ಕೇಂದ್ರದ ಆಡಳಿತ ನೀತಿಯಿಂದ ಬೇಸತ್ತು ರಾಜಿನಾಮೆ ನೀಡಿದ್ದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರ ರಾಜಿನಾಮೆ ಇನ್ನೂ ಸ್ವೀಕೃತವಾಗಿಲ್ಲ. ಈ ಕುರಿತಾಗಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಕಣ್ಣನ್ ಅವರು ನನ್ನ ರಾಜಿನಾಮೆ ಸ್ವೀಕರಿಸಿ ಅಥವಾ ಅಮಿತ್ ಶಾ ಅವರ ರಾಜಿನಾಮೆ ಪಡೆಯಿರಿ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಉದ್ದೇಶಿಸಿ ಬರೆದಿರುವ ಟ್ವೀಟ್ನಲ್ಲಿ “ಪ್ರೀತಿಯ ಪ್ರಧಾನಿ ನರೇಂದ್ರ ಮೋದಿಯವರೇ, ನಿಮ್ಮ ಜೊತೆಗಾರರಾದ ಅಮಿತ್ ಶಾ ಅವರ ಬಳಿ ನನ್ನ ರಾಜಿನಾಮೆಯನ್ನು ಅಂಗೀಕರಿಸುವಂತೆ ದಯವಿಟ್ಟು ಹೇಳಿ. ಇಲ್ಲವಾದರೆ ಅವರ ರಾಜಿನಾಮೆ ಪ್ರಕ್ರಿಯೆಯನ್ನು ಆರಂಭಿಸಿ. ಅವರಿಗೆ ಬೇರೆ ಯಾವುದೇ ಕೆಲಸ ಸಿಗಲಾರದು. ಆದರೆ, ನನಗೆ ಸಿಗುವ ಸಾಧ್ಯತೆಯಿದೆ,” ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಈ ವಿಚಾರದ ಕುರಿತಾಗಿ ಕೋರ್ಟ್ ಮೆಟ್ಟಿಲು ಏಕೆ ಹತ್ತಬಾರದು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, “ನೀವು ಯಾವ ಕೋರ್ಟ್ ಬಗ್ಗೆ ಕೇಳುತ್ತಿದ್ದೀರಾ? ಪ್ರತಿಭಟನೆ ಕೈಬಿಟ್ಟರೆ ಮಾತ್ರ ವಿಚಾರಣೆ ಆರಂಭಿಸುತ್ತೇವೆ ಎಂದು ಹೇಳಿದ್ದ ಕೋರ್ಟ್ ಕುರಿತಾಗಿಯೇ? ಯಾವುದೇ ಗೊತ್ತು ಗುರಿಯಿಲ್ಲದೆ ಆಯ್ಕೆಯಾದ ಕೆಲವು ಜನರಿಗಿಂತ, ಜನರಿಂದ ಆಯ್ಕೆಯಾದ ಸರ್ಕಾರದಿಂದ ದೌರ್ಜನ್ಯಕ್ಕೆ ಒಳಗಾಗುವುದೇ ಒಳಿತು,” ಎಂದಿದ್ದಾರೆ.