ನಿರುದ್ಯೋಗ ಸಮಸ್ಯೆ, ಅಗತ್ಯವಸ್ತುಗಳ ದರ ಏರಿಕೆ, ಜನಸಾಮಾನ್ಯರ ಖರೀದಿ ಶಕ್ತಿ ಕುಂದುವುದು, ಆರ್ಥಿಕ ಅಭಿವೃದ್ಧಿ ಹಿಮ್ಮುಖ ಚಲಿಸುವುದು- ಇವೆಲ್ಲವೂ ದಿಕ್ಕೆಟ್ಟ ಆರ್ಥಿಕ ವ್ಯವಸ್ಥೆಯ ಲಕ್ಷಣಗಳು. ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ಎಲ್ಲಾ ಸಾಧನೆಗಳೂ ಆಗಿವೆ. ದೇಶದ ಆರ್ಥಿಕತೆ ದಿಕ್ಕೆಟ್ಟಿದೆ. ಆರ್ಥಿಕಾಭಿವೃದ್ಧಿಯು ಶೇ.-23.5ರಷ್ಟು ಹಿಮ್ಮುಖವಾಗಿ ಚಲಿಸಿದೆ. ಬರುವ ದಿನಗಳಲ್ಲಿ ಹಿಮ್ಮುಖ ಚಲನೆ ಮತ್ತಷ್ಟು ತ್ವರಿತವಾಗಿರಲಿದೆ ಎಂಬುದು ಬಹುತೇಕ ಆರ್ಥಿಕ ತಜ್ಞರ ಮುನ್ನಂದಾಜು. ದೇಶದ ಹಣಕಾಸು ವ್ಯವಸ್ಥೆ ನಿಯಂತ್ರಿಸುವ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ದೇಶದ ಆರ್ಥಿಕತೆಯು ಹಿನ್ನಡೆಯಿಂದ ಹಿಂಜರಿತದತ್ತ ಸಾಗಿದೆ ಎಂಬುದನ್ನು ಹೇಳಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೇಶವು ಕೋವಿಡ್-19 ಎರಡನೇ ಹಂತದ ಅಲೆಯ ತೆಕ್ಕೆಗೆ ಸಿಕ್ಕುವ ಅಪಾಯದಂಚಿನಲ್ಲಿದೆ. ಕೋವಿಡ್-19 ಸೋಂಕಿಗೆ ಔಷಧ ಕಂಡುಹಿಡಿಯುವ ಪ್ರಯತ್ನಗಳು ಸಫಲತೆಯತ್ತ ಸಾಗಿವೆ. ಈ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತಾವೇ ಕೋವಿಡ್-19 ಕ್ಕೆ ಔಷಧಿ ಕಂಡು ಹಿಡಿದವರಂತೆ ಬೀಗುತ್ತಿದ್ದಾರೆ. ಅದಕ್ಕೆ ಬಿಹಾರ ಚುನಾವಣೆಯಲ್ಲಿ ಕೂದಲೆಳೆಯಂಚಿನಲ್ಲಿ ವಿಜಯ ಸಾಧಿಸಿದ್ದೇ ಕಾರಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಅಧಿಕಾರಕ್ಕೆ ಬಂದರೆ, ಬಿಹಾರದ ಜನರಿಗೆಲ್ಲರಿಗೂ ಕೋವಿಡ್-19 ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿ ನಗೆಪಾಟಲೀಡಾಗಿದ್ದ ನರೇಂದ್ರ ಮೋದಿ ಸರ್ಕಾರವು ಇದುವರೆಗೆ ಬರೀ ಪ್ರಚಾರ ಮಾಡಿದ್ದು ಬಿಟ್ಟರೆ, ಲಸಿಕೆ ತಯಾರಿಸುವ, ಖರೀದಿಸುವ, ಸಂಗ್ರಹಿಸುವ, ವಿತರಿಸುವ ನಿಟ್ಟಿನಲ್ಲಿ ಏನೂ ಮಾಡಿಲ್ಲ. ಇವೆಲ್ಲವನ್ನೂ ಈಗಷ್ಟೇ ಮಾಡಲಾರಂಭಿಸಿದೆ. ಮೋದಿ ಪರವಾಗಿರುವ ಮಾಧ್ಯಮಗಳು ಮಾತ್ರ ಮೋದಿಯೇ ಲಸಿಕೆಯನ್ನು ಆವಿಷ್ಕರಿಸಿದ್ದಾರೆಂಬಂತೆ ಸಂ‘ಭ್ರಮಿಸುತ್ತಾ’ ಪ್ರಚಾರ ಮಾಡುತ್ತಿವೆ.
ಇವೆಲ್ಲದರ ನಡುವೆಯೂ ನಡೆದಿರುವ ಪ್ರಮುಖ ಬೆಳವಣಿಗೆ ಎಂದರೆ, ಈ ಹಿಂದೆ ದೇಶದ ಆರ್ಥಿಕತೆಯ ದಿಕ್ಸೂಚಿಯಂತಿದ್ದ ಷೇರುಪೇಟೆಯು ಗಗನಕ್ಕೆ ಜಿಗಿಯುತ್ತಿದೆ. ದೇಶದ ಆರ್ಥಿಕತೆ ಪಾತಾಳಕ್ಕಿಳಿದಿರುವುದರ ಪರಿವೆಯೇ ಷೇರುಪೇಟೆಗೆ ಇದ್ದಂತಿಲ್ಲ. ಷೇರುಪೇಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ 44,500 ಅಂಶಗಳನ್ನು, ನಿಫ್ಟಿ 13,000 ಅಂಶಗಳನ್ನು ದಾಟಿ ಸರ್ವಕಾಲಿಕ ದಾಖಲೆ ಮಾಡಿವೆ. ಇಡೀ ಷೇರುಪೇಟೆಯು ಸ್ವರ್ಗಸದೃಶ ಸ್ಥಿತಿಯಲ್ಲಿ ತೇಲಾಡುತ್ತಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಷೇರು ದರಗಳು ಪಾತಾಳಕ್ಕೆ ಇಳಿದಿದ್ದರೂ ಮೋದಿ ಪರವಾಗಿರುವ ಕಾರ್ಪೊರೆಟ್ ಕುಳಗಳು ನಡೆಸುತ್ತಿರುವ ಖಾಸಗಿ ಬ್ಯಾಂಕುಗಳ ಷೇರುಗಳ ದರಗಳು ಸರ್ವಕಾಲಿಕ ಗರಿಷ್ಠಮಟ್ಟ ಮುಟ್ಟಿದ್ದು, ಬ್ಯಾಂಕ್ ನಿಫ್ಟಿ ಸೂಚ್ಯಂಕವೂ ಸರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ.
ಈ ಬೆಳವಣಿಗೆಯ ಆಂತರ್ಯವನ್ನು ಅರಿಯಬೇಕಾದರೆ, ಷೇರುಪೇಟೆಯಲ್ಲಾಗುತ್ತಿರುವ ಏರಿಳಿತಗಳನ್ನು ಗಮನಿಸಬೇಕು. ಕಳೆದ ಆರು ವರ್ಷಗಳಲ್ಲಿ ಯಾರು ಪಾತಳಕ್ಕೆ ಬಿದ್ದರು ಮತ್ತು ಯಾರು ಗಗನಕ್ಕೆ ಜಿಗಿದರು ಎಂಬುದನ್ನು ಗಮನಿಸಬೇಕು. ವಾಸ್ತವವಾಗಿ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಉತ್ತಮ ಆಡಳಿತ, ಉತ್ಪಾದನೆ, ಗುಣಮಟ್ಟ ಹಾಗೂ ಲಾಭ ತರುವಲ್ಲಿ ಸದಾ ಮುಂದಿದ್ದ ನವರತ್ನಗಳೆಂದೆ ಹೆಸರಾಗಿರುವ ಸಾರ್ವಜನಿಕ ಉದ್ಯಮಗಳು ಪಾತಾಳಕ್ಕೆ ಇಳಿದಿವೆ.
ಇದೇ ಅವಧಿಯಲ್ಲಿ ಪ್ರಧಾನಿ ಮೋದಿ ಆಪ್ತರಾದ ಅಂಬಾನಿ, ಅದಾನಿ ಕಂಪನಿಗಳ ಷೇರುಗಳು ನಾಲ್ಕೈದು, ಆರೇಳುಪಟ್ಟು ಜಿಗಿದಿವೆ. ಇಡೀ ಷೇರುಪೇಟೆಯನ್ನು ನಿಯಂತ್ರಿಸುವ ಗುಜರಾತ್ ಮೂಲದ ಷೇರುದಲ್ಲಾಳಿಗಳು ಸದಾ ಮಾರುಕಟ್ಟೆಯು ಏರುಹಾದಿಯಲ್ಲಿರುವಂತೆ ನೋಡಿಕೊಂಡಿದ್ದಾರೆ. ಷೇರುಪೇಟೆ ಕುಸಿಯಲು ಕಾರಣವಾಗುವ ಸುದ್ದಿಗಳು ಹೊರಬಿದ್ದಾಗಲೆಲ್ಲ, ಮೋದಿ ಸರ್ಕಾರವು ಷೇರುಪೇಟೆಯಲ್ಲಿ ಅತಿದೊಡ್ಡ ಹೂಡಿಕೆದಾರನಾಗಿರುವ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಬಳಸಿಕೊಂಡು ಷೇರುಪೇಟೆ ಕುಸಿತವನ್ನು ತಡೆದಿದೆ.
