ಪೌರತ್ವ ತಿದ್ದುಪಡಿ ಕಾನೂನು ಕುರಿತು `ಪ್ರತಿಧ್ವನಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಎಸ್.ಆರ್.ಹಿರೇಮಠ್, ಬಿಜೆಪಿಯವರು ದೇಶದಲ್ಲಿ ಹಿಂದುತ್ವ, ಆರ್‌ಎಸ್‌ಎಸ್‌ರವರ ಸಿದ್ಧಾಂತವನ್ನು ತರುವುದಕ್ಕೆ ಮುಂದಾಗುತ್ತಿದ್ದಾರೆಯೇ ಹೊರತು, ದೇಶದ ಜನರ ಹಿತ, ದೇಶದ ಗಂಭೀರ ಸಮಸ್ಯೆಗಳನ್ನು ಇವರು ಬಗೆಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸಂದರ್ಶನದ ಪೂರ್ಣಪಾಠ ಇಲ್ಲಿದೆ:-
ಪೌರತ್ವ ತಿದ್ದುಪಡಿ ಕಾಯ್ದೆಯ ಹಿಂದೆ ರಾಷ್ಟ್ರೀಯ ಸೇವಾ ಸಂಘದ ವಿಚಿತ್ರ ಸಿದ್ಧಾಂತವಿದೆ. ಇದನ್ನು ನಾನು ಎರಡು ಶಬ್ದಗಳಿಂದ ಹೇಳುತ್ತಿದ್ದೇನೆ. ಮೊದಲನೆಯದು ದೇಶವನ್ನು ಪ್ರಗತಿಯಿಂದ ಮುಂದೆ ತೆಗೆದುಕೊಂಡು ಹೋಗುವ ಬದಲು, ಹಿಂದಕ್ಕೆ ತಳ್ಳುವುದು. ಎರಡನೆಯದು ಡೇಂಜರಸ್ ಸಿದ್ಧಾಂತ. ಏಕೆಂದರೆ ಶತಮಾನಗಳಿಂದ ನಮ್ಮ ಸಂಸ್ಕೃತಿ ಬುದ್ಧ, ಬಸವ, ಅಂಬೇಡ್ಕರ್ ಅವರ ಕಾಲಮಾನದಲ್ಲಿ ನಮ್ಮ ಸುದೀರ್ಘ ಸ್ವತಂತ್ರ ಹೋರಾಟದಲ್ಲಿ, ಹೊಸ ಸಮಾಜದಲ್ಲಿ ಪರಿಕಲ್ಪನೆ ಮಾಡಿ, ಅದರಲ್ಲಿ ಬೇಕಾದಂತಹ ಎಲ್ಲಾ ಮೌಲ್ಯಗಳನ್ನು, ಅಂದರೆ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಸಹೋದರತೆ ಇವೆಲ್ಲವೂ ಸೇರಿ ಸಂವಿಧಾನವನ್ನಾಗಿ ಮಾಡಿದ್ದೇವೆ ನಾವು.
ಆದರೆ ಈಗ ಸಂವಿಧಾನದ ಆಶಯಗಳಿಗೆ ಕೊಡಲಿ ಪೆಟ್ಟು ಆಗುತ್ತಿದೆ. ಇವರ ಉದ್ದೇಶ ಮತ್ತು ದುರುದ್ದೇಶವೇನಿದೆ, ಮುಸ್ಲಿಂ ಜನಾಂಗದವರನ್ನು ಟಾರ್ಗೆಟ್ ಮಾಡಿ, ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಇದು ನಮ್ಮ ಸಂವಿಧಾನಕ್ಕೆ ತದ್ವಿರುದ್ಧವಾಗಿದೆ. ಬಿಜೆಪಿಯವರು ಜಿನ್ನಾರ ಥಿಯರಿ ಪಾಲಿಸುತ್ತಿದ್ದಾರೆ. ಅಂದರೆ ಧರ್ಮ ಆದಾರದ ಮೇಲೆ ದೇಶವನ್ನು ಕಟ್ಟಬೇಕು ಎಂಬ ಸರ್ವಾಧಿಕಾರದ ನಿಯಮವನ್ನು ರೂಪಿಸಲು ಮುಂದಾಗುತ್ತಿದ್ದಾರೆ. ಇದು ದೇಶದ ಭವಿಷ್ಯಕ್ಕೆ, ಸಂವಿಧಾನಕ್ಕೆ ಗಂಭೀರವಾಗಿ ವಿಪರೀತವಾಗಿದೆ.
