ಒಂದು ದಶಕದ ಹಿಂದಿನ ಬಳ್ಳಾರಿ ನಗರದ ಚಿತ್ರಣವನ್ನು ತೆರೆದಿಡುವ ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಡಿ.ಎಲ್.ರಮೇಶ್ ಗೋಪಾಲ್ ಅವರು, ಇಡೀ ಜಿಲ್ಲೆಯ ಆರ್ಥಿಕತೆ ಕಬ್ಬಿಣ ಅದಿರು ಗಣಿಗಾರಿಕೆ ಮೇಲೆಯೇ ನಿಂತಿತ್ತು. ದಶಕದ ಹಿಂದೆ ಅದಿರಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಈ ಅದಿರಿನಿಂದ ಜನರು ಸಾಕಷ್ಟು ಹಣ ಮಾಡಿಕೊಂಡರು. ಚೀನಾದಿಂದ ಕೇವಲ ಕಬ್ಬಿಣದ ಅದಿರಿಗೆ ಮಾತ್ರವಲ್ಲದೇ ಐರನ್ ಫೈನ್ ಗಳಿಗೂ ನಿರೀಕ್ಷೆಗೂ ಮೀರಿದ ಭಾರೀ ಬೇಡಿಕೆ ಬಂದ ಪರಿಣಾಮ ಅದಿರನ್ನು ಮಾರಿ ಇಲ್ಲಿನ ಕೆಲವು ಜನ ಶ್ರೀಮಂತರಾದರು ಎನ್ನುತ್ತಾರೆ.
ಜನರು ದುಡ್ಡು ಮಾಡಿದ್ದ ಪರಿ ಹೇಗಿತ್ತೆಂದರೆ ಸಾಮಾನ್ಯ ಜೀವನ ನಿರ್ವಹಣೆಯಲ್ಲಿ 150 ವರ್ಷಗಳವರೆಗೆ ದುಡಿಯಬೇಕಾದ ಹಣವನ್ನು ಕೇವಲ ಮೂರು ವರ್ಷದಲ್ಲಿ ದುಡಿದರು. ಇದ್ದಕ್ಕಿದ್ದಂತೆಯೇ ನಗರಕ್ಕೆ ಆರು ಹೆಲಿಕಾಪ್ಟರ್ ಗಳು ಮತ್ತು ಐದು ಗಲ್ಫ್ ಸ್ಟ್ರೀಂ ಜೆಟ್ ಗಳು ಹಾರಾಡಲು ಆರಂಭಿಸಿದವು. ನೀವು ಕಲ್ಪನೆ ಮಾಡಿಕೊಳ್ಳಿ, ಯಾವ ರೀತಿ ಪರಿಣಾಮ ಬೀರಿತ್ತು ಮತ್ತು ಹೇಗೆ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂಬುದನ್ನು ಗೋಪಾಲ್ ಆಶ್ಚರ್ಯದಿಂದಲೇ ಹೇಳುತ್ತಾರೆ.
