ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತದ (ಬಿಎಸ್ಎನ್ಎಲ್) ಸುಮಾರು 80,000 ನೌಕರರು ಸ್ವಯಂ ನಿವೃತ್ತಿ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಹಾನಗರ ಟೆಲಿಫೋನ್ ನಿಗಮ ನಿಯಮಿತ (ಎಂಟಿಎನ್ಎಲ್) ಮತ್ತು ಉಭಯ ಕಂಪನಿಗಳ ಅಧೀನದಲ್ಲಿರುವ ಸಹಸಂಸ್ಥೆಗಳ ಸುಮಾರು 20,000 ನೌಕಕರು ಸ್ವಯಂ ನಿವೃತ್ತಿ ಯೋಜನೆ ವ್ಯಾಪ್ತಿಗೆ ಬರುವ ಸಾಧ್ಯತೆ ಇದ್ದು ಒಂದು ಲಕ್ಷ ನೌಕಕರು ಸ್ವಯಂ ನಿವೃತ್ತಿ ಪಡೆದಂತಾಗುತ್ತದೆ. ನವೆಂಬರ್ 13ರ ಸಂಜೆಹೊತ್ತಿಗೆ ಯೋಜನೆ ಆಯ್ಕೆ ಮಾಡಿಕೊಂಡವರ ಸಂಖ್ಯೆ 80,000 ದಾಟಿತ್ತು. ಯೋಜನೆ ಆಯ್ಕೆ ಮಾಡಿಕೊಂಡವರ ಪೈಕಿ ಬಹುತೇಕ ಮಂದಿ 50 ವರ್ಷ ದಾಟಿದ್ದಾರೆ. ನವೆಂಬರ್ 4ರಿಂದ ಡಿಸೆಂಬರ್ 3ರವರೆಗೆ ಯೋಜನೆ ಆಯ್ಕೆ ಮಾಡಿಕೊಳ್ಳಲು ನೌಕಕರರಿಗೆ ಅವಕಾಶ ನೀಡಲಾಗಿದೆ. ಆದರೆ, ಮೊದಲ ವಾರದಲ್ಲೇ ಆಡಳಿತ ಮಂಡಳಿಯ ನಿಗದಿತ ಗುರಿ ತಲುಪಲಾಗಿದೆ.
ಸತತ ನಷ್ಟದಲ್ಲಿರುವ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಗಳಿಗೆ ನೌಕರರ ವೇತನವೇ ದೊಡ್ಡ ಹೊರೆ ಆದಂತಾಗಿದೆ. ಬಿಎಸ್ಎನ್ಎಲ್ 1.76 ಲಕ್ಷ ಮತ್ತು ಎಂಟಿಎನ್ಎಲ್ 22,000 ನೌಕರರನ್ನೊಳಗೊಂಡಿವೆ. ಬಿಎಸ್ಎನ್ಎಲ್ ಸಿಬ್ಬಂದಿ ವಾರ್ಷಿಕ ವೆಚ್ಚವೇ 14500 ಕೋಟಿ ರುಪಾಯಿಗಳಷ್ಟಿದೆ. ಈಗ ಸ್ವಯಂ ನಿವೃತ್ತಿ ಯೋಜನೆಗೆ 7500 ಕೋಟಿ ರುಪಾಯಿಗಳನ್ನು ಒದಗಿಸುತ್ತಿದ್ದು, ಯೋಜನೆ ಪೂರ್ಣಗೊಂಡ ನಂತರ ಬಿಎಸ್ಎನ್ಎಲ್ ಪ್ರತಿ ವರ್ಷ ಸುಮಾರು 7000 ಕೋಟಿ ರುಪಾಯಿಗಳನ್ನು ಸಿಬ್ಬಂದಿ ವೆಚ್ಚವೊಂದರಿಂದಲೇ ಉಳಿಸಲಿದೆ.
