ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಅವಹೇಳನಕಾರಿ ಹೇಳಿಕೆ ಕುರಿತಂತೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಮೊದಲ ದಿನದ ಕಲಾಪ ಪೂರ್ತಿ ಇದೇ ವಿಚಾರಕ್ಕೆ ವ್ಯರ್ಥವಾಯಿತು. ಎರಡನೇ ದಿನವೂ ಅದೇ ಪರಿಸ್ಥಿತಿ ಮುಂದುವರಿದಿದ್ದು, ಈ ಕುರಿತು ನಿಯಮಾವಳಿ ಪ್ರಕಾರ ನೋಟಿಸ್ ನೀಡದ ಕಾರಣ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪೀಕರ್ ಹೇಳಿದರೆ, ಚರ್ಚೆಯಾಗಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ, ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.
ಪ್ರತಿಪಕ್ಷಗಳು ಹೇಳುವಂತೆ ಖಂಡಿತವಾಗಿಯೂ ಈ ವಿಚಾರ ಸದನದಲ್ಲಿ ಗಂಭೀರ ಚರ್ಚೆಯಾಗಬೇಕಾದ ವಿಚಾರ. ಅಷ್ಟೇ ಅಲ್ಲ, ಈ ಕುರಿತು ಸುದೀರ್ಘ ಚರ್ಚೆಗಳಾಗಿ ಜನರಿಂದ ಆಯ್ಕೆಯಾದವರು ಯಾವ ರೀತಿ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂಬುದನ್ನು ನಿರ್ಧಿರಿಸಿ ಅದಕ್ಕೆ ಸೂಕ್ತವಾದ ನಿರ್ಣಯವನ್ನು ಕೈಗೊಳ್ಳಬೇಕಾದ ಪ್ರಕರಣವಿದು. ಇದು ಕೇವಲ ದೊರೆಸ್ವಾಮಿ ಅವರ ಬಗ್ಗೆ ಯತ್ನಾಳ್ ನೀಡಿದ ಹೇಳಿಕೆಗೆ ಸಂಬಂಧಿಸಿ ಮಾತ್ರವಲ್ಲ, ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿಗಳು, ಪ್ರತಿಪಕ್ಷ ನಾಯಕರುಗಳು ಹೀಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಬಗ್ಗೆ ನಾಲಿಗೆ ಹರಿಬಿಡುವವರಿಗೆ ಸೂಕ್ತ ಪಾಠ ಹೇಳಬೇಕಾದ ಅಗತ್ಯವೂ ಇದೆ. ಜತೆಗೆ ಕಾನೂನು ರೂಪಿಸುವ ಜಾಗದಲ್ಲಿದ್ದರೂ (ಶಾಸಕಾಂಗ ಅಥವಾ ಸಂಸತ್ತು) ಸಮಾಜದ ಸ್ವಾಸ್ಥ್ಯ ಕದಡುವಂಥ ಹೇಳಿಕೆ ನೀಡುವವರಿಗೂ ಈ ಚರ್ಚೆಯ ಮೂಲಕ ಉತ್ತರ ನೀಡುವ ಕೆಲಸ ಆಗಬೇಕಾಗಿತ್ತು. ಈ ಕಾರಣಕ್ಕಾಗಿಯೇ ದೊರೆಸ್ವಾಮಿ ಅವರ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಕುರಿತಂತೆ ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡುವುದು ಸ್ಪೀಕರ್ ಎಂಬ ಜವಾಬ್ದಾರಿ ಹುದ್ದೆಯಲ್ಲಿ ಕುಳಿತವರ ಜವಾಬ್ದಾರಿಯೂ ಆಗಿದೆ.