ಗಣಿಗಾರಿಕೆ ಉಚ್ಛ್ರಾಯ ಸ್ಥಿತಿಗೆ ತಲುಪುತ್ತಿದ್ದಂತೆಯೇ ಬಳ್ಳಾರಿ ನಗರದ ಮೇಲೆ ಅನಿರೀಕ್ಷಿತವಾದ ಗಮನ ಕೇಂದ್ರೀಕರಿಸಲ್ಪಟ್ಟಿತು. ನಗರವನ್ನು ವಿಸ್ತರಣೆ ಮಾಡುವುದು ಮತ್ತು ಅನುಷ್ಠಾನಕ್ಕೆ ತರುವ ಒತ್ತಡಗಳು ಬೀಳಲಾರಂಭಿಸಿದವು. ಆಗಿನ ಪರಿಸ್ಥಿತಿ ಹೇಗಿತ್ತೆಂದರೆ ಜನರ ಕೈಲಿ ಸಾಕಷ್ಟು ದುಡ್ಡು ಹರಿದಾಡಲಾರಂಭಿಸಿತು. ಒಬ್ಬ ಸಾಮಾನ್ಯ ವ್ಯಕ್ತಿಯ ಕೈಲೂ ಕೈತುಂಬಾ ಹಣ ಇರತೊಡಗಿತು. ಉದಾಹರಣೆಗೆ:- ಅದಿರನ್ನು ಬಂದರಿಗೆ ಸಾಗಿಸುವ ಒಬ್ಬ ಟ್ರಕ್ ಡ್ರೈವರ್ ಒಂದು ಸಿಂಗಲ್ ಟ್ರಿಪ್ ವೇಳೆ 10 ರಿಂದ 20 ಸಾವಿರ ರೂಪಾಯಿ ಗಳಿಸುತ್ತಿದ್ದ. ಆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸುಮಾರು 5,000 ಟ್ರಕ್ ಗಳು ಅದಿರು ಸಾಗಿಸುವ ಕಾಯಕದಲ್ಲಿ ತೊಡಗಿದ್ದವು. ಎಲ್ಲಾ ಹೊಟೇಲ್ ಗಳು ತುಂಬಿದ್ದವು. ಬಹುತೇಕ ಎಲ್ಲಾ ಹೊಟೇಲ್ ಗಳಲ್ಲಿಯೂ ರೂಂ ಖಾಲಿ ಇಲ್ಲ ಎಂಬ ಬೋರ್ಡ್ ನೇತಾಡುವಂತಾಗಿತ್ತು.

ಸಾಕಷ್ಟು ಜನರು ಭೂಮಿ ಖರೀದಿಸಿದರು. ಇದರ ಪರಿಣಾಮ ನಗರದಲ್ಲಿನ ಭೂಮಿಯ ಬೆಲೆ ಪ್ರತಿ ಚದರಡಿಗೆ 2,500 ದಿಂದ 3000 ರೂಪಾಯಿವರೆಗೆ ಹೆಚ್ಚಿತು. ನಗರದ ಸುತ್ತ ಸುಮಾರು 32 ಸ್ಪಾಂಜ್ ಐರನ್ ಇಂಡಸ್ಟ್ರಿಗಳು ತಲೆ ಎತ್ತಿದವು. ದಿನದ ಇಪ್ಪತ್ನಾಲ್ಕು ಗಂಟೆಯೂ ಈ ಕೈಗಾರಿಕೆಗಳು ನಿರುದ್ಯೋಗಿಗಳಿಗೆ ಉದ್ಯೋಗ ಕೊಟ್ಟವು. ಆದರೆ, ಗಣಿಗಳಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತಿವೆ ಎಂಬ ಅಂಶ ಬೆಳಕಿಗೆ ಬರುತ್ತಿದ್ದಂತೆಯೇ ಸುಪ್ರೀಂಕೋರ್ಟ್ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಮೈನಿಂಗ್ ಅನ್ನು 2011 ರ ಜುಲೈನಲ್ಲಿ ಬ್ಯಾನ್ ಮಾಡುತ್ತಿದ್ದಂತೆಯೇ ಈ ಎಲ್ಲಾ ಚಟುವಟಿಕೆಗಳು ಜೋಡಿಸಿದ್ದ ಕಾರ್ಡ್ ಗಳು ಉದುರುವ ರೀತಿಯಲ್ಲಿ ಕುಸಿದು ಬಿದ್ದವು.