ಪೂರ್ಣಪ್ರಮಾಣದಲ್ಲಿ 4ಜಿ ವ್ಯವಸ್ಥೆಗೆ ಮಾರ್ಪಾಡಾಗಲು ಬಿಎನ್ಎನ್ಎಲ್ ಸಿದ್ದತೆ ನಡೆಸಿದ್ದ ಬೇಸ್ ಟ್ರಾನ್ಸೀವರ್ ಸಿಸ್ಟಮ್ಸ್ (ಬಿಟಿಎಸ್) ಮೇಲ್ದರ್ಜೆಗೇರಿಸುವ ಮತ್ತು ತಂತ್ರಾಂಶ ಮಾರ್ಪಾಡುವ ಮಾಡುವ ಪ್ರಕ್ರಿಯೆ ಸಮರೋಪಾದಿಯಲ್ಲಿ ನಡೆದಿದೆ. ತಂತ್ರಜ್ಞಾನ ಉನ್ನತೀಕರಣಗೊಂಡಂತೆ ಮಾನವಾಧಾರಿತ ಕಾರ್ಯಚಟುವಟಿಕೆಗಳು ತನ್ನಿಂತಾನೆ ಕಡಿತವಾಗುತ್ತಾ ಬರುತ್ತಿದೆ. ಮೊಬೈಲ್ ಸೇವೆ ಒದಗಿಸುವ ಖಾಸಗಿ ಕಂಪನಿಗಳು ಪ್ರಾರಂಭದಲ್ಲೇ ಉನ್ನತ ತಂತ್ರಜ್ಞಾನ ಅಳವಡಿಸಿಕೊಂಡಿರುವ ಕಾರಣ ಈ ಕಂಪನಿಗಳ ಸಿಬ್ಬಂದಿ ವೆಚ್ಚವು ತೀರಾ ಅತ್ಯಲ್ಪ.
ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಆರ್ಥಿಕ ಸಂಕಷ್ಟದಲ್ಲಿವೆ. ಬಿಎಸ್ಎನ್ಎಲ್ ಉದ್ಯೋಗಿಗಳಿಗೆ ವಿಳಂಬವಾಗಿ ವೇತನ ಪಾವತಿಸಿದರೆ, ಎಂಟಿಎನ್ಎಲ್ ಎರಡು ತಿಂಗಳಿಂದ ವೇತನವನ್ನೇ ಪಾವತಿಸಿರಲಿಲ್ಲ. ಬಿಎಸ್ಎನ್ಎಲ್ ತನ್ನ ಆದಾಯ ಸಂಗ್ರಹದ ಶೇ.75ರಷ್ಟನ್ನು ಉದ್ಯೋಗಿಗಳ ವೇತನ ಭರಿಸಲು ವಿನಿಯೋಗಿಸಿದರೆ, ಎಂಟಿಎನ್ಎಲ್ ಶೇ.87ರಷ್ಟು ಆದಾಯವನ್ನು ವೇತನ ಭರಿಸಲು ವಿನಿಯೋಗಿಸುತ್ತಿದೆ. ಆದೇ ಖಾಸಗಿ ವಲಯದ ಕಂಪನಿಗಳಲ್ಲಿ ಉದ್ಯೋಗಿಗಳ ವೇತನವು ಒಟ್ಟು ಆದಾಯ ಸಂಗ್ರಹದ ಶೇ.2.5ರಿಂದ 5ರಷ್ಟು ಮಾತ್ರ ಇದೆ. ಈ ಕಾರಣ ಮುಂದಿಟ್ಟುಕೊಂಡು ಉದ್ಯೋಗಿಗಳಿಗೆ ಕಡ್ಡಾಯ ಸ್ವಯಂ ನಿವೃತ್ತಿಯನ್ನು ಹೇರಲಾಗುತ್ತಿದೆ. ಈಗಾಗಲೇ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸರ್ವಕಾಲಿಕ ಗರಿಷ್ಠಮಟ್ಟದಲ್ಲಿದೆ. ಸಂಘಟಿತ ವಲಯದಲ್ಲೂ ಈಗ ಉದ್ಯೋಗ ಕಡಿತ ತೀವ್ರವಾಗುತ್ತಿದ್ದು ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚುವ ಅಪಾಯ ಇದೆ ಎಂದು ದೂರುತ್ತಲೇ ನೌಕರರ ಸಂಘಗಳು ಸ್ವಯಂ ನಿವೃತ್ತಿ ಯೋಜನೆಯನ್ನು ಒಪ್ಪಿಕೊಂಡಿವೆ.
