ಪುಟ್ಟ ಜಿಲ್ಲೆ ಕೊಡಗು ತನ್ನ ವಿಶಿಷ್ಟ ಸಂಸ್ಕೃತಿಯಿಂದಾಗಿ ರಾಜ್ಯದಲ್ಲೆ ಭಿನ್ನವಾಗಿ ಗುರುತಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮವೂ ಕೂಡ ರಾಕ್ಷಸನಂತೆ ಬೆಳೆದಿದ್ದು ಇದರಿಂದ ಜಿಲ್ಲೆಯ ಭೌಗೋಳಿಕತೆಗೆ ಹಾನಿಯೂ ಆಗಿದೆ. ಕೊಡಗಿನಲ್ಲಿ ಈಗ ಇರುವುದು ಹೋಂ ಸ್ಟೇ ಸಂಸ್ಕೃತಿ. ಒಂದು ದಶಕದ ಮೊದಲು ಎಲ್ಲಿ ಕಣ್ಣು ಹಾಯಿಸಿದರು ದೂರದ ಬೆಟ್ಟ ಗುಡ್ಡಗಳ ದಟ್ಟ ಹಸಿರಿನ ವೃಕ್ಷ ಸಂಪತ್ತು ಕಣ್ಣಿಗೆ ರಾಚುತಿತ್ತು. ಆದರೆ ಇಂದು ಇಂತಹ ದೃಶ್ಯಗಳು ಕಾಣದಾಗುತ್ತಿವೆ. ಎಲ್ಲೆಡೆಯೂ ಗುಡ್ಡ ಬೆಟ್ಟಗಳನ್ನು ಕೊರೆದು ಕಟ್ಟಡಗಳನ್ನು ನಿರ್ಮಿಸಿರುವುದು ಸಾಮಾನ್ಯವಾಗಿದೆ. ಈ ರೀತಿ ಅವೈಜ್ಞಾನಿಕ ಗುಡ್ಡ ಕೊರೆತದಿಂದ ಭೂ ಕುಸಿತಕ್ಕೂ ಕಾರಣವಾಗಿದೆ ಎಂದು ಈ ಹಿಂದೆಯೇ ತಜ್ಞರು ಎಚ್ಚರಿಸಿದ್ದಾರೆ. ಹಾಗಾಗಿ ಈಗ ಜಿಲ್ಲಾಡಳಿತ ಈ ತಿಂಗಳಿನಿಂದ ಗುಡ್ಡಗಾಡಿನಲ್ಲಿ ಭೂ ಪರಿವರ್ತನೆಗೆ ಅವಕಾಶ ನಿಷೇಧಿಸಿದೆ.
ಅದೇನೇ ಇದ್ದರೂ ಪ್ರವಾಸೋದ್ಯಮದ ಬೆಳವಣಿಗೆ ಜಿಲ್ಲೆಯಲ್ಲಿ ಸಾವಿರಾರು ಉದ್ಯೋಗ ಸೃಷ್ಟಿ ಮಾಡಿಕೊಟ್ಟಿದೆ. ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪ ಭೂ ಕುಸಿತದಿಂದ ನಲುಗಿ ಹೋಗಿರುವ ಜನತೆಗೆ ತಮ್ಮ ತೋಟ ಗದ್ದೆಗಳಲ್ಲೇ ಹೋಂ ಸ್ಟೇ ಮಾಡಿಕೊಂಡು ಪ್ರವಾಸಿಗರಿಗೆ ಆತಿಥ್ಯ ನೀಡಿದ್ದರಿಂದ ಕೈ ತುಂಬಾ ಹಣವನ್ನೂ ಮಾಡಿಕೊಂಡಿದ್ದಾರೆ. ಇದರಲ್ಲೇ ಲಕ್ಷಾಧಿಪತಿಗಳಾದವರೂ ನೂರಾರು ಜನರಿದ್ದಾರೆ. ಅದೆಲ್ಲ ಗತ ವೈಭವ. ಈಗ ಎರಡು ವರ್ಷಗಳಿಂದ ಪ್ರವಾಸೋದ್ಯಮವೂ ಸೊರಗಿ ಹೋಗಿದೆ. ಮತ್ತೊಂದೆಡೆ ಕೋವಿಡ್-19 ಕಾರಣದಿಂದಾಗಿ ಲಾಕ್‌ಡೌನ್ ಘೋಷಿಸಿದ ನಂತರ ಪ್ರವಾಸಿಗರ ಆಗಮನವೂ ಕಡಿಮೆ ಆಗಿದೆ.
