ಆಡಳಿತಾರೂಢ ಬಿಜೆಪಿಗೆ ಸರ್ಕಾರ ಉಳಿಸಿಕೊಳ್ಳುವ ಪ್ರಶ್ನೆಯಾಗಿದ್ದರೆ, ಪ್ರತಿಪಕ್ಷ ಜೆಡಿಎಸ್ ನಾಯಕರಿಗೆ ಪಕ್ಷ ಉಳಿಸಿಕೊಳ್ಳುವ ಸವಾಲು. ಇದೀಗ ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಇದರ ಪರಿಣಾಮ ಕಳೆದೊಂದು ವಾರದಿಂದ ಸರ್ಕಾರದ ಅಳಿವು-ಉಳಿವಿನ ಆತಂಕದಲ್ಲಿದ್ದ ಆಡಳಿತಾರೂಢ ಬಿಜೆಪಿಗೆ ಶುಭದ ಮೇಲೆ ಶುಭ ಆರಂಭವಾಗಿದೆ.
ಶಾಸಕರ ಅನರ್ಹತೆ ಪ್ರಕರಣದಲ್ಲಿ ಕಾಂಗ್ರೆಸ್ ಸಲ್ಲಿಸಿದ್ದ ಅನರ್ಹ ಶಾಸಕರ ಕುರಿತಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಆಡಿಯೊ/ವಿಡಿಯೊವನ್ನು ದಾಖಲೆಯಾಗಿ ಇಲ್ಲವೇ ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇದರಿಂದ ಈ ಪ್ರಕರಣದಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿ ಸರ್ಕಾರ ನಿರಾಳವಾದಂತಾಗಿದೆ. ಇನ್ನೊಂದೆಡೆ, ಬಿಜೆಪಿ ಸರ್ಕಾರ ಉರುಳಲು ಅವಕಾಶ ನೀಡುವುದಿಲ್ಲ ಎಂಬ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಮಾತಿಗೆ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಕೂಡ ದನಿಗೂಡಿಸಿದ್ದಾರೆ. ಜೆಡಿಎಸ್ ಪಕ್ಷದ ಎರಡು ಶಕ್ತಿಕೇಂದ್ರಗಳಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರೇ ಭರವಸೆ ನೀಡಿರುವುದರಿಂದ ಸದ್ಯಕ್ಕಂತೂ ಸರ್ಕಾರ ಸುಭದ್ರ.
ಯಡಿಯೂರಪ್ಪ ಅವರ ಆಡಿಯೊ/ವಿಡಿಯೊ ಬಗ್ಗೆ ಹೆಚ್ಚಿನ ಆತಂಕ ಇಲ್ಲದೇ ಇದ್ದರೂ ನಡೆಯುತ್ತಿರುವ ವಿದ್ಯಮಾನಗಳಿಂದ ಬೇಸತ್ತು ಅನರ್ಹ ಶಾಸಕರು ನಿಲುವು ಬದಲಿಸಿದರೆ ಎಂಬ ಸಣ್ಣ ಅನುಮಾನ ಕಾಡುತ್ತಿತ್ತು. ಇದರೊಂದಿಗೆ ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಸಿಗದೇ ಇದ್ದರೆ ಸರ್ಕಾರ ಉಳಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯೂ ಕಾಡುತ್ತಿತ್ತು. ಹೀಗಾಗಿ ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಜೆಡಿಎಸ್ ನ ಕೆಲ ಶಾಸಕರನ್ನು ಸೆಳೆದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡಿತ್ತು.
