ಇದು ಕೊಪ್ಪಳ ಜಿಲ್ಲೆಯ ಗಂಗಾವತಿಯ ಹತ್ತಿರವಿರುವ ಸಣ್ಣ ಗ್ರಾಮ. ಇದರ ಜನಸಂಖ್ಯೆ ಸುಮಾರು 1200. ಇಲ್ಲಿನ ಪೋಸ್ಟ್ ಮ್ಯಾನ್ ಸುರೇಶ್ ತಳವಾರ ಕಳೆದ ನಾಲ್ಕು ವರ್ಷಗಳಿಂದ ಬಂದ ಎಲ್ಲ ಪತ್ರಗಳನ್ನು ತನ್ನ ಮನೆಯಲ್ಲೇ ಇರಿಸಿಕೊಂಡಿದ್ದಾನೆ, ಅವುಗಳನ್ನು ಹಂಚಿಯೇ ಇಲ್ಲ. ಸುಮಾರು 1500 ಕ್ಕೂ ಹೆಚ್ಚು ಪತ್ರಗಳನ್ನು ಮನೆಯಲ್ಲಿಯೇ ಇಟ್ಟು ಕೊಂಡು ಕುಳಿತಿದ್ದಾನೆ.
ಏನೇನಿದ್ದವು ಆ ಪತ್ರಗಳಲ್ಲಿ?
ರಾಶಿ ರಾಶಿ ಪತ್ರಗಳು ಮೂಟೆಯಲ್ಲಿ ಭದ್ರವಾಗಿದ್ದವು. 2016 ರಿಂದ ನಿನ್ನೆ ಮೊನ್ನೆಯವರೆಗೆ ಕಳುಹಿಸಿದ ಸಾವಿರಕ್ಕೂ ಅಧಿಕ ಪತ್ರಗಳಲ್ಲಿ ನೇಮಕಾತಿ ಪತ್ರಗಳು, ಆಧಾರ ಕಾರ್ಡ್, ವಿವಾಹ ಆಮಂತ್ರಣ, ನಾಮಕರಣ, ಸೀಮಂತಕ್ಕೆ ಆಹ್ವಾನಿಸಿದ್ದ ಪತ್ರಗಳು, ಆತ್ಮೀಯರು ಅಗಲಿದ ವಾರ್ತೆಗಳು, ಸ್ನೇಹಿತರ ಕುಶಲೋಪರಿ, ಮಾಸಾಶನ, ವೃದ್ಯಾಪ್ಯ ವೇತನ ಹೀಗೆ ಹತ್ತು ಹಲವು ಖುಷಿ ಹಾಗೂ ದುಖಗಳನ್ನು ಬಿತ್ತರಿಸಬೇಕಾಗಿದ್ದ ಪತ್ರಗಳು ಬಂಧನದಲ್ಲಿದ್ದವು.
ಇದರಿಂದ ಎಷ್ಟೋ ಜನರಿಗೆ ಕೆಲಸ ಸಿಗಲಿಲ್ಲ. ಬರಬೇಕಾದ ಮಾಸಿಕ ದುಡ್ಡು ಬರಲಿಲ್ಲ…ಮಕ್ಕಳು ಪರ ಊರಿನಿಂದ ಬರೆದ ಕುಶಲೋಪರಿ ಸಿಗಲಿಲ್ಲ, ನಿಧನ ಸುದ್ದಿ ತಿಳಿಯಲೇ ಇಲ್ಲ, ಮದುವೆ ಮುಂಜಿಗಳ ಬಗ್ಗೆ ತಿಳಿಯಲಿಲ್ಲ.
ಯಾಕೆ ಹೀಗಾಯ್ತು?
ಗ್ರಾಮಸ್ಥರೊಬ್ಬರು ಹೇಳುವ ಪ್ರಕಾರ ಪ್ರತಿದಿನ ಜನರು ಪತ್ರ ಬಂದಿಲ್ಲವಾ ಪತ್ರ ಬಂದಿಲ್ಲವಾ ಎಂದು ತಳವಾರ ಅವರನ್ನು ಕೇಳುತ್ತಿದ್ದರಂತೆ. ಅದಕ್ಕೆ ಅವರು ಇಲ್ಲ ನಿಮ್ಮ ಪತ್ರಗಳು ಬಂದಿಲ್ಲ ಎಂದೇ ಹೇಳುತ್ತಿದ್ದರಂತೆ. ಕೆಲವರ ಕಡೆಗೆ ಮೊಬೈಲ್ ಗಳಿವೆ, ಕೆಲವರು ಲ್ಯಾಂಡ್ ಲೈನ್ ಹೊಂದಿದ್ದಾರೆ. ಹೀಗಾಗಿ ಪತ್ರದ ಬಗ್ಗೆ ಹಲವರು ತಲೆಕೆಡಿಸಿಕೊಂಡಿರಲಿಲ್ಲ. ಕೆಲಸಕ್ಕೆ ಅರ್ಜಿ ಹಾಕಿದವರು ತಮಗೆ ಕೆಲಸ ಸಿಗಲಿಲ್ಲ ಎಂದು ಸುಮ್ಮನಿದ್ದರೆ, ಮಾಸಿಕ ವೇತನ ಹಾಗೂ ಮಾಸಾಶನ ಪಡೆಯುವವರು ತಾಂತ್ರಿಕ ದೋಷವಿರಬೇಕು ಎಂದೋ ಏನು ಸುಮ್ಮನಿದ್ದರು. ನಂತರ ಒಬ್ಬೊಬ್ಬರು ದೂರನ್ನು ನೀಡುತ್ತ ಬಂದರು. ಕೊನೆಗೆ ಸೋಮವಾರ ಸಾಯಂಕಾಲದ ಹೊತ್ತಿಗೆ ಅಂಚೆ ಸಿಬ್ಬಂದಿ ದಾಳಿ ಮಾಡಿ ಪರಿಶೀಲಿದಾಗ ಗೊತ್ತಾಗಿದ್ದು ಇದು ತಳವಾರ ಅವರ ತಪ್ಪು ಅಂತ. ಆದರೂ ತಳವಾರ ಅವರು ಯಾಕೆ ಪತ್ರಗಳನ್ನು ತಲುಪಿಸಲಿಲ್ಲ, ಏನಾಗಿತ್ತು ಹಾಗೂ 50,000 ರೂಪಾಯಿ ಕ್ಯಾಶ್ ಅನ್ನು ತಮ್ಮ ಬಳಿಯೇ ಏಕೆ ಇರಿಸಿಕೊಂಡರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅವರ ಹೇಳಿಕೆ ನಂತರ ಪೂರ್ಣ ಸತ್ಯ ಗೊತ್ತಾಗಲಿದೆ.

ಅಂಚೆ ಇಲಾಖೆಯ ಜಿಲ್ಲಾ ಅಂಚೆ ಮೇಲ್ವಿಚಾರಕ ಮಹಮ್ಮದ್ ಹುಸೇನ್ ಗ್ರಾಮದ ಅಂಚೆ ಕಚೇರಿಗೆ ಭೇಟಿ ನೀಡಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿದರು. ಎರಡು ತಾಸಿನವರೆಗೂ ಪತ್ರಗಳನ್ನು ಅಂಚೆ ಇಲಾಖೆ ತಂಡ ಹೊಂದಿಸಿತು.
ಅಂಚೆ ಇಲಾಖೆ ಅಧಿಕಾರಿ ಕಿರಣ ಹೆಬ್ಬಳ್ಳಿ ಹೇಳಿದ ಪ್ರಕಾರ, “ಎಲ್ಲ ಪತ್ರಗಳನ್ನು ಪರಿಶೀಲಿಸುತ್ತಿದ್ದೇವೆ. ತಳವಾರ ಅವರು ತಪ್ಪಿತಸ್ಥ ಎಂದು ರುಜುವಾತ ಆದ ತಕ್ಷಣವೇ ಅವರನ್ನು ಅಮಾನತು ಮಾಡಲಾಗುವುದು. ಎಲ್ಲ ಪತ್ರಗಳನ್ನು ಶೀಘ್ರವೇ ಅವರ ಅವರ ಮನೆಗಳಿಗೆ ತಲುಪಿಸಲಾಗುವುದು’’ ಎಂದರು.

ಪರಿಶೀಲನೆ ನಡೆಯುತ್ತಿದ್ದಾಗ ಗ್ರಾಮಸ್ಥರಾದ ಬಸವರಾಜ ನಡುಲಕೇರಿ, ಹನುಮಂತ ಸಂಗನಾಳ, ನೀಲಪ್ಪ ಬಂಡಿಹಾಳ, ಶಿವರಾಜ ಬಂಡಿಹಾಳ, ಉದಯ ಮುರಡಿ, ಹನುಮಂತಪ್ಪ ಬಂಡಿಹಾಳ ಹಾಗೂ ಇತರರು ತಳವಾರ ಅವರು ತಪ್ಪಿತಸ್ಥರು. ಬಂದ ಪತ್ರಗಳನ್ನು ಹಾಗೆಯೇ ಇರಿಸಿಕೊಂಡು ವಿತರಿಸಿಲ್ಲ. ಆಧಾರ ಕಾರ್ಡ್ ಸಿಗದೇ ಗ್ರಾಮಸ್ಥರು ಹಲವು ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಮಾಸಿಕ ಧನ ಸಿಗದೇ ಪರದಾಡಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಎಲ್ಲ ಯೋಜನೆಗಳಿಗೆ ಆಧಾರ ಕಡ್ಡಾಯ ಮಾಡಿದ್ದಾರೆ. ಬಹುತೇಕ ಕೆಲಸಗಳು ಅಂಚೆ ಮುಖಾಂತರ ನಡೆಯುತ್ತವೆ. ಅರಿಯಾದ ಸಮಯಕ್ಕೆ ಪತ್ರಗಳೇ ತಲುಪದಿದ್ದರೆ ಯೋಜನೆ ಅನುಷ್ಠಾನ ಮಾಡಿದರೂ ಸರಿಯಾದ ಫಲಾನುಭವಿಗಳು ವಂಚಿರಾಗಿದ್ದಾರೆ. ಇವರ ನಷ್ಟ ಯಾರಿಗೆ ತುಂಬಿ ಕೊಡಲು ಸಾಧ್ಯ. ಕೆಲವರ ಕರ್ತವ್ಯ ಲೋಪ ಹಲವರ ಬಾಳನ್ನೆ ಹಾಳು ಮಾಡಬಹುದು ಎಂಬುದಕ್ಕೆ ಇದೊಂದು ನಿದರ್ಶನ..