ಉತ್ತರ ಭಾರತದಲ್ಲಿ, ಆಮೇಲೆ ಪಶ್ಚಿಮ ಬಂಗಾಳದಲ್ಲಿ, ದೆಹಲಿಯಲ್ಲಿ, ದೇಶದ ಎಲ್ಲಾ ಕಡೆ ಪ್ರತಿಭಟನೆ ನಡೆಯುತ್ತಿದೆ. ಗಾಂಧೀಜಿ ಹೇಳುವ ಪ್ರಕಾರ ಕೆಲವೇ ಕೆಲವು ಜನರ ಕೈಯಲ್ಲಿ ಅಧಿಕಾರ ಬರುವುದರಿಂದ ನಿಜವಾದ ಸ್ವರಾಜ್ಯ ಸಾಧ್ಯವಿಲ್ಲ. ಯಾವಾಗ ಅಧಿಕಾರ ದುರುಪಯೋಗ ಆಗುತ್ತದೆಯೋ ಅದನ್ನು ಸಮಗ್ರವಾಗಿ ಪ್ರತಿಭಟನೆ ಮಾಡುತ್ತೇವೆಯೋ ಆಗ ಸ್ವರಾಜ್ಯ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಈಗ ಎನ್‌ಆರ್‌ಸಿ ಮತ್ತು ಸಿಎಬಿ ವಿರುದ್ಧ ನಡುವೆ ನಡೆಯುವ ಪ್ರತಿಭಟನೆಯಲ್ಲಿ ಸಾರ್ವಜನಿಕ ಸ್ವತ್ತನ್ನು ಕಾಪಾಡಬೇಕು.
ಅಧಿಕಾರದಲ್ಲಿರುವವರು ಜನರ ಆಶಯಗಳನ್ನು ನೋಡುವುದಿಲ್ಲ. All Assam Student Union, ಗಣ ಸಂಗ್ರಾಮ ಪರಿಷತ್ತು ಸೇರಿ ಯಾವ ರೀತಿ ಒಂದು ಗಂಭೀರ ಪರಿಣಾಮಕಾರಿಯಾಗಿ ಆಂದೋಲನ ಮಾಡಿ, ಅಸ್ಸಾಂ ಜನರ ಸಂಸ್ಕೃತಿ, ಜನರ ಅಸ್ಮಿತೆಯನ್ನು ಕಾಪಾಡುವುದಕ್ಕೆ ಹೋರಾಟ ಮಾಡಿದ್ದರು. ತುಂಬಾ ಗಂಭೀರವಾಗಿ ಹೋರಾಟ ಮಾಡಿದ್ದರು. ಈಗ ಬಿಜೆಪಿಯವರು ಜನರ ವಿರೋಧಿಯಾಗಿ ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತಿರುವುದು ಬಹಳ ಆಘಾತಕಾರಿಯಾದದ್ದು.
ಈ ಸರ್ಕಾರ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ದೇಶದ ಜನರ ಮೇಲೆ ಹೇರುತ್ತಿರುವುದು ಸ್ಪಷ್ಟವಾಗಿದೆ. ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಲು ಬಹಳ ಸಮಯ ಬೇಕಾಗುತ್ತದೆ. ಕೆಡಬೇಕಾದರೆ ಸಮಯ ಬೇಕಿಲ್ಲ. ಹೀಗಾಗಿ ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಗಳನ್ನು ಶಕ್ತಿಯನ್ನು ಕಿತ್ತುಕೊಳ್ಳುತ್ತಿರುವುದು
ನಮ್ಮ ಕಣ್ಮುಂದೆ ನಡೆಯುತ್ತಿದೆ. ಯಾರು ಒಳ್ಳೆಯ ಆಡಳಿತ ಕೊಡುತ್ತಾರೋ, ಶ್ರಮದಿಂದ ಕೆಲಸ ಮಾಡುತ್ತಾರೋ, ಅವರಲ್ಲಿ ವಿಶ್ವಾಸ ಇಡುತ್ತಾರೆ. ಮೋದಿಯವರನ್ನು ಜನ ಬಹಳಷ್ಟು ನಂಬಿದ್ದರು. ದೇಶದ ಭ್ರಷ್ಟಾಚಾರವನ್ನು ಹೊರಗಡೆ ತರುತ್ತವೇ, ಕಪ್ಪು ಹಣವನ್ನು ಹೊರಗೆ ತರುತ್ತೇವೆ ಎಂದಿದ್ದರು. ಆದರೆ, ಎಲ್ಲಿ ಹಣ ಬಂದಿದೆ? ಯಾರಿಗೆ ಬಂದಿದೆ? ಇವರೆಲ್ಲಾ ಹಿಂದುತ್ವ, ಆರ್‌ಎಸ್‌ಎಸ್‌ರವರ ಸಿದ್ಧಾಂತವನ್ನು ತರುವುದಕ್ಕೆ ಮುಂದಾಗುತ್ತಿದ್ದಾರೆ ಹೊರತು, ದೇಶದ ಜನರ ಹಿತ, ದೇಶದ ಗಂಭೀರ ಸಮಸ್ಯೆಗಳನ್ನು ಇವರು ಬಗೆ ಹರಿಸುತ್ತಿಲ್ಲ. ನನ್ನ ಪ್ರಕಾರ ಇವರ ಅಪ್ರೋಚ್ ಬಹಳ ತಪ್ಪಿದೆ.
