ಬ್ಯಾಂಕುಗಳಲ್ಲಿ ನೀವು ಇಟ್ಟ ಠೇವಣಿಗಳಿಗೆ ಎಷ್ಟು ಸುರಕ್ಷತೆ ಇದೆ? ಒಂದು ವೇಳೆ ನೀವು ಠೇವಣಿ ಇಟ್ಟ ಬ್ಯಾಂಕು ದಿವಾಳಿಯಾದರೆ ಅಥವಾ ವಿಫಲವಾದರೆ ಅಥವಾ ಭಾರಿ ಭ್ರಷ್ಚಾಚಾರ ನಡೆಸಿ ಮುಚ್ಚಿಹೋದರೆ ನೀವಿಟ್ಟ ಅಷ್ಟೂ ಠೇವಣಿ ಸುರಕ್ಷಿತಾಗಿರುತ್ತದಾ?
ಹೌದು ಸುರಕ್ಷಿತವಾಗಿರುತ್ತದೆ ಎಂದೇ ಎಲ್ಲಾ ಭಾವಿಸಿದ್ದಾರೆ. ಆದರೆ ವಾಸ್ತವವಾಗಿ ಗ್ರಾಹಕರು ಇಟ್ಟ ಎಲ್ಲಾ ಠೇವಣಿಯು ಸುರಕ್ಷಿತವಾಗಿರುವುದಿಲ್ಲ. ದಿವಾಳಿ, ವೈಫಲ್ಯ ಮತ್ತು ಭಾರಿ ಭ್ರಷ್ಚಾಚಾರದಿಂದ ಮುಚ್ಚಿಹೋದ ಸಂದರ್ಭದಲ್ಲಿ ಖಾಸಗಿ ಬ್ಯಾಂಕುಗಳಿರಲಿ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿಟ್ಟ ಪೂರ್ಣ ಠೇವಣಿ ಸುರಕ್ಷಿತವಾಗಿರುವುದಿಲ್ಲ.
ಸರಳವಾಗಿ ಹೇಳಬೇಕೆಂದರೆ ನೀವು ಕೋಟಿ ರುಪಾಯಿ ಠೇವಣಿ ಇಟ್ಟರೂ ಮೇಲ್ಕಂಡ ಸಂದರ್ಭ ಬಂದಾಗ ಕೇವಲ ಒಂದು ಲಕ್ಷ ರುಪಾಯಿ ಮಾತ್ರ ಸುರಕ್ಷಿತವಾಗಿರುತ್ತದೆ. ಉಳಿದದ್ದಕ್ಕೆ ಸುರಕ್ಷತೆ ಇಲ್ಲ.
ಬ್ಯಾಂಕುಗಳಲ್ಲಿ ನೀವು ಇಟ್ಟ ಠೇವಣಿಯ ಮೇಲೆ ಬ್ಯಾಂಕುಗಳು ವಿಮೆ ಮಾಡಿಸಿರುತ್ತವೆ. ಆದರೆ, ಆ ವಿಮಾ ಮೊತ್ತವು ಕೇವಲ ಒಂದು ಲಕ್ಷ ರುಪಾಯಿ ಮಿತಿಗೆ ಒಳಪಟ್ಟಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಪೂರ್ಣ ಒಡೆತನದಲ್ಲಿರುವ ಅದರ ಅಂಗ ಸಂಸ್ಥೆ ‘ಡಿಪಾಸಿಟ್ ಇನ್ಸುರೆನ್ಸ್ ಅಂಡ್ ಕ್ರೆಡಿಟ್ ಗ್ಯಾಂರಂಟಿ ಕಾರ್ಪೋರೆಷನ್’ (DICGC) ಬ್ಯಾಂಕುಗಳಲ್ಲಿನ ಠೇವಣಿಗಳಿಗೆ ವಿಮಾ ಸುರಕ್ಷೆ ಒದಗಿಸುತ್ತದೆ. ಇದು ನೀವು ಬ್ಯಾಂಕಿನಲ್ಲಿಟ್ಟ ಉಳಿತಾಯ ಖಾತೆ, ಚಾಲ್ತಿ ಖಾತೆ, ಸ್ಥಿರಖಾತೆ ಸೇರಿದಂತೆ ಯಾವುದೇ ಖಾತೆಯಲ್ಲಿಟ್ಟ ಠೇವಣಿಗೆ ಒಟ್ಟು 1 ಲಕ್ಷ ರುಪಾಯಿಗೆ ಮಾತ್ರ ವಿಮಾ ಸುರಕ್ಷತೆ ಲಭ್ಯವಾಗುತ್ತದೆ. ಉಳಿದ ಮೊತ್ತಕ್ಕೆ ವಿಮಾ ಸುರಕ್ಷತೆ ಇಲ್ಲ. ಅದರರ್ಥ, ಮೇಲಿನ ಸಂದರ್ಭ ಬಂದಾಗ ನಿಮಗೆ ದಕ್ಕಬಹುದಾದ ಮೊತ್ತ ನೀವು ಕೋಟಿ ಇಟ್ಟರೂ ಒಂದೇ ಲಕ್ಷ ರುಪಾಯಿ ಮಾತ್ರ.
ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್ ಹಗರಣದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಡಿಐಸಿಜಿಸಿ ಯಿಂದ ಪಡೆದ ಮಾಹಿತಿಯಲ್ಲಿ ಈ ಮಹತ್ವದ ಅಂಶ ಬಯಲಾಗಿದೆ. ಪಿಟಿಐ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿದ ಮನಿಕಂಟ್ರೋಲ್ ಡಾಟ್ಕಾಮ್ ಪ್ರಕಟಿಸಿರುವ ವರದಿ ಪ್ರಕಾರ, “ಡಿಐಸಿಜಿಸಿ ಕಾಯ್ದೆ, 1961 ರ ಸೆಕ್ಷನ್ 16 (1) ರಂತೆ, ಬ್ಯಾಂಕ್ ವಿಫಲವಾದರೆ/ ದಿವಾಳಿಯಾಗಿದ್ದರೆ, ಡಿಐಜಿಸಿಸಿ ಪ್ರತಿ ಠೇವಣಿದಾರರಿಗೆ ಲಿಕ್ವಿಡೇಟರ್ ಮೂಲಕ ಠೇವಣಿ ಪಾವತಿಸಲು ಹೊಣೆಗಾರನಾಗಿರುತ್ತದೆ, ಆದರೆ, ಠೇವಣಿದಾರನ ಠೇವಣಿಯ ಮೊತ್ತವು ಒಟ್ಟಿಗೆ ತೆಗೆದುಕೊಂಡ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಒಂದೇ ಹಕ್ಕು ಮತ್ತು ಒಂದೇ ಸಾಮರ್ಥ್ಯದಲ್ಲಿ ಅವನು ಹೊಂದಿರುವ ಅಸಲು ಮತ್ತು ಬಡ್ಡಿ ಮೊತ್ತಕ್ಕೆ (ಠೇವಣಿ ಒಂದು ಲಕ್ಷ ಮೀರಿದ್ದರೂ ಸಹ) ಒಂದು ಲಕ್ಷ ರುಪಾಯಿ ಮಾತ್ರ ವಿಮಾ ಸುರಕ್ಷಾ ವ್ಯಾಪ್ತಿಗೆ ಒಳಪಡುತ್ತದೆ”ಎಂದು ಡಿಐಸಿಜಿಸಿ ಸ್ಪಷ್ಟಪಡಿಸಿದೆ.
ಪಿಎಮ್‌ಸಿ ಬ್ಯಾಂಕ್ ವಂಚನೆಯ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ವಿಮೆ ಮಾಡಿಸಿದ 1 ಲಕ್ಷ ರೂ.ಗಳ ಮಿತಿಯನ್ನು ಹೆಚ್ಚಿಸಲು ಯಾವುದೇ ಪ್ರಸ್ತಾಪವಿದೆಯೇ ಅಥವಾ ಪರಿಗಣಿಸಲಾಗಿದೆಯೇ ಎಂಬ ಮಾಹಿತಿ ಹಕ್ಕುದಾರರು ಕೇಳಿರುವ ಪ್ರಶ್ನೆಗೆ, ಡಿಐಜಿಸಿಸಿ, “ನಿಗಮಕ್ಕೆ ಅಗತ್ಯವಾದ ಮಾಹಿತಿ ಇಲ್ಲ” ಎಂದಷ್ಟೇ ಹೇಳಿದೆ.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಬ್ಯಾಂಕುಗಳ ಶಾಖೆಗಳು, ಸ್ಥಳೀಯ ಪ್ರದೇಶ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸೇರಿದಂತೆ ಎಲ್ಲಾ ವಾಣಿಜ್ಯ ಬ್ಯಾಂಕುಗಳನ್ನು ನಿಗಮ ಒಳಗೊಂಡಿದೆ. ಡಿಐಜಿಸಿಸಿ ಕಾಯ್ದೆಯ ಸೆಕ್ಷನ್ 2 (ಜಿಜಿ) ಯಲ್ಲಿ ವ್ಯಾಖ್ಯಾನಿಸಲಾದ ಎಲ್ಲಾ ಅರ್ಹ ಸಹಕಾರಿ ಬ್ಯಾಂಕುಗಳು ಠೇವಣಿ ವಿಮಾ ಯೋಜನೆಯ ವ್ಯಾಪ್ತಿಗೆ ಬರುತ್ತವೆ.