ಸದನದಲ್ಲಿ ಸೋಮವಾರದಿಂದ ಈ ಕುರಿಚ ಚರ್ಚೆಗೆ ಪಟ್ಟು ಹಿಡಿದ ಪ್ರತಿಪಕ್ಷಗಳು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ಮೂಡಿಸಿತ್ತು. ಅದಕ್ಕಾಗಿಯೇ ಎರಡು ದಿನ ಶಾಸಕಾಂಗ ಪಕ್ಷದ ಸಭೆ ಕರೆದು ತನ್ನ ಸದಸ್ಯರೆಲ್ಲರಿಗೂ ಸದನದಲ್ಲಿ ಹೇಗೆ ವ್ಯವಹರಿಸಬೇಕು ಎಂದು ನಾಯಕರು ಪಾಠವನ್ನೂ ಮಾಡಿದ್ದರು. ಯಾವ ನಿಯಮಾವಳಿಯಡಿ ಚರ್ಚೆಗೆ ಅವಕಾಶ ಎಂದು ನೋಟಿಸ್ ನೀಡುವಂತೆ ಸ್ಪೀಕರ್ ಸೂಚನೆಯನ್ನು ಪಾಲಿಸಿದ ಕಾಂಗ್ರೆಸ್ ನಾಯಕರು, ನಿಯಮ 362ರ ಅಡಿಯಲ್ಲಿ ನೋಟಿಸ್ ಕೂಡ ನೀಡಿದ್ದರು. ಅಷ್ಟರ ಮಟ್ಟಿಗೆ ಕಾಂಗ್ರೆಸ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ, ಅದರಲ್ಲೂ ಮುಖ್ಯವಾಗಿ ಬಿಜೆಪಿಗೆ ತಿರುಗೇಟು ನೀಡಲು ಸಜ್ಜಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಯಡವಟ್ಟು ಮಾಡುವ ಮೂಲಕ ಸದನದಲ್ಲಿ ಈ ಕುರಿತ ಚರ್ಚೆಗಿಂತ ಗದ್ದಲವೆಬ್ಬಿಸಿ ಹೋಗುವುದೇ ತನಗೆ ಮುಖ್ಯ ಎನ್ನುವ ರೀತಿಯಲ್ಲಿ ವರ್ತಿಸಿತು.
ಕಾಂಗ್ರೆಸ್ ಮಾಡಿದ ಯಡವಟ್ಟಿನಿಂದ ಚರ್ಚೆಗೂ ಅವಕಾಶ ಸಿಗಲಿಲ್ಲ
ಎಚ್.ಎಸ್.ದೊರೆಸ್ವಾಮಿ ಅವರ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಕೀಳು ಹೇಳಿಕೆ ಕುರಿತಂತೆ ಚರ್ಚಿಸಲು ನಿಯಮ 363ರ ಅಡಿಯಲ್ಲಿ ನೋಟಿಸ್ ನೀಡಿತ್ತು. ನಿಯಮಾವಳಿಯಂತೆ ಈ ನಿಯಮದಡಿ ನೋಟಿಸ್ ನೀಡಿದರೆ ಸ್ಪೀಕರ್ ಅವರು ಚರ್ಚೆಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಆದರೆ, ಈ ನೋಟಿಸ್ ನಲ್ಲಿ ವಿಷಯಗಳನ್ನು ಪ್ರಸ್ತಾಪಿಸುವಾಗ ಯಡವಟ್ಟು ಮಾಡಿದ ಕಾಂಗ್ರೆಸ್, ಬಸನಗೌಡ ಪಾಟೀಲ್ ಅವರು ದೊರೆಸ್ವಾಮಿ ಅವರ ಬಗ್ಗೆ ಮಾಡಿದ ಟೀಕೆಗಳೆಲ್ಲವನ್ನೂ ಪ್ರಸ್ತಾಪಿಸಿ, ಇದರ ಆಧಾರದ ಮೇಲೆ ಯತ್ನಾಳ್ ಅವರನ್ನು ವಿಧಾನಸಭೆಯ ಸದಸ್ಯ ಸ್ಥಾನದಿಂದ ಉಚ್ಛಾಟಿಸಬೇಕು ಎಂದು ಕೋರಿದ್ದರು.
