ತಾನು ದೇವಮಾನವನೆಂದು ಸ್ವಯಂ ಘೋಷಣೆ ಮಾಡಿಕೊಂಡು ಸಾವಿರಾರು ನಾಗರಿಕರ ಕಣ್ಣಿಗೆ ಮಣ್ಣೆರಚಿ ಮಾಡಬಾರದ ಅನಾಚಾರಗಳನ್ನೆಲ್ಲಾ ಮಾಡಿ ದೇಶದಿಂದ ಪರಾರಿಯಾಗಿರುವ ನಿತ್ಯಾನಂದನ ಬಗ್ಗೆ ಹತ್ತು ಹಲವು ಬಗೆಯ ಸುದ್ದಿಗಳು ಹುಟ್ಟಿಕೊಳ್ಳತೊಡಗಿವೆ.
ಈಕ್ವೆಡಾರ್ ದ್ವೀಪವನ್ನು ಖರೀದಿಸಿ ಅಲ್ಲಿ ಕೈಲಾಸವೆಂಬ ಪ್ರತ್ಯೇಕ ಹಿಂದೂ ರಾಷ್ಟ್ರವನ್ನು ನಿರ್ಮಾಣ ಮಾಡಿಕೊಂಡಿದ್ದಾನೆ ಎಂಬ ವಿಚಾರವೇ ಈಗ ಸುಳ್ಳಾಗುವ ಮೂಲಕ ಅವನೊಬ್ಬ ಸುಳ್ಳ, ವಂಚಕ ಎಂದು ಮತ್ತೊಮ್ಮೆ ಸಾಬೀತಾಗಿದೆ.
ಅತ್ಯಾಚಾರ, ವಂಚನೆ, ಯುವತಿಯರನ್ನು ಅಕ್ರಮವಾಗಿ ಒತ್ತೆಯಾಳಾಗಿಸಿಕೊಂಡಿದ್ದ ಆರೋಪವನ್ನು ಎದುರಿಸಿ ಬಂಧನ ಭೀತಿಯಲ್ಲಿದ್ದ ನಿತ್ಯಾನಂದ ರಾತ್ರೋರಾತ್ರಿ ದೇಶವನ್ನೇ ಬಿಟ್ಟು ಪರಾರಿಯಾಗಿದ್ದ. ಕಳೆದೆರಡು ಮೂರು ತಿಂಗಳಿಂದ ಕಾಣಿಸಿಕೊಳ್ಳದ ಈ ಕಾಮಿ ಸ್ವಾಮಿ ಕಳೆದ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗಿದ್ದಾನೆ.
ಅದೂ ಕೂಡ ದೂರದ ಈಕ್ವೆಡಾರ್ ನಲ್ಲಿ ದ್ವೀಪವನ್ನು ಖರೀದಿಸಿ ಅಲ್ಲಿ `ಕೈಲಾಸ’ ಎಂಬ ಹಿಂದೂ ದೇಶ ಎಂದು ಹೆಸರಿಟ್ಟುಕೊಂಡಿದ್ದಾನೆಂದು ಕೈಲಾಸ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದನು. ಇದು ದೇಶದೆಲ್ಲೆಡೆ ದೊಡ್ಡ ಸುದ್ದಿಯಾಗಿ, ಕೆಲವರು ಅವನೊಬ್ಬ ತಲೆತಿರುಕ. ವಿನಾಕಾರಣ ಇಂತಹ ಚಿತ್ರ ವಿಚಿತ್ರ ಸುದ್ದಿಗಳನ್ನು ಅವನೇ ಸೃಷ್ಟಿ ಮಾಡುತ್ತಾನೆ. ಪ್ರತ್ಯೇಕ ದೇಶವನ್ನು ನಿರ್ಮಿಸಲು ಹೇಗೆ ಸಾಧ್ಯ? ಎಂದೆಲ್ಲಾ ಪ್ರಶ್ನೆ ಮಾಡಿದ್ದರು.
ಆದರೆ, ಆತ ಮತ್ತು ಆತನ ಪಟಾಲಂ ನಿರ್ವಹಣೆ ಮಾಡುತ್ತಿರುವ ಕೈಲಾಸ ಎಂಬ ವೆಬ್ ಸೈಟ್ ನಲ್ಲಿ ಅವನ ವಿವಿಧ ಭಂಗಿಗಳ ಫೋಟೋಗಳು, ಸಮುದ್ರ ಕಿನಾರೆಯ ದೃಶ್ಯಗಳು ಸೇರಿದಂತೆ ವಿವಿಧ ಫೋಟೋಗಳನ್ನು ಮತ್ತು ಪ್ರತ್ಯೇಕ ದೇಶದ ಪರಿಕಲ್ಪನೆ, ಅದಕ್ಕೆ ಅವನೇ ಮುಖ್ಯಸ್ಥ, ಸಚಿವ ಸಂಪುಟ ಇದೆ ಎಂದು ಕೈಲಾಸ ವೆಬ್ ಸೈಟ್ ನಲ್ಲಿ ಹೇಳಲಾಗಿತ್ತು. ಅಷ್ಟೇ ಅಲ್ಲ ಆ ದೇಶಕ್ಕೊಂದು ಪ್ರತ್ಯೇಕ ಕಾನೂನು, ಪಾಸ್ ಪೋರ್ಟ್ ಇಲ್ಲದೆಯೇ ಕೈಲಾಸ ದೇಶಕ್ಕೆ ಬರಬಹುದು ಎಂಬಿತ್ಯಾದಿ ಮಾಹಿತಿಗಳನ್ನು ನೀಡಲಾಗಿತ್ತು.
ಉಲ್ಟಾ ಆದ ನಿತ್ಯಾನಂದನ `ಕೈಲಾಸ”!
ನಿತ್ಯಾನಂದನ ಮತ್ತೊಂದು ಹುಚ್ಚಾಟದಂತಿರುವ ಈ ಪ್ರತ್ಯೇಕ ಹಿಂದೂರಾಷ್ಟ್ರ ಕೈಲಾಸದ ಪರಿಕಲ್ಪನೆಯೇ ಉಲ್ಟಾ ಆಗಿದೆ. ಅಷ್ಟಕ್ಕೂ ಕೈಲಾಸ ಎಂಬ ಹೆಸರಿನ ಪ್ರತ್ಯೇಕ ದೇಶವೊಂದು ಈಕ್ವೆಡಾರ್ ದ್ವೀಪದಲ್ಲಿ ಉದಯವಾಗಿಲ್ಲ ಎಂದು ಸ್ವತಃ ಈಕ್ವೆಡಾರ್ ನ ಸರ್ಕಾರವೇ ಸ್ಪಷ್ಟಪಡಿಸಿದೆ.
ಈ ನಿತ್ಯಾನಂದನಿಗೆ ನಮ್ಮ ಸರ್ಕಾರದಿಂದ ಯಾವುದೇ ದ್ವೀಪವನ್ನು ನೀಡಿಲ್ಲ. ಅದನ್ನು ಖರೀದಿ ಮಾಡಲು ನಮ್ಮ ಸರ್ಕಾರ ಆತನಿಗೆ ನೆರವನ್ನೇ ನೀಡಿಲ್ಲ ಎಂದು ಈಕ್ವೆಡಾರ್ ಸರ್ಕಾರ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
ಆತ ನಮ್ಮ ನೆಲದಲ್ಲಿ ಯಾವುದೇ ಭೂಮಿಯನ್ನೂ ಖರೀದಿ ಮಾಡಿಲ್ಲ. ಆತ ತನಗೆ ಆಶ್ರಯ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದನಷ್ಟೇ. ಆದರೆ, ಈ ಮನವಿಯನ್ನು ಈಕ್ವೆಡಾರ್ ಸರ್ಕಾರ ತಿರಸ್ಕರಿಸಿತ್ತು. ಹೀಗಾಗಿ ಅವನಿಗೆ ನಮ್ಮ ದೇಶ ಆಶ್ರಯ ನೀಡುವ ವಿಚಾರವೇ ಉದ್ಭವಿಸುವುದಿಲ್ಲ. ಇಲ್ಲಿ ಆಶ್ರಯ ದೊರೆಯದಿರುವುದರಿಂದ ನಿತ್ಯಾನಂದ ಹೈಟಿಗೆ ಪಲಾಯನ ಮಾಡಿದ್ದಾನೆ ಎಂದು ಈಕ್ವೆಡಾರ್ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ಹೀಗಾಗಿ ನಿತ್ಯಾನಂದನ ಕೈಲಾಸ ದೇಶದ ವಿಚಾರವೇ ಬೊಗಳೆಯಂತಾಗಿದೆ.
ನಿತ್ಯಾನಂದನ ಅಹಮದಾಬಾದ್ ಆಶ್ರಮದಲ್ಲಿದ್ದ ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರು ಇತ್ತೀಚೆಗೆ ಬಿಡದಿಯ ಆಶ್ರಮಕ್ಕೆ ಭೇಟಿ ನೀಡಿ, ನಿತ್ಯಾನಂದನಿಗೆ ಹುಡುಕಾಟ ನಡೆಸಿದ್ದರು. ಆಗ ತಲೆಮರೆಸಿಕೊಂಡಿದ್ದ ನಿತ್ಯಾನಂದ, ಈಗ ಏಕಾಏಕಿ ವಿಡಿಯೊ ಬಿಡುಗಡೆ ಮಾಡಿ ತನ್ನ ಹೊಸ ದೇಶ ಕೈಲಾಸವು ತನ್ನದೇ ಸರ್ಕಾರ ಹೊಂದಿದ್ದು, ಗೃಹ, ಹಣಕಾಸು, ಮಾನವ ಸಂಪನ್ಮೂಲ, ರಕ್ಷಣಾ ಇಲಾಖೆಯನ್ನು ಹೊಂದಿದೆ. ಪರಶಿವ, ನಂದಿಯನ್ನೊಳಗೊಂಡ ತ್ರಿವರ್ಣ ಧ್ವಜವನ್ನು ಕೈಲಾಸ ಹೊಂದಿರಲಿದ್ದು, ತಮಿಳು, ಸಂಸ್ಕೃತ ಮತ್ತು ಇಂಗ್ಲಿಷ್ ಅಧಿಕೃತ ಭಾಷೆಯಾಗಿರಲಿವೆ ಎಂದು ಹೇಳಿಕೊಂಡಿದ್ದ.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದನ ಪಾಸ್ ಪೋರ್ಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೂ, ಹಿನ್ನೆಲೆಯಲ್ಲಿ ನೇಪಾಳ ಮಾರ್ಗವಾಗಿ ನಿತ್ಯಾನಂದ ಈಕ್ವೆಡಾರ್ ಸಮೀಪದ ತಾನು ಹೆಸರಿಟ್ಟಿರುವ ಕೈಲಾಸ ಪ್ರದೇಶ ತಲುಪಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಲವಾರು ಆರೋಪಗಳು ದಾಖಲಾಗಿರುವುದರಿಂದ 2018ರಲ್ಲೇ ನಿತ್ಯಾನಂದನ ಪಾಸ್ ಪೋರ್ಟ್ ನಿಷ್ಕ್ರಿಯವಾಗಿದೆ.
ಈ ಮಧ್ಯೆ ನಿತ್ಯಾನಂದ ಹೊಸ ದೇಶ ನಿರ್ಮಾಣಕ್ಕೆ ಅನುಮತಿ ನೀಡುವಂತೆ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಲೂ ಮುಂದಾಗಿದ್ದಾನೆ ಎಂದು ಹೇಳಲಾಗಿದೆ.