ಇದೇ ವೇಳೆ ರೆಡ್ಡಿಯ ಮಹತ್ವಾಕಾಂಕ್ಷೆಯ ಯೋಜನೆಗಳು ಕಾರ್ಯರೂಪಕ್ಕೆ ಬರಲಾರಂಭಿಸಿದವು. ವಿಮಾನನಿಲ್ದಾಣಕ್ಕೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದ್ದರು. ಅದಿರು ಸಾಗಿಸುವ ಟ್ರಕ್ ಗಳ ಸಂಚಾರದಿಂದ ನಗರದ ರಸ್ತೆಗಳು ಹದಗೆಟ್ಟಿದ್ದರಿಂದ ಹೊಸ ಬೈಪಾಸ್ ಮತ್ತು ಮುಖ್ಯ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ರಸ್ತೆ ನಿರ್ಮಾಣಕ್ಕೆಂದೇ 100 ಕೋಟಿ ರೂಪಾಯಿಗಳ ಯೋಜನೆ ಸಿದ್ಧವಾಗಿತ್ತು. ರೆಡ್ಡಿಗೆ ಹಣ ಹೆಚ್ಚು ಹೆಚ್ಚು ಬರಲಾರಂಭಿಸಿದಂತೆ ನಗರವನ್ನು ಅಭಿವೃದ್ಧಿಪಡಿಸುವ ಪರಿಕಲ್ಪನೆಗಳೂ ಹೆಚ್ಚಾಗತೊಡಗಿದವು. ದೊಡ್ಡ ಮಟ್ಟದಲ್ಲಿ ಅವರು ಯೋಚನೆ ಮಾಡಲಾರಂಭಿಸಿದರು. ಬಳ್ಳಾರಿಯನ್ನು ಸಿಂಗಾಪುರ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಮಾತನ್ನಾಡುತ್ತಿದ್ದವರು. ರೆಡ್ಡಿ ಎಷ್ಟರ ಮಟ್ಟಿಗೆ ಬೆಳೆದರೆಂದರೆ ರಾಜಕೀಯ ಪ್ರವೇಶ ಮಾಡುತ್ತಿದ್ದಂತೆಯೇ ಕೇವಲ ಒಂದು ದೂರವಾಣಿ ಕರೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಬರುವಂತೆ ಮಾಡುತ್ತಿದ್ದರು. ಎಲ್ಲವೂ ಹಣದಿಂದಲೇ ಆಗುತ್ತಿತ್ತು. ಈ ಬಗ್ಗೆ ಬರುತ್ತಿದ್ದ ಟೀಕೆಗಳಿಗೆ ಮೌನವಾಗಿರುತ್ತಿದ್ದರು ಎಂದು ಗೋಪಾಲ್ ನೆನಪಿಸಿಕೊಳ್ಳುತ್ತಾರೆ.
ಅಲ್ಲಿಂದ ಇಲ್ಲಿವರೆಗೆ ಏನೂ ಉಳಿದಿಲ್ಲ. ಪ್ರಸಕ್ತ ಹಣಕಾಸು ಸಾಲಿನಲ್ಲಿ ಜಿಲ್ಲೆಯ ವ್ಯವಹಾರಗಳು ಶೇ.20 ರಿಂದ 25 ರವರೆಗೆ ಕುಸಿದಿವೆ. ಕಳೆದ ವರ್ಷವೂ ಪರಿಸ್ಥಿತಿಯೇನೂ ಉತ್ತಮವಾಗಿರಲಿಲ್ಲ, ಆದರೆ ಈ ವರ್ಷ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ಕೆಲವು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ರೀತಿಯಲ್ಲಿ ಬೆಲೆ ಹೆಚ್ಚಳವಾದ ಪರಿಣಾಮ ಇಲ್ಲಿನ ಸ್ಪಾಂಜ್ ಇಂಡಸ್ಟ್ರಿಗಳು ಉತ್ತಮ ಸಾಧನೆ ಮಾಡಿವೆ. ಆದರೆ, ನಗರದ ವಿಚಾರಕ್ಕೆ ಬಂದರೆ ಪುನಶ್ಚೇತನವಾಗುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ. ಬಳ್ಳಾರಿ ನಗರ ಮರುಭೂಮಿ ನಗರವಾಗಿ ಮಾರ್ಪಟ್ಟಿದೆ ಮತ್ತು 17 ನೇ ಶತಮಾನದಲ್ಲಿ ಇದ್ದ ಟೆಕ್ಸಾಸ್ ರೀತಿಯಾಗಿದೆ ಎನ್ನುತ್ತಾರೆ ಗೋಪಾಲ್.
ಪ್ರತಿರೋಧ
ರೆಡ್ಡಿ ಯಾವಾಗ ನಗರವನ್ನು ವಿಸ್ತರಣೆ ಮಾಡಲು ಹೊರಟರೋ ಆಗ ಅವರ ನಗರ ವಿನ್ಯಾಸಗಳಿಗೆ ಜನರು ಬೆದರಿದ್ದರು. ಆದರೆ, ಮಲ್ಲಿಕಾರ್ಜುನ ರೆಡ್ಡಿಯಂತಹವರು ಜನಾರ್ದನ ರೆಡ್ಡಿ ವಿರುದ್ಧ ಕಾನೂನು ಸಮರಕ್ಕೆ ಮುಂದಡಿ ಇಟ್ಟರು. ತುಂಗಾಭದ್ರಾ ಅಚ್ಚುಕಟ್ಟು ಪ್ರದೇಶದ ದೊಡ್ಡ ಮಟ್ಟದ ನೀರಾವರಿ ಜಮೀನನ್ನು ವಿಮಾನನಿಲ್ದಾಣಕ್ಕೆ ಜನಾರ್ದನ ರೆಡ್ಡಿ ಸ್ವಾಧೀನಕ್ಕೆ ಯೋಜನೆ ರೂಪಿಸಿದ ಸಂದರ್ಭದಲ್ಲಿ ಮಲ್ಲಿಕಾರ್ಜುನ ರೆಡ್ಡಿ ತಿರುಗಿಬಿದ್ದರು. ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ವಿಮಾನನಿಲ್ದಾಣಕ್ಕೆ ಕೇವಲ 600 ಎಕರೆ ಸಾಕು ಎಂದು ಹೇಳಿದರೂ ಜನಾರ್ದನ ರೆಡ್ಡಿ 1700 ಎಕರೆ ಬೇಕು ಎಂದು ಆರಂಭದಲ್ಲಿ ಹೇಳಿದ್ದರು. ಆದರೆ, ನಂತರ 1213 ಎಕರೆ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಬಳ್ಳಾರಿಯಿಂದ 15 ಕಿಲೋಮೀಟರ್ ದೂರದಲ್ಲಿರುವ ಚಾಗನೂರು ಮತ್ತು ಸಿರಿವಾರ ಗ್ರಾಮಗಳ ಭೂಮಿಯನ್ನು ಗುರುತಿಸಲಾಗಿತ್ತು.

ಇದಕ್ಕೆ ಯಾರಿಂದಲೂ ಪ್ರತಿರೋಧ ಬರಲಿಲ್ಲ. ಹೋರಾಟಗಾರರೂ ಧ್ವನಿ ಎತ್ತಲಿಲ್ಲ. ಆದರೆ, ನೀರಾವರಿ ಪ್ರದೇಶದಲ್ಲಿ ವಿಮಾನನಿಲ್ದಾಣ ನಿರ್ಮಾಣ ಬೇಡ ಎಂಬ ವಾದವನ್ನು ಮುಂದಿಟ್ಟಿದ್ದರು. ಅದೇ ರೀತಿ ಬಳ್ಳಾರಿ ನಗರಕ್ಕೆ ಮತ್ತೊಂದು ಏರ್ ಪೋರ್ಟ್ ನ ಅಗತ್ಯವಿಲ್ಲ ಎಂದು ವಾದಿಸಿದ್ದರು. ಏಕೆಂದರೆ, ಬಳ್ಳಾರಿ ನಗರದಿಂದ 25 ಕಿಲೋಮೀಟರ್ ದೂರದಲ್ಲಿ ಜಿಂದಾಲ್ ಸ್ಟೀಲ್ ಏರ್ ಪೋರ್ಟ್ ಇದ್ದರೆ, 230 ಎಕರೆ ಪ್ರದೇಶದಲ್ಲಿ ಕಂಟೋನ್ಮೆಂಟ್ ಏರ್ಪೋರ್ಟ್ ಇತ್ತು. ಇಂತಹ ಪ್ರತಿರೋಧಕ್ಕೆ ರೆಡ್ಡಿಯಾದಿಯಾಗಿ ಸೊಪ್ಪು ಹಾಕದಿದ್ದಾಗ ರಾಜ್ಯ ಹೈಕೋರ್ಟ್ ನೆರವಿಗೆ ಬಂದಿತ್ತು.
ಮಲ್ಲಿಕಾರ್ಜುನ ರೆಡ್ಡಿ ಮತ್ತು ಅವರ ಸ್ನೇಹಿತರು ಈ ಹೋರಾಟದಲ್ಲಿ ಯಶಸ್ವಿಯಾಗುತ್ತಿದ್ದಂತೆಯೇ ನಗರಕ್ಕೆ ಪರ್ಯಾಯ ಅಭಿವೃದ್ಧಿ ಯೋಜನೆಯನ್ನು ಮುಂದಿಟ್ಟರು. ಗಣಿಗಾರಿಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರು ನಗರದಲ್ಲಿದ್ದ ಸರ್ಕಾರಿ ಆಸ್ಪತ್ರೆಯನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಪ್ರಯತ್ನ ನಡೆಸಿದರು. ಆದರೆ, ಈ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿತ್ತು. ಇಲ್ಲಿ ವಿಮಾನನಿಲ್ದಾಣ ನಿರ್ಮಾಣಕ್ಕಿಂತ ಜನರ ಆರೋಗ್ಯ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಉನ್ನತೀಕರಣವಾಗಬೇಕೆಂಬುದು ಮಲ್ಲಿಕಾರ್ಜುನ ರೆಡ್ಡಿ ಅವರ ವಾದ.
ಇನ್ನು ಅಂತಿಮವಾಗಿ ಹೇಳಬೇಕೆಂದರೆ ನಗರದಲ್ಲಿನ ಆರೋಗ್ಯ ಮತ್ತು ನೈರ್ಮಲ್ಯದ ವಿಚಾರ. ಇಲ್ಲಿನ ಜಿಲ್ಲಾಧಿಕಾರಿ ಎಂ.ವಿ. ತುಷಾರ ಮಣಿ ಅವರು ಒಮ್ಮೆ ಡೆಂಗ್ಯೂ ಜ್ವರದಿಂದ ಬಳಲಿದ್ದರು. ಅವರನ್ನು ಮೇಡಂ ಜಿಲ್ಲಾಧಿಕಾರಿಗೇ ಈ ಪರಿಸ್ಥಿತಿ ಬಂದರೆ ಜನಸಾಮಾನ್ಯರ ಪರಿಸ್ಥಿತಿ ಹೇಗೆ ಎಂದು ಪ್ರಶ್ನೆ ಮಾಡಿದ ಪತ್ರಕರ್ತರಿಗೆ ಬಂದ ಉತ್ತರ ಹೀಗಿತ್ತು:- ಬಳ್ಳಾರಿಯ ಸೊಳ್ಳೆಗಳಿಂದ ನನಗೆ ಡೆಂಗ್ಯೂ ಬಂದಿಲ್ಲ. ಪಕ್ಕದ ದಾವಣಗೆರೆ ಜಿಲ್ಲೆಯ ಸೊಳ್ಳೆ ಕಚ್ಚಿದ್ದರಿಂದ ಡೆಂಗ್ಯೂ ಜ್ವರ ಬಂದಿದೆ!
ಇದು ತಮಾಷೆಯಾಗಿ ಕಂಡು ಬಂದರೂ ಬಳ್ಳಾರಿ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಈ ಎಲ್ಲಾ ಕೆಟ್ಟ ಸುದ್ದಿಗಳ ಹೊರತಾಗಿಯೂ ಹಿಂದೊಮ್ಮೆ ವಿಜಯನಗರ ಸಾಮ್ರಾಜ್ಯದ ಹಿರಿಮೆಯ ಪ್ರತೀಕದಂತಿದ್ದ ಬಳ್ಳಾರಿ ಇನ್ನೂ ಭರವಸೆಯ ಬೆರಗುಗಣ್ಣುಗಳಿಂದ ಅಭಿವೃದ್ಧಿಯ ಕನಸು ಕಾಣುತ್ತಿದೆ.
ಕೃಪೆ: ಲೈವ್ ಮಿಂಟ್