ಕೇರಳದ ಪ್ರಸಿದ್ಧ ಪ್ರವಾಸಿ ಜಿಲ್ಲೆ ವಯನಾಡ್ ಸೇರಿದಂತೆ, ಕರ್ನಾಟಕ ಮತ್ತು ಕೇರಳಗಳ ಗಡಿಭಾಗದ ಪ್ರದೇಶಗಳಿಗೆ ಪ್ರಮುಖ ಸಂಪರ್ಕದ ಕೊಂಡಿಯಾಗಿರುವ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766ಇಂದು ಅನೇಕ ವಿವಾದಗಳ ಕೇಂದ್ರಬಿಂದು. ಇಲ್ಲಿ ಜಾರಿಯಲ್ಲಿರುವ ರಾತ್ರಿ ವಾಹನ ಸಂಚಾರ ನಿಷೇಧ ಎರಡೂ ರಾಜ್ಯಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಇದೀಗ ಮತ್ತೊಮ್ಮೆ ವಿವಾದ ಭುಗಿಲೆದ್ದಿದೆ.
ಈ ವಿವಾದ ಹಳೆಯದಾದರೂ, ಆಗೊಮ್ಮೆ ಈಗೊಮ್ಮೆ ಉಭಯ ರಾಜ್ಯಗಳ ನಡುವಣ ವಾಗ್ವಾದ ಭುಗಿಲೇಳುತ್ತದೆ. ಈ ಬಾರಿ ಈ ವಿವಾದ ಮತ್ತೆ ಭುಗಿಲೇಳುವಂತೆ ಮಾಡಿದ್ದು, ಈ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ವಿರೋಧಿಸಿ ಕೇರಳದ ವೈನಾಡಿನ ಸುಲ್ತಾನ್ ಬತ್ತೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಆರಂಭಿಸಿದ ಉಪವಾಸ ಸತ್ಯಾಗ್ರಹ. ಸಾವಿರಾರು ವಿದ್ಯಾರ್ಥಿಗಳು ಮತ್ತು ರೈತರು ಈ ಧರಣಿಗೆ ಬೆಂಬಲವನ್ನೂ ವ್ಯಕ್ತಪಡಿಸಿದರು. ವೈನಾಡಿನ ಸಂಸದ ಮತ್ತು ಕಾಂಗ್ರೆಸ್‍ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಧರಣಿ ನಿರತರ ಜೊತೆಗೆ ನಿಂತರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಕಾನೂನು ಹೋರಾಟ ಮಾಡುವ ಭರವಸೆ ನೀಡಿದ್ದಾರೆ. ಇದು ಕರ್ನಾಟಕದಲ್ಲಿ ಆತಂಕಕ್ಕೆ ಕಾರಣವಾದ ಸಂಗತಿ.
ಆದರೆ, ಈ ರಾತ್ರಿ ಸಂಚಾರ ನಿಷೇಧ ಇಂದು ನಿನ್ನೆಯದಲ್ಲ. ವನ್ಯಜೀವಿಗಳ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ದಶಕಗಳ ಹಿಂದೆಯೇ ಇಲ್ಲಿ ರಾತ್ರಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ತಮಿಳುನಾಡಿನ ಮಧುಮಲೈ, ಕರ್ನಾಟಕದ ಬಂಡೀಪುರ-ನಾಗರಹೊಳೆ ಮತ್ತು ಕೇರಳದ -ವೈನಾಡ್ ಅರಣ್ಯ ವಲಯವನ್ನು ಸೇರಿದಂತೆ ಈ ಪ್ರದೇಶ ಮೂರು ರಾಜ್ಯಗಳ ಸಂರಕ್ಷಿತಾರಣ್ಯದಲ್ಲಿ ಈ ರಾತ್ರಿ ಸಂಚಾರ ನಿಷೇಧವಿದೆ. ರಾತ್ರಿಯ ವೇಳೆಯಲ್ಲಿ ಈ ರಸ್ತೆಯಲ್ಲಿನ ವಾಹನ ಸಂಚಾರದಿಂದ ಬಹಳಷ್ಟು ಪ್ರಾಣಿಗಳು ಸಾವಿಗೀಡಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನಿಷೇಧ ಹೇರಲಾಗಿದೆ.