ಈ ನಡುವೆ ಕೃಷಿ ಬೆಳೆಗಳಿಗೆ ಬೆಲೆಯೂ ಕುಸಿದಿದ್ದು ಕಾಫಿ ಬೆಳೆಗಾರರು ತಮ್ಮ ನಿತ್ಯ ಜೀವನ ಸಾಗಿಸುವುದಕ್ಕೆ ಹೈರಾಣಾಗಿದ್ದಾರೆ. ಒಂದೆಡೆ ವ್ಯಾಪಕವಾಗಿ ಏರಿರುವ ರಸಗೊಬ್ಬರ, ಕ್ರಿಮಿನಾಶಕ ಮತ್ತು ಕಾರ್ಮಿಕರ ಕೂಲಿ. ಮತ್ತೊಂದೆಡೆ ಕಾಫಿ ಮತ್ತು ಏಲಕ್ಕಿ ಬೆಳೆಗಳಿಗೆ ಬೆಲೆ ಸಂಪೂರ್ಣವಾಗಿ ಕುಸಿದಿದೆ. ಕೊಡಗು ಪುಟ್ಟ ಜಿಲ್ಲೆ ಆಗಿದ್ದರೂ ದೇಶದ ಕಾಫಿ ಉತ್ಪಾದನೆಯಲ್ಲಿ ಚಿಕ್ಕದೇನಲ್ಲ. ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಶೇಕಡಾ 30 ಕ್ಕೂ ಅಧಿಕ ಪಾಲು ಈ ಜಿಲ್ಲೆಯದು ಎಂಬ ಹೆಗ್ಗಳಿಕೆ ಹೊಂದಿದೆ. ಒಟ್ಟು ಉತ್ಪಾದನೆಯಾದ 3.60 ಲಕ್ಷ ಟನ್ ಗಳಲ್ಲಿ ಜಿಲ್ಲೆಯ ಉತ್ಪಾದನೆ ಬರೋಬ್ಬರಿ 1.2 ಲಕ್ಷ ಟನ್ ಗಳಾಗಿದೆ. ರಾಜ್ಯದ ಒಟ್ಟು ಕಾಫಿ ಉತ್ಪಾದನೆ 2.2 ಲಕ್ಷ ಟನ್‌ಗಳಾಗಿದೆ.

ಕಾಫಿಯ ಬೆಲೆ ಈಗ 50 ಕೆಜಿಯ ಅರೇಬಿಕಾ ಪಾರ್ಚ್‌ಮೆಂಟ್ ಗೆ 10,500 ರೂಪಾಯಿಗಳಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ಉತ್ತಮ ದರವೇ. ಅದರೆ ಕಳೆದ ಎರಡು ವರ್ಷಗಳಿಂದ ಅತಿ ವೃಷ್ಟಿ ಆಗಿರುವ ಕಾರಣ ತೋಟದಲ್ಲಿ ಬೆಳೆಯೇ ಇಲ್ಲ ಅಂದು ಅಲವತ್ತುಕೊಳ್ಳುತ್ತಾರೆ ಸೋಮವಾರಪೇಟೆ ತಾಲ್ಲೂಕು ಯಡೂರಿನ ಕಾಫಿ ಬೆಳೆಗಾರ ಚಿದಾನಂದ ಅವರು. ಕಾಫಿ ಮುಕ್ತ ಮಾರುಕಟ್ಟೆಗೆ ಬರುವುದಕ್ಕೂಮೊದಲು ಬೆಳೆಗಾರರ ಆದಾಯ ತೀರಾ ಕಡಿಮೆಯಾಗಿತ್ತು. ತೋಟಗಳನ್ನು ನಿರ್ವಹಣೆ ಮಾಡುವುದೇ ದುಸ್ತರವಾಗಿ ಅನೇಕರು ತೋಟಗಳನ್ನು ಮಾರಾಟ ಮಾಡಿದ್ದರು. ನಂತರ ಬೆಳೆಗೆ ಒಂದಷ್ಟು ಹಣ ಸಿಗತೊಡಗಿತಾದರೂ 50 ಕೆಜಿಗೆ ಹತ್ತು ಸಾವಿರ ರೂಪಾಯಿಗಳ ದರ ಕಡಿಮೆಯೇ ಎಂದೂ ಅವರು ಹೇಳುತ್ತಾರೆ. ಏಕೆಂದರೆ ಕಳೆದ ಒಂದು ದಶಕದಲ್ಲಿ ರಸಾಯನಿಕಗಳ ದರ ಎಲ್ಲಕ್ಕಿಂತ ಹೆಚ್ಚಾಗಿ ಕೂಲಿ ಕಾರ್ಮಿಕರ ದಿನಗೂಲಿ ದ್ವಿಗುಣಗೊಂಡಿದೆ. ಹೀಗಿರುವಾಗ ಬೆಳೆಗೆ ಸೂಕ್ತ ದರ ದೊರೆಯಬೇಕಿದೆ ಎಂದು ಅವರು ಹೇಳಿದರು.
