ಕೇಂದ್ರದ ನರೇಂದ್ರ ಮೋದಿ ನೇತ್ರತ್ವದ ಸರ್ಕಾರವು ಆಡಳಿತದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದೆ. ಈ ಬಹುತೇಕ ಬದಲಾವಣೆಗಳು ತಮಗೆ ಅನುಕೂಲಕರವಲ್ಲದ ಸಂಸ್ಥೆ ಅಥವಾ ಅಧಿಕಾರಿಗಳನ್ನು ಸೇವೆಯಿಂದ ದೂರವಿಡುವುದೇ ಆಗಿದೆ. ಅಂದರೆ ಒಟ್ಟಿನಲ್ಲಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯದ ಯಾವುದೇ ಅಧಿಕಾರಿ ಅಥವಾ ಸಂಸ್ಥೆಯನ್ನು ಸರ್ಕಾರ ಇದುವರೆಗೂ ಬಿಟ್ಟ ಉದಾಹರಣೆ ಇಲ್ಲ. ಈ ರೀತಿ ಕೇಂದ್ರದ ಅಧೀನದ ಸಂಸ್ಥೆಗಳು ರಾಜಕಾರಣಿಗಳ ಮರ್ಜಿಗೆ ಅನುಗುಣವಾಗಿ ವರ್ತಿಸುವುದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೂ ಎಷ್ಟೋ ಬಾರಿ ಧಕ್ಕೆ ಎದುರಾಗಿದೆ. ಅದರೆ ಈ ಕುರಿತು ಯಾರೂ ಕೂಡ ಗಟ್ಟಿ ದನಿಯಲ್ಲಿ ಮಾತಾಡುತ್ತಿಲ್ಲ ಅಥವಾ ಮಾತಾಡಲು ಆಡಳಿತಾರೂಢ ಪ್ರಭಾವಿಗಳು ಬಿಡುತ್ತಿಲ್ಲ. ಭಿನ್ನಮತದ ದನಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕಲಾಗುತ್ತಿದೆ. ಹೀಗಾಗಿ ಆನೆ ನಡೆದದ್ದೇ ದಾರಿ ಎಂಬಂತೆ ಕೇಂದ್ರ ಸರ್ಕಾರವು ತೆಗೆದುಕೊಂಡ ತೀರ್ಮಾನಗಳೆಲ್ಲ ಮಾನ್ಯವೂ ಆಗುತ್ತಿವೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ಕೇಂಧ್ರ ಸರ್ಕಾರದ ಅಧೀನದ ಸ್ವಾಯತ್ತ ಸಂಸ್ಥೆ ಪ್ರಸಾರ ಭಾರತಿಯದ್ದು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೇಶದ ಅತ್ಯಂತ ಹಳೆಯ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ (ಪಿಟಿಐ) ಸ್ವತಂತ್ರ ಪ್ರಸಾರದ ವರದಿಗಳ ಬಗ್ಗೆ ಸ್ವಲ್ಪ ಸಮಯದವರೆಗೆ ಅಸಮಾಧಾನ ವ್ಯಕ್ತಪಡಿಸಿದ ನಂತರ, ಸರ್ಕಾರಿ ಸ್ವಾಮ್ಯದ ಪ್ರಸಾರಕರಾದ ಪ್ರಸಾರ ಭಾರತಿ ಅಂತಿಮವಾಗಿ ಪಿಟಿಐನ ಚಂದಾದಾರಿಕೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಈ ಕುರಿತು ಪತ್ರವನ್ನೂ ಬರೆದಿದೆ. ಅಕ್ಟೋಬರ್ 15 ರಂದು ಪಿಟಿಐ ಗೆ ಬರೆದ ಪತ್ರವೊಂದರಲ್ಲಿ, ಪ್ರಸಾರ ಭಾರತಿಯು ಇಂಗ್ಲಿಷ್ ಪಠ್ಯ ಮತ್ತು ಎಲ್ಲಾ ದೇಶೀಯ ಸುದ್ದಿ ಸಂಸ್ಥೆಗಳಿಂದ ಸಂಬಂಧಿತ ಮಲ್ಟಿಮೀಡಿಯಾ ಸೇವೆಗಳಿಗೆ ಡಿಜಿಟಲ್ ಚಂದಾದಾರಿಕೆಗಾಗಿ ಹೊಸ ಪ್ರಸ್ತಾವನೆಗಳನ್ನು ಕರೆಯಲು ನಿರ್ಧರಿಸಿದೆ ಎಂದು ತಿಳಿಸಿದೆ.
ಪ್ರಸಾರ ಭಾರತಿ ನ್ಯೂಸ್ ಸರ್ವೀಸಸ್ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ನ ಮುಖ್ಯಸ್ಥ ಸಮೀರ್ ಕುಮಾರ್ ಅವರು ಸಹಿ ಮಾಡಿದ ಪತ್ರದಲ್ಲಿ, ಪ್ರಸಾರ ಭಾರತಿ ತಿಳಿಸಿದ ನಂತರ ಪಿಟಿಐ ಸಹ ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ. ಈ ವರ್ಷದ ಜೂನ್ನಲ್ಲಿ, ಪ್ರಸಾರ ಭಾರತಿ ಹಿರಿಯ ಅಧಿಕಾರಿಯೊಬ್ಬರು ಲಡಾಖ್ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ಪಿಟಿಐ ಮಾಡಿದ ವರದಿಯನ್ನು ರಾಷ್ಟ್ರ ವಿರೋಧಿ ಪ್ರಸಾರ ಎಂದು ಕರೆದು ಖಂಡಿಸಿದ್ದರು. ಆ ಸಮಯದಲ್ಲಿ, ಸಮೀರ್ ಕುಮಾರ್ ಪಿಟಿಐನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿಗೆ ಪತ್ರ ಬರೆದಿದ್ದು, ಏಜೆನ್ಸಿಯ ಇತ್ತೀಚಿನ ಸುದ್ದಿ ಪ್ರಸಾರವು ರಾಷ್ಟ್ರೀಯ ಹಿತಾಸಕ್ತಿಗೆ ಹಾನಿಕಾರಕ ಮತ್ತು ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಹಾಳುಮಾಡುತ್ತಿದೆ ಎಂದು ಹೇಳಿದ್ದರು. ಅಲ್ಲದೆ ಪಿಟಿಐ ನ ಸುದ್ದಿ ಪ್ರಸಾರದಲ್ಲಿ ಕೊರತೆಗಳಿವೆ ಎಂದೂ ಅವರು ಹೇಳಿದ್ದು ಇದರಿಂದಾಗಿ ಸಾರ್ವಜನಿಕ ಹಿತಾಸಕ್ತಿಗೆ ಹಾನಿಯಾಗುವ ತಪ್ಪು ಸುದ್ದಿಗಳು ಪ್ರಸಾರವಾಗುತ್ತವೆ ಎಂದೂ ಆರೋಪಿಸಿದ್ದರು.
ಪಿಟಿಐ ದೇಶಾದ್ಯಂತ ವರದಿಗಾರರು ಮತ್ತು ಛಾಯಾಗ್ರಾಹಕರ ದೊಡ್ಡ ಜಾಲವನ್ನು ಹೊಂದಿದ್ದು ಅದರ ಸೇವೆಗಳನ್ನು ಭಾರತದ ಎಲ್ಲಾ ಪ್ರಮುಖ ಸುದ್ದಿ ಸಂಸ್ಥೆಗಳೂ ಬಳಸಿಕೊಳ್ಳುತ್ತಿವೆ. ಕೇಂದ್ರ ಸರ್ಕಾರದ ಅಧೀನದ ಪ್ರಸಾರ ಭಾರತಿಯು ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊವನ್ನು ನಡೆಸುತ್ತಿದೆ. ಈ ಎರಡೂ ಸಂಸ್ಥೆಗಳು ಪಿಟಿಐನ ಸೇವೆಗಳ ದೀರ್ಘಕಾಲದ ಚಂದಾದಾರರಾಗಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಸಾರ ಭಾರತಿ ಮಂಡಳಿಯು ಯುಎನ್ಐ ನೊಂದಿಗೂ ತನ್ನ ಚಂದಾದಾರಿಕೆಯನ್ನು ಕೊನೆಗೊಳಿಸಲು ನಿರ್ಧರಿಸಿದೆ.
ಆದರೆ ಸರ್ಕಾರಕ್ಕೆ, ಪಿಟಿಐ ವ್ಯಾಪ್ತಿಯು ಅಪಾರ ಮಹತ್ವದ್ದಾಗಿದೆ ಏಕೆಂದರೆ ಪಿಟಿಐ ಸಂಸ್ಥೆಯ ಸುದ್ದಿ ಮಾಹಿತಿಗಳು ದೇಶದ ನೂರಾರು ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳಿಗೆ ಉತ್ತಮ ಮಾಹಿತಿಯನ್ನು ಕೊಡುತ್ತಿವೆ. ಪಿಟಿಐ ಸೇವೆಗಳನ್ನು ಪಡೆಯುತ್ತಿರುವ ಮಾದ್ಯಮ ಸಂಸ್ಥೆಗಳು ತಮ್ಮದೇ ಆದ ಸುದ್ದಿ ಮೂಲಗಳನ್ನು ದೇಶಾದ್ಯಂತ ಹೊಂದಿರುವುದಿಲ್ಲ. ಸಂಪಾದಕೀಯ ಸ್ವಾತಂತ್ರ್ಯದ ಹೊರತಾಗಿಯೂ, ಪಿಟಿಐ ಸಾಮಾನ್ಯವಾಗಿ ಅಧಿಕಾರದಲ್ಲಿರುವ ಪಕ್ಷದ ಧೋರಣೆಯನ್ನು ಪರಿಗಣಿಸದೆ ಕೇಂದ್ರದ ಪ್ರತಿಯೊಂದು ಸರ್ಕಾರದೊಂದಿಗೆ ಅತ್ಯುತ್ತಮವಾದ ಸಂಬಂಧವನ್ನು ಹೊಂದಿದೆ.
Also Read: ದೆಹಲಿ ಗಲಭೆ ಏಕಪಕ್ಷೀಯ ವರದಿಯ ಆರೋಪ: BBCಯ ಆಹ್ವಾನ ತಿರಸ್ಕರಿಸಿದ ಪ್ರಸಾರ ಭಾರತಿ ಮುಖ್ಯಸ್ಥ
ವಾಸ್ತವವಾಗಿ, ದೀರ್ಘಕಾಲದವರೆಗೆ, ಎಲ್ಲಾ ಅಧಿಕೃತ ಸಂವಹನಗಳಿಗೆ ಏಜೆನ್ಸಿಯು ಆದ್ಯತೆಯ ಪ್ರತಿನಿಧಿ ಆಗಿತ್ತು. ಅದರೆ 2014 ರಿಂದ, ಈ ಸಂಬಂಧವು ಹಿರಿಯ ಮಂತ್ರಿಗಳು ಮತ್ತು ಸಂಘ ಪರಿವಾರ ದ ಮುಖಂಡರಿಗೆ ಪಿಟಿಐನ ಕಾರ್ಯ ವೈಖರಿ ಅಸಮಾಧಾನವನ್ನುಂಟುಮಾಡಿದೆ. ಮೋದಿ ಸರ್ಕಾರವು ತನ್ನ ಹೆಚ್ಚಿನ ಸಂವಹನಕ್ಕಾಗಿ ಖಾಸಗಿಯಾಗಿ ನಡೆಸುತ್ತಿರುವ ಎಎನ್ಐ ಸುದ್ದಿಸಂಸ್ಥೆಯತ್ತ ಒಲವು ತೋರಿದ್ದರೂ – ಆಗಾಗ್ಗೆ ಪ್ರಧಾನ ಮಂತ್ರಿಗಳ ಭಾಷಣಗಳನ್ನು ಪ್ರಸಾರ ಮಾಡಲು ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ದೂರದರ್ಶನವನ್ನು.
ಭಾರತೀಯ ಮಾಧ್ಯಮ ಉದ್ಯಮವು ಪಿಟಿಐ ಯನ್ನು ಆಯ್ಕೆಯ ಸುದ್ದಿ ಸಂಸ್ಥೆ ಎಂದು ಪರಿಗಣಿಸುತ್ತದೆ. ಪಿಟಿಐ ಮೇಲಿನ ಅಧಿಕೃತ ಒತ್ತಡದ ಮೊದಲ ಯತ್ನ 2016 ರಲ್ಲಿ, ಆರಂಭವಾಗಿದ್ದು ಪ್ರಸಾರ ಭಾರತಿ ಏಕಪಕ್ಷೀಯವಾಗಿ ತನ್ನ ವಾರ್ಷಿಕ ಚಂದಾದಾರಿಕೆ ಶುಲ್ಕದ 75% ಮಾತ್ರ ಅಂದರೆ 9.15 ಕೋಟಿ ರೂಪಾಯಿಗಳನ್ನು ಮಾತ್ರ ಪಿಟಿಐಗೆ ಪಾವತಿಸುವುದಾಗಿ ತಿಳಿಸಿತು. ಪಿಟಿಐ ನ ಸಂಪಾದಕ ಎಂ ಕೆ ರಜ್ದಾನ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಹಿರಿಯ ಮಂತ್ರಿ ಅರುಣ್ ಜೇಟ್ಲಿ ಅವರು ಶಿಫಾರಸು ಮಾಡಿದ್ದ ಮೂರು ಹೆಸರುಗಳನ್ನು ಪಿಟಿಐ ಸಂಪಾದಕರನ್ನಾಗಿ ನೇಮಿಸಲು ಪಿಟಿಐ ನಿರಾಕರಿಸಿತು. ಬದಲಿಗೆ ಸುದ್ದಿ ಸಂಸ್ಥೆಯ ಆಡಳಿತ ಮಂಡಳಿಯು ವಿಜಯ್ ಜೋಶಿಯನ್ನು ಸಂಪಾದಕರನ್ನಾಗಿ ಆಯ್ಕೆ ಮಾಡಿತು. ಇದಾದ ನಂತರ ಪ್ರಸಾರ ಭಾರತಿ ತನ್ನ ಚಂದಾದಾರಿಕೆ ಶುಲ್ಕದ ಕಡಿತವನ್ನು ಮಾಡಿತು.
ಪಿಟಿಐನ ಸಂಪಾದಕರಾಗಿದ್ದ ರಜ್ದಾನ್ ಅವರು ಯಾವುದೇ ರಾಜಕೀಯ ಪಕ್ಷಪಾತ ಇಲ್ಲದೆ ಸಂಸ್ಥೆಯನ್ನು ಮುನ್ನಡೆಸಿದ್ದರು. ಇದು ಲಾಭೋದ್ದೇಶವಿಲ್ಲದ ಟ್ರಸ್ಟ್ ಆಗಿ ರಚನೆಯಾಗಿದೆ. ಯಾವುದೇ ರಾಜಕೀಯ ಪಕ್ಷಪಾತವಿಲ್ಲದ ಸುದ್ದಿ ಸಂಸ್ಥೆಯನ್ನು ವೃತ್ತಿಪರ ರೀತಿಯಲ್ಲಿ ನಡೆಸಿದ ಕೀರ್ತಿಯು ಜೋಶಿ ಅವರಿಗೆ ಇರುವ ಹಿನ್ನೆಲೆಯಲ್ಲಿ ಅವರನ್ನು ಸಂಪಾದಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಪಿಟಿಐನಲ್ಲಿ, ನಮ್ಮ ಸ್ವಾತಂತ್ರ್ಯವನ್ನು ನಾವು ಗೌರವಿಸುತ್ತೇವೆ ಎಂದು ಪಿಟಿಐ ಮಂಡಳಿಯ ಅಧ್ಯಕ್ಷ ಹಾರ್ಮುಸ್ಜಿ ಕ್ಯಾಮಾ ಅವರು ಹೇಳುತ್ತಾರೆ. ಇದರರ್ಥ ನಾವು ಎಲ್ಲಾ ರಾಜಕೀಯ ಪಕ್ಷಗಳಿಂದ ಸ್ವತಂತ್ರರಾಗಿರಬೇಕು – ಅದು ಕಾಂಗ್ರೆಸ್ ಅಥವಾ ಬಿಜೆಪಿ ಆಗಿರಬಹುದು ಎಂದೂ ಅವರು ಹೇಳಿದ್ದರು.
Also Read: ‘ಪಿಟಿಐ ರಾಷ್ಟ್ರ ವಿರೋಧಿ ವರದಿ’ : ಪ್ರಸಾರ ಭಾರತಿ ನೋಟೀಸಿಗೆ ಇರಲಿಲ್ಲ ಮಂಡಳಿಯ ಅನುಮತಿ
ವರ್ಷದ ಜೂನ್ನಲ್ಲಿ ಪಿಟಿಐ ಭಾರತದ ಚೀನಾದ ರಾಯಭಾರಿ ಮತ್ತು ಚೀನಾದ ಭಾರತೀಯ ರಾಯಭಾರಿಯೊಂದಿಗಿನ ಅವಳಿ ಸಂದರ್ಶನ ನಡೆಸಿತ್ತು. ಆದರೆ ಈ ಸಂದರ್ಶನವು ಸರ್ಕಾರಕ್ಕೆ ಅಸಮಾಧಾನ ತಂದಿತ್ತು. ನಂತರ ಪ್ರಸಾರ ಭಾರತಿ ಅಧಿಕಾರಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪಿಟಿಐನ ರಾಷ್ಟ್ರೀಯ ವಿರೋಧಿ ವರದಿಗಾರಿಕೆ ಸಂಬಂಧವನ್ನು ಮುಂದುವರಿಸುವುದಿಲ್ಲ ಎಂದೂ ಹೇಳಿದ್ದರು. ಲಡಾಖ್ ಬಿಕ್ಕಟ್ಟಿನ ಬಗ್ಗೆ ಚೀನಾದ ರಾಯಭಾರಿಯನ್ನು ಸಂದರ್ಶಿಸಬಾರದು ಎಂದು ಸರ್ಕಾರ ಭಾವಿಸಿತ್ತು. ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಅವರೊಂದಿಗಿನ ಪಿಟಿಐ ಸಂದರ್ಶನವು ಸೌತ್ ಬ್ಲಾಕ್ನಲ್ಲಿ ತೀವ್ರ ಮುಜುಗರಕ್ಕೆ ಕಾರಣವಾಯಿತು ಏಕೆಂದರೆ ಚೀನಾದ ಸೇನೆಯು ಭಾರತದ ಗಡಿ ಒಳ ಪ್ರವೇಶಿಸಿದೆ ಎಂದು ಪಿಟಿಐ ಟ್ವೀಟ್ ಮಾಡಿತ್ತು. ಈ ಟ್ವೀಟ್ ವಿಕ್ರಮ್ ಮಿಸ್ರಿ ಅವರ ಹೇಳಿಕೆಯ ಆಧಾರದಲ್ಲೇ ಮಾಡಲಾಗಿತ್ತು. ಆದರೆ ಈ ಹಿಂದೆ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಯಾವುದೇ ಭಾರತೀಯ ಪ್ರದೇಶಕ್ಕೆ ಚೀನಾ ಸೇನೆ ಅತಿಕ್ರಮಣ ಮಾಡಿಲ್ಲ ಎಂದು ಹೇಳಿದ್ದರು.
ಇದಾದ ನಂತರ ಕೇಂದ್ರ ಸರ್ಕಾರವು ಪಿಟಿಐನೊಂದಿಗೆ ತೀವ್ರ ಅಸಮಾಧಾನ ಹೊಂದಿದ್ದು ವಾರ್ಷಿಕ ಶುಲ್ಕವನ್ನು ಕಡಿತ ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ ಪ್ರಸಾರ ಭಾರತಿಯು ಪಿಟಿಐಗೆ ವಾರ್ಷಿಕ ೧೧ ಕೋಟಿ ರೂಪಾಯಿಗಳಷ್ಟು ಚಂದಾ ಶುಲ್ಕ ನೀಡಬೇಕಿದೆ. ಕೇಂದ್ರದ ಈ ಕ್ರಮದಿಂದಾಗಿ ಪಿಟಿಐ ನ ಆದಾಯದಲ್ಲಿ ಹೊಡೆತ ಬೀಳುವುದಾದರೂ ಸದ್ಯಕ್ಕೆ ಸಂಸ್ಥೆ ಮುನ್ನಡೆಯಲು ತೊಂದರೆ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.