ಇಂದಿನಿಂದ ದ್ವಿತಿಯ ಪಿಯು ಪರೀಕ್ಷೆ ಆರಂಭವಾಗುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಪರೀಕ್ಷೆ ಆರಂಭವಾಗಲಿದೆ. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭವಾಗಲಿದ್ದು ಮಧ್ಯಾಹ್ನ 1.30ಕ್ಕೆ ಮುಕ್ತಾಯವಾಗಲಿದೆ. ಕಲಾ ವಿಭಾಗದ ಮಕ್ಕಳು ಇತಿಹಾಸದಿಂದ ಆರಂಭ ಮಾಡಿದರೆ, ವಾಣಿಜ್ಯ ವಿಭಾಗದ ಮಕ್ಕಳು ಬೇಸಿಕ್ ಮ್ಯಾಥ್ಸ್ ಮೂಲಕ ಪರೀಕ್ಷೆ ಆರಂಭ ಮಾಡುತ್ತಾರೆ. ವಿಜ್ಞಾನ ವಿಭಾಗದ ಮಕ್ಕಳು ಫಿಸಿಕ್ಸ್ (ಭೌತಶಾಸ್ತ್ರ) ಪರೀಕ್ಷೆ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಲು ಸಹಕಾರಿ ಆಗುವ ಜೀವನದ ಬಹುಮುಖ್ಯ ಘಟ್ಟದ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಆದರೆ ಇದರಲ್ಲಿ ಕಲಾ ವಿಭಾಗ ಹಾಗು ವಾಣಿಜ್ಯ ವಿಭಾಗದ ಮಕ್ಕಳು ಪರೀಕ್ಷೆಯನ್ನು ಸುಲಭವಾಗಿ ಎದುರಿಸಿದ್ರೆ, ವಿಜ್ಞಾನ ವಿಭಾಗದ ಮಕ್ಕಳು ಭಯಕ್ಕೆ ಬೀಳುವುದು ಸಾಮಾನ್ಯ. ಇದಕ್ಕೆ ಕಾರಣ ಪೋಷಕರು ಮಕ್ಕಳ ಮೇಲೆ ಇಟ್ಟುಕೊಳ್ಳುವ ಅತಿಯಾದ ನಿರೀಕ್ಷೆ.
ಮಾರ್ಚ್ 4 ರಿಂದ ಆರಂಭವಾಗಿ ಮಾರ್ಚ್ 23ಕ್ಕೆ ಅಂತ್ಯವಾಗುವ ಈ ಪರೀಕ್ಷೆ ಕೇವಲ ಮಕ್ಕಳ ಪಾಲಿಗೆ ಪರೀಕ್ಷೆಯಲ್ಲ. ನಿಜವಾದ ಪರೀಕ್ಷೆ ಎಂದರೆ ಅದು ಮಕ್ಕಳ ಪೋಷಕರಿಗೆ. ಮಕ್ಕಳು ಹೆಚ್ಚು ಅಂಕ ಗಳಿಸಲಿ ಎನ್ನುವ ತಂದೆ ತಾಯಿಯ ಆಸೆ ತಪ್ಪಲ್ಲ. ಆದರೆ ಮಕ್ಕಳು ಇಷ್ಟೇ ಅಂಕಗಳನ್ನು ಗಳಿಸಬೇಕು ಎನ್ನುವ ಆ ಹುಚ್ಚು ನಿರೀಕ್ಷೆ ತಪ್ಪು. ಆ ನಿರೀಕ್ಷೆ ನಿಮ್ಮ ಅರಿವಿಗೆ ಬಾರದಂತೆಯೇ ನಿಮ್ಮ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವಲ್ಲಿ ಯಶಸ್ವಿಯಾಗುತ್ತದೆ. ಮಾತು ಮಾತಿಗೂ ಪರೀಕ್ಷೆ ಎಂಬ ಪೆಡಂಭೂತದ ಬಗ್ಗೆ ನಿಮ್ಮ ಮಾತು ಬರುತ್ತದೆ. ಪರೀಕ್ಷೆ ಎಂದರೆ ಮೊದಲೇ ದಿಗಿಲು ಬೀಳುವ ಮಕ್ಕಳು, ನಿಮ್ಮ ನಿರೀಕ್ಷೆಯಿಂದ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಾರೆ. ಒಂದು ವೇಳೆ ಮೊದಲ ದಿನದ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುತ್ತದೆ ಎನ್ನುವುದು ಅವರಿಗೆ ಗೊತ್ತಾಗುತ್ತಿದ್ದಂತೆ, ಮುಂದಿನ ಪರೀಕ್ಷೆಗಳ ಮೇಲೆ ಮತ್ತಷ್ಟು ಪರಿಣಾಮ ಬೀರಲು ಶುರುವಾಗುತ್ತದೆ. ಆ ವಿಷಯಗಳ ಬಗ್ಗೆ ನಿಮ್ಮ ಮಗು ಚೆನ್ನಾಗಿ ಓದಿದ್ದರೂ ಅಂಕ ಗಳಿಸಲು ಶಕ್ತವಾಗುವುದಿಲ್ಲ.
