ಸಂಸತ್ತಿನ ಉಭಯ ಸದನಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಮಂಡಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಶಾನ್ಯದ ಕೆಲವು ರಾಜ್ಯಗಳಲ್ಲಿನ ಜನರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಈ ಕಾಯ್ದೆಯಿಂದಾಗಿ ಇದೇ ಮೊದಲ ಬಾರಿಗೆ ನಂಬಿಕೆ ಮೇಲೆ ಕೆಲವೇ ವರ್ಗದ ಜನರಿಗೆ ಸವಲತ್ತುಗಳನ್ನು ಕಲ್ಪಿಸುವುದು ಮತ್ತು ಇದೇ ವೇಳೆ ಮುಸ್ಲಿಂರನ್ನು ಎರಡನೇ ದರ್ಜೆಗೆ ಇಳಿಸುವ ಪ್ರಯತ್ನವನ್ನು ಮಾಡಲಾಗಿದೆ.
ಬಿಜೆಪಿ ಸರ್ಕಾರದ ಈ ಒಡೆದು ಆಳುವ ನೀತಿಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದರೆ, ವಿವಿಧ ಕ್ಷೇತ್ರಗಳಿಗೆ ಸೇರಿದ 726 ಮಂದಿ ಗಣ್ಯ ನಾಗರಿಕರು ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಖಂಡನಾ ಪತ್ರಕ್ಕೆ ಸಹಿ ಮಾಡಿದ್ದಾರೆ.
ಶಿಕ್ಷಣ, ನ್ಯಾಯಾಂಗ, ಪತ್ರಿಕೋದ್ಯಮ, ಉದ್ಯಮ, ಚಿತ್ರರಂಗ, ಕಲೆ, ಸಾಹಿತ್ಯ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಗಣ್ಯರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಅವರಲ್ಲಿ ಪ್ರಮುಖವಾಗಿ ನ್ಯಾಯಮೂರ್ತಿ ಪಿ.ಬಿ.ಸಾವಂತ್, ಅಡ್ಮಿರಲ್ ರಾಮದಾಸ್, ಜಾವೇದ್ ಅಖ್ತರ್, ನಾಸಿರುದ್ದೀನ್ ಶಾ, ಅಪರ್ಣಾ ಸೇನ್, ಮಲ್ಲಿಕಾ ಸಾರಾಬಾಯಿ, ಪ್ರಭಾತ್ ಪಟ್ನಾಯಕ್ ಮತ್ತು ಇನ್ನೂ ಅನೇಕರು ಇದ್ದಾರೆ.
“ಇದೇ ಮೊದಲ ಬಾರಿಗೆ ಕೆಲವು ಧರ್ಮ ಮತ್ತು ನಂಬಿಕೆಗಳ ಮೂಲಕ ಸವಲತ್ತು ನೀಡುವ ಶಾಸನಬದ್ಧ ಕಾನೂನನ್ನು ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ಆದರೆ ಇದೇ ಸಮಯದಲ್ಲಿ ಮತ್ತೊಂದು ಧರ್ಮಕ್ಕೆ ಸೇರಿದ ಮುಸ್ಲಿಂರಿಗೆ ಎರಡನೇ ದರ್ಜೆಯ ಸ್ಥಾನವನ್ನು ಕೊಟ್ಟು ಕೆಳಗಿಳಿಸುವ ಪ್ರಯತ್ನವೂ ನಡೆಯುತ್ತಿದೆ” ಎಂದು ಸಹಿ ಹಾಕಿದ ಪತ್ರದಲ್ಲಿ ಹೇಳಲಾಗಿದೆ.

“ಉಳ್ಳವರು ಮತ್ತು ಕೆಲವರು ಎಂಬ ಶ್ರೇಣೀಕರಣದಿಂದ ಭಾರತೀಯ ಸಮಾಜ ಸೃಷ್ಟಿಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಜನರು ಪೌರತ್ವವನ್ನು ಸಾಬೀತುಪಡಿಸಲು ದಾಖಲೆಗಳನ್ನು ಪೂರೈಸಬೇಕೆನ್ನುವುದು ಅನ್ಯಾಯದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗಣ್ಯರು,
ಭಾರತದಲ್ಲಿ ಪೌರತ್ವ ಎನ್ನುವುದು ಸಮಾನತೆ ಮತ್ತು ತಾರತಮ್ಯ ರಹಿತವಾದದ್ದು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಎಲ್ಲರನ್ನೂ ಒಳಗೊಳ್ಳುವ ಸಹಬಾಳ್ವೆಯ ದೇಶವಾಗಿ ರೂಪುಗೊಂಡಿದೆ. 1950ರಲ್ಲಿ ಎಲ್ಲಾ ಧರ್ಮಗಳು, ಜಾತಿಗಳು, ಭಾಷೆಗಳು ಮತ್ತು ಲಿಂಗಗಳು ಎಲ್ಲಾ ರೀತಿಯ ಜನರು ಸಮಾನವಾಗಿ ಮತ್ತು ತಾರತಮ್ಯವಿಲ್ಲದೆ ಭಾರತೀಯರು ಎಂದು ಒಪ್ಪಿಕೊಂಡರು.
ಹೀಗಿದ್ದರೂ, ಕಳೆದ ಆರು ವರ್ಷಗಳಿಂದ ದೇಶದಲ್ಲಿ ರಾಜಕೀಯವಾಗಿ ಸಂವಿಧಾನ ಆಧಾರಿತ ಭಾರತೀಯ ರಾಷ್ಟ್ರೀಯತೆ ಮತ್ತು ಪೌರತ್ವದ ಮೇಲೆ ಗದಾಪ್ರಹಾರವನ್ನು ಮಾಡುತ್ತಿರುವ ಸ್ಪಷ್ಟವಾಗುತ್ತಿದೆ. ವಿಶೇಷವಾಗಿ ಈಗಿನ ಪೌರತ್ವ ತಿದ್ದುಪಡಿ ಕಾಯ್ದೆಯು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಇದರ ಜತೆಗೆ ಪ್ರಜೆಗಳ ರಾಷ್ಟ್ರೀಯ ನೋಂದಣಿ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಆರಂಭಿಸುತ್ತಿರುವುದೂ ಒಂದು ರಾಜಕೀಯ ಹಲ್ಲೆಯಂತಾಗಿದೆ.
ಕೇಂದ್ರ ಸರ್ಕಾರದ ಈ ಎರಡೂ ನಿರ್ಧಾರಗಳನ್ನು ಖಂಡಿಸಲಾಗುತ್ತದೆ ಮತ್ತು ಇದರ ವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆ. ಮೂರು ಇಸ್ಲಾಮಿಕ್ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದು ಇಲ್ಲಿ ನೆಲೆಸಿರುವ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕೊಡುವುದು ಸೇರಿದಂತೆ ಮತ್ತಿತರೆ ಸವಲತ್ತುಗಳನ್ನು ನೀಡುವ ಭರವಸೆಯನ್ನು ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಕೊಡಲಾಗಿದೆ. ಹಿಂದೂಗಳು, ಸಿಖ್ಖರು, ಬೌದ್ಧರು, ಜೈನ್ಮ ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತದೆ. ಆದರೆ, ಈ ಮೂರೂ ದೇಶಗಳಿಂದ ಬಂದಿರುವ ಒಬ್ಬೇ ಒಬ್ಬ ಮುಸ್ಲಿಂನಿಗೂ ಈ ಅವಕಾಶವನ್ನು ಕಲ್ಪಿಸಲಾಗುತ್ತಿಲ್ಲ. ಉದಾಹರಣೆಗೆ ಪಾಕಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾದ ಅಹ್ಮದೀಯರು, ಮ್ಯಾನ್ಮಾರ್ ನಿಂದ ಬಂದ ರೊಹಿಂಗ್ಯಾಗಳು ಅಥವಾ ಶ್ರೀಲಂಕಾದಿಂದ ಬಂದಿರುವ ತಮಿಳರಿಗೆ ಇಲ್ಲಿ ಆಶ್ರಯ ಪಡೆಯಲು ಸಾಧ್ಯವೇ ಇಲ್ಲ.
ಮುಸ್ಲಿಂರನ್ನು ಎರಡನೇ ದರ್ಜೆಗೆ ಇಳಿಸುವಂತಹ ಈ ಕಾಯ್ದೆಗೆ ತೀವ್ರವಾದ ವಿರೋಧಗಳು ವ್ಯಕ್ತವಾಗಬೇಕು. ಏಕೆಂದರೆ, ಇದು ತಾರತಮ್ಯ ಮಾಡುವಂತಹ ಮತ್ತು ಒಂದು ಧರ್ಮವನ್ನು ಓಲೈಸಿ ಮತ್ತೊಂದು ಧರ್ಮವನ್ನು ಕೀಳಾಗಿ ಕಾಣುವಂತಹ ತಿದ್ದುಪಡಿ ಕಾಯ್ದೆಯಾಗಿದೆ. ಇದು ಸಂವಿಧಾನ ಪರಿಚ್ಛೇದ 13, 14, 15, 16 ಮತ್ತು 21 ರ ಜಾತ್ಯತೀತ ತತ್ತ್ವಗಳಿಗೆ ವಿರುದ್ಧವಾಗಿದೆ ಮತ್ತು ಉಲ್ಲಂಘನೆ ಮಾಡಿದಂತಾಗುತ್ತದೆ. ಈ ಕಾರಣದಿಂದಲೇ ಇದನ್ನು ತಿರಸ್ಕರಿಸಲೇಬೇಕು ಎಂದು ಗಣ್ಯರು ತಮ್ಮ ಖಂಡನಾ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿಆರ್) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ ಸಿ) ಗಳ ಮೂಲಕ ಹಾಲಿ ಸರ್ಕಾರವು ಭಾರತೀಯ ಸಮಾಜದಲ್ಲಿ ದೊಡ್ಡ ಮಟ್ಟದ ಬಿರುಕನ್ನು ಉಂಟುಮಾಡಲು ಹೊರಟಂತಿದೆ. ಈಗಾಗಲೇ ಈ ಕೆಟ್ಟ ನಿರ್ಧಾರದಿಂದ ಅಸ್ಸಾಂ 2013 ರಿಂದ ನಲುಗಿ ಹೋಗಿದೆ.