ಚಾಮರಾಜನಗರ ಜಿಲ್ಲಾಡಳಿತ ಇಲ್ಲಿ 2009ರಲ್ಲಿ ರಾತ್ರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ರಾತ್ರಿ ವಾಹನಗಳ ಸಂಚಾರದಿಂದಾಗಿ ಪ್ರಾಣಿಗಳ ದೈನಂದಿನ ದಿನಚರಿಯಲ್ಲಿ ಮತ್ತು ಜೈವಿಕ ಸರಪಣಿಯಲ್ಲಿ ಏರುಪೇರುಗಳಾಗುತ್ತವೆ ಎಂದು ಅರಣ್ಯ ಇಲಾಖೆ ನೀಡಿದ ವರದಿ ಆಧರಿಸಿ ಈ ನಿಷೇಧ ಹೇರಲಾಗಿತ್ತು. ಈ ನಿಷೇಧ ಆದೇಶ ಪ್ರಕಾರ ರಾತ್ರಿ 9 ರಿಂದ ಬೆಳಗ್ಗೆ 6 ರ ವರೆಗೆ ಈ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಎರಡೂ ರಾಜ್ಯಗಳಿಂದ ನಿಗದಿತ ಸಂಖ್ಯೆಯ (ಎರಡೂ ಕಡೆಯಿಂದ 8 ಬಸ್ಸುಗಳು) ಬಸ್ಸುಗಳು ಹಾಗೂ ಆಸ್ಪತ್ರೆಯ ಡಿಸ್ಟಾರ್ಜ್ ವರದಿ ಆಧರಿಸಿ ಅಂಬ್ಯುಲೆನ್ಸ್‍ಗಳನ್ನು ಮಾತ್ರ ಈ ಅವಧಿಯಲ್ಲಿ ಬಿಡಲಾಗುತ್ತದೆ.
ಈ ನಿಷೇಧ ಜಾರಿಗೆ ಬಂದ ಬಳಿಕ ಉಭಯ ರಾಜ್ಯಗಳ ಬಸ್ಸು ಮಾಲೀಕರು ಈ ನಿಷೇಧವನ್ನು ಹಿಂತೆಗೆಯುವಂತೆ ಕೋರಿದ್ದರು. ಆದರೆ ಇದನ್ನು ವಿರೋಧಿಸಿ ಪ್ರಾಣಿಪ್ರಿಯರು, ಪರಿಸರವಾದಿಗಳು ಉಚ್ಛ ನ್ಯಾಯಾಲಯದ ಮೊರೆ ಹೊಕ್ಕರು. ಉಚ್ಛ ನ್ಯಾಯಾಲಯ ಈ ರಾತ್ರಿ ಸಂಚಾರ ನಿಷೇಧಕ್ಕೆ ಅಸ್ತು ಎಂದಿತ್ತು. ಇದೀಗ ಈ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇದು ಇಡೀ ಪ್ರಕರಣದ ಸಂಕ್ಷಿಪ್ತ ರೂಪ.
ಆದರೆ, ಈ ನಿಷೇಧಕ್ಕೆ ಆರಂಭದಿಂದದಲೂ ಕೇರಳ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಸರಕು ಸಾಗಾಣಿಕೆಗೆ ತೊಂದರೆ, ರೈಲ್ವೇ ಮಾರ್ಗಗಳಿಲ್ಲ, ಪ್ರಸ್ತುತ ಮಾರ್ಗಕ್ಕಿಂತ 35 ಕಿಮೀ ಹೆಚ್ಚುವರಿ ಪ್ರಯಾಣ ಮಾಡಬೇಕಾಗಿರುವ ಕೇರಳದ ಮಾನಂತವಾಡಿಯಿಂದ ಗೋಣಿಕೊಪ್ಪ ಮಾರ್ಗವಾಗಿ ಮೈಸೂರಿಗೆ ಬರುವ ಬದಲೀ ಮಾರ್ಗದ ಪ್ರಯಾಣ ದೀರ್ಘಾವಧಿಯದ್ದು, ಎಂದೆಲ್ಲ ನೆಪ ಹುಡುಕಿ ನಿಷೇಧವನ್ನು ತೆಗೆಯುವಂತೆ ಒತ್ತಡ ಹೇರುತ್ತಿದೆ. ಜೆಡಿಎಸ್-ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅಂದಿನ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಈ ರಸ್ತೆಯಲ್ಲಿ ಎತ್ತರಿಸಿದ ಮಾರ್ಗ ನಿರ್ಮಿಸಿ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರಸ್ತಾಪ ಮುಂದಿಟ್ಟು ಪರಿಸರ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಹಿಂದೆ ಇದ್ದದ್ದು ಕೇರಳದ ನಾನಾ ಲಾಬಿಗಳು ಎಂಬುದು ಬಹಿರಂಗ ರಹಸ್ಯ.
ಮತ್ತೆ ವಿವಾದಕ್ಕೆ ಕಾರಣ ಏನು?
ಈಗ ಒಮ್ಮೆಗೆ ಕೇರಳದಲ್ಲಿ ವಿವಾದ ಭುಗಿಲೇಳಲು ಕಾರಣವೇನು ಎಂಬುದನ್ನು ಹುಡುಕಹೊರಟರೆ ಇಡೀ ವಿವಾದ ಹಿಂದಿನ ಸತ್ಯ ಅರಿವಾಗುತ್ತದೆ. ಅಸಲಿಗೆ ಈ ವಿವಾದ ಭುಗಿಲೇಳಲು ರಾತ್ರಿ ಸಂಚಾರ ನಿಷೇಧ ಕಾರಣ ಅಲ್ಲ ಎನ್ನುತ್ತಾರೆ ಅಲ್ಲಿನ ಪರಿಸರವಾದಿಗಳು. ಇಂಡಿಯನ್ ವೈಲ್ಡ್‍ಲೈಫ್ ಎಕ್ಸ್‍ಪ್ಲೋರರ್ಸ್ ಎಂಬ ದೇಶಾದ್ಯಂತ ಸ್ವಯಂಸೇವಕರನ್ನು ಹೊಂದಿರುವ ಸಂಸ್ಥೆಯ ಉಪಾಧ್ಯಕ್ಷ ಕೇರಳದ ಅಮಲ್ ಜಾರ್ಜ್ ಪ್ರಕಾರ ಇಲ್ಲಿನ ಜನರಲ್ಲಿ ಬಂಡೀಪುರ ಹೆದ್ದಾರಿಯನ್ನು ಶಾಶ್ವತವಾಗಿ ಮುಚ್ಚಲಾಗುತ್ತದೆ ಎಂದು ತಪ್ಪು ತಿಳುವಳಿಕೆ ಮೂಡಿಸಿ ವಿವಾದ ಸೃಷ್ಟಿಸಲಾಗಿದೆ. “ಹೀಗಾಗಿ ಜನ ಪ್ರತಿಭಟಿಸುತ್ತಿದ್ದಾರೆ,” ಎನ್ನುತ್ತಾರೆ ಅವರು. “ಬೇರೆ ಬೇರೆ ಲಾಬಿಗಳ ಪರವಾಗಿರುವವರು ಜನರನ್ನು ಎತ್ತಿ ಕಟ್ಟಿದ್ದಾರೆ. ರಾತ್ರಿ ವೇಳೆ ಕಳ್ಳಸಾಗಾಣಿಕೆಗೆ ಅನುಕೂಲವಾಗಬೇಕು ಎಂಬುದು ಇದರ ಹಿಂದಿನ ರಹಸ್ಯ. ಇಲ್ಲವಾದಲ್ಲಿ ರಾತ್ರಿ ಗುಂಡ್ಲುಪೇಟೆಗೆ ಬರುವಂಥ ತುರ್ತು ಕೇರಳಿಗರಿಗೇನಿದೆ? ಅಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಇದೆಯೇ,” ಎಂದು ಪ್ರಶ್ನಿಸುತ್ತಾರೆ ಅಮಲ್ ಜಾರ್ಜ್.
