ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದಾಗ್ಯೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಲವಂತವಾಗಿ ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿಗೆ ತರಲು ತುದಿಗಾಲ ಮೇಲೆ ನಿಂತಿದೆ. ಕೆಲವು ರಾಜ್ಯಗಳಲ್ಲಿ ಈ ಸಂಬಂಧ ಪೂರ್ವ ತಯಾರಿಯನ್ನೂ ನಡೆಸಿದೆ.
ಆದರೆ, ಬಿಜೆಪಿ ನೇತೃತ್ವದ ಸರ್ಕಾರವಿರುವ ರಾಜ್ಯಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ರಾಜ್ಯಗಳು ಈ ವಿವಾದಿತ ಸಿಎಎ ವಿರುದ್ಧ ಬಂಡೆದ್ದಿವೆ. ಹೀಗಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರತಿಭಟನೆಗಳ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮೂಲಕ ರಾಜ್ಯ ಸರ್ಕಾರಗಳು ಕೇಂದ್ರದೊಂದಿಗೆ ಅಸಹಕಾರ ಆಂದೋಲನವನ್ನೇ ನಡೆಸುತ್ತಿವೆ.
ಸಿಎಎ ಮೂಲಕ ಬಲವಂತವಾಗಿ ದೇಶದ ನಾಗರಿಕರ ಪೌರತ್ವವನ್ನು ಪರೀಕ್ಷಿಸುವುದು ಮತ್ತು ಅವರ ದಾಖಲೆಗಳನ್ನು ಪಡೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿಯೇ ಕೇರಳದ ಆರ್ ಟಿಐ ಕಾರ್ಯಕರ್ತರೊಬ್ಬರು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಪೌರತ್ವದ ಕುರಿತಾದ ದಾಖಲೆ ಮತ್ತು ಸಾಕ್ಷಿಯನ್ನು ಕೇಳಿದ್ದಾರೆ.
ಕೇರಳದ ತ್ರಿಶೂರಿನ ಚಲಕ್ಕುಡಿ ಪಟ್ಟಣದ ನಿವಾಸಿ ಜೋಶಿ ಕಲ್ಲುವೀಟ್ಟಿಲ್ ಎಂಬುವರು ಅಲ್ಲಿನ ಮಾಹಿತಿ ಹಕ್ಕು ಇಲಾಖೆಗೆ ಅರ್ಜಿ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿಯವರ ಪೌರತ್ವಕ್ಕೆ ಸಂಬಂಧಿಸಿದ ದಾಖಲೆ ನೀಡುವಂತೆ ಮನವಿ ಮಾಡಿದ್ದಾರೆ. ಜನವರಿ 13 ರಂದು ಅವರು ಈ ಅರ್ಜಿಯನ್ನು ಸಲ್ಲಿಸುವ ಮೂಲಕ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾರೆ.
ದೇಶದ ನಾಗರಿಕರಿಗೆ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿಯನ್ನು ಪಡೆಯುವ ಹಕ್ಕನ್ನು ನೀಡಲಾಗಿದೆ. ದೇಶದ ಭದ್ರತೆ ಸೇರಿದಂತೆ ಕೆಲವೊಂದು ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಹೊರತುಪಡಿಸಿ ಯಾವುದೇ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲು ಪ್ರತಿಯೊಬ್ಬ ನಾಗರಿಕನಿಗೂ ಸ್ವಾತಂತ್ರ್ಯವಿದೆ.

ಈ ಕಾಯ್ದೆಯನ್ವಯ ಜೋಶಿ ಅರ್ಜಿ ಹಾಕಿದ್ದಾರೆ. ದೇಶದ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿಯವರು ದೇಶದ ನಾಗರಿಕರೋ ಅಲ್ಲವೋ ಎಂಬುದನ್ನು ದೇಶದ ಪ್ರಜೆಯಾಗಿರುವ ನಾನು ತಿಳಿದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅವರು ಭಾರತೀಯ ನಾಗರಿಕರಾಗಿದ್ದರೆ ಆ ಬಗ್ಗೆ ಇರುವ ಸಾಕ್ಷಿಯನ್ನು ಒದಗಿಸಬೇಕೆಂದು ಕೋರಿದ್ದಾರೆ.
ಈ ಅರ್ಜಿಯನ್ನು ಸ್ಥಳೀಯ ಮುನ್ಸಿಪಾಲಿಟಿಯ ಮಾಹಿತಿ ಹಕ್ಕು ವಿಭಾಗಕ್ಕೆ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿರುವ ಅಧಿಕಾರಿಗಳು ಮುಂದಿನ ಕ್ರಮಕ್ಕಾಗಿ ಅರ್ಜಿಯನ್ನು ಹೊಸ ದೆಹಲಿಯಲ್ಲಿರುವ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ರವಾನಿಸಿದ್ದಾರೆ.
ಜೋಶಿಯವರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಾಗಿದ್ದು, ಆರಂಭದಲ್ಲಿ ಅರ್ಜಿಯನ್ನು ಸ್ವೀಕರಿಸಲು ಸ್ಥಳೀಯ ಅಧಿಕಾರಿಗಳು ನಿರಾಕರಿಸಿದ್ದಾರೆ ಮತ್ತು ಈ ಬಗ್ಗೆ ಅಪಹಾಸ್ಯ ಮಾಡಿದ್ದಾರೆ.
ಆದರೆ, ಜೋಶಿ ಅವರು, ನಾನು ಸಾರ್ವಜನಿಕ ಹಿತದೃಷ್ಟಿಯಿಂದ ಈ ಮಾಹಿತಿಯನ್ನು ಕೇಳಿದ್ದೇನೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿರುವ ಆತಂಕವನ್ನು ತೊಡೆದುಹಾಕುವ ನಿಟ್ಟಿನಲ್ಲಿ ನಾನು ಅರ್ಜಿ ಸಲ್ಲಿಸಿದ್ದೇನೆ. ಪೌರತ್ವ ಸಾಬೀತುಪಡಿಸಲು ಪಾಸ್ ಪೋರ್ಟ್ ಅಥವಾ ಆಧಾರ್ ಕಾರ್ಡ್ ಸಾಕಾಗುವುದಿಲ್ಲ ಎಂಬ ಆತಂಕ ಜನಸಾಮಾನ್ಯರಲ್ಲಿ ಮನೆ ಮಾಡಿದೆ. ದೇಶದ ಪ್ರಧಾನಮಂತ್ರಿಯಾಗಿರುವವರು ಪೌರತ್ವ ಸಾಬೀತುಪಡಿಸಲು ಬೇರೆ ಯಾವುದೇ ವಿನೂತನವಾದ ದಾಖಲೆಯನ್ನು ಹೊಂದಿದ್ದಾರೆಯೇ? ಎಂಬುದರ ಬಗ್ಗೆ ನನಗೆ ಕುತೂಹಲವಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಪೌರತ್ವ ಕಾಯ್ದೆ ಬಗ್ಗೆ ಜನರಲ್ಲಿರುವ ಗೊಂದಲ ನಿವಾರಣೆ ಮಾಡುವುದು ನನ್ನ ಕರ್ತವ್ಯವಾಗಿದೆ ಎಂದಿದ್ದಾರೆ.
ಜನರು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಜನ್ಮ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಇದನ್ನು ಕಡ್ಡಾಯ ಮಾಡಲಾಗಿದೆ. ಆದರೆ, 1970 ಕ್ಕಿಂತ ಮೊದಲು ಹುಟ್ಟಿದವರು ಜನ್ಮ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಷ್ಟಕರವಾಗಲಿದ್ದು, ಅವರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಆದ್ದರಿಂದ ಇಂತಹ ಗೊಂದಲಗಳನ್ನು ಸರ್ಕಾರ ನಿವಾರಣೆ ಮಾಡಬೇಕಿದೆ ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.