ದೆಹಲಿಯ ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ದಿನಗಳು ಸಮೀಪಿಸತೊಡಗಿವೆ. ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ನೇಣಿಗೇರಿಸಲು ತಿಹಾರ ಜೈಲಿನಲ್ಲಿ ಸಿದ್ಧತೆಗಳು ಜರುಗಿವೆ. ನೇಣಿಗೇರಿಸುವ ವೃತ್ತಿಪರ ವ್ಯಕ್ತಿಯನ್ನು ಒದಗಿಸಿಕೊಡುವಂತೆ ತಿಹಾರ ಜೈಲು ಅಧಿಕಾರಿಗಳು ಉತ್ತರಪ್ರದೇಶ ಸರ್ಕಾರವನ್ನು ಕೋರಿದೆ. ಪವನ್ ಜಲ್ಲಾದ ಎಂಬ ನಾಲ್ಕನೆಯ ಪೀಳಿಗೆಯ ವೃತ್ತಿಪರ ಈ ನಾಲ್ವರನ್ನು ಗೆಲ್ಲಿಗೇರಿಸಲು ತಯಾರೆಂದು ಸಾರಿದ್ದಾನೆ.
ಹೆಚ್ಚು ಓದಿದ ಸ್ಟೋರಿಗಳು
ಕಳೆದ ಹದಿನೈದು ದಿನಗಳಲ್ಲಿ ಒಮ್ಮೆಯಾದರೂ ತಮ್ಮ ಕುಟುಂಬದ ಸದಸ್ಯರ ಭೇಟಿಯಾಗಲು ಅಪರಾಧಿಗಳಿಗೆ ಅವಕಾಶ ನೀಡಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಅವರ ಮೇಲೆ ಸತತ ನಿಗಾ ಇಡಲಾಗಿದೆ. ಆಗಾಗ ಕಾಣಿಸಿಕೊಳ್ಳುವ ಆತಂಕದ ವಿನಾ ಅವರ ವರ್ತನೆಯಲ್ಲಿ ದೊಡ್ಡ ಬದಲಾವಣೆಯೇನೂ ಕಂಡು ಬಂದಿಲ್ಲ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
ನಾಲ್ವರನ್ನು ಏಕಕಾಲಕ್ಕೆ ಒಂದೇ ನೇಣುಗಂಬದಿಂದ ನೇಣಿಗೇರಿಸುತ್ತಿರುವುದು ತಿಹಾರ ಜೈಲಿನ ಇತಿಹಾಸದಲ್ಲಿ ಇದೇ ಮೊದಲು. ನಾಲ್ಕು ನೇಣು ಕುಣಿಕೆಗಳನ್ನು ಒಂದೇ ನೇಣುಗಂಬಕ್ಕೆ ತಗುಲಿಸಲಾಗುವುದು. ನೇಣುಗಂಬವು ನಾಲ್ವರ ಭಾರವನ್ನು ತಡೆದುಕೊಳ್ಳುವುದೇ ಎಂದು ಪರಿಶೀಲಿಸಲಾಗುತ್ತಿದೆ. ನೇಣಿಗೇರಿಸಿದ ನಂತರ ಕನಿಷ್ಠ ಮೂರು ತಾಸುಗಳ ಕಾಲವಾದರೂ ನಾಲ್ಕು ದೇಹಗಳ ಭಾರವನ್ನು ಹೊರುವಷ್ಟು ನೇಣುಗಂಬ ಗಟ್ಟಿಮುಟ್ಟಾಗಿರಬೇಕಿದೆ. ಕನಿಷ್ಠ ಮೂರು ತಾಸುಗಳ ಕಾಲ ನೇತಾಡಿದ ನಂತರವೇ ಕೈದಿಗಳನ್ನು ಮೃತರು ಎಂದು ಘೋಷಿಸಲಾಗುವುದು. ಎರಡು ಬಾರಿ ಅಷ್ಟು ಭಾರವನ್ನು ಮೂರು ತಾಸುಗಳ ಕಾಲ ತೂಗಿಸಿ ನೇಣುಗಂಬ ಸಾಕಷ್ಟು ಗಟ್ಟಿಯಾಗಿದೆಯೇ ಎಂದು ಪರಿಶೀಲಿಸಲಾಗಿದೆ.

ಅದರ ವಿನ್ಯಾಸದಲ್ಲಿ ಕೆಲ ಬದಲಾವಣೆಗಳನ್ನೂ ಮಾಡಲಾಗುತ್ತಿದೆ. ಗಲ್ಲುಗಂಭದ ಲೋಹದ ಅಡ್ಡತೊಲೆಯ ಉದ್ದವನ್ನು ಮತ್ತು ಭಾರ ತಡೆಯುವ ಬಲವನ್ನು ಹೆಚ್ಚಿಸಲಾಗುತ್ತಿದೆ. ಬಿಹಾರದ ಬಕ್ಸರ್ ಜೈಲಿನಲ್ಲಿ ಕೈದಿಗಳು ತಯಾರಿಸಿದ ಹೊಸ ನೇಣು ಹಗ್ಗಗಳನ್ನು ತರಿಸಲಾಗುತ್ತಿದೆ. ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್ ಕಸಾಬ್ ಮತ್ತು ಅತ್ಯಾಚಾರಿ ಹಂತಕ ಧನಂಜಯ ಚಟರ್ಜಿಯನ್ನು ನೇಣಿಗೇರಿಸಲು ಇದೇ ಹಗ್ಗಗಳನ್ನು ಬಳಸಲಾಗಿತ್ತು. ಅವುಗಳನ್ನು ಮಣಿಲಾ ಹಗ್ಗಗಳು ಎಂದು ಕರೆಯಲಾಗುತ್ತದೆ.
ಮೆದು ಹತ್ತಿಯ ನೂಲಿನಿಂದ ತಯಾರಿಸುವ ಈ ಹಗ್ಗಗಳು ಮೆದುವಾಗಿದ್ದರೂ ಗಟ್ಟಿಯಾಗಿರುತ್ತವೆ. ಮೆದುವಾಗಿಸಲು ಬೆಣ್ಣೆ ಅಥವಾ ಮೇಣವನ್ನು ಬಳಸಲಾಗುತ್ತದೆ. ಈ ಹಗ್ಗಗಳು ಮೆದುವಾಗಿಲ್ಲದೆ ಹೋದರೆ ಕೈದಿಯ ಕುತ್ತಿಗೆಯನ್ನು ಕೊರೆದು ಕತ್ತರಿಸುತ್ತವೆ. ಅದನ್ನು ತಡೆಯಲೆಂದೇ ಅವುಗಳನ್ನು ಮೆದು ಮಾಡಲಾಗುತ್ತದೆ. ನೇಣಿಗೇರಿಸುವಾಗ ಹೆಚ್ಚು ನೋವಿಲ್ಲದ ಸಾವು ಬರುವಂತೆ ಕುಣಿಕೆಯ ಗಂಟುಗಳು ಸಾವಕಾಶವಾಗಿ ಜಾರಿ ಕೊರಳನ್ನು ಒತ್ತುವಂತೆ ಗಂಟುಗಳಿಗೂ ಬೆಣ್ಣೆ ಅಥವಾ ಗ್ರೀಸ್ ನ್ನು ಸವರಲಾಗುತ್ತದೆ.
ತಿಹಾರ ಜೈಲಿನ ನೇಣುಗಂಬದಲ್ಲಿ ಈವರೆಗೆ ಏಕಕಾಲಕ್ಕೆ ಇಬ್ಬರನ್ನು ಮಾತ್ರವೇ ನೇಣಿಗೇರಿಸುವ ಅವಕಾಶವಿತ್ತು. ಜೈಲಿನ ಗಲ್ಲುಗಂಭದ ಅಂಗಳವನ್ನು 1950ರಲ್ಲಿ ನಿರ್ಮಿಸಲಾಗಿತ್ತು. ಕಾನೂನಿನ ಪ್ರಕಾರ ನಾಲ್ವರನ್ನೂ ಏಕಕಾಲಕ್ಕೆ ನೇಣಿಗೇರಿಸುವುದು ಕಡ್ಡಾಯ. ನಾಲ್ವರ ಪೈಕಿ ಒಬ್ಬನೇ ಒಬ್ಬ ಕೈದಿ ಕಾಯಿಲೆ ಬಿದ್ದರೂ ಇಲ್ಲವೇ, ಭಯ ಆತಂಕದಿಂದಾಗಿ ಪ್ರಜ್ಞೆ ತಪ್ಪಿದರೂ ನೇಣು ಶಿಕ್ಷೆಯ ದಿನ ಮುಂದೆ ಹೋಗುವುದು.

ದಯಾಭಿಕ್ಷೆಯ ಅರ್ಜಿ ತಿರಸ್ಕಾರವಾದ ನಂತರ 14 ದಿನಗಳ ಒಳಗಾಗಿ ಕೈದಿಗಳನ್ನು ಗಲ್ಲಿಗೇರಿಸಲಾಗುವುದು. ಅವರವರ ಕುಟುಂಬಗಳಿಗೆ ಈ ಸಂಗತಿಯನ್ನು ತಿಳಿಸಲಾಗುತ್ತದೆ. ಗಲ್ಲಿಗೇರಿಸುವ ಮುನ್ನಾ ದಿನ ಅವರವರ ಇಷ್ಟದ ಉಣಿಸು ತಿನಿಸನ್ನು ನೀಡಲಾಗುವುದು. ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಜರಾಗುವ ಅವಕಾಶ ಕಲ್ಪಿಸಲಾಗುವುದು.
ನೇಣಿಗೇರಿಸುವ ದಿನ ಕೈದಿಗಳು ಸ್ನಾನ ಮಾಡಿ ಉಪಾಹಾರ ಸೇವಿಸುತ್ತಾರೆ. ಮುಖಕ್ಕೆ ಕಪ್ಪು ಮುಸುಕು ಹೊದಿಸಿ ಕೈಗಳನ್ನು ಹಿಂದಕ್ಕೆ ಕಟ್ಟಿ ಅವರನ್ನು ಗಲ್ಲುಗಂಬಕ್ಕೆ ಒಯ್ಯಲಾಗುವುದು. ಗಲ್ಲಿಗೇರಿಸುವ ಶಿಕ್ಷೆಯ ಆದೇಶವನ್ನು ನ್ಯಾಯಾಧೀಶರೊಬ್ಬರು ಓದಿ ಹೇಳುತ್ತಾರೆ. ಗಲ್ಲುಗಂಭದ ಕೆಳಗೆ ನಿಲ್ಲಿಸಿ ಅವರ ಕಾಲುಗಳನ್ನು ಜೋಡಿಸಿ ಕಟ್ಟಲಾಗುತ್ತದೆ. ಗಲ್ಲಿಗೇರಿಸಿದ ನಂತರ ದೇಹವನ್ನು ಅರ್ಧ ತಾಸು ಗಲ್ಲು ಗುಂಡಿಯಲ್ಲಿ ನೇತಾಡಲು ಬಿಟ್ಟು ವೈದ್ಯರು ಮರಣವನ್ನು ದೃಢೀಕರಿಸುತ್ತಾರೆ.