“ಕಾಡು ಪ್ರಾಣಿಗಳು ಎಲ್ಲರಿಗೂ ಸೇರಿದ್ದು. ಅದು ಆ ರಾಜ್ಯದ್ದು, ಈ ರಾಜ್ಯದ್ದು ಎಂದು ವಿಭಜಿಸಲು ಸಾಧ್ಯವಿಲ್ಲ. ಈ ಪ್ರತಿಭಟನೆಗಳು ರಾಜಕೀಯ ಪ್ರೇರಿತವಾದುವು. ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಅಲ್ಲಿನ ಪರಿಸರಪ್ರಿಯರು ಈ ವಿವಾದದ ಕುರಿತು ಬಹಿರಂಗ ಹೇಳಿಕೆ ನೀಡಲು ಅಂಜಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಇಂಡಿಯನ್ ವೈಲ್ಡ್‍ಲೈಫ್ ಎಕ್ಸ್‍ಪ್ಲೋರರ್ಸ್ ನ ಅಧ್ಯಕ್ಷೆ , ಕರ್ನಾಟಕದ ಭಾಗ್ಯಲಕ್ಷ್ಮಿ.
ಯುನೈಟೆಡ್ ಕನ್ರ್ಸವೇಶನ್ ಮೂವ್‍ಮೆಂಟ್ ನ ಜೋಸೆಫ್ ಹೂವರ್ ಪ್ರಕಾರ, ಸುಪ್ರೀಂ ಕೋರ್ಟ್ ವಕೀಲ ಹರೀಶ್ ಸಾಳ್ವೆ ಸಲ್ಲಿಸಿದ್ದ ಅರ್ಜಿಯ ಪರಿಶಿಲನೆ ನಡೆಸುವಾಗ ಸುಪ್ರಿಂ ಕೋರ್ಟ್, ಈ ಹೆದ್ದಾರಿಯನ್ನು ಶಾಶ್ವತವಾಗಿ ಮುಚ್ಚುವ ಬಗ್ಗೆ ಪ್ರಸ್ತಾಪಿಸಿತ್ತು ಮತ್ತು ಬದಲೀ ಮಾರ್ಗಗಳನ್ನು ಸೂಚಿಸುವಂತೆ ತಿಳಿಸಿತ್ತು. “ಅದೊಂದು ಪಾಸಿಂಗ್ ರೆಫರೆನ್ಸ್ ಅಷ್ಟೇ,” ಎನ್ನುತ್ತಾರೆ ಹೂವರ್.

