ಬೆಂಗಳೂರು – ಮಂಗಳೂರು ನಡುವಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕಲೇಶಪುರ – ಶಿರಾಡಿಘಾಟ್ ನಡುವೆ ಮತ್ತೆ ಸುಗಮ ಸಂಚಾರಕ್ಕೆ ಸಂಚಕಾರವಾಗಿದೆ. ಹಾಸನ ಜಿಲ್ಲೆಯಲ್ಲಿ ಸಾಗುವ ಹೆದ್ದಾರಿ ಸಂಪೂರ್ಣ ಗುಂಡಿಗಳಿಂದ ತುಂಬಿ ಹೋಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಮತ್ತು ಬಂಟ್ವಾಳ ನಡುವೆ ಕೂಡ ಹೆದ್ದಾರಿ ಕೆಟ್ಟು ಹೋಗಿದ್ದು ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 75ರ ಹಾಸನ – ಸಕಲೇಶಪುರ ಮತ್ತು ಗುಂಡ್ಯ- ಬಿ. ಸಿ. ರೋಡ್ ನಡುವಣ ಚತುಷ್ಪಥ ಹೆದ್ದಾರಿ ಕಾಮಗಾರಿ ಕಳೆದ ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿದೆ. 2018ರ ಮಳೆಗಾಲಕ್ಕೆ ಮುನ್ನ ಹೆದ್ದಾರಿ ಕಾಮಗಾರಿ ಸ್ಥಗಿತ ಮಾಡಲಾಗಿತ್ತು. 2017 ಮಾರ್ಚ್ ನಲ್ಲಿ ಭರದಿಂದ ಆರಂಭಗೊಂಡ ಹೆದ್ದಾರಿ ಕಾಮಗಾರಿ ಒಂದು ವರ್ಷ ಆಗುವುದಕ್ಕೂ ಮೊದಲೇ ಸ್ಥಗಿತ ಆಗಿತ್ತು.
ಮಂಗಳೂರು – ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯ ನೆಲಮಂಗಲ – ಹಾಸನ ನಡುವೆ ನಾಲ್ಕು ಪಥಗಳ ಕಾಮಗಾರಿ ಪೂರ್ಣಗೊಂಡು ಹಲವು ವರ್ಷಗಳು ಕಳೆದಿವೆ. ಹಾಸನದಿಂದ ಸಕಲೇಶಪುರ ಮಾರನಹಳ್ಳಿ ತನಕ ಹೊಸ ಹೆದ್ದಾರಿ ಅಗಲೀಕರಣ ಆಗಬೇಕಾಗಿದೆ. ಅನಂತರ ಶಿರಾಡಿ ಘಾಟಿನ ಬಹುತೇಕ ಪ್ರದೇಶ ಸೇರಿದಂತೆ ಗುಂಡ್ಯ ತನಕ ಎರಡು ಪಥಗಳ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಿದೆ. ಗುಂಡ್ಯದಿಂದ ಉಪ್ಪಿನಂಗಡಿ – ಮಾಣಿ – ಬಿ. ಸಿ. ರೋಡು ತನಕ ನಾಲ್ಕು ಪಥಗಳ ಹೆದ್ದಾರಿ ನಿರ್ಮಾಣ ಆಗಬೇಕು. ಬಿ. ಸಿ. ರೋಡಿನಿಂದ ಮಂಗಳೂರು ನಂತೂರು ಸರ್ಕಲ್ ತನಕ ಕೇರಳ – ಗೋವಾ ಹೆದ್ದಾರಿಯನ್ನು ಸಂಪರ್ಕಿಸಲು ಕಳಪೆ ದರ್ಜೆಯ ನಾಲ್ಕು ಪಥಗಳ ರಸ್ತೆಗೆ ಇದೀಗ ಒಂದು ದಶಕ ತುಂಬಿದೆ.
ಈ ಮಳೆಗಾಲಕ್ಕೆ ಮುನ್ನ ಶಿರಾಡಿ ಘಾಟಿ ಪ್ರದೇಶದ 27 ಕಿ.ಮೀ. ರಸ್ತೆಯನ್ನು ಹೊರತುಪಡಿಸಿ ಬೆಂಗಳೂರು- ಮಂಗಳೂರು ನಡುವಣ ಹೆದ್ದಾರಿ ಸಂಪೂರ್ಣ ನಾಲ್ಕು ಪಥಗಳ ಹೆದ್ದಾರಿ ಆಗಬೇಕಾಗಿತ್ತು. ಆರ್ಥಿಕ ಮುಗ್ಗಟ್ಟು, ಹಣಕಾಸು ಹೂಡಿಕೆ ಸಂಸ್ಥೆಯ ವೈಫಲ್ಯ ಮತ್ತು ಇತರ ತಾಂತ್ರಿಕ ಕಾರಣಗಳಿಂದಾಗಿ ಕೇಂದ್ರ ಸರಕಾರದ ಅನುದಾನದ ಕಾಮಗಾರಿ ಸ್ಥಗಿತಗೊಂಡಿದೆ.