ಪಕ್ಷ ಉಳಿಸಿಕೊಳ್ಳಲು ಬಿಜೆಪಿಗೆ ಜೈ ಅಂದರು ದೇವೇಗೌಡ
2018ರಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಾಗಲೇ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲು ಎಚ್. ಡಿ. ಕುಮಾರಸ್ವಾಮಿ ಮುಂದಾಗಿದ್ದರು. ಆದರೆ, ದೇವೇಗೌಡರು ಅದಕ್ಕೆ ಒಪ್ಪದೇ ಇದ್ದಾಗ ಮತ್ತು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಾಗ ಕುಮಾರಸ್ವಾಮಿ ಅದಕ್ಕೆ ಒಪ್ಪಿಕೊಂಡಿದ್ದರು. ಬಳಿಕ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ರಚಿಸಿದಾಗ ಜೆಡಿಎಸ್ ನ ಹಲವು ಶಾಸಕರು ಸರ್ಕಾರಕ್ಕೆ ಪರೋಕ್ಷ ಬೆಂಬಲ ಸೂಚಿಸುವ ಒಲವು ತೋರಿದ್ದರು. ಆದರೆ, ಆಗ ದೇವೇಗೌಡ ಮತ್ತು ಕುಮಾರಸ್ವಾಮಿ ಒಪ್ಪಿರಲಿಲ್ಲ. ಆದರೆ, ಶಾಸಕರ ನಿಲುವಿನಲ್ಲಿ ಬದಲಾವಣೆಯಾಗಿರಲಿಲ್ಲ. ಇದರ ಪರಿಣಾಮ ಕಳೆದ ತಿಂಗಳೇ ಜೆಡಿಎಸ್ ಎರಡು ಹೋಳಾಗುವ ಲಕ್ಷಣ ಕಾಣಿಸಿಕೊಂಡಿತ್ತು. ತಕ್ಷಣ ಎಚ್ಚೆತ್ತ ಕುಮಾರಸ್ವಾಮಿ ಬಿಜೆಪಿ ಪರವಾಗಿ ನಿಂತರಲ್ಲದೆ, ಸರ್ಕಾರ ಉರುಳಲು ಅವಕಾಶ ನೀಡುವುದಿಲ್ಲ ಎಂದು ಘೋಷಿಸಿಬಿಟ್ಟರು. ತಮ್ಮ ಈ ನಿರ್ಧಾರಕ್ಕೆ ಕುಮಾರಸ್ವಾಮಿ ಅವರು ನೆರೆ ಪರಿಹಾರ ಕಾರ್ಯಕ್ರಮಗಳ ಕಾರಣ ನೀಡಿದರಾದರೂ ನಿಜವಾದ ಕಾರಣ ಬೇರೆ ಇತ್ತು ಎಂಬುದು ಬಹಿರಂಗ ಸತ್ಯ.
ಇಷ್ಟಾದರೂ ಸೈದ್ಧಾಂತಿಕ ಕಾರಣಗಳಿಗಾಗಿ ದೇವೇಗೌಡರು ಮಾತ್ರ ಇದನ್ನು ಸುತಾರಾಮ್ ಒಪ್ಪಿಕೊಳ್ಳಲಿಲ್ಲ. ಏನೇ ಆದರೂ ಬಿಜೆಪಿ ಬಗ್ಗೆ ಮೃದು ಧೋರಣೆ ಇಲ್ಲವೇ ಇಲ್ಲ ಎಂದು ಹೇಳಿಬಿಟ್ಟರು. ಆದರೆ, ಮತ್ತೆ ಚುನಾವಣೆ ಎದುರಾದರೆ ಏಕಾಂಗಿಯಾಗಿ ಗೆಲ್ಲುವುದು ಕಷ್ಟ ಎಂಬ ಆತಂಕದಲ್ಲಿದ್ದ ಜೆಡಿಎಸ್ ಶಾಸಕರು ಮಾತ್ರ ದೇವೇಗೌಡರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಈ ವಿಚಾರದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ನಡುವಿನ ಭಿನ್ನಾಭಿಪ್ರಾಯಗಳಿಂದಲೇ ಶಾಸಕರನ್ನು ಸಮಾಧಾನಪಡಿಸಲು ಕುಮಾರಸ್ವಾಮಿ ಆಯೋಜಿಸಿದ್ದ ಮಲೇಷಿಯಾ ಪ್ರವಾಸ ರದ್ದಾಯಿತು. ಇದರ ಹಿಂದೆ ದೇವೇಗೌಡ ಮತ್ತು ಅವರ ಬೀಗರಾದ ಡಿ. ಸಿ. ತಮ್ಮಣ್ಣ ಅವರ ಕೈವಾಡವಿತ್ತು. ಮಲೇಷಿಯಾ ಪ್ರವಾಸ ರದ್ದಾದ ಬಳಿಕ ದೇವೇಗೌಡರು ಪಕ್ಷದ ಶಾಸಕರ ಸಭೆ ಕರೆದು ಅವರನ್ನು ಸಮಾಧಾನಪಡಿಸಲು ಯೋಚಿಸಿದ್ದರು.
