ಈ ಸುದ್ದಿ ಬರೆಯಬೇಕಾದ ಅಗತ್ಯವೇ ಇರಲಿಲ್ಲ. ಯಾಕೆಂದರೆ, ಇವತ್ತು ಬೆಳಗ್ಗೆ 6 ಗಂಟೆಗೆ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಪ್ರಾಣ ಪಕ್ಷಿ ಹಾರಿ ಹೋಗಬೇಕಿತ್ತು. ದೆಹಲಿಯ ತಿಹಾರ್ ಜೈಲಿನಲ್ಲಿರುವ ಅಪರಾಧಿಗಳಾದ ಮುಖೇಶ್ ಸಿಂಗ್, ಅಕ್ಷಯ್ ಠಾಕೂರ್, ವಿನಯ್ ಶರ್ಮಾ ಹಾಗು ಪವನ್ ಗುಪ್ತಾ ಮೇಲಿನ ಅತ್ಯಾಚಾರ ಆರೋಪ ಸಾಬೀತಾಗಿದ್ದು, ಮರಣದಂಡನೆ ಶಿಕ್ಷೆ ಜಾರಿ ಮಾಡುವುದು ಅಷ್ಟೇ ಬಾಕಿ ಉಳಿದುಕೊಂಡಿದೆ. ಅಂತಿಮವಾಗಿ 2020ರ, ಮಾರ್ಚ್ 3ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಕೋರ್ಟ್ ಡೆತ್ ವಾರೆಂಟ್ ಕೊಟ್ಟಿತ್ತು. ಇಷ್ಟು ಹೊತ್ತಿಗೆ ನಾಲ್ವರನ್ನು ಗಲ್ಲಿಗೆ ಏರಿಸಿ, ಶವಗಳನ್ನು ಕುಣಿಕೆಯಿಂದ ಇಳಿಸುವ ಕಾರ್ಯ ನಡೆಯಬೇಕಿತ್ತು. ಆದ್ರೆ ಭಾರತದ ಕಾನೂನು ಮಾಡಿಕೊಟ್ಟ ಅವಕಾಶದಿಂದ ಸಾವಿನ ದಿನ ಮುಂದೂಡಿಕೆಯಾಗಿದೆ.
ಒಟ್ಟು 6 ಮಂದಿ ಅತ್ಯಾಚಾರಿಗಳ ಪೈಕಿ ಇದೀಗ ಶಿಕ್ಷೆ ಅನುಭವಿಸಲು ಉಳಿದಿರುವುದು ಕೇವಲ ನಾಲ್ಕು ಮಂದಿ ಮಾತ್ರ. ಆ ನಾಲ್ಕು ಜನರನ್ನು ಒಟ್ಟಿಗೆ ಗಲ್ಲು ಶಿಕ್ಷೆಗೆ ಗುರಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿರುವ ಒಂದೇ ಒಂದು ವಾಕ್ಯ ಇಂದು ಮೂವರ ಜೀವವನ್ನು ಈ ದಿನ ಉಳಿಸಿದೆ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಅತ್ಯಾಚಾರ ಅಪರಾಧಿಗಳು ಗಲ್ಲು ಶಿಕ್ಷೆಗೆ ಗುರಿಯಾಗಬೇಕಿತ್ತು. ಆದರೆ ನಾಲ್ವರಲ್ಲಿ ಓರ್ವ ಅಪರಾಧಿ ಆಗಿರುವ ಪವನ್ ಗುಪ್ತ ಕ್ಷಮದಾನ ಅರ್ಜಿ ಸಲ್ಲಿಸಿರಲಿಲ್ಲ. ಇದೀಗ ರಾಷ್ಟ್ರಪತಿ ರಾಮನಾಥ ಕೋವಿಂದ್ ಬಳಿ ಕ್ಷಮದಾನ ಅರ್ಜಿ ಸಲ್ಲಿಕೆ ಮಾಡಿದ್ದಾನೆ. ಕ್ಷಮದಾನ ಅರ್ಜಿ ಬಾಕಿ ಇರುವುದರಿಂದ ಸದ್ಯಕ್ಕೆ ಗಲ್ಲು ಶಿಕ್ಷೆ ವಿಧಿಸುವುದು ಬೇಡ ಎಂದಿದೆ ಕೋರ್ಟ್. ಪವನ್ ಒಬ್ಬನಿಂದ ಉಳಿದ ಮೂವರಿಗೂ ತಾತ್ಕಾಲಿಕ ಜೀವದಾನ ಸಿಕ್ಕಿದೆ.
ಇಂಗ್ಲಿಷ್‌ನಲ್ಲಿ ಒಂದು ಮಾತಿದೆ, ಟ್ರೈ ಅಂಡ್ ಟ್ರೈ ಅನ್‌ಟಿಲ್ ಯು ಡೈ (try and try until you die). ಈ ಮಾತನ್ನು ಸಂಪೂರ್ಣವಾಗಿ ಪಾಲಿಸುತ್ತಿದ್ದಾರೆ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳು. ಕೊನೆಯ ಉಸಿರು ಇರುವ ತನಕ್ಕ ನಿನ್ನ ಪ್ರಯತ್ನ ನಿಲ್ಲದಿರಲಿ ಎನ್ನುವ ಮಾತಿನಂತೆ, ಎಷ್ಟು ದಿನ ಸಾಧ್ಯವೋ ಅಷ್ಟೂ ದಿನ ಬದುಕಿ ಇರಬೇಕು ಎನ್ನುವ ಹಠಕ್ಕೆ ಬಿದ್ದಂತೆ ಇದೆ. ನಮ್ಮ ದೇಶದ ಕಾನೂನನ್ನೇ ಬಳಸಿಕೊಂಡು ಸಾವಿನ ದಿನವನ್ನು ಮುಂದೂಡುತ್ತಲೇ ಇದ್ದಾರೆ. ಇದೀಗ ಕೋರ್ಟ್ ಮುಂದಿನ ಆದೇಶದ ತನಕ ಗಲ್ಲು ಶಿಕ್ಷೆ ಜಾರಿ8 ಮಾಡದಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಒಂದೊಮ್ಮೆ ಕ್ಷಮದಾನ ಅರ್ಜಿಯನ್ನು ತಿರಸ್ಕಾರ ಮಾಡಿದರೆ, ಕೋರ್ಟ್ ಬೇಕಿದ್ದರೆ ಇಂದೇ ಮತ್ತೊಮ್ಮೆ ಡೆತ್ ವಾರೆಂಟ್ ಹೊರಡಿಸಬಹುದು. ಆದರೆ ಕಾನೂನನ್ನೇ ಬಳಸಿಕೊಂಡು ಈಗಾಗಲೇ ಮೂರು ಬಾರಿ ಸಾವಿನ ಕುಣಿಕೆ ತಪ್ಪಿಸಿಕೊಂಡಿದ್ದಾರೆ ಎನ್ನುವುದು ಸತ್ಯ.
ಸುಪ್ರೀಂಕೋರ್ಟ್‌ನಲ್ಲಿ ಕ್ಯೂರೇಟಿವ್ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆದರೆ ಸುಪ್ರೀಂಕೋರ್ಟ್ ಕ್ಯೂರೇಟಿವ್ ಅರ್ಜಿಯನ್ನು ಮಾನ್ಯ ಮಾಡದೆ ವಜಾ ಮಾಡಿತ್ತು. ಮುಂದೆ ಯಾವುದೇ ದಾರಿ ಕಾಣದ ಪವನ್ ಗುಪ್ತ ಪರ ವಕೀಲ ಎ.ಪಿ ಸಿಂಗ್, ರಾಷ್ಟ್ರಪತಿಗಳಿಗೆ ಕ್ಷಮದಾನ ಸಲ್ಲಿಕೆ ಮಾಡುವ ನಿರ್ಧಾರ ಮಾಡಿದ್ರು. ಮುಖೇಶ್ ಸಿಂಗ್ ಹಾಗು ವಿನಯ್ ಶರ್ಮಾ ಕ್ಯೂರೇಟಿವ್ ಅರ್ಜಿ, ಜನವರಿ 14ರಂದೇ ವಜಾ ಆಗಿತ್ತು. ಮತ್ತೋರ್ವ ಅಪರಾಧಿ ಅಕ್ಷಯ್ ಠಾಕೂರ್ ಕ್ಯೂರೇಟಿವ್ ಅರ್ಜಿ ಜನವರಿ 30 ರಂದು ವಜಾ ಆಗಿತ್ತು. ರಾಷ್ಟ್ರಪತಿಗಳ ಕ್ಷಮಾದಾನವೂ ಸಿಕ್ಕಿರಲಿಲ್ಲ. ಆ ಬಳಿಕ ಮಾರ್ಚ್ 2ರಂದು ಪವನ್ ಶರ್ಮ ಅರ್ಜಿ ವಜಾ ಆಗಿದೆ. ರಾಷ್ಟ್ರಪತಿಗಳ ಎದುರು ಕ್ಷಮಾಧಾನ ಅರ್ಜಿ ಬಾಕಿ ಇರುವ ಏಕೈಕ ಕಾರಣದಿಂದ ಉಳಿದ ಮೂವರಿಗೂ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮೊದಲು ಜನವರಿ 22, ಆ ನಂತರ ಫೆಬ್ರವರಿ 1 ಹಾಗು ಮಾರ್ಚ್ 3ಕ್ಕೆ ಮುಂದೂಡಿಕೆ ಆಗಿತ್ತು. ಇದೀಗ ಮತ್ತೆ ಮುಂದಕ್ಕೆ ಹೋಗಿದೆ. ಹಾಗಾಗಿ ನಿರ್ಭಯಾ ಅತ್ಯಾಚಾರಿಗಳಿಗೆ ಇನ್ನೆಷ್ಟು ದಿನ ಈ ಜೀವ ಉಳಿಸಿಕೊಳ್ಳುವ ಜಂಜಾಟದ ಜೀವನ? ಎನ್ನುವ ಪ್ರಶ್ನೆ ಹುಟ್ಟುವಂತೆ ಮಾಡಿದೆ.
ಒಟ್ಟಾರೆ, ನ್ಯಾಯ ವಿಳಂಬ ಕೂಡ ಅನ್ಯಾಯ ಎನ್ನುವ ಮಾತಿದೆ. ಅದೇ ರೀತಿ ಗಲ್ಲು ಶಿಕ್ಷೆ ಕೊಡಬಾರದು ಎನ್ನುವ ಆಗ್ರಹವೂ ಕೇಳಿಬರುತ್ತದೆ. ಆದ್ರೆ 2012ರ ಡಿಸೆಂಬರ್ 16ರ ರಾತ್ರಿ 23 ವರ್ಷದ ಫಿಸಿಯೋಥೆರಪಿ ವಿದ್ಯಾರ್ಥಿನಿ ಮೇಲೆ ಎರಗಿದ ಐವರು ಕಾಮುಕರು ಹಾಗು ಓರ್ವ ಬಾಲಾಪರಾಧಿ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದರು. ಚಲಿಸುವ ಬಸ್‌ನಲ್ಲಿ ನಡೆದಿದ್ದು ಈ ದುಷ್ಕೃತ್ಯದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ತಿಂಗಳಾದ್ಯಂತ ಜೀವನ್ಮರಣ ಹೋರಾಟ ನಡೆಸಿದ ನಿರ್ಭಯಾ, ಸಿಂಗಾಪುರದಲ್ಲಿ ಕೊನೆಯುಸಿರೆಳೆದಿದ್ದರು.