ಅಡ್ಡಹೊಳೆ (ಗುಂಡ್ಯ) ಮತ್ತು ಬಿ. ಸಿ. ರೋಡ್ ನಡುವಣ 66 ಕಿ. ಮೀ. ಹೆದ್ದಾರಿ ಕಾಮಗಾರಿಯನ್ನು ಎಲ್ ಆಂಡ್ ಟಿ ಕಂಪೆನಿ ವಹಿಸಿಕೊಂಡಿದ್ದು, ಹಾಸನ-ಸಕಲೇಶಪುರ-ಮಾರನಹಳ್ಳಿ 55 ಕಿ. ಮೀ. ಹೆದ್ದಾರಿ ಕಾಮಗಾರಿಯನ್ನು ಇಸೊಲಕ್ಸ್ ಕೊರ್ಸನ್ Isolux Corsan ಕಂಪೆನಿ ವಹಿಸಿಕೊಂಡಿತ್ತು. ಗುಂಡ್ಯ – ಬಂಟ್ವಾಳ ಹಂತದ ಕಾಮಗಾರಿಯನ್ನು 870 ಕೋಟಿ ರೂಪಾಯಿ ವೆಚ್ಚಕ್ಕೆ ಎಲ್ ಆಂಡ್ ಟಿ ಕಂಪೆನಿ ಗುತ್ತಿಗೆ ವಹಿಸಲಾಗಿತ್ತು. ಸಕಲೇಶಪುರ ಹಂತದ ಕಾಮಗಾರಿಯನ್ನು 574 ಕೋಟಿ ರೂಪಾಯಿಗೆ ನೀಡಲಾಗಿದ್ದ ಗುತ್ತಿಗೆಯನ್ನು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನಂತರ ಗುತ್ತಿಗೆ ಮೊತ್ತವನ್ನು 701 ಕೋಟಿ ರೂಪಾಯಿಗೆ ಪರಿಷ್ಕರಣೆ ಮಾಡಿತ್ತು.
ಮಾರ್ಚ್ – ಏಪ್ರಿಲ್ 2016ರಲ್ಲಿ ವಹಿಸಿಕೊಡಲಾಗಿದ್ದ ಇವೆರಡು ಹೆದ್ದಾರಿ ಕಾಮಗಾರಿಗಳು 2019 ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಬೇಕಾಗಿತ್ತು. ಮೊದಲನೆಯದಾಗಿ ಹಣಕಾಸಿನ ಕೊರತೆಯಿಂದ ಕಾಮಗಾರಿಗಳು ಸ್ಥಗಿತ ಆಗಿವೆ. ಇಸೊಲಕ್ಸ್ ಕೊರ್ಸನ್ ಕಂಪೆನಿ ದಿವಾಳಿ ಆಗಿದ್ದು, ಸಕಲೇಶಪುರ ಪ್ರದೇಶದಲ್ಲಿ ಹಾಳಾಗಿರುವ ರಸ್ತೆಯನ್ನು ರಿಪೇರಿ ಮಾಡಿಲ್ಲ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ. ಸಾರ್ವಜನಿಕರ ಒತ್ತಡಕ್ಕೆ ಮಣಿದ ಎಲ್ ಆಂಡ್ ಟಿ ಕಂಪೆನಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗುವ ಹೆದ್ದಾರಿಯ ಗುಂಡಿ ಮುಚ್ಚುವ ಕೆಲಸವನ್ನಾದರು ಮಾಡಿದೆ.
2017ರಲ್ಲಿ ಎರಡೂ ಕಂಪನಿಗಳು ಭರದಿಂದಲೇ ಕಾಮಗಾರಿ ಆರಂಭಿಸಿದ್ದವು. ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕಗಳಲ್ಲಿ ಬೃಹತ್ ಪ್ರಮಾಣದ ಕಂದಕಗಳನ್ನು ತೆಗೆದು ಅವುಗಳನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ. ರಾಷ್ಟ್ರೀಯ ಗುಣಮಟ್ಟದಂತೆ ಪುನಾರಚಿಸಲು ಹೆದ್ದಾರಿ ಲೆವೆಲ್ ಆಗುವಂತೆ ಹಲವೆಡೆ ಕಂದಕಗಳನ್ನು ತೆಗೆಯಲಾಗಿತ್ತು. ದಿಢೀರ್ ಗುತ್ತಿಗೆದಾರರು ಸ್ಥಳದಿಂದ ಪೇರಿ ಕಿತ್ತಿದ್ದು ಎರಡು ವರ್ಷಗಳಿಂದ ಹೆದ್ದಾರಿ ವಾಹನ ಚಾಲಕರಿಗೆ ಹೆದ್ದಾರಿ ಸವಾಲಾಗಿ ನಿಂತಿದೆ.
ಈ ಬಾರಿಯ ಮಳೆಗಾಲದ ಅನಂತರ ಹಾಸನ ಮತ್ತು ಬಂಟ್ವಾಳ ನಡುವೆ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಶಿರಾಡಿ ಘಾಟಿಯ ಹೆದ್ದಾರಿ ಅಭಿವೃದ್ಧಿ ಆಗದಿರುವ ಪ್ರದೇಶದಲ್ಲಿ ಘನ ವಾಹನಗಳ ಸಂಚಾರ ಸಾಹಸದ ಕೆಲಸವಾಗಿದೆ. ದಿನನಿತ್ಯ ಹಲವಾರು ಬಾರಿ ವಾಹನ ಸಂಚಾರ ಅಸ್ತವ್ಯಸ್ತವಾಗುತ್ತಿದೆ.

ಬಂಟ್ವಾಳ – ಗುಂಡ್ಯ ನಡುವೆ ಆನೆ ಕಾರಿಡಾರ್ ಇರುವುದರಿಂದ ಹೆದ್ದಾರಿ ವಿನ್ಯಾಸ ಬದಲಿಸಬೇಕಾದ ಪ್ರಮೇಯ ಬಂದಿತ್ತು. ಇದರಿಂದಾಗಿ ಗುತ್ತಿಗೆದಾರರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಡುವೆ ಒಮ್ಮತ ಮೂಡಿಬರಲಿಲ್ಲ. ಇದೇ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟವು ಐಎಲ್‌ಆ್ಯಂಡ್‌ಎಫ್‌ಎಸ್ ರೂಪದಲ್ಲಿ ಗುತ್ತಿಗೆದಾರರನ್ನು ಬಾಧಿಸಿತ್ತು. ಇನ್‌ಫ್ರಾಸ್ಟಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವಿಸಸ್ ಸಾಲದ ಸುಳಿಯಲ್ಲಿ ಸಿಲುಕಿದ ಪರಿಣಾಮ ಐಎಲ್ ಆ್ಯಂಡ್ ಎಫ್‌ಎಸ್ ನ ಸಹಕಂಪೆನಿಗಳು ಕೂಡ ಅತಂತ್ರ ಸ್ಥಿತಿಯಲ್ಲಿವೆ. ಇವುಗಳು ಪ್ರಾಮುಖ್ಯವಾಗಿ ಮೂಲಭೂತ ಸೌಕರ್ಯ ಅಭಿವೃದ್ಧಿ ನಡೆಸುವ ಸಂಸ್ಥೆಗಳಿಗೆ ಬೃಹತ್ ಮೊತ್ತದ ದೀರ್ಘಕಾಲಿಕ ಸಾಲ ನೀಡುವ ಹಣಕಾಸು ಸಂಸ್ಥೆಗಳಾಗಿವೆ.
ಸುರಂಗ ಮಾರ್ಗವೆಂಬ ಭೂತ:
ಇವೆಲ್ಲ ಸಮಸ್ಯೆಗಳ ನಡುವೆಯೇ ಸಕಲೇಶಪುರ ಸಮೀಪದಿಂದ – ಗುಂಡ್ಯ ನಡುವೆ ಶಿರಾಡಿ ಘಾಟ್ ಪ್ರದೇಶದಲ್ಲಿ ಸುಮಾರು 26 ಕಿ.ಮೀ.ಉದ್ದದ ಸುರಂಗ ಮಾರ್ಗ ನಿರ್ಮಿಸಲು ಮುಂದಾಗಿದೆ. ಸುರಂಗ ಮಾರ್ಗದ ವಿಸ್ತೃತ ಯೋಜನಾ ವರದಿ ಡಿಪಿಆರ್ ಸಿದ್ಧವಾಗಿದೆ. ಯೋಜನೆಯ ಮೊತ್ತ ಅಂದಾಜು 12,000 ಕೋಟಿ ರೂಪಾಯಿ ಮಾತ್ರ.
ಸಾರ್ವಜನಿಕರು ಈಗ ಕುಲಗೆಟ್ಟ ಹೆದ್ದಾರಿಯಲ್ಲಿ ಪಯಣಿಸಲಾಗದೆ ಹಿಡಿಶಾಪ ಹಾಕುತ್ತಿರುವ ಸಂದರ್ಭದಲ್ಲಿ ಈ 12 ಸಾವಿರ ಕೋಟಿ ವೆಚ್ಚದ ಟೋಲ್ ಸಂಗ್ರಹದ ಸುರಂಗ ಮಾರ್ಗ ಯೋಜನೆಗೆ ಟೆಂಡರ್ ಕರೆಯುವ ಸಾಧ್ಯತೆ ಇದೆ. ಹೆದ್ದಾರಿ ಚೆನ್ನಾಗಿರಬೇಕು ಎಂದು ಜನರು ಬಯಸುವುದರಿಂದ ಅವರ ಇಚ್ಛೆಗೆ ಅನುಗುಣವಾಗಿ ಅನಗತ್ಯವಾಗಿದ್ದರೂ ಸರಕಾರ ದುಬಾರಿ ವೆಚ್ಚದ ಬೈಪಾಸ್ ಸುರಂಗ ಉಡುಗೊರೆಯಾಗಿ ನೀಡಲಿದೆ.