ಕಿತ್ತು ತಿನ್ನುತ್ತಿರುವ ಆಹಾರ ಭದ್ರತೆ, ನಿರುದ್ಯೋಗ, ಜಾತಿ ಪದ್ಧತಿ, ಸಮುದಾಯ, ಲಿಂಗ ತಾರತಮ್ಯದಂತಹ ಸಮಸ್ಯೆಗಳನ್ನು ಪರಿಹರಿಸುವುದರ ಬದಲಾಗಿ ಎನ್ಆರ್ ಸಿ ವಿಸ್ತಾರವಾದ ದೇಶಾದ್ಯಂತ ಜನರಲ್ಲಿ ವ್ಯಾಪಕವಾದ ವಿಭಜನೆ ಮತ್ತು ಸಂಕಷ್ಟಗಳನ್ನು ತಂದೊಡ್ಡುತ್ತದೆ. ಅಲ್ಲದೇ, ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ ಎಂಬ ಆತಂಕ ಈ ಗಣ್ಯರದ್ದಾಗಿದೆ.

ಈ ಹಿನ್ನೆಲೆಯಲ್ಲಿ ಕೆಲವೇ ಕೆಲವು ಧರ್ಮಗಳನ್ನು ಓಲೈಸುವಂತಹ ಇಂತಹ ಕಾನೂನುಗಳು ಬರಬಾರದು ಎಂದು ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಮಂಡಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ 2019 ನ್ನು ತಿರಸ್ಕರಿಸುವಂತೆ ಬರೆಯಲಾಗಿರುವ ಖಂಡನಾ ಪತ್ರಕ್ಕೆ ಸಹಿಹಾಕಿರುವವರಲ್ಲಿ ಪ್ರಮುಖರೆಂದರೆ:- ನ್ಯಾಯಮೂರ್ತಿ ಪಿ.ಬಿ.ಸಾವಂತ್, ನ್ಯಾಯಮೂರ್ತಿ ಹೊಸಬೆಟ್ ಸುರೇಶ್, ನ್ಯಾಯಮೂರ್ತಿ ಬಿಜಿ ಕೊಲ್ಸೆ ಪಾಟೀಲ್, ಜಾವೇದ್ ಅಖ್ತರ್, ಸ್ವಾಮಿ ಅಗ್ನಿವೇಶ್, ಅನಿಲ್ ಧಾರ್ಕರ್, ನಂದನ್ ಮಾಲುಸ್ತೆ, ನಾಸಿರುದ್ದೀನ್ ಶಾ, ಸಯೀದ್ ಮಿರ್ಜಾ, ಸೈರಸ್ ಗುಝ್ಞಾರ್, ಹರ್ಷ್ ಮಂದರ್, ಅಪರ್ಣ ಸೇನ್, ಅಡ್ಮಿರಲ್ ರಾಮದಾಸ್, ಮಲ್ಲಿಕಾ ಸಾರಾಬಾಯಿ, ಝೀನಕ್ ಶೌಕತ್ ಅಲಿ, ನಸ್ರೀನ್ ಫಝಾಲ್ ಭೋಯ್, ಪ್ರಭಾತ್ ಪಾಟ್ನಾಯಕ್, ಉತ್ಸ ಪಾಟ್ನಾಯಕ್, ಗೀತಾ ಕಪೂರ್, ತೀಸ್ತಾ ಸೆಟಲ್ವಾದ್, ಜಾವೇದ್ ಆನಂದ್, ಅಂಜುಂ ರಾಜಾಬಾಲಿ, ಮಿಹಿರಿ ದೇಸಾಯಿ, ಸಂಧ್ಯಾ ಗೋಖಲೆ, ಚಿತ್ರಾ ಪಾಲೇಕರ್ ಮತ್ತು ಇತರರು.
ಆಧಾರ: ದಿ ವೈರ್