ಈ ಸರ್ಕಾರ ತಪ್ಪು ದಾರಿಯಿಂದ ಸಾಗುತ್ತಿದೆ, ನಮ್ಮ ಸಂವಿಧಾನ ಆಶಯಗಳು, ನಮ್ಮ ಶತಮಾನಗಳಿಂದ ಬಂದ ಉತ್ಕೃಷ್ಠ ಮೌಲ್ಯಗಳಿಗೆ ವಿರುದ್ಧವಾಗಿ ಹೋಗುತ್ತಿದೆ, ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶ ಮಾಡುತ್ತಿದೆ, ನಮ್ಮಂತಹ ಹಲವಾರು ಜನ ಇದ್ದಾರೆ. ದೇವನೂರು ಮಹಾದೇವ ಇದ್ದಾರೆ, ರೈತ ಸಂಘಟನೆಗಳಿವೆ, ದಲಿತ ಸಂಘರ್ಷ ಸಮಿತಿಗಳಿವೆ, ಇವರೆಲ್ಲರೂ ಸೇರಿ ನಾವು ಪ್ರಬಲವಾದ ಜನಾಂದಲೋನ ಮಾಡುತ್ತಿದ್ದೇವೆ. ಇನ್ನೊಂದು ಕಡೆ ನಾವು ಪ್ರತಿನಿಧಿಗಳನ್ನು ಏಕೆ ಕಳುಹಿಸುತ್ತಿದ್ದೇವೆಂದರೆ, ಸಂವಿಧಾನದ ಚೌಕಟ್ಟಿನೊಳಗೆ ಅವರು ಸೀಮಿತ ವರ್ಷಕ್ಕೆ ಹೋಗುತ್ತಾರೆ. ಅವರು ಜನಹಿತವನ್ನು ಕೇಂದ್ರವಾಗಿಟ್ಟುಕೊಂಡು ಕೆಲಸ ಮಾಡಬೇಕು, ಆದರೆ ಈಗ ನಡೆಯುತ್ತಿರುವುದೇನು? ಇತ್ತೀಚೆಗೆ ಬೈ ಎಲೆಕ್ಷನ್ ನಲ್ಲಿ ನಡೆದದ್ದು ಎಲ್ಲಾ ತಿಳಿದಿದೆ. ನನ್ನ ಅಭಿಪ್ರಾಯದಲ್ಲಿ ಇವತ್ತು ನಾವು ಗಂಭೀರ ಪರಿಸ್ಥಿತಿಯಲ್ಲಿದ್ದೇವೆ.
