ಬ್ರಿಟನ್ ರಾಜಕಾರಣದಲ್ಲಿ ಉಗ್ರ ಸಂಘಟನೆಯೊಂದು ಹಿಂಬಾಗಿಲ ಪ್ರವೇಶಕ್ಕೆ ಯತ್ನಿಸುತ್ತಿದೆಯೇ ಎಂಬ ಜಿಜ್ಞಾಸೆ ಆರಂಭವಾಗಿದೆ. ಇದಕ್ಕೆ ಪೂರಕವಂತೆ ಇತ್ತೀಚೆಗೆ ಲಂಡನ್ ಬ್ರಿಜ್ ಮೇಲೆ ನಡೆದ ಚಾಕು ಇರಿತ ಪ್ರಕರಣ ಆತಂಕ ಇಮ್ಮಡಿಯಾಗಲು ಕಾರಣವಾಗಿದೆ. ಮೊದಲಿಗೆ ಡಿಸೆಂಬರ್ 12ರಂದು ಬ್ರಿಟನ್ ಚುನಾವಣೆ ನಡೆಯುತ್ತಿರುವುದು ಯುರೋಪ್ ಒಕ್ಕೂಟದಿಂದ (ಬ್ರೆಕ್ಸಿಟ್) ಹೊರಬರುವ ಪ್ರಮುಖ ಉದ್ದೇಶದ ಪರ ಮತ್ತು ವಿರುದ್ಧ ಎಂಬುದು ಗಮನಾರ್ಹ.
ಇದರ ಮಧ್ಯೆ, ಜಗತ್ಪ್ರಸಿದ್ಧ ಲಂಡನ್ ಬ್ರಿಜ್ ಮೇಲೆ ಇತ್ತೀಚೆಗೆ ಪಾಕಿಸ್ತಾನ ಮೂಲದ ಯುವಕ ಉಸ್ಮಾನ್ ಖಾನ್ ಎಂಬಾತ ಸಾರ್ವಜನಿಕರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ. ಈ ಪ್ರಕರಣದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದರು. ಪೊಲೀಸರ ಗುಂಡಿಗೆ ಬಲಿಯಾದ ಆರೋಪಿ ಉಸ್ಮಾನ್ ಖಾನ್, ಪಾಕಿಸ್ತಾನ ಮೂಲದ ಯುವಕ ಎಂದು ವರದಿ ಮಾಡಿದ ಪಾಕ್ ನ ‘ಡಾನ್’ ಪತ್ರಿಕೆಯ ವಿರುದ್ಧ ಇಸ್ಲಾಮಾಬಾದ್ ನಲ್ಲಿ ಪ್ರತಿಭಟನೆಗಳು ನಡೆದಿದ್ದು, ಪತ್ರಿಕೆಯ ಕಾರ್ಯಕ್ಕೆ ಅಡ್ಡಿಪಡಿಸಲಾಗಿದೆ.
ಉಸ್ಮಾನ್ ಖಾನ್ 2008ರಲ್ಲಿ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ದಾಳಿಯಲ್ಲಿ ಬಂಧಿತನಾಗಿ 2018ರಲ್ಲಿ ಬಿಡುಗಡೆಯಾಗಿದ್ದ. ಈತ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದ ಮೂಲ ನಿವಾಸಿ ಎಂಬುದು ಸ್ಪಷ್ಟವಾಗಿದ್ದು, ರಕ್ತಪಾತ ಮತ್ತು ಮತಾಂದತೆಯೇ ತನ್ನ ಸಿದ್ಧಾಂತ ಎಂದು ಕರೆದುಕೊಂಡಿರುವ ಅಲ್ ಖೈದಾ ವಿಚಾರಧಾರೆಯ ಮೇಲೆ ವ್ಯಾಮೋಹ ಹೊಂದಿದ್ದ ಎಂಬುದು ಬಹಿರಂಗವಾಗಿದೆ.