“ಕರ್ನಾಟಕದ ಗಡಿಭಾಗದಲ್ಲಿರುವ ಮೂಲೆಹೊಳೆ ಚೆಕ್‍ಪೋಸ್ಟ್‍ನಲ್ಲಿ ಸಂಗ್ರಹಿಸಿದ ಹತ್ತು ದಿನಗಳ ವಾಹನ ಸಂಚಾರದ ದಾಖಲೆ ಈ ಹೆದ್ದಾರಿಯಲ್ಲಿ ಪ್ರತಿನಿತ್ಯ ಸರಿಸುಮಾರು 650 ಲಾರಿಗಳು ಮತ್ತು ಟ್ರಕ್‍ಗಳು ಓಡಾಡುತ್ತವೆ. ದಿನವೊಂದಕ್ಕೆ 90 ಬಸ್ಸುಗಳು ಮತ್ತು 300 ಕಾರು, ಜೀಪು ಈ ದಾರಿಯನ್ನು ಬಳಸುತ್ತವೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಈ ವಾಹನಗಳ ಓಡಾಟ ಇನ್ನೂ ಹೆಚ್ಚಾಗುತ್ತದೆ ಎನ್ನುತ್ತದೆ. ವಾಹನಗಳ ಈ ಅಂಕಿಅಂಶಗಳು ಇಲ್ಲಿ ಇಲ್ಲಿನ ಸ್ಥಳೀಯರಾಗಲಿ ಅಥವಾ ವ್ಯಾಪಾರವಾಗಲಿ ರಾತ್ರಿ ಸಂಚಾರ ನಿಷೇಧದಿಂದ ಬಾಧಿತವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದರೂ ಕೇರಳದ ಅಕ್ಷರಸ್ಥ ಜನರು ಬೀದಿಗಿಳಿದು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ರೆಸಾರ್ಟ್ , ಹೋಮ್ ಸ್ಟೇ ಮಾಲೀಕರು ಮತ್ತು ಇತರ ವಾಣಿಜ್ಯ ವರ್ತಕರು ಅವರಲ್ಲಿ ತಪ್ಪು ತಿಳುವಳಿಕೆ ಮೂಡಿಸಿ ಅವರ ಹಾದಿ ತಪ್ಪಿಸುತ್ತಿದ್ದಾರೆ” ಎಂದು ಹೂವರ್ ಅಭಿಪ್ರಾಯ ಪಡುತ್ತಾರೆ.
“ಸರ್ವೋಚ್ಛ ನ್ಯಾಯಾಲಯದ ಈ ಸೂಚನೆ ಬೆಂಬಲಿಸಿ ಜನಜಾಗೃತಿ ಮೂಡಿಸಲು ನಾವು ನಿರ್ಧರಿಸಿದ್ದೇವೆ. ಜನರು ಅರಣ್ಯಗಳ ಬಗ್ಗೆ ಮತ್ತು ತಮ್ಮ ಮುಂದಿನ ಜನಾಂಗದ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದರೆ ಅವರು ಈಗಾಗಲೇ ಲಭ್ಯವಿರುವ ಬದಲೀ ಮಾರ್ಗದಲ್ಲಿ ಸಂಚರಿಸಬಹುದು’ ಎನ್ನುತ್ತಾರೆ ಹೂವರ್.
ಈ ನಡುವೆ ಕೇರಳದ ಪ್ರತಿಭಟನಾಕಾರರರ ತಪ್ಪು ಅಭಿಪ್ರಾಯ ಹೋಗಲಾಡಿಸಲು ಕರ್ನಾಟಕ ಅರಣ್ಯ ಇಲಾಖೆ ಮುಂದಾಗಿದೆ. `ಹಗಲು ಹೊತ್ತಿನಲ್ಲಿ ರಾಷ್ಟ್ರೀಯ ಹೆದ್ದಾರಿ 212(766)ರಲ್ಲಿ ಸಂಚಾರಕ್ಕೆ ನಿರ್ಬಂಧ ಹೇರುವ ಯಾವ ಪ್ರಸ್ತಾಪಗಳೂ ಸರ್ಕಾರದ ಮುಂದಿಲ್ಲ. ಹಗಲು ವೇಳೆಯಲ್ಲಿ ಈ ರಸ್ತೆ ಎಂದಿನಂತೆ ಬೆಳಗ್ಗೆ 6 ರಿಂದ ರಾತ್ರಿ 9 ರ ವರೆಗೆ ಸಂಚಾರಕ್ಕೆ ಮುಕ್ತವಾಗಿರುತ್ತದೆ’ ಎಂದು ಇಲಾಖೆ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದೆ.