ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ‘ಮತಾಂತರ ನಿಷೇಧ ಕಾಯ್ದೆ 2020’ಯ ಅಡಿಯಲ್ಲಿ ಮೊದಲು ಬಂಧಿತನಾಗಿದ್ದ ನದೀಮ್ ವಿರುದ್ಧ ‘ಬಲವಂತದ ಮತಾಂತರ’ ಮಾಡಿರುವುದಕ್ಕೆ ಯಾವ ಸಾಕ್ಷಿಯೂ ಇಲ್ಲ ಎಂದು ಸ್ವತಃ ಉ.ಪ್ರ ಸರ್ಕಾರ ಅಲಹಾಬಾದ್ ಹೈಕೋರ್ಟ್ ನಲ್ಲಿ ಹೇಳಿಕೆ ನೀಡಿದೆ.
ಮುಝಾಫರ್ ನಗರ್ನ ಅಕ್ಷಯ್ ಕುಮಾರ್ ಎಂಬವರು ‘ತಮ್ಮ ಪತ್ನಿ ಪಾರುಲ್ ಅವರನ್ನು ನದೀಮ್ ಮತ್ತು ಆತನ ಸಹೋದರ ಸಲ್ಮಾನ್ ಒಟ್ಟು ಸೇರಿ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದಾರೆ’ ಎಂದು ಸ್ಥಳೀಯ ಠಾಣೆಯಲ್ಲಿ ಎಫ್.ಐ. ಆರ್ ದಾಖಲಿಸಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಔಷಧ ಕಂಪೆನಿಯೊಂದರಲ್ಲಿ ಕಾರ್ಮಿಕರ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಅಕ್ಷಯ್ ಕುಮಾರ್ ತ್ಯಾಗಿ ಅವರ ಮನೆಗೆ 32 ವರ್ಷದ ನದೀಮ್ ಆಗಾಗ ಭೇಟಿ ಕೊಡುತ್ತಿದ್ದರು ಮತ್ತು ಅವರ ಹೆಂಡತಿ ಪಾರುಲ್ ಅವರನ್ನು ‘ಪ್ರೀತಿಯ ಜಾಲ’ದಲ್ಲಿ ಸಿಲುಕಿಸಿ ಮತಾಂತರ ಮಾಡಲು ಯತ್ನಿಸಲಾಗಿದೆ ಎಂದು ಆರೋಪಿಸಿದ್ದರು.
ಕಳೆದ ತಿಂಗಳು ನದೀಮ್ ಅವರು ತಮ್ಮ ಮೇಲೆ ದಾಖಲಿಸಿರುವ ಎಫ್ಐಆರ್ನ್ನು ರದ್ದು ಪಡಿಸುವಂತೆ ಕೋರಿ ಕೋರ್ಟಿಗೆ ಸಲ್ಲಿಸಿರುವ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ಮುಂದಿನ ವಿಚಾರಣೆಯವರೆಗೆ ಪೊಲೀಸರು ಆತನ ವಿರುದ್ದ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೇಳಿದ್ದರು. ಗುರುವಾರ ಮತ್ತೊಮ್ಮೆಅವರ ವಿಚಾರಣೆಯನ್ನು ಎತ್ತಿಕೊಂಡಿದ್ದು ವಾದ ವಿವಾದಗಳನ್ನು ಆಲಿಸಿದ ಬಳಿಕ ವಿಚಾರಣೆಯನ್ನು ಜನವರಿ ಹದಿನೈದಕ್ಕೆ ಮುಂದೂಡಿದೆ.
“ಘನತೆವೆತ್ತ ನ್ಯಾಯಾಲಯದ ಮುಂದೆ ಪ್ರಕರಣ ಇವತ್ತು ವಿಚಾರಣೆಗೆ ಬಂದಾಗ ಸರ್ಕಾರ ಸಹೋದರರ ಮೇಲೆ ಮತಾಂತರ ನಿಷೇಧ ಮಸೂದೆಯಡಿಯಲ್ಲಿ ಕೇಸು ದಾಖಲಿಸಿದ್ದು ತಪ್ಪು ನಡೆಯಾಗಿದ್ದು, ತನಿಖೆಯಲ್ಲಿ ಆತ ಬಲವಂತವಾಗಿ ಮತಾಂತರ ನಡೆಸಲು ಯತ್ನಿಸಿದ್ದಕ್ಕೆ ಯಾವ ಕುರುಹೂ ಸಿಗಲಿಲ್ಲ ಎಂದು ಅಫಿಡವಿಟ್ ಸಲ್ಲಿಸಿದೆ” ಎಂದು ನದೀಮ್ನ ವಕೀಲರಾದ ಸಯ್ಯದ್ ಫರ್ಮಾನ್ ಅಹ್ಮದ್ ನಖ್ವಿ ತಿಳಿಸಿದ್ದಾರೆ.
ಆದರೆ ಅಫಿಡವಿಟ್ನಲ್ಲಿ “ಆರೋಪಿ ನದೀಮ್ ಅಕ್ಷಯ್ ಅವರನ್ನು ಬೆದರಿಸಿದ್ದಾರೆ ಎಂಬುವುದು ತನಿಖಾಧಿಕಾರಿಗೆ ತಿಳಿದು ಬಂದಿದ್ದು ‘ಸಾರ್ವಜನಿಕ ಶಾಂತಿ ಕದಡಿ’ದ್ದಕ್ಕಾಗಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ” ಎಂದು ಉಲ್ಲೇಖಿಸಲಾಗಿದೆ.
ಕೊನೆಯ ವಿಚಾರಣೆಯಲ್ಲಿ “ಬಲವಂತದ ಮತಾಂತರ ನಡೆಸಿರುವುದಕ್ಕೆ ತನ್ನ ಮುಂದೆ ಯಾವುದೇ ದಾಖಲೆ ಸಲ್ಲಿಸಲಾಗಿಲ್ಲ” ಎಂದು ಮಹತ್ವದ ಹೇಳಿಕೆ ನೀಡಿದ ಕೋರ್ಟ್ “ಮಹಿಳೆಯು ವಯಸ್ಕಳಾಗಿದ್ದು ತನ್ನ ಹಿತವನ್ನು ಅರಿತುಕೊಂಡು ಮುನ್ನೆಡೆ ಇಡಲು ಸಮರ್ಥಳು” ಎಂದೂ ಹೇಳಿದೆ.
ಬಲಫಂಥೀಯ ಸಂಘಟನೆಗಳ ಒತ್ತಾಸೆಯಂತೆ ದೇಶದಲ್ಲೇ ಮೊದಲ ಬಾರಿ ಈ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಉ.ಪ್ರ ಸರ್ಕಾರ ಈ ಕಾಯ್ದೆಯನ್ವಯ ಮೊದಲು ಬಂಧಿಸಿದ್ದ ವ್ಯಕ್ತಿಯ ವಿರುದ್ಧದ ಆರೋಪ ಸಾಬೀತು ಪಡಿಸುವಲ್ಲಿ ಸೋತಿದೆ. ಸ್ವತಃ ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ‘ಲವ್ ಜಿಹಾದ್ ಕಾನೂನಿನ ಪ್ರಕಾರ ವ್ಯಾಖ್ಯಾನಕ್ಕೆ ಒಳಪಟ್ಟಿಲ್ಲ’ ಎಂದು ಹೇಳಿಕೆ ನೀಡಿದ್ದರೂ ಬಿಜೆಪಿ ಆಡಳಿತ ಇರುವ ಹಲವು ರಾಜ್ಯಗಳು ಕಪೋಲ ಕಲ್ಪಿತ ‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸಹೊರಟಿವೆ.