ದೇಶದ ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆತು ರಾಜಕೀಯ ತಂತ್ರಗಾರಿಕೆಯ ಭಾಗವಾದ ಒಂದು ಭಾಷೆ, ಒಂದು ತೆರಿಗೆ, ಒಂದು ಸಂವಿಧಾನ ಎಂಬ ಅತಿರಂಜಿತ ಪದಪುಂಜಗಳನ್ನು ಯುವ ಜನತೆಯ ಮುಂದಿರಿಸಿ ದೇಶವನ್ನು ಗೆದ್ದಿರುವ ಆರ್ ಎಸ್ ಎಸ್ ನ ರಾಜಕೀಯ ವಿಭಾಗವಾದ ಬಿಜೆಪಿ, ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರ ಇದ್ದರೆ ಚೆನ್ನ ಎಂಬ ಕಲ್ಪನೆಯನ್ನು ಬಿತ್ತಿ ಅದನ್ನೂ ಸಾಧಿಸಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ವಾಮಮಾರ್ಗದ ಮೂಲಕ ಉರುಳಿಸಿದ ಬಿಜೆಪಿ ಕಳೆದ ಶತಮಾನದ 70ರ ದಶಕದ ಬಳಿಕ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ರಚಿಸುವ ಐತಿಹಾಸಿಕ ಸಾಧನೆಯನ್ನೂ ಮಾಡಿದೆ.
ಬಿಜೆಪಿಯ ಈ ಪರಮೋಚ್ಛ ಸಾಧನೆಯು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉದ್ಭವಿಸಿರುವ ನೆರೆ ಹಾಗೂ ಆನಂತರದ ಬೆಳವಣಿಗೆಗಳನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇಲ್ಲಿ ಮತ್ತು ಡೆಲ್ಲಿಯಲ್ಲಿ ಒಂದೇ ಸರ್ಕಾರ ರಚನೆಯಾದರೆ ಸರ್ಕಾರಿ ಸವಲತ್ತುಗಳು ಮನೆ ಬಾಗಿಲು ಬಡಿಯಲಿವೆ ಎಂಬ ಸುಳ್ಳು ಹರಡಿದ ಬಿಜೆಪಿ, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಸ್ಥಾನ ಗೆದ್ದಿದೆ. ಈಗ ರಾಜ್ಯದ, ಅದರಲ್ಲೂ ಪ್ರವಾಹದಿಂದ ಕಂಗೆಟ್ಟಿರುವ ಉತ್ತರ ಕರ್ನಾಟಕದ ದಯನೀಯ ಸ್ಥಿತಿಯನ್ನು ನಿಭಾಯಿಸಲು ರಾಜ್ಯ ಬಿಜೆಪಿ ನಾಯಕತ್ವ ಸೋತಿರುವುದು ನಿಚ್ಚಳವಾಗಿದ್ದು, ಕೇಂದ್ರದಿಂದ ರಾಜ್ಯಕ್ಕೆ ತೆರಬೇಕಾದ ಅನುದಾನ ತರುವಲ್ಲಿಯೂ ರಾಜ್ಯದಿಂದ ಆಯ್ಕೆಯಾದ ಸಂಸದರು ವಿಫಲವಾಗುವ ಮೂಲಕ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೂ ಆಳುವ ಪಕ್ಷ ಹಾಗೂ ಸರ್ಕಾರದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದಿದ್ದರೆ ಎಲ್ಲವೂ ಅಪ್ರಯೋಜಕ ಎಂಬುದು ದೃಢಪಟ್ಟಿದೆ. ಸದೃಢ ದೇಶ ನಿರ್ಮಾಣಕ್ಕೆ ಪ್ರಬಲ ನಾಯಕತ್ವ ಅಗತ್ಯ ಎಂಬ ಮಿಥ್ಯೆಗೆ ಬಲಿಯಾದ ದೇಶದ ಬಹುತೇಕ ರಾಜ್ಯಗಳ ಜನತೆ ತಮ್ಮ ಮೂರ್ಖ ನಿರ್ಧಾರಕ್ಕೆ ತಮ್ಮನ್ನೇ ದೂಷಿಸಿಕೊಳ್ಳುವ ಹಂತಕ್ಕೆ ಬಂದು ನಿಂತಿದ್ದಾರೆ. ಕಟುವಾಸ್ತವ ಅರ್ಥವಾಗಲು ಕಠಿಣ ಸಂದರ್ಭಗಳೇ ನಿರ್ಮಾಣವಾಗಬೇಕೆಂಬ ತಾತ್ವಿಕ ಚಿಂತನೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ಇನ್ನೊಂದು ಕಡೆ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬದಿಗೆ ಸರಿಸುವ ಪ್ರಕ್ರಿಯೆ ವ್ಯಾಪಕವಾಗಿ ನಡೆದಿದ್ದು, ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ಎಂಬ ಕೆಂಡವನ್ನು ಬಿಜೆಪಿ ಬೆನ್ನಿಗೆ ಕಟ್ಟಿಕೊಂಡಿದೆ. ರಾಜ್ಯದ ಹಣಕಾಸು ಸ್ಥಿತಿ ಬಿಜೆಪಿ ಹಾಗೂ ಯಡಿಯೂರಪ್ಪರನ್ನು ಮತ್ತಷ್ಟು ಚಿಂತಾಕ್ರಾಂತರಾಗುವಂತೆ ಮಾಡಿರುವುದರಲ್ಲಿ ಅನುಮಾನವಿಲ್ಲ.
ನೋಟು ರದ್ದತಿ, ತರಾತುರಿಯಲ್ಲಿ ಜಿ ಎಸ್ ಟಿ ಜಾರಿಯಂಥ ಮೂರ್ಖ ನಿರ್ಧಾರಗಳನ್ನು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ರಿಸರ್ವ್ ಬ್ಯಾಂಕಿನ ಖಜಾನೆಗೆ ಮೋದಿ ಸರ್ಕಾರ ಕೈಹಾಕುತ್ತಿರುವುದನ್ನು ನೋಡಿದರೆ ಬಿಜೆಪಿ ನೇತೃತ್ವದ ಸರ್ಕಾರ ಎಷ್ಟು ದಿವಾಳಿಯಾಗಿದೆ ಎಂಬುದು ಸುಲಭಕ್ಕೆ ಅರ್ಥವಾಗುವ ಸತ್ಯ. ಇದೆಲ್ಲವನ್ನೂ ಬಚ್ಚಿಟ್ಟು, ರಾಜ್ಯದ ಆಡಳಿತದ ವಿಫಲತೆಗಳನ್ನು ಬಿ ಎಸ್ ವೈ ಪತನಕ್ಕೆ ಬಳಸಬಹುದಾದ ಗುರಾಣಿಯನ್ನಾಗಿಸಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹಾಗೂ ಬಿ ಎಸ್ ವೈ ಅವರ ದೀರ್ಘಕಾಲೀನ ವೈರಿ ಬಿ ಎಲ್ ಸಂತೋಷ್ ತಯಾರಿ ನಡೆಸಿರುವುದು ಸ್ಪಷ್ಟವಾಗಿದೆ. ಇದಕ್ಕೆ ಪುರಾವೆ ಗೊತ್ತು-ಗುರಿ ಇಲ್ಲದ ನಳೀನ್ ಕುಮಾರ್ ಕಟೀಲ್ ಎಂಬವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿಸಿರುವುದು.

ಉತ್ತರ ಕರ್ನಾಟಕದ ನೆರೆಯ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ಮಹಾದಾಯಿ ನದಿ ನೀರು ಹೋರಾಟದ ಬಗ್ಗೆಯೂ ನೆನಪು ಮಾಡಿಕೊಳ್ಳಬೇಕಾಗಿದೆ. ನಾಲ್ಕು ಜಿಲ್ಲೆಗಳ ಒಂಭತ್ತು ತಾಲ್ಲೂಕುಗಳ ಕುಡಿಯುವ ನೀರಿನ ಸಮಸ್ಯೆ ನೀಗಬಲ್ಲ ಕಳಸಾ-ಬಂಡೂರಿ ನಾಲಾ ನಿರ್ಮಾಣ ಯೋಜನೆ ಜಾರಿಗೆ ಸರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ದಿನಗಳ ಹೋರಾಟ ನಡೆದರೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಾರಾಷ್ಟ್ರ-ಗೋವಾ ಹಾಗೂ ಕರ್ನಾಟಕದ ನಡುವೆ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗಲಿಲ್ಲ. ಸುದೀರ್ಘ ಕಾಲ ವಿಚಾರಣೆ ನಡೆಸಿ, ಮಹಾದಾಯಿ ನ್ಯಾಯಾಧೀಕರಣವೇ ತೀರ್ಪು ಪ್ರಕಟಿಸಬೇಕಾಯಿತು. ಅಂದು ವಿರೋಧ ಪಕ್ಷದಲ್ಲಿದ್ದ ಯಡಿಯೂರಪ್ಪ ಹಾಗೂ ಬಿಜೆಪಿ ಸಂಸದರ ದ್ವಂದ್ವ ನಿಲುವುಗಳನ್ನು ಮೀರಿಯೂ ಆನಂತರ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಜನರು ಬಿಜೆಪಿಯನ್ನು ವ್ಯಾಪಕವಾಗಿ ಬೆಂಬಲಿಸಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವಿದ್ದಾಗ ಬಜೆಟ್ ಅನುದಾನದ ಹಂಚಿಕೆಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಬೆಳಗಾವಿಯ ಸುವರ್ಣ ಸೌಧದ ಎದುರು ವಿವಿಧ ಮಠಾಧೀಶರು ಹಾಗೂ ಸಂಘಟನೆಗಳು ಆಯೋಜಿಸಿದ್ದ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಪೂರಕವಾಗಿ ಸ್ಪಂದಿಸಿದ್ದ ಬಿಜೆಪಿಯು ಎಂದೂ ಕಂಡು ಕೇಳರಿಯದ ಜಲಪ್ರಳಯಕ್ಕೆ ಸಿಲುಕಿ ಬದುಕು ಕಳೆದುಕೊಂಡ ಜನರ ಬೆಂಬಲಕ್ಕೆ ನಿಲ್ಲುವ ಬದಲು ಇಲ್ಲಸಲ್ಲದ ಸಬೂಬುಗಳನ್ನು ಹೇಳುತ್ತಿದೆ. ಆಶಾ ಗೋಪುರ ಹಾಗೂ ಸುಳ್ಳಿನ ಪ್ರಚಾರಕ್ಕೆ ಮಾರುಹೋದ ಜನರು ನ್ಯಾಯಯುತವಾಗಿ ದಕ್ಕಬೇಕಾದದನ್ನು ಅಂಗಲಾಚಿ ಕೇಳುವ ದೈನೇಸಿ ಸ್ಥಿತಿಗೆ ಬಂದು ನಿಂತಿದ್ದಾರೆ. ಇದೆಲ್ಲವನ್ನೂ ನಿರ್ಭಿಡೆಯಿಂದ ಮೌಲ್ಯಮಾಪನ ಮಾಡಬೇಕಾದ ಮಾಧ್ಯಮಗಳು ಮರ್ಜಿಗೆ ಸಿಲುಕಿ ಇತ್ತ ನುಂಗಲೂ ಆಗದೇ, ಉಗುಳಲೂ ಆಗದೇ ಏದುಸಿರು ಬಿಡುತ್ತವೆ. ಇದು ಪ್ರಜಾಪ್ರಭುತ್ವದ ಅಣಕವಲ್ಲವೇ…?