ಬಿಎಸ್ಎನ್ಎಲ್ ಗೆ ಸಂಕಷ್ಟ ಬಂದಿದ್ದು ಏಕೆ?
2014ರಲ್ಲಿ ಅಧಿಕಾರಕ್ಕೆ ಬಂದ ಎನ್ಡಿಎ-2 ಸರ್ಕಾರ ಖಾಸಗಿ ಕಂಪನಿಗಳನ್ನು ಉತ್ತೇಜಿಸುವ ನೀತಿ ಅನುಸರಿಸಿದ್ದು ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಅವನತಿ ಹಾದಿಗೆ ಮುನ್ನುಡಿ ಬರೆದಿತ್ತು. ಈ ಉದಾರಣೆಯನ್ನು ಗಮನಿಸಿ, ನರೇಂದ್ರಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಅಂದರೆ ಜೂನ್ 20, 2014ರಂದು ಎಂಟಿಎನ್ಎಲ್ ಷೇರು ದರ 37 ರುಪಾಯಿಗಳಷ್ಟಿತ್ತು. ಈ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಖಾಸಗಿ ವಲಯಕ್ಕೆ ಉತ್ತೇಜನ ನೀಡುತ್ತಾ ಸಾರ್ವಜನಿಕ ಉದ್ದಿಮೆಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿದ ಪರಿಣಾಮ ಎಂಟಿಎನ್ಎಲ್ ಷೇರು ದರ ಈಗ (2019 ಸೆಪ್ಟೆಂಬರ್ 5 ರಂದು) 5.60 ರುಪಾಯಿಗೆ ಕುಸಿದಿತ್ತು. ಕೇಂದ್ರ ಸರ್ಕಾರ ಸ್ವಯಂ ನಿವೃತ್ತಿ ಯೋಜನೆ ಪ್ರಕಟಿಸಿದ ನಂತರವೂ ಷೇರುದರ ಚೇತರಿಕೆ ಕಂಡು ಬಂದಿಲ್ಲ. ನವೆಂಬರ್ 13ರಂದು 5.75 ರುಪಾಯಿ ಆಜುಬಾಜಿನಲ್ಲಿ ವಹಿವಾಟಾಗಿದೆ.

ಮೊಬೈಲ್ ಕ್ಷೇತ್ರ ತೀವ್ರ ಸ್ಪರ್ಧೆ ಇರುವ ಮತ್ತು ಅತಿ ಹೆಚ್ಚು ಬಂಡವಾಳ ಹೂಡಿಕೆ ನಿರೀಕ್ಷಿಸುವ ಕ್ಷೇತ್ರ. ಆರಂಭದಲ್ಲಿ ಕಾರ್ಯಾರಂಭ ಮಾಡಿದ ಒಂದು ಡಜನ್ ಮೊಬೈಲ್ ಕಂಪನಿಗಳ ಪೈಕಿ ಈಗ ಉಳಿದಿರುವುದು ಮೂರು ಮತ್ತೊಂದು. ಅತಿ ಹೆಚ್ಚು ಹೂಡಿಕೆ ಮಾಡಿದ್ದ ಅನಿಲ್ ಅಂಬಾನಿ ನೇತೃತ್ವದ ರಿಲಯನ್ ಕಮ್ಯುನಿಕೇಶನ್ಸ್ ಇಂದು ದಿವಾಳಿಯಾಗಿದೆ. ಪ್ರಾದೇಶಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಏರ್ಸೆಲ್, ಟಾಟಾ ಇಂಡಿಕಾಮ್, ಯೂನಿನಾರ್, ವರ್ಜಿನ್ ಮೊಬೈಲ್ ಸೋತು ಹೋಗಿವೆ. ಟಾಟಾ ಇಂಡಿಕಾಮ್ ಏರ್ಟೆಲ್ ಜತೆಗೆ ವಿಲೀನಗೊಂಡರೆ, ವೊಡಾಫೋನ್ ಐಡಿಯಾ ಸೆಲ್ಯುಲಾರ್ ವಿಲೀನಗೊಂಡು ಅತಿದೊಡ್ಡ ಮೊಬೈಲ್ ಕಂಪನಿಯಾಗಿ ಹೊರಹೊಮ್ಮಿವೆ. ಈಗ ಕಾರ್ಯಾಚರಣೆಯಲ್ಲಿರುವುದು ಏರ್ಟೆಲ್, ವೊಡಾಫೋನ್ ಐಡಿಯಾ, ರಿಲಯನ್ಸ್ ಜಿಯೋ, ಎಂಟಿಎನ್ಎಲ್ ಮತ್ತು ಬಿಎಸ್ಎನ್ಎಲ್ ಮಾತ್ರ.