ಇದರ ಬೆನ್ನಿಗೆ ಲಂಡನ್ ನ ಲ್ಯಾಂಬೆತ್ ನಗರದ ಮೇಯರ್ ಆಗಿದ್ದ ಕರ್ನಾಟಕದ ಕಲಬುರ್ಗಿ ಮೂಲದ ಡಾ. ನೀರಜ್ ಪಾಟೀಲ್ ಅವರು ಬ್ರಿಟನ್ ರಾಜಕೀಯದಲ್ಲಿ ಉಗ್ರ ಸಂಘಟನೆ ಮೆಲುಗೈ ಸಾಧಿಸಲು ಯತ್ನಿಸುತ್ತಿದೆ ಎಂದು ತಮ್ಮ ಪಕ್ಷವಾದ ಲೇಬರ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಕಾಶ್ಮೀರಿ ವಲಸಿಗರ ಪರವಾಗಿ ಒತ್ತಡ ಗುಂಪಾಗಿ ಕೆಲಸ ಮಾಡುತ್ತಿದ್ದ ಜಮ್ಮು-ಕಾಶ್ಮೀರ್ ಲಿಬರೇಷನ್ ಫ್ರಂಟ್ ನ (JKLF) ಲಂಡನ್ ವಿಭಾಗವು ದಶಕಗಳಿಂದ ಬ್ರಿಟನ್ ರಾಜಕಾರಣದಲ್ಲಿ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿದೆ. ಬ್ರಿಟನ್ ನ ಮ್ಯಾಂಚೆಸ್ಟರ್ ಹಾಗೂ ಬರ್ಮಿಂಗ್ ಹ್ಯಾಮ್ ನಲ್ಲಿ ಪ್ರಾಬಲ್ಯ ಹೊಂದಿರುವ ಜೆಕೆಎಲ್ ಎಫ್ ಲೇಬರ್ ಪಕ್ಷಕ್ಕೆ ಬೆಂಬಲ ವ್ಯಕ್ತಿಪಡಿಸಿರುವ ಪತ್ರವನ್ನು ಆ ಪಕ್ಷವು ತನ್ನ ಅಧಿಕೃತ ಫೇಸದ ಬುಕ್ ಪೇಜ್ ನಲ್ಲಿ ಪ್ರಕಟಿಸಿದೆ. ಇದಕ್ಕೆ ನೀರಜ್ ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಕಾಶ್ಮೀರಿ ಪಂಡಿತರು ಕಣಿವೆ ರಾಜ್ಯ ತೊರೆಯಲು ಕಾರಣವಾದ, ಭಾರತದಲ್ಲಿ ಹಲವಾರು ಸಮಾಜ ದ್ರೋಹಿ ಕೃತ್ಯಗಳಲ್ಲಿ ಭಾಗಿಯಾಗಿ ಅಧಿಕೃತವಾಗಿ ಉಗ್ರ ಸಂಘಟನೆ ಎಂಬ ಹಣೆಪಟ್ಟಿ ಹಾಕಿಕೊಂಡಿರುವ ಜೆಕೆಎಲ್ ಎಫ್ ಬೆಂಬಲವನ್ನು ಮತಕ್ಕಾಗಿ ಲೇಬರ್ ಪಕ್ಷ ಪಡೆದುಕೊಳ್ಳುತ್ತಿರುವುದು ಸರಿಯಲ್ಲ” ಎಂದು ನೀರಜ್ ಪಾಟೀಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಮೀರ್ ಪುರದಲ್ಲಿ ಹುಟ್ಟು ಪಡೆದ ಜೆಕೆಎಲ್ ಎಫ್ ದಶಕಗಳಿಂದ ಜಮ್ಮು ಕಾಶ್ಮೀರದಲ್ಲಿ ಸಕ್ರಿಯವಾಗಿದೆ. ಭಾರತ ಸರ್ಕಾರವು ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಮಾನ್ಯತೆಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಲವು ರಾಜಕೀಯ ಹಾಗೂ ವಿವಿಧ ಸಂಘಟನೆಗಳ ನಾಯಕರನ್ನು ಗೃಹ ಬಂಧನದಲ್ಲಿಟ್ಟಿದೆ. ಈ ಪೈಕಿ ಜೆಕೆಎಲ್ ಎಫ್ ಮುಖ್ಯಸ್ಥ ಯಾಸೀನ್ ಮಲಿಕ್ ಸಹ ಒಬ್ಬ. 1984ರಲ್ಲಿ ಬರ್ಮಿಂಗ್ ಹ್ಯಾಮ್ ನ ಮನೆಯಲ್ಲಿದ್ದ ಭಾರತೀಯ ರಾಯಭಾರಿ ರವೀಂದ್ರ ಮತ್ರೆ ಅವರನ್ನು ಅಪಹರಿಸಿ, ಕೊಲೆಗೈಯ್ಯುವುದರೊಂದಿಗೆ ಜೆಕೆಎಲ್ ಎಫ್ ಜಗತ್ತಿಗೆ ಪರಿಚಯವಾಗಿತ್ತು. ತನ್ನ ಸಂಘಟನೆಯ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್, ಮಕ್ಬೂಲ್ ಭಟ್ ಎಂಬ ಉಗ್ರರನ್ನು ಬಿಡುಗಡೆಗೊಳಿಸಿದರೆ ರವೀಂದ್ರ ಅವರನ್ನು ಸ್ವತಂತ್ರಗೊಳಿಸುವುದಾಗಿ ಜೆಕೆಎಲ್ ಎಫ್ ಷರತ್ತು ವಿಧಿಸಿತ್ತು ಎಂಬುದನ್ನು ನೆನೆಪಿಸಿಕೊಳ್ಳಬಹುದು.
ಜೆಕೆಎಲ್ ಎಫ್ ಹಾಗೂ ಪಾಕಿಸ್ತಾನ ಮೂಲದ ರಾಜಕಾರಣಿಗಳಿಗೆ ಪಾಕಿಸ್ತಾನ ರಾಯಭಾರಿ ಕಚೇರಿ ಎಲ್ಲಾ ರೀತಿಯ ಬೆಂಬಲ ನೀಡುತ್ತದೆ ಎಂಬುದು ಗುಪ್ತವಾಗಿ ಉಳಿದಿಲ್ಲ. ಇದಕ್ಕೆ ವಿರುದ್ಧವಾಗಿ ಮೊದಲನಿಂದಲೂ ಭಾರತೀಯ ರಾಯಭಾರಿ ಕಚೇರಿ ಅಥವಾ ಅನಿವಾಸಿ ಭಾರತೀಯರು ತಮ್ಮ ಕರ್ತವ್ಯ ಮತ್ತು ಕುಟುಂಬ ವರ್ಗಕ್ಕೆ ಸೀಮಿತವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ.