ಚಳಿಗಾಲದ ಚುಮು ಚುಮು ಚಳಿ ಶುರುವಾಗುತ್ತಿದಂತೆ ಗದಗ್ ಜಿಲ್ಲೆಯ ಮಾಗಡಿ ಪಕ್ಷಿ ತಾಣಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಣ್ಣ ಬಣ್ಣದ ಬಾನಾಡಿಗಳು ಆಗಮಿಸುತ್ತವೆ. ನವೆಂಬರ್ ಎರಡನೆಯ ವಾರದಿಂದ ಈ ಪಕ್ಷಿಗಳ ಕಲರವ ಆರಂಭ. ಈಗ ಮಾಗಡಿ ಕೆರೆಯು ಭರ್ತಿಯಾಗಿದ್ದು ಸಾವಿರಾರು ಪಕ್ಷಿಗಳ ತಾಣವಾಗಿ ಪ್ರವಾಸಿಗರನ್ನು ಹಾಗೂ ಪಕ್ಷಿಪ್ರಿಯರನ್ನು ಕೈಬೀಸಿ ಕರೆಯುತ್ತಿವೆ. ಬೆಳಿಗ್ಗೆಯಾಗುತ್ತಲೇ ಪಕ್ಷಿಗಳ ಕಲರವ ನಿನಾದಗಳನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ಸುತ್ತಮುತ್ತಲಿನ ಜಿಲ್ಲೆಗಳಿಂದ ಜನರು ಬರುತ್ತಿದ್ದಾರೆ. ದೂರದಿಂದ ಧಣಿದು ಬಂದು ನೀರಿಗೆ ದೊಪ್ಪೆಂದು ಬಿದ್ದು ಮೈಯಿಂದ ನೀರ ಸಿಂಚನ ಹೊರಗೆಡವಿ ಮತ್ತೆ ಕಣ್ಣು ಪಿಳುಕಿಸುತ್ತ ಇನ್ನುಳಿದ ಪಕ್ಷಿಗಳ ಜೊತೆಗೆ ಜಲಕ್ರೀಡೆಯ ರಸವನ್ನು ಅನುಭವಿಸುವ ಪರಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಛಾಯಾಗ್ರಾಹಕರು ಬೆಳಿಗ್ಗೆಯಿಂದಲೂ ಕಾಯುತ್ತಿರುತ್ತಾರೆ.
ಯಾವ ಯಾವ ಪಕ್ಷಿಗಳು? ಎಲ್ಲಿಂದ ಬರುತ್ತವೆ?
ಮಾಗಡಿ ಕೆರೆಯು ಹಲವು ವರ್ಷಗಳ ಕಾಲದಿಂದ ವಲಸೆ ಪಕ್ಷಿಗಳಿಗೆ ಪ್ರಿಯ ತಾಣವಾಗಿದೆ. ಇಲ್ಲಿ ಮಲೇಷಿಯಾ, ಟಿಬೆಟ್, ಶ್ರೀಲಂಕಾ, ಆಸ್ಟ್ರೇಲಿಯಾ, ಅಫಘಾನಿಸ್ತಾನ, ನೇಪಾಳ, ಬಾಂಗ್ಲಾ, ಹಿಮಾಚಲ ಪ್ರದೇಶ ಹಾಗೂ ಜಮ್ಮು ಕಾಶ್ಮೀರದಿಂದ ಮಾಗಡಿ ಕೆರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ.
ಪ್ರತಿ ವರ್ಷ ಈ ಸಮಯದಲ್ಲಿ ದೇಶ ವಿದೇಶಗಳಲ್ಲಿರುವ ಈ ಪಕ್ಷಿಗಳು ಆ ಪ್ರದೇಶಗಳು ಶೀತಮಯ ವಾದಾಗ ಉಷ್ಣವಲಯದ ಪ್ರದೇಶಗಳನ್ನು ಅರಸುತ್ತ ಬರುತ್ತವೆ. ದಕ್ಷಿಣ ಭಾರತದ ಹಲವು ಪ್ರದೇಶದ ಕೆರೆಗಳಿಗೆ ಬರುವ ಈ ಪಕ್ಷಿಗಳಲ್ಲಿ ಹಲವು ಮಾಗಡಿ ಕೆರೆಗೆ ಬರುತ್ತವೆ.
ಇಲ್ಲಿ ಏಕೆ ಬರುತ್ತವೆ?
ಮಾಗಡಿ ಕೆರೆ 130 ಎಕರೆ ವಿಸ್ತೀರ್ಣ ಹೊಂದಿದ್ದು, ಬಹು ವರ್ಷಗಳಿಂದಲೂ ಪಕ್ಷಿಗಳಿಗಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಉಷ್ಣ ವಾತಾವರಣ ಹಾಗೂ ಇಲ್ಲಿ ಸಿಗುವ ಚಿಕ್ಕ ಮೀನು, ಕಪ್ಪೆ, ಚಿಕ್ಕ ಹುಳು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹೇರಳವಾಗಿ ಸಿಗುವ ಭತ್ತ, ಕಡಲೆ ಹಾಗೂ ಶೇಂಗಾ ಇವೆಲ್ಲವೂ ಪಕ್ಷಿಗಳಿಗಾಗಿ ಅನುಕೂಲಕರ ವಾತಾವರಣವನ್ನು ಕಲ್ಪಿಸಿವೆ. ಈ ಕೆರೆಯನ್ನು ಸಂರಕ್ಷಿತ ಪಕ್ಷಿ ತಾಣವೆಂದು ಘೋಷಿಸಲಾಗಿದ್ದು ಪಕ್ಷಿಗಳ ಅನುಕೂಲಕ್ಕಾಗಿ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.
ಬೆಳಗಾಗುತ್ತಿದ್ದಂತೆ ದಂಡಿಯಾಗಿ ಆಗಮಿಸುವ ಈ ಪಕ್ಷಿಗಳ ಕಲರವ ಕೇಳುವುದು ಒಂದು ಆಹ್ಲಾದಕರ ಅನುಭವ. ಮುಂಜಾನೆ ಯಿಂದ ಸಂಜೆವರೆಗೆ ಕೆರೆ ಈಜಾಡಿ ಸಂಜೆಯಾಗುತ್ತಿದ್ದಂತೆ ಕಪ್ಪತಗುಡ್ಡದ ತಪ್ಪಲಿನ ಬಯಲು ಸೀಮೆಯ ಪ್ರದೇಶಗಳಿಗೆ ಹಾರಿ ಹೋಗುತ್ತವೆ.
ಯಾವ ಯಾವ ಪಕ್ಷಿಗಳು ಬರುತ್ತವೆ?
ಬಾರ್ ಹೆಡ್‌ಡ್ ಗೊಜ್, ಬ್ರಾಹ್ಮಿಣಿ ಡಕ್, ಪೆಂಟೆಡ್ ಸ್ಪಾರ್ಕ್, ಬ್ಲಾಕ್ ಇಬಿಸ್, ವೈಟ್ ಇಬಿಸ್, ಬ್ಲಾಕ್ ನೆಕ್ಕಡ್‌ಸ್ಟಾರ್ಕ್, ವೈಟ್ ನೆಕ್ಕಡ್ ಸ್ಪಾರ್ಕ್, ಸ್ಕಾರ್ಪ್‌ಡಕ್, ಲಿಟಲ್ ಕಾರ್ಮೊರೆಂಟ್ ಸ್ಪಾಟಬಿಲ್, ಗೇಡಕ್ ಕೂಟ್ ಹಾಗೂ ಮುಂತಾದ ಜಾತಿಯ ವಿವಿಧ ವರ್ಣದ ಪಕ್ಷಿಗಳು ಇಲ್ಲಿ ಬರುತ್ತವೆ.
ಅರಣ್ಯ ಇಲಾಖೆ ಹಾಗೂ ಸಾರ್ವಜನಿಕ ಸಹಯೋಗ:
ಕಳೆದ ವರ್ಷ 12 ಪಕ್ಷಿಗಳು ಕಲುಷಿತ ನೀರಿನಿಂದ ಸತ್ತಿದ್ದು, ಈ ಬಾರಿ ಸ್ವತ: ಗ್ರಾಮಸ್ಥರು ಪಕ್ಷಿ ರಕ್ಷಣೆಗೆ ಮುಂದೆ ಬಂದಿದ್ದಾರೆ. ಕಳೆದ ಎರಡು ತಿಂಗಳಿನಿಂದ ಗ್ರಾಮದ ಜನರಿಗೆ ಅರಣ್ಯ ಇಲಾಖೆಯ ಸಹಯೋಗದಿಂದ ಕೆರೆಯ ಹತ್ತಿರ ಬಟ್ಟೆ ತೊಳೆಯಲು ಹಾಗೂ ಶೌಚಕ್ಕೆ ಹೋಗಬಾರದೆಂದು ತಿಳಿಹೇಳಿದ್ದಾರೆ. ಅರಣ್ಯ ಇಲಾಖೆಯು ಪಕ್ಷಿ ವೀಕ್ಷಣೆಗಾಗಿ ದುರ್ಬೀನು ಹಾಗೂ ವೀಕ್ಷಕ ಕೇಂದ್ರಗಳನ್ನು ನಿರ್ಮಿಸಿದ್ದಾರೆ. ಕೆರೆಯ ಸುತ್ತಲೂ ಇರುವ ಜಾಗವನ್ನು ಸ್ವಚ್ಛಗೊಳಿಸಿದ್ದಾರೆ. ಪಕ್ಷಿಗಳ ಬೇಟೆಯಾಡದಂತೆ ನಿಗಾ ವಹಿಸಿದ್ದಾರೆ.
ಗದಗ್ ಜಿಲ್ಲೆಯ ಅರಣ್ಯಾಧಿಕಾರಿಗಳಾದ ಸೂರ್ಯಸೇನ್ ಹೇಳಿದ್ದು ಹೀಗೆ, “ಈ ಬಾರಿ ಗ್ರಾಮಸ್ಥರ ಸಹಯೋಗವೂ ನಮಗಿತ್ತು. ಕೆರೆಯನ್ನು ಕಲುಷಿತಗೊಳಿಸದಂತೆ ಎಲ್ಲರಿಗೂ ಮನಮುಟ್ಟುವಂತೆ ತಿಳಿಹೇಳಿದೆವು. ಅವರೆಲ್ಲರ ಸಹಕಾರದಿಂದ ಪಕ್ಷಿಗಳು ಇಂದು ನಿರ್ಭೀತಿಯಾಗಿ ವಿಹರಿಸುತ್ತಿವೆ. ಇದೊಂದು ಸರ್ಕಾರ ಹಾಗೂ ಸಾರ್ವಜನಿಕ ಸಹಕಾರದ ಉತ್ತಮ ಉದಾಹರಣೆ”.
ಪಕ್ಷಿ ಪ್ರಿಯ ಹಾಗೂ ಪರಿಸರ ಪ್ರೇಮಿಗಳಾದ ಗದುಗಿನ ಮುತ್ತಣ್ಣ ಭರಡಿ ಹೇಳುವ ಪ್ರಕಾರ, “ಪಕ್ಷಿಧಾಮ ಎಂದರೆ ರಂಗನತಿಟ್ಟು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಉತ್ತರ ಕರ್ನಾಟಕದ ಬಹುತೇಕ ಜನರಿಗೆ ಗದುಗಿನ ಹತ್ತಿರವಿರುವ ಮಾಗಡಿ ಕೆರೆಯಲ್ಲೇ ವಿಶಿಷ್ಟ ಪಕ್ಷಿಗಳು ಬರುತ್ತವೆ ಎಂಬುದರ ಬಗ್ಗೆ ಗೊತ್ತಿಲ್ಲ. ಪಕ್ಷಿ ಪ್ರೇಮಿಗಳಿಗೆ ಹಾಗೂ ಛಾಯಾಗ್ರಾಹಕರಿಗೆ ಮಾತ್ರ ಗೊತ್ತು. ಇದರ ಬಗ್ಗೆ ಇನ್ನೂ ಅರಿವು ಮೂಡಿಸಬೇಕಿದೆ. ವಿದೇಶದಿಂದ ಹಂಪಿ, ಬದಾಮಿ ನೋಡಲು ಬರುವ ಪ್ರವಾಸಿಗರನ್ನು ಇತ್ತ ಸೆಳೆಯುವ ಪ್ರಯತ್ನ ಮಾಡಬೇಕು. ಇದಕ್ಕಾಗಿ ಮಾಗಡಿ ಕೆರೆಯ ಹತ್ತಿರ ಹಾಗೂ ಗದುಗಿನ ಹತ್ತಿರ ವಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಗೂ ಕೊಪ್ಪಳದ ಹತ್ತಿರ ಮಾಗಡಿ ಪಕ್ಷಿ ಧಾಮದ ಬಗ್ಗೆ ಫಲಕಗಳನ್ನು ಹಾಕಬೇಕು ಎಂಬುದಷ್ಟೇ ನಮ್ಮ ಆಶಯ”.
ಎಲ್ಲಿದೆ ಇದು?
ಗದುಗಿನಿಂದ ಲಕ್ಷ್ಮೇಶ್ವರಕ್ಕೆ ಹೋಗುವ ರಸ್ತೆಯಲ್ಲಿ ಅಂದರೆ ಗದುಗಿನಿಂದ ಸುಮಾರ 25 ಕಿಮಿಗಳ ದೂರದಲ್ಲಿದೆ ಈ ಪಕ್ಷಿ ತಾಣ. ಸರ್ಕಾರಿ ಬಸ್ಸುಗಳು ಇಲ್ಲಿ ಬರುತ್ತವೆ. ಖಾಸಗಿ ವಾಹನವಿದ್ದರಂತೂ ಲೇಸು. ಇಲ್ಲಿ ತಿನ್ನಲು ಚಿಕ್ಕ ಚಿಕ್ಕ ಚಹದಂಗಡಿಗಳಿವೆ. ಇಲ್ಲಿ ಪಕ್ಷಿಗಳ ಬಗ್ಗೆ ತಿಳಿಸಲು ಅರಣ್ಯ ಇಲಾಖೆಯಿಂದ ಸಿಬ್ಬಂದಿಗಳೂ ಇದ್ದಾರೆ.