ನಾವು ಅರ್ಥ ಪೂರ್ಣ ಜೀವನ ನಡೆಸಬೇಕಾದರೆ, ಕೆಲವು ಮೌಲ್ಯಗಳು ಮುಖ್ಯ. ನ್ಯಾಯಯುತ ಸಮಾಜವಾಗಬೇಕು, ನಂತರ ಪ್ರಕೃತಿ, ಸಮಾಜ ಮತ್ತು ಸಂಸ್ಕೃತಿಯ ನಡುವೆ ಮಧುರ ಸಂಬಂಧವಾಗಬೇಕು. ಇವೆಲ್ಲವನ್ನೂ ಇಟ್ಟುಕೊಂಡು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಈಗ ನಾವು ಶರಣ ಸಂತರ ಸಂದೇಶ ಯಾತ್ರೆ ಎಂದು ಮಾಡುತ್ತಿದ್ದೇವೆ. ಏಕೆಂದರೆ ಸಾಮಾನ್ಯ ಜನರೊಳಗೆ ನಮ್ಮ ನಡೆ ಮತ್ತು ನಮ್ಮ ನುಡಿ ಸಾಮರಸ್ಯವಾಗಿರಬೇಕೆಂದು ನಾವು ಮುಂದಾಗಿದ್ದೇವೆ. ನಾವು ನೈಸರ್ಗಿಕ ಸಂಪನ್ಮೂಲಗಳನ್ನು ಹಾಳು ಮಾಡುತ್ತಿದ್ದೇವೆ, ಅದನ್ನು ತಡೆದು ಸಮುದಾಯಗಳು ನಿಯಂತ್ರಣಕ್ಕೆ ತಂದು, ಒಂದು ಆರೋಗ್ಯಕರ ಸಮಾನತೆ ಆಧಾರದ ಮೇಲೆ ಇರುವ ಸಮಾಜವನ್ನು ನಿರ್ಮಾಣ ಮಾಡುವುಕ್ಕೆ ಪ್ರಯತ್ನ ಮಾಡುತ್ತಿದ್ದೇವೆ.
ಸಿಎಎ ವಿರುದ್ಧದ ಹೋರಾಟವನ್ನು ಅಂತಿಮ ಹಂತಕ್ಕೆ ಕೊಂಡೊಯ್ಯಬೇಕು. ಈಗ ಮಾಡಿರುವ ತಿದ್ದುಪಡಿಯನ್ನು ವಾಪಸ್ಸು ಬರುವ ಹಾಗೆ ಮಾಡಬೇಕು. ರಾಜಕೀಯ ಕ್ಷೇತ್ರದಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ. ಹೇಗೆಂದರೆ, ಬ್ರಿಟಿಷರು ದೇಶದಿಂದ ಹೊರಗೆ ಹೋಗಬೇಕಾದರೆ, ಇಡೀ ದೇಶದ ಜನತೆ ಹೋರಾಟ ಮಾಡಿದ ಹಾಗೆ. ಸಾಮಾನ್ಯ ನಾಗರಿಕರೇ ಮಾಲೀಕರು, ರಾಜಕೀಯದವರು ಪಬ್ಲಿಕ್ ಸರ್ವೆಂಟ್ಸ್. ಇವತ್ತು ಪಬ್ಲಿಕ್ ಸರ್ವೆಂಟ್‌ಗಳು ಜವಾಬ್ದಾರಿಯಿಂದ ನಡೆಯುವ ಬದಲಾಗಿ, ಭ್ರಷ್ಟಾಚಾರದಿಂದ, ದುರಾಡಳಿತದಿಂದ ನಡೆಯುತ್ತಿದ್ದಾರೆ. ಹೀಗಾಗಿ ಜನರಲ್ಲಿ ನಾವು ಜಾಗೃತಿ ಮೂಡಿಸುತ್ತಿದ್ದೇವೆ.
ಮಹಾತ್ಮ ಗಾಂಧೀಜಿ ಹೇಳಿದ ಹಾಗೆ My Life is My Message ಅಂತ. ನಾನು ಅಮೆರಿಕಾದಲ್ಲಿದ್ದು, ಇಲ್ಲಿದೆ ಬಂದು ತಿಂಗಳಿಗೆ 750 ರೂಪಾಯಿ ಸಂಬಳವನ್ನು ತೆಗೆದುಕೊಂಡು, ನಮ್ಮ ಮಕ್ಕಳನ್ನು ಹಳ್ಳಿಯಲ್ಲಿ ಶಾಲೆಗೆ ಕಳುಹಿಸಿ, ಅವರ ಜೊತೆಗೆ ಹೊಂದಿ, ಅವರು ನಾವೆಲ್ಲಾ ಕೂಡಿ ಹೋರಾಟ ಮಾಡಿದ್ದಕ್ಕೆ ನಾವೀಗ ಯಶ್ವಸ್ವಿಯಾಗಿದ್ದೇವೆ. ಹೀಗಾಗಿ ನಮ್ಮ ಜೀವನ ಶೈಲಿಯಲ್ಲಿ ಮತ್ತು ಪರಿಸರ ಸಂರಕ್ಷಣೆ ಹಾಸುಹೊಕ್ಕಾಗಿವೆ.