ಕೇರಳದಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ಬದ್ಧ ವೈರಿಗಳನ್ನು ಪೌರತ್ವ ತಿದ್ದುಪಡಿ ಕಾಯ್ದೆ ಒಂದು ಮಾಡಿದೆ.
ಕೇರಳ ರಾಜ್ಯದಲ್ಲಿ ಹಲವು ದಶಕಗಳಿಂದ ಬದ್ಧ ವೈರಿಗಳೆಂದೇ ಪರಿಗಣಿಸಲ್ಪಟ್ಟಿರುವ ಸಿಪಿಎಂ ನೇತೃತ್ವದ ಎಲ್ ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಂದೇ ವೇದಿಕೆಯನ್ನು ಹಂಚಿಕೊಂಡು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಸಮರ ಸಾರಿವೆ.
ಸೋಮವಾರ ತಿರುವನಂತಪುರದಲ್ಲಿ ನಡೆದ ಕೇಂದ್ರ ಸರ್ಕಾರದ ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಈ ಎರಡೂ ಪಕ್ಷಗಳು ಕೈಜೋಡಿಸಿದವು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎಲ್ ಡಿಎಫ್ ನೇತೃತ್ವ ವಹಿಸಿದ್ದರೆ, ಯುಡಿಎಫ್ ನೇತೃತ್ವವನ್ನು ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಾಲ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿಣರಾಯಿ ವಿಜಯನ್ ಅವರು, ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ನಾಗರಿಕರಿಗೆ ಸಂವಿಧಾನಬದ್ಧವಾಗಿ ಬಂದಿರುವ ಜೀವಿಸುವ ಹಕ್ಕನ್ನೇ ಕಸಿದುಕೊಳ್ಳುತ್ತಿದೆ. ನಮಗೆಲ್ಲರಿಗೂ ಸಂವಿಧಾನ 14 ನೇ ಪರಿಚ್ಛೇದ ಜೀವಿಸುವ ಮತ್ತು ಸಮಾನತೆಯ ಹಕ್ಕನ್ನು ನೀಡಿದೆ. ಇದಕ್ಕೆ ವಿರುದ್ಧವಾದ ಯಾವುದೇ ಕಾನೂನು ಬಂದರೂ ಅದು ಸಂವಿಧಾನ ವಿರೋಧಿಯಾಗುತ್ತದೆ. ಕೇಂದ್ರ ಸರ್ಕಾರ ಕೇವಲ ಹಿಂದೂಗಳು ಮತ್ತು ಹಿಂದೂಗಳ ಬಗ್ಗೆ ಮೃದು ಧೋರಣೆ ಹೊಂದಿರುವ ಧರ್ಮಗಳ ನಿರಾಶ್ರಿತರ ಬಗ್ಗೆ ಆಲೋಚನೆ ಮಾಡುತ್ತಿದೆ. ಆದರೆ, ಶ್ರೀಲಂಕಾದಿಂದ ಬಂದಿರುವ ತಮಿಳರು, ರೋಹಿಂಗ್ಯಾಗಳ ಬಗ್ಗೆ ಯಾವುದೇ ಚಕಾರವೆತ್ತುತ್ತಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಈ ಕಾಯ್ದೆಯನ್ನು ಸ್ವತಃ ವಿಶ್ವಸಂಸ್ಥೆಯೇ ವಿರೋಧಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಾಲ ಅವರು ಕೇಂದ್ರ ಸರ್ಕಾರ ದೇಶವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಕೆಲವೇ ಕೆಲವು ಧರ್ಮಗಳನ್ನು ಓಲೈಸಲೆಂದೇ ಇಂತಹ ವಿವಾದಾತ್ಮಕ ಕಾಯ್ದೆಯನ್ನು ತರಲು ಹೊರಟಿದೆ. ಈ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕಾಯ್ದೆಯನ್ನು ಜಾರಿಗೆ ತರುವುದನ್ನು ತಡೆಯಬೇಕೆಂದು ಕರೆ ನೀಡಿದರು.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದಿರುವ ಅಲ್ಲಿನ ಮುಸ್ಲಿಮೇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ನೀಡಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಧರ್ಮದ ಆಧಾರದ ಮೇಲೆ ಬಿಜೆಪಿ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ಇಬ್ಬರೂ ನಾಯಕರು ಆಕ್ರೋಶವನ್ನು ಹೊರಹಾಕಿದರು.
ಕೇಂದ್ರ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾಪ ಮಾಡಿದ ದಿನದಿಂದಲೇ ಸಿಪಿಎಂ, ಕಾಂಗ್ರೆಸ್, ಆರ್ ಜೆಡಿ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ತೃಣಮೂಲ ಕಾಂಗ್ರೆಸ್ ಸೇರಿದಂತೆ ಇನ್ನಿತರೆ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಾ ಬಂದಿವೆ. ಆರಂಭದಲ್ಲಿ ಎಲ್ ಡಿಎಫ್ ಮತ್ತು ಯುಡಿಎಫ್ ಕೂಟಗಳು ಪ್ರತ್ಯೇಕವಾಗಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದವು. ಆದರೆ, ಈ ಪ್ರತ್ಯೇಕ ಪ್ರತಿಭಟನೆ ಅಥವಾ ಆಕ್ರೋಶ ಹೊರಹಾಕುವುದರಿಂದ ಸಕಾರಾತ್ಮಕ ಫಲಿತಾಂಶ ಬರುವುದಿಲ್ಲ ಎಂಬುದನ್ನು ಅರಿತ ಉಭಯ ಕೂಟಗಳ ನಾಯಕರು ಒಂದೇ ವೇದಿಕೆಯಲ್ಲಿ ಸೇರಿ ಪ್ರತಿಭಟನೆ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡುವುದು ಒಳಿತು ಎಂಬ ನಿರ್ಧಾರಕ್ಕೆ ಬಂದಿದ್ದರಿಂದ ತಿರುವನಂತಪುರದಲ್ಲಿ ಒಂದು ದೊಡ್ಡ ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟಿಗೆ ಹೋಗಲಿರುವ ಸಿಪಿಎಂ, ದೇಶಾದ್ಯಂತ ಪ್ರತಿಭಟನೆಯನ್ನೂ ನಡೆಸಲು ನಿರ್ಧರಿಸಿದೆ.
ದೇಶದಲ್ಲಿ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿಯೇ ಈ ವಿವಾದಿತ ಕಾಯ್ದೆಯನ್ನು ತಂದು ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಜೆಂಡಾ ಆಗಿರುವ ಧಾರ್ಮಿಕ ದೇಶವನ್ನಾಗಿ ಮಾಡುವ ದುರುದ್ದೇಶ ಈ ಕಾಯ್ದೆಯ ಹಿಂದೆ ಅಡಗಿದೆ. ಈ ಕಾರಣದಿಂದಲೇ ದೇಶವನ್ನು ಜಾತ್ಯತೀತ ರಾಷ್ಟ್ರವನ್ನಾಗಿ ಮಾಡುವ ಬದಲು ಒಂದು ಧಾರ್ಮಿಕ ದೇಶವನ್ನಾಗಿ ಮಾರ್ಪಾಡು ಮಾಡಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ಎಲ್ ಡಿಎಫ್ ಮತ್ತು ಯುಡಿಎಫ್ ನಾಯಕರು ವಾಗ್ದಾಳಿ ನಡೆಸಿದರು.
ಈ ಮೂಲಕ ದೇವರನಾಡಿನಲ್ಲಿ ಆಡಳಿತಾರೂಢ ಎಲ್ ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ತಮ್ಮ ರಾಜಕೀಯ ದ್ವೇಷವನ್ನು ಮರೆತು ಒಗ್ಗಟ್ಟು ಪ್ರದರ್ಶಿಸಿದ್ದು ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶಾಶ್ವತ ವೈರಿಗಳೂ ಅಲ್ಲ ಎಂಬುದನ್ನು ತೋರಿಸಿಕೊಟ್ಟಿವೆ.