“ಬ್ಯಾಂಕಿನಲ್ಲಿನ ಪ್ರತಿ ಠೇವಣಿದಾರರಿಗೆ ದಿವಾಳಿ / ಬ್ಯಾಂಕಿನ ಪರವಾನಗಿಯನ್ನು ರದ್ದುಪಡಿಸಿದ ದಿನಾಂಕ ಅಥವಾ ಸಂಯೋಜನೆ/ ವಿಲೀನ/ಪುನರ್ನಿರ್ಮಾಣದ ಯೋಜನೆ ಜಾರಿಗೆ ಬರುವ ದಿನಾಂಕದಂದು ಗರಿಷ್ಠ ಒಂದು ಲಕ್ಷ ರೂ.ವರೆಗೆ ವಿಮೆ ಮಾಡಲಾಗುವುದು” ಎಂದು ಡಿಐಜಿಸಿ ಸ್ಪಷ್ಟಪಡಿಸಿದೆ ಎಂದು ಮನಿಕಂಟ್ರೋಲ್ ಡಾಟ್ಕಾಮ್ ವರದಿ ತಿಳಿಸಿದೆ.
ಆದರೆ, ಗ್ರಾಹಕರು ಈ ಬಗ್ಗೆ ಆತಂಕ ಪಡಬೇಕಿಲ್ಲ. ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಎಷ್ಟು ಸುರಕ್ಷಿತವಾಗಿದೆ ಎಂದರೆ ಬ್ಯಾಂಕುಗಳು ದಿವಾಳಿಯಾದ ಪ್ರಕರಣಗಳು ವಿರಳಾತಿ ವಿರಳ. ಸಾರ್ವಜನಿಕ ವಲಯದ ಬ್ಯಾಂಕುಗಳ ನಿಷ್ಕ್ರಿಯ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದರೂ ಅವುಗಳ ಸುರಕ್ಷತಾ ಮಟ್ಟವು ಉತ್ತಮವಾಗಿಯೇ ಇದೆ. ಖಾಸಗಿ ವಲಯದ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಮಿತಿ ಮೀರಿದ ನಿಷ್ಕ್ರಿಯ ಸಾಲ ಮತ್ತು ಹಣದ ದುರ್ಬಳಕೆಯಿಂದಾಗಿ ವೈಫಲ್ಯವಾಗಿದ್ದರ ಹೊರತಾಗಿ ಬೇರೆ ಉದಾಹರಣೆ ಇಲ್ಲ. ಭಾರಿ ತಂತ್ರಜ್ಞಾನ ಮತ್ತು ಪ್ರಚಾರದೊಂದಿಗೆ ವಹಿವಾಟು ವಿಸ್ತರಿಸಿದ್ದ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ 2001ರಲ್ಲಿ ನಡೆದ ಭಾರಿ ಷೇರು ಮಾರುಕಟ್ಟೆ ಹಗರಣಕ್ಕೆ ಕಾರಣವಾಗಿತ್ತು. ನಂತರ ಆರ್ಬಿಐ ಈ ಬ್ಯಾಂಕಿನ ಲೈಸೆನ್ಸ್ ರದ್ದು ಪಡಿಸಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಜತೆ ವಿಲೀನಗೊಳಿಸಿತು. ಬ್ಯಾಂಕು ಪ್ರವರ್ತಕ ರಮೇಶ್ ಗಿಲಿ ಮತ್ತಿತರರನ್ನು ಆಡಳಿತ ಮಂಡಳಿಂದ ದೂರ ಇಡಲಾಯಿತು. ಆದರ ಹೊರತಾಗಿ ಬ್ಯಾಂಕುಗಳು ವೈಫಲ್ಯಗೊಂಡ ಉದಾಹರಣೆಗಳು ಇಲ್ಲ.
ಭಾರತದ ಬ್ಯಾಂಕುಗಳು ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ಹೆಚ್ಚು ಪ್ರಬಲ ಮತ್ತು ಸುರಕ್ಷಿತವಾಗಿವೆ. ಹೀಗಾಗಿ ಠೇವಣಿ ಇಟ್ಟವರು ಆತಂಕ ಪಡುವ ಅಗತ್ಯ ಇಲ್ಲ. ಆದರೆ, ನೀವು ಬ್ಯಾಂಕಿನಲ್ಲಿ ಇಟ್ಟ ಠೇವಣಿಗೆ ಎಷ್ಟು ವಿಮಾ ಸುರಕ್ಷತೆ ಇದೆ ಎಂಬುದನ್ನು ತಿಳಿದುಕೊಳ್ಳುವುದು ಠೇವಣಿದಾರರಾಗಿ ನಿಮ್ಮ ಹಕ್ಕು.