2016ರಲ್ಲಿ ಮುಖೇಶ್ ಅಂಬಾನಿ ನೇತೃತ್ವ ರಿಯಲನ್ಸ್ ಜಿಯೋ ಮಾರುಕಟ್ಟೆಗೆ ಬಂದು ಕ್ಷಿಪ್ರಗತಿಯಲ್ಲಿ ಹತ್ತು ಕೋಟಿ ಗ್ರಾಹಕರನ್ನು ಸಂಪಾದಿಸಿ ದಾಖಲೆ ಮಾಡಿತ್ತು. ಆ ದಾಖಲೆ ಮಾಡಲು ಪರೋಕ್ಷವಾಗಿ ನರೇಂದ್ರಮೋದಿ ಸರ್ಕಾರ, ಮುಖ್ಯವಾಗಿ ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ನೀಡಿದ್ದ ನೆರವು ಕಾರಣವಾಗಿತ್ತು. ಅದುವರೆಗೆ ಯಾರಿಗೂ ನೀಡದಿದ್ದ ಆಧಾರ್ ಬಯೋಮೆಟ್ರಿಕ್ ಬಳಸಿ ಸ್ಥಳದಲ್ಲೇ ಮೊಬೈಲ್ ಸಿಮ್ ವಿತರಿಸುವ ಸೌಲಭ್ಯವನ್ನು ರಿಲಯನ್ಸ್ ಜಿಯೋಗೆ ಮೋದಿ ಸರ್ಕಾರ ಕಲ್ಪಿಸಿತ್ತು. ಅತ್ಯಂತ ಗೌಪ್ಯವಾಗಿರಬೇಕಿದ್ದ ಆಧಾರ್ ಮಾಹಿತಿಯನ್ನು ಮೋದಿ ಸರ್ಕಾರ ಮುಖೇಶ್ ಅಂಬಾನಿಗೆ ಉಡುಗೊರೆಯಾಗಿನೀಡಿತು. ಈ ಕಾರಣದಿಂದಾಗಿಯೇ ಅತ್ಯಲ್ಪ ಅವಧಿಯಲ್ಲಿ ರಿಲಯನ್ಸ್ ಜಿಯೋ ತ್ವರಿತವಾಗಿ 10 ಕೋಟಿ ಗ್ರಾಹಕರನ್ನು ಪಡೆದು ದಾಖಲೆ ಮಾಡಿತ್ತು. ವಿಲೀನವಾದಾಗ ಅಗ್ರಸ್ಥಾನದಲ್ಲಿ ವೋಡಾಫೋನ್ ಐಡಿಯಾ ಈಗ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಈಗೇನಿದ್ದರೂ ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ನಡುವೆ ಅಗ್ರಸ್ಥಾನಕ್ಕೆ ಜಿದ್ದಾಜಿದ್ದಿ ನಡೆದಿದೆ.
ದುರಾದೃಷ್ಟವಶಾತ್ ಈ ಎಲ್ಲಾ ಬೆಳವಣಿಗೆಗಳ ನಡುವೆ ಕೇಂದ್ರ ಸರ್ಕಾರ ತನ್ನದೇ ಕಂಪನಿಗಳಾದ ಎಂಟಿಎನ್ಎಲ್ ಮತ್ತು ಬಿಎಸ್ಎನ್ಎಲ್ ಗಳನ್ನು ಉತ್ತೇಜಿಸುವ ಯಾವ ಪ್ರಯತ್ನವನ್ನು ಮಾಡಲಿಲ್ಲ. ಪರೋಕ್ಷವಾಗಿ ಈ ಕಂಪನಿಗಳ ಸೇವೆ ಮತ್ತು ಮಹತ್ವವನ್ನು ತಗ್ಗಿಸುವ ಕೆಲಸ ಮಾಡಿತ್ತು.
ಖಾಸಗಿ ದೂರಸಂಪರ್ಕ ಕಂಪನಿಗಳಿಗೆ ಹೋಲಿಸಿದರೆ ಬಿಎಸ್ಎನ್ಎಲ್ ಮೇಲಿರುವ ಸಾಲದ ಹೊರೆ ಅತ್ಯಲ್ಪ. ಬಿಎಸ್ಎನ್ಎಲ್ ಆದಾಯ ಸಂಗ್ರಹ ತೀವ್ರವಾಗಿ ಕುಸಿದಿರುವುದರಿಂದ ನಗದು ಕೊರತೆ ಎದುರಿಸುತ್ತಿದೆ. ರಿಲಯನ್ಸ್ ಜಿಯೋ ವಾಮಮಾರ್ಗ ಅನುಸರಿಸುತ್ತಿರುವುದರಿಂದ ಬಿಎಸ್ಎನ್ಎಲ್ ಆದಾಯವು 32,000 ಕೋಟಿ ರುಪಾಯಿಗಳಿಂದ 18,000 ಕೋಟಿ ರುಪಾಯಿಗೆ ತಗ್ಗಿದೆ. ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾಗಳ ಮೇಲಿನ ಸಾಲದ ಹೊರೆ ಲಕ್ಷ ಕೋಟಿ ರುಪಾಯಿ ಮೀರಿದೆ. ಆದರೆ, ಆ ಕಂಪನಿಗಳು ಲಾಭದ ಪ್ರಮಾಣ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಗಿಂತಲೂ ಹೆಚ್ಚಿದೆ. ಅದಕ್ಕೆ ಕಾರಣ ಆ ಕಂಪನಿಗಳ ಸಿಬ್ಬಂದಿ ಮೇಲಿನ ವೆಚ್ಚವು ಕಡಮೆ ಇದೆ.
ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಕಂಪನಿಗಳ ಒಂದು ಲಕ್ಷ ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆದರೆ, ಅಷ್ಟರ ಮಟ್ಟಿಗೆ ಒಂದು ಲಕ್ಷ ಉದ್ಯೋಗ ನಷ್ಟವಾದಂತೆ. ಈಗಾಗಲೇ ನಿರುದ್ಯೋಗ ಪ್ರಮಾಣ ಹೆಚ್ಚಾಗಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತಷ್ಟು ಉದ್ಯೋಗ ಕಡಿತ ಮಾಡಿರುವುದು ದೇಶದಲ್ಲಿನ ಆರ್ಥಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೆಚ್ಚು ಉದ್ಯೋಗ ಸೃಷ್ಟಿ ಮಾಡದ ಖಾಸಗಿ ಕಂಪನಿಗಳಿಗೆ ತೆರಿಗೆ ತಗ್ಗಿಸುತ್ತಿರುವ ಕೇಂದ್ರ ಸರ್ಕಾರ ಇತ್ತ ಉದ್ಯೋಗದಾತ ಕಂಪನಿಗಳಿಗೆ ಉತ್ತೇಜನ ನೀಡುವ ಬದಲು ಉದ್ಯೋಗವನ್ನೇ ಕಡಿತ ಮಾಡುತ್ತಿದೆ. ಕೇಂದ್ರ ಸರ್ಕಾರದ ಈ ನೀತಿಗಳು ದೀರ್ಘಕಾಲದಲ್ಲಿ ಮತ್ತಷ್ಟು ನಿರುದ್ಯೋಗ ಸಮಸ್ಯೆಗೆ ಕಾರಣವಾಗುವುದಷ್ಟೇ ಅಲ್ಲ, ಆರ್ಥಿಕ ಅಭಿವೃದ್ಧಿಯ ಹಿನ್ನಡೆಗೂ ಕಾರಣವಾಗುತ್ತದೆ.