ಹಾವೇರಿಯಲ್ಲಿ ನೆರೆಯಲ್ಲಿ ಕೊಚ್ಚಿ ಹೋಗಿದ್ದ ಬೆಳೆಗಳಿಗೆ ಪರಿಹಾರ ವಿತರಿಸುವ ಸಂದರ್ಭದಲ್ಲಿ ಭಾರೀ ಅವ್ಯವಹಾರ ಎಸಗಿದ್ದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ನೆರೆಯಿಂದ ನೊಂದ ರೈತರ ಸಂಕಷ್ಟಗಳನ್ನು ಪರಿಹರಿಸಬೇಕಿದ್ದ ಸರ್ಕಾರಿ ಅಧಿಕಾರಿಗಳು, ರೈತರ ನೋವಿನ ಮೇಲೆ ಬರೆ ಎಳೆದಂತೆ, ನೆರೆ ಪರಿಹಾರದ ಹಣವನ್ನು ಲಪಟಾಯಿಸಿದ ಕುರಿತು ಪ್ರತಿಧ್ವನಿ ವಿಸ್ತೃತವಾದ ವರದಿ ದಾಖಲಿಸಿತ್ತು.
ಈಗ ಅವ್ಯವಹಾರ ಎಸಗಿರುವ ಆರೋಪದ ಮೇಲೆ ಆರು ಜನ ಗ್ರಾಮ ಲೆಕ್ಕಾಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ಈ ಕುರಿತಾಗಿ ಪ್ರತಿಧ್ವನಿಗೆ ಮಾಹಿತಿ ನೀಡಿರುವ ಹಾವೇರಿ ಜಿಲ್ಲೆಯ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ತಂತ್ರಾಂಶದಲ್ಲಿನ ಲೋಪದೋಷಗಳನ್ನು ಅರಿತು ಬೇಕಾಬಿಟ್ಟಿಯಾಗಿ ಹಣ ವರ್ಗಾವಣೆ ಮಾಡಿರುವವರ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಹಾವೇರಿ ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಾಧಿಕಾರಿ ಆನಂದ ದೇಸಾಯಿ, ಕರ್ಜಗಿ ಗ್ರಾಮ ಲೆಕ್ಕಾಧಿಕಾರಿ ಎಸ್ ಎ ಲಿಂಗದಹಳ್ಳಿ, ಶಿಗ್ಗಾಂವ್ ತಾಲೂಕಿನ ಅತ್ತಿಗೆರೆ ಗ್ರಾಮ ಪಂಚಾಯತ್‌ನ ಗ್ರಾಮ ಲೆಕ್ಕಾಧಿಕಾರಿ ಅಕ್ಷಯ್ ಪಾಟೀಲ್, ಆಂಡಳಗಿ ಗ್ರಾಮ ಲೆಕ್ಕಾಧಿಕಾರಿ ಸಿ ಡಿ ಮಳಲಿ, ಕಬ್ಬನೂರು ಗ್ರಾಮ ಲೆಕ್ಕಾಧಿಕಾರಿ ಸಿದ್ದರಾಮ್ ಇಂದೂರು ಹಾಗೂ ಬನ್ನೂರು ಗ್ರಾಮ ಲೆಕ್ಕಾಧಿಕಾರಿ ಎಚರೇಶ್ ಹಿರೇಸಕ್ರಿಗೌಡ ಅಮಾನತುಗೊಂಡ ಅಧಿಕಾರಿಗಳು. ಇವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಕೃಷ್ಣ ಅವರು ಆದೇಶ ಹೊರಡಿಸಿದ್ದಾರೆ.
ಇನ್ನು ಈ ಅವ್ಯವಹಾರದ ಕುರಿತು ತನಿಖೆಯನ್ನು ಕೈಗೊಳ್ಳಲು ಪ್ರತೀ ತಾಲೂಕಿಗೆ ವಿಚಾರಣಾಧಿಕಾರಿಯನ್ನು ನೇಮಿಸಲಾಗಿದೆ. ಅವರಿಗೆ ಪರಿಹಾರ ವಿತರಿಸುವ ತಂತ್ರಾಂಶದ ಕುರಿತು ತರಭೇತಿಯನ್ನು ನೀಡಲಾಗುತ್ತಿದ್ದು, ಈ ಅವ್ಯವಹಾರದ ಕುರಿತ ಸಮಗ್ರ ತನಿಖೆಯನ್ನು ಅವರು ನಡೆಸಿ ವರದಿ ನೀಡಲಿದ್ದಾರೆ, ಎಂದು ಕೃಷ್ಣ ತಿಳಿಸಿದರು.
“ಉನ್ನತ ಶಿಕ್ಷಣ ಪಡೆದು ಸರ್ಕಾರಿ ಅಧಿಕಾರಿಗಳಾಗಿ ನೇಮಕಗೊಳ್ಳುವವರು, ತಂತ್ರಾಂಶದಲ್ಲಿನ ಲೋಪದೋಷಗಳ ಕುರಿತು ಚೆನ್ನಾಗಿ ಅರಿತಿರುತ್ತಾರೆ. ಅಂಥಹವರಿಂದ ಈ ರೀತಿಯ White Collar Crime ನಡೆದಿದೆ,” ಎಂದು ಕೃಷ್ಣ ಬಾಜಪೇಯಿ ಅಭಿಪ್ರಾಯಪಟ್ಟಿದ್ದಾರೆ.
ಈ ಅವ್ಯವಹಾರದ ಕುರಿತು ಇನ್ನಷ್ಟು ಮಾಹಿತಿಗಳು ತಿಳಿದು ಬಂದಿದ್ದು, ಭೂಮಿಯ ಮೂಲ ದಾಖಲೆ ಹೊಂದಿರುವ ವ್ಯಕ್ತಿ ಮೃತಪಟ್ಟಲ್ಲಿ, ಅವರ ಮಗ ಅಥವಾ ಮಗಳಿಗೆ ಸೇರಬೇಕಾದ ಹಣವನ್ನು ಕೂಡಾ ಈ ಅಧುಕಾರಿಗಳು ಲಪಟಾಯಿಸಿದ್ದಾರೆ. ಇನ್ನು ಈ ಅವ್ಯವಹಾರದಲ್ಲಿ ಹಲವು ಬ್ರೋಕರ್‌ಗಳು ಕೂಡಾ ಪಾಲು ಹೊಂದಿದ್ದು, ರೈತರ ಹೆಸರಿನಲ್ಲಿ ಹಣ ಪಡೆದು ನಂತರ ಹಣವನ್ನು ತಮ್ಮ ಖಾತೆಗೆ ನೇರವಾಗಿ ವರ್ಗಾಯಿಸಿದ್ದಾರೆ. ಈಗಾಗಲೇ ಲಕ್ಷಗಟ್ಟಲೆ ಹಣವನ್ನು ನುಂಗಿ ನೀರು ಕುಡಿದಿರುವ ಅಧಿಕಾರಿಗಳಿಂದ ಸುಮಾರು 60 ಲಕ್ಷದಷ್ಟು ಹಣವನ್ನು ವಾಪಸು ಪಡೆಯಲಾಗಿದ್ದು, ತಂತ್ರಾಂಶದಲ್ಲಿನ ಅಂಕಿ ಸಂಖ್ಯೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ಬಳಿಕ ಲಪಟಾಯಿಸಲಾದ ಮೊತ್ತದ ನಿಖರ ಮಾಹಿತಿ ತಿಳಿಯಲಿದೆ.
ಏನೇ ಆದರೂ, ಬಡ ರೈತರ ಸಂಕಷ್ಟಕ್ಕೆ ಸರ್ಕಾರ ನೀಡಿದ ಹಣವನ್ನು ಈ ರೀತಿ ನುಂಗಿ ನೀರು ಕುಡಿದ ಅಧಿಕಾರಿಗಳಿಗೆ ಕಠಿಣ ಸಜೆಯಾಗಬೇಕು. ಇವರ ಮೇಲೆ ಜರುಗಿಸುವ ಕ್ರಮ ಉಳಿದ ಅಧಿಕಾರಿಗಳಿಗೆ ಒಂದು ಉದಾಹರಣೆಯಾಗಿರಬೇಕು. ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದು ಮಾತ್ರವಲ್ಲದೇ, ರೈತರ ಕಷ್ಟಗಳಿಗೆ ರಾಜಕಾರಣಿಗಳು ನೆರವಾಗಬೇಕಿದೆ.