ಈ ವಿಚಾರ ಸದನದಲ್ಲಿ ಚರ್ಚೆಯಾಗಬಾರದು ಎಂದು ಕಾಯುತ್ತಿದ್ದ ಆಡಳಿತ ಪಕ್ಷ ಮತ್ತು ಸ್ಪೀಕರ್ ಅವರಿಗೆ ಕಾಂಗ್ರೆಸ್ ಮಾಡಿದ ಈ ಯಡವಟ್ಟು ಮುಳುಗುವವನಿಗೆ ಹುಲುಕಡ್ಡಿಯ ಆಸರೆ ಎಂಬಂತೆ ಆಯಿತು. ಯತ್ನಾಳ್ ಅವರ ವಿರುದ್ಧ ಆರೋಪ ಮಾಡಿ ಅವರನ್ನು ಸದಸ್ಯತ್ವದಿಂದ ಉಚ್ಛಾಟಿಸಬೇಕು ಎಂದು ನಿಯಮ 363ರಡಿ ನೀಡಿದ ನೋಟಿಸ್ ನಲ್ಲಿ ಪ್ರಸ್ತಾಪಿಸಿದ್ದನ್ನೇ ಮುಂದಿಟ್ಟುಕೊಂಡು ಸ್ಪೀಕರ್ ಚರ್ಚೆಗೆ ಅವಕಾಶ ನಿರಾಕರಿಸಿದರು. ಈ ಬಗ್ಗೆ ಸ್ಪೀಕರ್ ಮಾತುಗಳಲ್ಲೇ ಹೇಳುವುದಾದರೆ, ವಿರೋಧ ಪಕ್ಷದ ನಾಯಕರು (ಸಿದ್ದರಾಮಯ್ಯ) ನೀಡಿರುವ ಸೂಚನೆಯು ನಿಯಮ 363ರ ಅಡಿ ಬಾರದೇ ಇದ್ದರೂ ವಿವೇಚನಾಧಿಕಾರ ಬಳಸಿ ಸದನದಲ್ಲಿ ಚರ್ಚಿಸಲು ಒಪ್ಪಿದ್ದೆ. ಆದರೆ, ಅವರು ಸದನದ ಸದಸ್ಯರೊಬ್ಬರ ಮೇಲೆ ಆಪಾದನೆ ಮಾಡುತ್ತಿರುವುದರಿಂದ ನಿಯಮ 328ರ ಅಡಿ ಸೂಚನೆ ಕೊಡಬೇಕಿತ್ತು ಮತ್ತು ಸೂಚನೆಯ ಪ್ರತಿಯನ್ನು ಪ್ರತಿಯೊಬ್ಬ ಸದಸ್ಯ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಿಗೆ ನೀಡಬೇಕಿತ್ತು.
ಸೂಚನೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಗಳನ್ನು ಆಧರಿಸಿವೆ. ಆದರೆ, ನಿಯಮಾವಳಿಯನ್ವಯ ಪತ್ರಿಕೆಗಳ ವರದಿಯ ಆಧಾರದ ಮೇಲೆ ಮಾಡಿರುವ ಆಪಾದನೆಗಳನ್ನು ಪ್ರಸ್ತಾಪಿಸಲು ಅನುಮತಿ ನೀಡಲು ಅವಕಾಶವಿರುವುದಿಲ್ಲ. ಮೇಲಾಗಿ ಸೂಚನೆಯಲ್ಲಿ ಪ್ರತಿಪಕ್ಷ ನಾಯಕರು ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಹೇಳಬೇಕಾದ್ದೆಲ್ಲವನ್ನೂ ಹೇಳಿ ಅವರಿಗೆ ಯಾವ ಶಿಕ್ಷೆ ನೀಡಬೇಕು ಎಂಬುದನ್ನೂ ಹೇಳಿದ್ದಾರೆ. ಸದಸ್ಯರಿಗೆ ಶಿಕ್ಷೆ ವಿಧಿಸುವ ಅಧಿಕಾರ ಸ್ಪೀಕರ್ ಮತ್ತು ಸದನಕ್ಕೆ ಸೇರಿರುತ್ತದೆ. ಇನ್ನೊಂದೆಡೆ ಸೂಚನೆಯಲ್ಲಿ ಪ್ರಸ್ತಾಪಿಸಿರುವ ವಿಚಾರ ಸದನದ ಹೊರಗೆ ನಡೆದ ಘಟನೆ. ಅಲ್ಲದೆ, ಸದಸ್ಯರು (ಬಸನಗೌಡ ಪಾಟೀಲ್ ಯತ್ನಾಳ್) ಮೂಲಭೂತ ಕರ್ತವ್ಯ ಉಲ್ಲಂಘನೆ ಮಾಡಿರುವುದು ಕೂಡ ಇಲ್ಲಿ ಕಂಡುಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಸೂಚನೆಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲಿಗೆ ಪ್ರಕರಣದ ಕುರಿತ ಚರ್ಚೆಗೆ ಅವಕಾಶ ಸಿಗದಂತಾಗಿದೆ.
