Tag: LDF Party

ಪಂಚರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಬರೋಬ್ಬರಿ ರೂ.252 ಕೋಟಿ ಖರ್ಚು ಮಾಡಿದ ಬಿಜೆಪಿ

ಪಂಚರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಬರೋಬ್ಬರಿ ರೂ.252 ಕೋಟಿ ಖರ್ಚು ಮಾಡಿದ ಬಿಜೆಪಿ

ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಹಾಗೂ ಪುದುಚೆರಿ ಚುನಾವಣೆ ಎದುರಿಸಲು ಭಾರತೀಯ ಜನತಾ ಪಾರ್ಟಿ ಬರೋಬ್ಬರಿ ರೂ.252 ಕೋಟಿ ಖರ್ಚು ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ವರದಿ ನೀಡಿದೆ. ಇದರಲ್ಲಿ ಶೇ.60ರಷ್ಟು ಮೊತ್ತವನ್ನು ಪಶ್ಚಿಮ ಬಂಗಾಳದಲ್ಲಿ ಖರ್ಚು ಮಾಡಲಾಗಿದೆ.  ಪಂಚರಾಜ್ಯಗಳ ಚುನಾವಣೆಗಾಗಿ ಬಿಜೆಪಿ ಒಟ್ಟು ರೂ.252,02,71,753 ವ್ಯಯಿಸಿದೆ. ಇದರಲ್ಲಿ ರೂ.43.81 ಕೋಟಿ ಅಸ್ಸಾಂ ಚುನಾವಣೆಗಾಗಿ ಹಾಗೂ ರೂ.4.79 ಕೋಟಿ ಪುದುಚೆರಿ ಚುನಾವಣೆಗಾಗಿ ಖರ್ಚು ಮಾಡಲಾಗಿದೆ. ಈ ಎರಡೂ ಕಡೆ ಬಿಜೆಪಿ ಮೈತ್ರಿಕೂಟ ಅಧಿಕಾರ ಪಡೆದುಕೊಂಡಿದೆ.  ತಮಿಳುನಾಡಿನಲ್ಲಿ ಬಿಜೆಪಿಯ ಮೈತ್ರಿಕೂಟವಾದ ಎಐಎಡಿಎಂಕೆಯಿಂದ ಅಧಿಕಾರವನ್ನು ಡಿಎಂಕೆ ಕಸಿದುಕೊಂಡಿದೆ. ಇಲ್ಲಿ ಬಿಜೆಪಿ ಕೇವಲ 2.6% ಮತಗಳನ್ನು ಪಡೆಯಲಷ್ಟೇ ಶಕ್ತವಾಗಿತ್ತು. ಇದಕ್ಕಾಗಿ ತಮಿಳುನಾಡಿನಲ್ಲಿ ಒಟ್ಟು ರೂ. 22.97 ಕೋಟಿ ಖರ್ಚು ಮಾಡಲಾಗಿದೆ.  ಕೇರಳದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿಯು ಒಟ್ಟು ರೂ.29.24 ಕೋಟಿ ವ್ಯಯಿಸಿದೆ. ಆದರೆ, ಒಂದು ಸೀಟನ್ನೂ ಪಡೆಯಲು ಶಕ್ತವಾಗಿಲ್ಲ. ಇಲ್ಲಿ ಎಡರಂಗ ಮತ್ತೆ ಅಧಿಕಾರ ಹಿಡಿದಿದೆ.  ಪಂಚರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದ ಪಶ್ಚಿಮ ಬಂಗಾಳದಲ್ಲಿ ಬರೋಬ್ಬರಿ ರೂ.151 ಕೋಟಿ ಹಣವನ್ನು ಬಿಜೆಪಿ ಖರ್ಚು ಮಾಡಿದೆ. ಚುನಾವಣೆಗೂ ಮೊದಲು ಆಡಳಿತರೂಢ ಟಿಎಂಸಿಗೆ ಭಾರಿ ಪೈಪೋಟಿ ಒಡ್ಡಿದ್ದ ಬಿಜೆಪಿ ಫಲಿತಾಂಶದ ವೇಳಗೆ ಭಾರಿ ನಿರಾಸೆ ಅನುಭವಿಸಿತ್ತು.  ಆಯೋಗಕ್ಕೆ ಟಿಎಂಸಿ ನೀಡಿರುವ ವರದಿಯಂತೆ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಪಕ್ಷವು 154.28 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.  ಎಲ್ಲಾ ರಾಜಕೀಯ ಪಕ್ಷಗಳಿಂದ ಚುನಾವಣಾ ಖರ್ಚುವೆಚ್ಚದ ವರದಿಯನ್ನು ಆಯೊಗಕ್ಕೆ ಸಲ್ಲಿಕೆ ಮಾಡಲಾಗಿದ್ದು, ಆಯೋಗವು ಈ ದಾಖಲೆಗಳನ್ನು ಬಹಿರಂಗಪಡಿಸಿದೆ.