ಇದೇ ಅಲ್ಲದೆ ಕಾಫಿ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಲಾಗುತಿದ್ದ ಕಿತ್ತಳೆ ಸಂಪೂರ್ಣ ನಶಿಸಿ ಹೋಗಿದೆ. ಒಂದು ಕಾಲದಲ್ಲಿ ಲೋಡುಗಟ್ಟಲೆ ಕಿತ್ತಲೆ ಯನ್ನು ಹೊರ ರಾಜ್ಯಗಳಿಗೆ ಕಳಿಸುತಿದ್ದ ಕೊಡಗಿನಲ್ಲಿ ಇಂದು ನೆಂಟರಿಗೆ ಕೊಡಲೂ ಕಿತ್ತಳೆ ಇಲ್ಲ. ತೋಟಗಳಲ್ಲಿ ಇನ್ನೊಂದು ಮಿಶ್ರ ಬೆಳೆ ಕಾಳು ಮೆಣಸು 5 ವರ್ಷಗಳ ಹಿಂದೆ ಕೆಜಿಗೆ ರೂ 650 ಇದ್ದುದು ಇಂದು ಕೇವಲ ಕೆಜಿಗೆ 300 ರೂಪಾಯಿಗಳಿಗೆ ಕುಸಿದಿದೆ.
ವಿಯಟ್ನಾಂನಿಂದ ಅಗ್ಗದ ದರಕ್ಕೆ ಅಂದರೆ ಕಿಲೋಗೆ ನೂರೈವತ್ತು ರೂಪಾಯಿಗಳಿಗೆ ಶ್ರೀಲಂಕಾದ ಮೂಲಕ ಅಮದು ಮಾಡಿಕೊಳ್ಳುವ ನಮ್ಮ ಆಮದು ವ್ಯಾಪಾರಿಗಳು ಅದನ್ನು ಶ್ರೀಲಂಕಾದ ಬಿಲ್ ನೊಂದಿಗೆ ದೇಶದೊಳಗೆ ತರುತಿದ್ದಾರೆ. ಸಾರ್ಕ್ ದೇಶವಾಗಿರುವ ಶ್ರೀಲಂಕಾದಿಂದ ಅಮದು ಮಾಡಿಕೊಂಡರೆ ಆಮದು ತೆರಿಗೆ ಅತ್ಯಲ್ಪ ಮಾತ್ರ. ಈ ದಂಧೆಯಿಂದಾಗಿ ಬೆಳೆಗಾರನಿಗೂ ಬರೆ ಅಲ್ಲದೆ ಸರ್ಕಾರಕ್ಕೂ ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಆಗುತ್ತಿದೆ. ಈ ಕುರಿತು ಅನೇಕ ಬಾರಿ ಕೇಂದ್ರ ಸರ್ಕಾರದ ವಾಣಿಜ್ಯ ಮಂತ್ರಿಗಳಿಗೆ ಬೆಳೆಗಾರ ಸಂಘಟನೆಗಳು ಮನವಿ ಸಲ್ಲಿಸಿದ್ದರೂ ಅಕ್ರಮ ಆಮದು ನಿಂತಿಲ್ಲ ಎಂದು ಸೋಮವಾರಪೇಟೆಯ ಕಾಫಿ ಬೆಳೆಗಾರ ಸಂಘಟನೆಯ ಅದ್ಯಕ್ಷ ಎಂ ಸಿ ಮುದ್ದಪ್ಪ ಹೇಳುತ್ತಾರೆ.
ಇನ್ನು ಸಂಬಾರ ಬೆಳೆಗಳ ರಾಜ ಎಂದು ಕರೆಯಲ್ಪಡುವ ಏಲಕ್ಕಿಯ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ ಕುಸಿದಿದೆ. ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ತಪ್ಪಲಿನಲ್ಲಿ ಉತ್ತಮ ಏಲಕ್ಕಿ ತೋಟಗಳಿಗೆ ಹೆಸರುವಾಸಿ ಅಗಿತ್ತು. ಆದರೆ ಮಳೆ ಜಾಸ್ತಿಯಾಗಿ ಕಟ್ಟೆ ರೋಗ ಬಂದು ಬೆಳೆ ಸಂಪೂರ್ಣ ನಾಶವಾಗಿದೆ ಎನ್ನುತ್ತಾರೆ ಶಾಂತಳ್ಳಿಯ ಏಲಕ್ಕಿ ಬೆಳೆಗಾರ ಬಿ ಕೆ ಪುಪ್ಪಯ್ಯ ಅವರು. ಅವರ 5 ಎಕರೆ ಏಲಕ್ಕಿ ತೋಟದಲ್ಲಿ ಮೂರು ಎಕರೆ ತೋಟವನ್ನು ಈಗಾಗಲೇ ಕಾಫಿ ತೋಟವಾಗಿ ಪರಿವರ್ತಿಸಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಕೆಜಿಯೊಂದಕ್ಕೆ 5000 ರೂಪಾಯಿಗಳ ತನಕ ಏರಿದ್ದ ಬೆಲೆ ಇದೀಗ ಮಾರುಕಟ್ಟೆಯಲ್ಲಿ ಕೇವಲ 1400 ರೂಪಾಯಿಗಳಿಗೆ ಮಾರಾಟವಾಗುತ್ತಿದೆ ಎಂದು ಅವರು ದುಃಖ ವ್ಯಕ್ತಪಡಿಸಿದರು.
ಲಾಕ್‌ಡೌನ್‌ನಿಂದಾಗಿ ಸಂಬಾರ ಮಂಡಳಿಯು ನಿಯಮಿತವಾಗಿ ನಡೆಸುವ ಏಲಕ್ಕಿ ಹರಾಜು ಕೂಡ ರದ್ದುಗೊಂಡಿದೆ. ಭಾರತದ ಏಲಕ್ಕಿ, ಕಾಳು ಮೆಣಸು ಇತರ ಉತ್ಪನ್ನಗಳಿಗೆ ಯೂರೋಪಿಯನ್ ದೇಶಗಳಲ್ಲಿ ಉತ್ತಮ ಮಾರುಕಟ್ಟೆ ಮತ್ತು ಬೆಲೆ ಇದೆ. ಏಕೆಂದರೆ ಇಲ್ಲಿ ಉತ್ಪಾದನೆ ಮಾಡುವುದು ಉತೃಷ್ಟ ದರ್ಜೆಯ ಏಲಕ್ಕಿ ಮತ್ತು ಕಾಳು ಮೆಣಸು. ಅದರೆ ಬ್ರಾಂಡ್‌ನ ಬೆಂಬಲ ಇದ್ದರೂ ಕೂಡ ಲಾಕ್ ಡೌನ್ ನಿಂದಾಗಿ ಬೆಲೆ ಇಲ್ಲದೆ ಬೆಳೆಗಾರರು ಮುಗಿಲು ನೋಡುವಂತಾಗಿದೆ. ಒಟ್ಟಿನಲ್ಲಿ ಬೆಳೆಗಾರರು ಮತ್ತು ರೈತರು ಕೃಷಿಯಿಂದಲೇ ವಿಮುಖರಾಗುವಂತೆ ಲಾಕ್‌ಡೌನ್ ಮಾಡಿದೆ. ಸರ್ಕಾರ ಕೂಡಲೇ ಬೆಳೆಗಾರರ ನೆರವಿಗೆ ಧಾವಿಸಿದರೆ ಬೆಳೆಗಾರರು ಒಂದಷ್ಟು ನೆಮ್ಮದಿ ಕಾಣಬಹುದು.