ಯಾವಾಗ ದೇವೇಗೌಡರು ಬಿಜೆಪಿ ಸರ್ಕಾರವನ್ನು ಬೆಂಬಲಿಸುವ ತಮ್ಮ ಮಾತನ್ನು ಒಪ್ಪುವುದೇ ಇಲ್ಲ ಎಂದು ಸ್ಪಷ್ಟವಾಯಿತೋ ಶಾಸಕರ ಸಭೆಗೆ ಬರುವುದಿಲ್ಲ ಎಂದ ಕುಮಾರಸ್ವಾಮಿ ಅವರು ಪುತ್ರನ ಸಿನಿಮಾ ನೆಪವೊಡ್ಡಿ ಲಂಡನ್ ಗೆ ಹೊರಟುನಿಂತರು. ಇನ್ನೊಂದೆಡೆ ಸರ್ಕಾರಕ್ಕೆ ಅಪಾಯ ಎದುರಾದರೆ ರಾಜಿನಾಮೆ ನೀಡಿ ಉಳಿಸಿಕೊಳ್ಳಲು ಸಿದ್ಧರಾಗಿದ್ದರು. ನಂತರ ಉಪ ಚುನಾವಣೆ ನಡೆದರೆ ಬಿಜೆಪಿ ಕಡೆಯಿಂದ ಎಲ್ಲಾ ರೀತಿಯ ಸಹಕಾರ ಸಿಗುತ್ತದೆ. ಗೆಲ್ಲುವುದು ಕಷ್ಟವಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು.
ಶಾಸಕರ ಈ ನಿಲುವು ಬಿಜೆಪಿ ವಿಚಾರದಲ್ಲಿ ದೃಢ ನಿಲುವು ಹೊಂದಿದ್ದ ದೇವೇಗೌಡರನ್ನು ವಿಚಲಿತಗೊಳ್ಳುವಂತೆ ಮಾಡಿತ್ತು. ಜೆಡಿಎಸ್ ಪಕ್ಷ ಒಡೆದು ಹೋಳಾಗುವುದು ಇದು ಹೊಸತೇನೂ ಅಲ್ಲ. ಹಿಂದೆಯೂ ಸಾಕಷ್ಟು ಬಾರಿ ಪಕ್ಷದ ಶಾಸಕರು ರಾಜಿನಾಮೆ ನೀಡಿ ಬೇರೆ ಪಕ್ಷ ಸೇರಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಅವೆಲ್ಲಕ್ಕಿಂತ ಗಂಭೀರವಾಗಿತ್ತು. 34 ಮಂದಿ ಶಾಸಕರ ಪೈಕಿ ಅರ್ಧದಷ್ಟು ಮಂದಿ ಪಕ್ಷ ತೊರೆದು ಬಿಜೆಪಿ ಜತೆ ಹೋಗಲು ಸಿದ್ಧರಾಗಿದ್ದರು. ಆ ರೀತಿಯೇನಾದರೂ ಆದರೆ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಕಟ್ಟಿ ಬೆಳೆಸುವುದು ಸಾಧ್ಯವಾಗದ ಮಾತು. ಏಕೆಂದರೆ, ಕುಮಾರಸ್ವಾಮಿ ಮತ್ತು ಎಚ್. ಡಿ. ರೇವಣ್ಣ ಅವರಿಂದ ಈ ಕೆಲಸ ಸಾಧ್ಯವಿಲ್ಲ. ತಮಗೆ ವಯಸ್ಸು ಅಡ್ಡಿಯಾಗುತ್ತಿದೆ.
ಯಾವಾಗ ಈ ಆತಂಕ ಶುರುವಾಯಿತೋ ದೇವೇಗೌಡರು ಕೂಡ ಮೆತ್ತಗಾದರು. ಸರ್ಕಾರ ಉರುಳಲು ಅವಕಾಶ ನೀಡುವುದಿಲ್ಲ. ಮುಂದಿನ ಮೂರೂವರೆ ವರ್ಷ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಹೇಳಿಬಿಟ್ಟರು. ಜತೆಗೆ ರಾಜ್ಯದ ಹಿತಕಾಯುವ ಸಿಎಂ ಯಡಿಯೂರಪ್ಪ ಅವರ ನಿರ್ಧಾರಕ್ಕೆ ಅಭಿನಂದನೆಗಳು.ಎಂದು ಹೊಗಳಲಾರಂಭಿಸಿದರು. ಮಾಜಿ ಪ್ರಧಾನಿ ಹೇಳಿಕೆ ಮೇಲ್ನೋಟಕ್ಕೆ ಅವರ ಮಾತು ತಮ್ಮ ರಾಜಕೀಯ ಕಡುವೈರಿ ಸಿದ್ದರಾಮಯ್ಯ ಅವರು ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿರುವುದರಿಂದ ಅದಕ್ಕೆ ಪ್ರತಿಯಾಗಿ ತಾನು ಸರ್ಕಾರ ಉಳಿಸುತ್ತಿದ್ದೇನೆ ಎಂಬಂತೆ ಇತ್ತಾದರೂ ಅದರ ಹಿಂದಿನ ನಿಜವಾದ ಉದ್ದೇಶ ಪಕ್ಷ ಒಡೆದು ಹೋಳಾಗದಂತೆ ನೋಡಿಕೊಳ್ಳುವುದಷ್ಟೇ ಆಗಿತ್ತು.
ಗೌಡರ ಕುಟುಂಬದ ಬಗ್ಗೆ ಮೆತ್ತಗಾದ ಯಡಿಯೂರಪ್ಪ
ಇತ್ತ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ತಮ್ಮ ಸರ್ಕಾರದ ಬಗ್ಗೆ ಮೃದು ಧೋರಣೆ ತೋರಿಸಿದ್ದಲ್ಲದೆ, ಸರ್ಕಾರ ಉಳಿಸಲು ನೆರವಾಗುವ ಮಾತುಗಳನ್ನು ಹೇಳುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ದೇವೇಗೌಡ ಮತ್ತು ಕುಮಾರಸ್ವಾಮಿ ವಿಚಾರದಲ್ಲಿ ಮೆತ್ತಗಾಗಿದ್ದಾರೆ. ಕಳೆದ ವರ್ಷದ ಮೇ ತಿಂಗಳಲ್ಲಿ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಪ್ಪ-ಮಕ್ಕಳು (ದೇವೇಗೌಡ-ಕುಮಾರಸ್ವಾಮಿ) ಸೇರಿ ಇಲ್ಲದಂತೆ ಮಾಡದಿದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ. ಯಾವುದೇ ಕಾರಣಕ್ಕೂ ಅಪ್ಪ-ಮಕ್ಕಳ ಜತೆ ಕೈಜೋಡಿಸುವುದಿಲ್ಲ ಎಂದು ಹೇಳಿದ್ದ ಯಡಿಯೂರಪ್ಪ ಇದೀಗ ದೇವೇಗೌಡರ ಕೋರಿಕೆಗೆ ಮಣಿದಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಯಾದಗಿರಿ ಸಿಟಿ ಸ್ಟೇಷನ್ ಪಿಎಸ್ ಐ ಬಾಪುಗೌಡ ಪಾಟೀಲ್ ರನ್ನು ರಜೆ ಮೇಲೆ ಕಳುಹಿಸುವಂತೆ ನೋಡಿಕೊಂಡಿದ್ದಾರೆ.
ಇವರಿಬ್ಬರ ಈ ಹೊಂದಾಣಿಕೆ ರಾಜಕಾರಣ ಇದೀಗ ಬಿಜೆಪಿ ಸರ್ಕಾರವನ್ನು ಕೆಡವಲು ಹದ್ದಿನಂತೆ ಕಾಯುತ್ತಿರುವ ಕಾಂಗ್ರೆಸ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆ ತಂದೊಡ್ಡಿದೆ. ಜತೆಗೆ ರಾಜ್. ರಾಜಕೀಯದಲ್ಲಿ ಮತ್ತೊಂದು ಬೃಹನ್ನಾಟಕಕ್ಕೆ ವೇದಿಕೆ ಸಜ್ಜಾಗುತ್ತಿದೆ.