ಪ್ರತಿಪಕ್ಷಗಳಿಗೆ, ಅದರಲ್ಲೂ ಕಾಂಗ್ರೆಸ್ಸಿಗೆ, ದೊರೆಸ್ವಾಮಿ ಅವರನ್ನು ನಿಂದಿಸಿದ ಪ್ರಕರಣದ ಬಗ್ಗೆ ನಿಜವಾಗಿಯೂ ಚರ್ಚೆ ಮಾಡಬೇಕು ಎಂದಿದ್ದರೆ ನಿಯಮ 363ರಡಿ ಸೂಚನೆ ಮೂಲಕ ಚರ್ಚೆಗೆ ಅವಕಾಶ ಕೋರಬಹುದಿತ್ತು. ಸೂಚನೆಯಲ್ಲಿ ಹೇಳುವ ವಿಚಾರಗಳನ್ನು ಚರ್ಚೆಯ ವೇಳೆ ಪ್ರಸ್ತಾಪಿಸಿ ಬಸನಗೌಡ ಪಾಟೀಲ್ ಅವರ ಮೇಲೆ ಆರೋಪಗಳನ್ನು ಮಾಡಿ ಅವರನ್ನು ಉಚ್ಛಾಟಿಸಬೇಕು ಎಂದು ಒತ್ತಾಯಿಸಬಹುದಿತ್ತು. ಆದರೆ, ನಿಯಮ 363ರ ಅಡಿ ನೀಡಿದ ಸೂಚನೆಯಲ್ಲಿ ಆರೋಪಗಳನ್ನು ಮಾಡಿ ಇಂತಹ ಶಿಕ್ಷೆ ನೀಡಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿತು. ಸ್ಪೀಕರ್ ಹೇಳಿದಂತೆ ಕಾಂಗ್ರೆಸ್ ಒಂದೊಮ್ಮೆ ನಿಯಮ 328ರ ಅಡಿ ಸೂಚನೆ ಸಲ್ಲಿಸಿದ್ದರೆ ಆಗಲೂ ಚರ್ಚೆಗೆ ಅವಕಾಶ ಸಿಗುತ್ತಿರಲಿಲ್ಲ. ಏಕೆಂದರೆ, ಸದಸ್ಯರೊಬ್ಬರ ವಿರುದ್ಧ ಆರೋಪ ಮಾಡಿದಾಗ ಆ ಕುರಿತು ಆರೋಪಕ್ಕೊಳಗಾದ ಸದಸ್ಯರಿಗೆ ನೋಟಿಸಿ ಜಾರಿ ಮಾಡಿ 15 ದಿನಗಳ ಕಾಲಾವಕಾಶ ನೀಡಬೇಕು. ನಂತರವಷ್ಟೇ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲು ಅವಕಾಶವಿರುತ್ತದೆ.
ಹಾಗೆಂದು ಇಲ್ಲಿ ಕಾಂಗ್ರೆಸಿಗರು ಮಾತ್ರ ತಪ್ಪು ಮಾಡಿದ್ದಾರೆ ಎಂದು ಅರ್ಥವಲ್ಲ. ಸರ್ಕಾರದ ಬಣ್ಣವೂ ಸ್ಪೀಕರ್ ನಿಲುವಿನಿಂದ ಬಯಲಾಯಿತು. ಚರ್ಚೆಗೆ ಅವಕಾಶ ನೀಡುವ ಮನಸ್ಸಿದ್ದರೆ, ಕಾಂಗ್ರೆಸ್ ನೀಡಿದ್ದ ಸೂಚನೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಮಾಡಿರುವ ಆರೋಪಗಳು, ಅವರನ್ನು ಉಚ್ಛಾಟಿಸಬೇಕು ಎಂಬ ಕೋರಿಕೆಯನ್ನು ಬದಿಗಿಟ್ಟು ಚರ್ಚೆಗೆ ಅವಕಾಶ ಮಾಡಿಕೊಡಲು ಸ್ಪೀಕರ್ ಅವರಿಗೆ ಅಧಿಕಾರವಿತ್ತು. ಅಥವಾ ಬೇರೆ ನಿಯಮದಡಿ ಚರ್ಚೆಗೆ ಅವಕಾಶ ಕೊಡಬಹುದಿತ್ತು. ಆದರೆ, ಚರ್ಚೆ ನಡೆಸುವುದೇ ಇಷ್ಟವಿಲ್ಲದ ಸ್ಪೀಕರ್ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ನಿಯಮಗಳನ್ನು ಹೇಳಿ ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಇದರಿಂದ ಕಾಂಗ್ರೆಸ್ ಸದನದ ಕಲಾಪ ಬಹಿಷ್ಕರಿಸಿ ಇಲ್ಲವೇ, ಸದನದಲ್ಲೇ ಧರಣಿ ನಡೆಸಿ ಹೋರಾಟ ನಡೆಸಬೇಕೇ ಹೊರತು ಚರ್ಚೆಗಂತೂ ಸದ್ಯ ಅವಕಾಶ ಇಲ್ಲದಂತಾಗಿದೆ.