ಮುಂದಿನ ಐದು ತಿಂಗಳಿನಲ್ಲಿ ಎದುರಾಗಲಿರುವ ಪಶ್ಚಿಮ ಬಂಗಾಳ ಚುನಾವಣೆಗೆ ಭಾರತೀಯ ಜನತಾ ಪಕ್ಷವೂ ಭಾರೀ ತಯಾರಿ ನಡೆಸಿಕೊಳ್ಳುತ್ತಿದೆ. ಇಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸಿ ಬಿಜೆಪಿಯನ್ನು ಗೆಲ್ಲಿಸಲು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿ ಬಳಕೆ ಮಾಡಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಕ್ ಸೂಚನೆ ನೀಡಿದ್ದಾರೆ. ಹೀಗೆ ಪಶ್ಚಿಮ ಬಂಗಾಳ ಬಿಜೆಪಿ ನಾಯಕರಿಗೆ ಸೂಚನೆ ನೀಡಿರುವ ಅಮಿತ್ ಶಾ, ನಾಳೆಯಿಂದಲೇ ಇದರ ಕೆಲಸಗಳು ಶುರು ಮಾಡಿ ಎಂದು ಆದೇಶಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಸೇರಿದಂತೆ ಕಾರ್ಯಕರ್ತರು ಸಕ್ರಿಯರಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯನಿರ್ವಹಿಸಬೇಕು. ಎಲ್ಲರೂ ಬಿಜೆಪಿ ಹೆಸರಿನಲ್ಲಿ ಸಾಧ್ಯವಾಗುವಷ್ಟು ವಾಟ್ಸಪ್ ಗ್ರೂಪ್ ರಚಿಸಬೇಕು. ಈ ವಾಟ್ಸಪ್ ಗ್ರೂಪ್ನಲ್ಲಿ ಕೇಂದ್ರ ಸರ್ಕಾರದ ಸಾಧನೆಗಳು ನಿರಂತರ ಪೋಸ್ಟ್ ಹಾಕಿ ಜನರಿಗೆ ಮಾಹಿತಿ ನೀಡಬೇಕು ಎಂದು ಅಮಿತ್ ಶಾ ಸೂಚನೆ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚೆಗಿನ ಲೋಕಸಭಾ ಚುನಾವಣೆಗಾಗಿ ಬಿಜೆಪಿ 26 ಸಾವಿರಕ್ಕೂ ಹೆಚ್ಚು ವಾಟ್ಸಪ್ ಗ್ರೂಪ್ ಮಾಡಿ ಪ್ರಚಾರ ನಡೆಸಿತ್ತು. ಇದೇ ಮಾದರಿಯಲ್ಲಿ ಈಗ ಪಶ್ಚಿಮ ಬಂಗಾಳದಲ್ಲಿ ಒಂದು ಗ್ರೂಪ್ನಲ್ಲಿ 250 ಮಂದಿಯಂತೆ 26 ಸಾವಿರ ವಾಟ್ಸಪ್ ಗ್ರೂಪ್ ರಚನೆ ಮಾಡಲು ಬಿಜೆಪಿ ಮುಂದಾಗಿದೆ. ಮುಂದಿನ 2 ತಿಂಗಳಲ್ಲಿ ಈ ಕೆಲಸ ಪೂರ್ಣಗೊಳಿಸಿ ಪ್ರಚಾರ ಶುರು ಮಾಡುವುದು ಬಿಜೆಪಿಯ ಉದ್ದೇಶ.
ಇನ್ನು, ರಚಿಸಲಾಗುವ 24 ಸಾವಿರ ವಾಟ್ಸಪ್ ಗ್ರೂಪ್ನಿಂದ 60 ಲಕ್ಷ ಜನರ ಸಂಪರ್ಕಿಸಬಹುದು. ಬಳಿಕ ಇಲ್ಲಿ ಸಿಕ್ಕ ಜನರಿಂದ 50 ಸಾವಿರ ವಾಟ್ಸಪ್ ಗ್ರೂಪ್ಗಳು ರಚಿಸಬಹುದು. ಈ ಮೂಲಕ ಮಾರ್ಚ್ ವೇಳೆಗೆ 1.25 ಕೋಟಿ ಮತದಾರರನ್ನು ತಲುಪಬಹುದು. ಜನವರಿ, ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ನಾಲ್ಕು ತಿಂಗಳ ಕಾಲ ವಾಟ್ಸಪ್ ಮೂಲಕವೇ ಪ್ರಚಾರ ಮಾಡಬಹುದು. ಇದರಿಂದ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 50%ರಷ್ಟು ಮಂದಿ ತಲುಪಬಹುದು ಎನ್ನುವ ಯೋಜನೆ ಬಿಜೆಪಿಯದ್ದು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಲು ಖಡಕ್ ಸೂಚನೆ ನೀಡಿದ್ದು, ವಾಟ್ಸಪ್, ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ನಲ್ಲಿ ಸಕ್ರಿಯರಾಗಿರುವಂತೆ ಆದೇಶಿಸಿದ್ದಾರೆ.