಿಗೆ ತಂದು ಪ್ರತಿಭಟನೆಗಳನ್ನು ನಡೆಸುವಂತೆ ಮಾಡಿದೆ. ಜೆ.ಪಿ. ನಾರಾಯಣ ಅವರ ಚಳವಳಿ ನಂತರ ನಡೆಯುತ್ತಿರುವ ಮೊದಲ ಅತಿದೊಡ್ಡ ಚಳವಳಿ ಇದು ಎಂದು ಭಾಸವಾಗುತ್ತಿದೆ.
ಮೋದಿ ಮತ್ತು ಅಮಿತ್ ಶಾ ಜೋಡಿ ಸರ್ವಾಧಿಕಾರ ಧೋರಣೆಯನ್ನು ಹೊಂದುವ ಮೂಲಕ ಸ್ವಾಯತ್ತ ಸಂಸ್ಥೆಗಳ ಅಸ್ತಿತ್ವಕ್ಕೇ ಮಾರಕವಾಗುವಂತೆ ವರ್ತಿಸುತ್ತಿದ್ದಾರೆ. ಮತದಾರರನ್ನು ಅವರು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಲ್ಲಿ ತಪ್ಪಿದೆ ಎಂಬುದನ್ನು ಒಪ್ಪಲು ತಯಾರಿಲ್ಲ. ಅವರನ್ನು ಯಾವ ನ್ಯಾಯಾಂಗವೂ ಲೆಕ್ಕಕ್ಕಿಲ್ಲ, ಯಾವುದೇ ಅಂತಾರಾಷ್ಟ್ರೀಯ ಅಭಿಪ್ರಾಯಗಳು ಗಣನೆಗೆ ಇಲ್ಲವೇ ಇಲ್ಲ, ಹಿಂಸಾಚಾರದಿಂದ ಅಮಾಯಕರು ಸಾವನ್ನಪ್ಪಿರುವ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ, ಸಂಸ್ಥೆಗಳ ಅವನತಿಯನ್ನು ತಪ್ಪಿಸುವುದು ಇವರಿಗೆ ಬೇಕಾಗಿಯೇ ಇಲ್ಲ. ಆದರೆ, ದೆಹಲಿಯ ಚುನಾವಣೆ ಫಲಿತಾಂಶಗಳು ಅವರ ದೌರ್ಜನ್ಯಕ್ಕೆ ಕಡಿವಾಣ ಹಾಕಬಲ್ಲವು. ಈ ಫಲಿತಾಂಶವು ರಾಜ್ಯಗಳಿಗೆ ಬಿಜೆಪಿಯ ದುರಾಡಳಿತ ಮತ್ತು ವಿನಾಶಕಾರಿ ನೀತಿಗಳನ್ನು ವಿರೋಧಿಸಲು ಧೈರ್ಯ ಕೊಟ್ಟಂತಾಗುತ್ತದೆ. ನಿತೀಶ್ ಕುಮಾರ್ ಮತ್ತು ನವೀನ್ ಪಟ್ನಾಯಕ್ ಅವರು ಬಿಜೆಪಿ ಮೈತ್ರಿಕೂಟದ ಸಂಕೋಲೆಯಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳಲು ನೆರವಾಗುತ್ತದೆ.
ಸರ್ಕಾರಕ್ಕೆ ಇಂದು ಪ್ರತಿಪಕ್ಷವಾಗಿ ಉಳಿದಿರುವುದೆಂದರೆ ನಾಗರಿಕ ಸಮಾಜ. ವಿಶೇಷವಾಗಿ ಯುವ ಸಮುದಾಯ ಮತ್ತು ವಿದ್ಯಾರ್ಥಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರು ಈ ಸಮುದಾಯಗಳನ್ನು ಒಟ್ಟುಗೂಡಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯನ್ನು ಗೆಲ್ಲಬೇಕಿದೆ. ಇದರೊಂದಿಗೆ ದೆಹಲಿಯಲ್ಲಿ ಮಾಡಿರುವ ಉತ್ತಮ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕಿದೆ. ಅದು ಉಚಿತ ವಿದ್ಯುತ್, ನೀರು, ಶಿಕ್ಷಣ, ಕೊಳಗೇರಿಗಳ ಅಭಿವೃದ್ಧಿ, ಮಹಿಳಾ ಸುರಕ್ಷತೆಯಂತಹ ಹಲವಾರು ಕಾರ್ಯಕ್ರಮಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.
ದೆಹಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ನಡೆಸಿರುವ ಪೈಶಾಚಿಕ ಕೃತ್ಯಗಳನ್ನು ಜನರೆದುರು ಇಡಬೇಕು. ಈ ಮೂಲಕ ರಾಜ್ಯಮಟ್ಟದಲ್ಲಿ ವಿಭಿನ್ನವಾದ ಪಕ್ಷ ತಮ್ಮದು ಎಂದು ಪ್ರತಿಪಾದಿಸಬೇಕು. ಅಲ್ಲದೇ, ಕೇಂದ್ರ ಸರ್ಕಾರದ ಗೃಹ ಇಲಾಖೆ ಪೊಲೀಸರ ಮೂಲಕ ನಡೆಸುತ್ತಿರುವ ದೌರ್ಜನ್ಯ, ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸೇರಿದಂತೆ ಹಲವಾರು ವಿಚಾರಗಳನ್ನು ಜನತೆಯ ಮುಂದಿಡಬೇಕು.
ಎನ್ಆರ್ ಸಿ ಮತ್ತು ಎನ್ ಪಿಆರ್ ವಿರೋಧವನ್ನು ಮುಂದುವರಿಸಬೇಕು. ಏಕೆಂದರೆ, ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮಬಂಗಾಳದಿಂದ ಹಲವು ವರ್ಷಗಳ ಹಿಂದೆಯೇ ತಮ್ಮ ಗ್ರಾಮಗಳನ್ನು ತೊರೆದು ಲಕ್ಷಾಂತರ ಜನರು ದೆಹಲಿಗೆ ಬಂದು ನೆಲೆಸಿದ್ದಾರೆ. ಈಗ ಅವರು ತಮಗೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕೆಂದು ಹೇಳಿದರೆ ಪರಿತಪಿಸಬೇಕಾಗುತ್ತದೆ. ಎನ್ಆರ್ ಸಿ ಈಗ ಹಿಂದೂ –ಮುಸ್ಲಿಂ ವಿಚಾರವಾಗಿ ಉಳಿದಿಲ್ಲ. ಲಕ್ಷಾಂತರ ಹಿಂದೂಗಳ ಸಹ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಇಂತಹ ವಿಚಾರಗಳನ್ನು ಜನತೆಯ ಮುಂದಿಡಬೇಕಾಗಿದೆ.
ಈ ಎಲ್ಲಾ ಅಂಶಗಳಿಂದಾಗಿ ದೇಶದ ಉನ್ನತಿ ಮತ್ತು ಶಾಂತಿಗಾಗಿ ರಾಜಧಾನಿ ದೆಹಲಿಯಲ್ಲಿ ಬಿಜೆಪಿಗಿಂತ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾಗಿದೆ. ಈ ಮೂಲಕ ಭಾರತದ ಭವಿಷ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎಂಬುದನ್ನು ತೋರಿಸಿಕೊಡಬೇಕಾಗಿದೆ.
ಕೃಪೆ: ದಿ ವೈರ್