ಒಂದು ವೇಳೆ ನಿಮ್ಮ ಮಗು ಮೊದಲ ದಿನದ ಪರೀಕ್ಷೆಯಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸದಿದ್ದರೆ, ಆಕೆ/ಆತನ ಮುಖಭಾವದಲ್ಲೇ ನಿಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಸಾಧ್ಯವಾದರೆ ನಿಮ್ಮ ಮಗಳು/ಮಗನನ್ನು ಸಮಾಧಾನ ಮಾಡಿ. ಇಲ್ಲವೇ ನಿಮ್ಮ ಮಗು ಪ್ರಶ್ನೆ ಪತ್ರಿಕೆಯನ್ನು ಪೋಸ್ಟ್ ಮಾರ್ಟಮ್ ಮಾಡುವುದನ್ನೇ ತಡೆಯಿರಿ. ನಾನು ಬರೆದಿರುವ ಉತ್ತರ ಸರಿಯೋ..? ತಪ್ಪೋ..? ಎನ್ನುವ ಬಗ್ಗೆ ಪುಸ್ತಕದಲ್ಲಿ ಹುಡುಕಲು ಹೊರಟಾಗ, ಕಳೆದು ಹೋದ ಸಮಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಮುಂದಿನದನ್ನು ಗೆಲ್ಲುವ ಬಗ್ಗೆ ಚಿಂತಿಸು ಎನ್ನುವ ಭರವಸೆಯ ಮಾತುಗಳನ್ನು ಹೇಳಿ. ಮಕ್ಕಳು ಸರಿಯಾಗಿ ಬರೆದಿಲ್ಲ ಎಂದರೆ, ಯಾವುದೇ ಕಾರಣಕ್ಕೂ ಅವರನ್ನು ಕುಗ್ಗಿಸಬೇಡಿ. ಒಮ್ಮೆ ಕುಗ್ಗಿಸಿಬಿಟ್ಟರೆ ನಿಮ್ಮ ಮಕ್ಕಳನ್ನು ಮರೆತು ಬಿಡಬೇಕಾದ ಅನಿವಾರ್ಯ ಸಂದರ್ಭ ಒದಗಿ ಬಂದರೂ ಅಚ್ಚರಿಯಿಲ್ಲ, ಬೀ ಕೇರ್‌ಫುಲ್.
ದ್ವಿತೀಯ ಪಿಯುಸಿಯಲ್ಲಿ ನಿಮ್ಮ ಮಕ್ಕಳು ಸೋತು ಬಿಟ್ಟರು ಎಂದುಕೊಳ್ಳಿ. ನಿಮ್ಮ ಆಸೆಯಂತೆ ಎಂಬಿಬಿಎಸ್, ಎಂಜಿನಿಯರಿಂಗ್ ಮಾಡುವುದಕ್ಕೆ ಸಾಧ್ಯವಾಗದೆ ಇದ್ದರೂ ಕಳೆದುಕೊಳ್ಳುವುದು ಏನೂ ಇಲ್ಲ ಎನ್ನುವುದನ್ನು ಮೊದಲು ನೀವು ಅರಿತುಕೊಳ್ಳಿ. ನಿಮ್ಮ ಮಕ್ಕಳು ಹೀಗೆ ಸಾಗಬೇಕು ಎಂದುಕೊಂಡಿದ್ದ ನಿಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಿ. ಈ ಬಾರಿ ಕಡಿಮೆ ಅಂಕ ಬಂದಿದ್ದರೆ ಮತ್ತೊಮ್ಮೆ ಅವಕಾಶ ಬಂದೇ ಬರುತ್ತದೆ. ಆಗ ನಿಮ್ಮ ಮಕ್ಕಳಿಗೆ ಆಸಕ್ತಿ ಇದ್ದರೆ, ಮತ್ತೊಮ್ಮೆ ಪರೀಕ್ಷೆ ಎದುರಿಸಲು ಧೈರ್ಯ ತುಂಬುವ ಕೆಲಸ ಮಾಡಿ, ಆ ಮೂಲಕ ಉತ್ತಮ ಯಶಸ್ಸನ್ನು ಸಾಧಿಸಲು ನೆರವಾಗಿ. ಅದನ್ನು ಬಿಟ್ಟು ಮಕ್ಕಳು ಸರಿಯಾಗಿ ಪರೀಕ್ಷೆ ಬರೆದಿಲ್ಲ ಎನ್ನುವ ಮಾತ್ರಕ್ಕೆ ಹಿಯ್ಯಾಳಿಸುವುದು, ಮನಸೋ ಇಚ್ಛೆ ನಿಂದಿಸುವ ಮೂಲಕ ನಿಮ್ಮ ಒತ್ತಡ, ದುಗುಡವನ್ನು ಮಕ್ಕಳ ಮೇಲೆ ಹೇರಿಕೆ ಮಾಡುವುದು ಮಾಡಿದರೆ ಮಕ್ಕಳು ಕೈ ಜಾರಿ ಹೋಗುತ್ತಾರೆ ಎನ್ನುವುದನ್ನು ಮರೆಯದಿರಿ.
ಒಂದು ವೇಳೆ ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆದರೂ ಕಳೆದುಕೊಳ್ಳುವುದು ಏನಿದೆ..? ಜೀವನವೆಂಬ ಪರೀಕ್ಷೆಯಲ್ಲಿ ಹೇಗೆ ಗೆಲ್ಲಬೇಕು ಎನ್ನುವ ಜೀವನ ಪಾಠ ಕಲಿಸಿ. ಓದಿದವರೆಲ್ಲಾ ಬುದ್ಧಿವಂತರು. ಓದದೇ ಇರುವ ಮಕ್ಕಳು ದಡ್ಡರು ಎಂಬುದು ಸತ್ಯವಲ್ಲ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಮಕ್ಕಳು ಇದ್ದರೆ ಮುಂದೆ ಏನನ್ನಾದರೂ ಸಾಧಿಸಬಹುದು ನೆನಪಿರಲಿ.