ಅಂದರೆ, ಮೋದಿ ಸರ್ಕಾರವು ಹೇಗೆ ಕಳೆದ ಆರು ವರ್ಷಗಳಲ್ಲಿ ಅಭಿವೃದ್ಧಿ ಕುರಿತಂತೆ ತಪ್ಪು ಮಾಹಿತಿಗಳನ್ನು, ಸುಳ್ಳು ಅಂಕಿಅಂಶಗಳನ್ನು ನೀಡುತ್ತಾ ಬಂದಿದೆಯೋ ಹಾಗೆಯೇ, ಷೇರುಪೇಟೆ ನಿಯಂತ್ರಿಸುವ ದಲ್ಲಾಳಿಗಳು, ಕಾರ್ಪೊರೆಟ್ ಕುಳಗಳು ಷೇರುಪೇಟೆ ಸೂಚ್ಯಂಕಗಳು ಸದಾ ಜಿಗಿಯುವಂತೆ ನೋಡಿಕೊಂಡಿವೆ. ತತ್ಪರಿಣಾಮವಾಗಿ ಸೆನ್ಸೆಕ್ಸ್, ನಿಫ್ಟಿ, ಬ್ಯಾಂಕು ನಿಫ್ಟಿ ಸೂಚ್ಯಂಕಗಳು ಸರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿವೆ.
ಜಾಗತಿಕ ಮಟ್ಟದ ಸೂಚ್ಯಂಕಗಳು ಬಹುತೇಕ ಸರಾಸರಿ ಗರಿಷ್ಠಮಟ್ಟದ ಶೇ.20-30ರಷ್ಟು ಕಡಮೆ ಮಟ್ಟದಲ್ಲಿ ವಹಿವಾಟಾಗುತ್ತಿದ್ದರೂ (ಆಯ್ದ ಕೆಲವೇ ಕೆಲವು ಸೂಚ್ಯಂಕಗಳು ವಾರ್ಷಿಕ ಗರಿಷ್ಠಮಟ್ಟ ಸಮೀಪಿಸಿವೆ) ದೇಶೀಯ ಷೇರುಪೇಟೆ ಸೂಚ್ಯಂಕಗಳು ಜಿಗಿಯುತ್ತಲೇ ಇವೆ. ಸೂಚ್ಯಂಕಗಳು ಸರ್ವಕಾಲಿಕ ಗರಿಷ್ಠಮಟ್ಟಕ್ಕೆ ಜಿಗಿದ ತಕ್ಷಣವೇ ಇಡೀ ದೇಶದ ಬಂಡವಾಳ ಪೇಟೆಯಾಗಲೀ, ಉತ್ಪಾದನಾ ಮತ್ತು ಸೇವಾವಲಯವಾಗಲೀ ಉತ್ತಮ ಸ್ಥಿತಿಗೆ ವಾಪಾಸಾಗಿದೆ ಎಂದೇನೂ ಅಲ್ಲ. ನಿಫ್ಟಿಯ 50 ಷೇರುಗಳ ಪೈಕಿ ಆಗ್ರ ಹತ್ತು ಷೇರುಗಳು ಹಾಗೂ ಸೆನ್ಸೆಕ್ಸ್ ನ ಅಗ್ರ ಎಂಟು ಷೇರುಗಳು ಸರ್ವಕಾಲಿಕ ಗರಿಷ್ಠಮಟ್ಟ ಮುಟ್ಟಿವೆ. ಈ ಷೇರುಗಳ ವೇಯ್ಟೇಜ್ ಸೂಚ್ಯಂಕದಲ್ಲಿ ಶೇ.50-60ರಷ್ಟಿರುವುದರಿಂದ ಸೂಚ್ಯಂಕವೂ ಜಿಗಿದಿದೆ. ವಾಸ್ತವವಾಗಿ ಸಾವಿರಾರು ಕಂಪನಿಗಳು ಷೇರುಗಳು ಇನ್ನೂ ವಾರ್ಷಿಕ ಕನಿಷ್ಠ ಮಟ್ಟದಲ್ಲೇ ವಹಿವಾಟಾಗುತ್ತಿವೆ. ಕೆಲವಂತೂ ಸರ್ವಾಕಾಲಿಕ ಕನಿಷ್ಠಮಟ್ಟದಲ್ಲೂ ವಹಿವಾಟಾಗುತ್ತಿವೆ.
ಕಾರ್ಪೊರೆಟ್ ಅಂಕಿಅಂಶಗಳ ಮೇಲೂ ಅನುಮಾನ!
ಕಳೆದ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿರುವ ಕಾರ್ಪೊರೆಟ್ ಕಂಪನಿಗಳು ಆರ್ಥಿಕತೆ ಚೇತರಿಕೆಯಾಗುತ್ತಿದೆ ಎಂಬುದನ್ನು ಪ್ರತಿಬಿಂಬಿಸುವಂತಹ ಅಂಕಿಅಂಶಗಳನ್ನು ಬಿಡುಗಡೆ ಮಾಡಿವೆ. ಅದರಲ್ಲೂ ಆಟೋಮೊಬೈಲ್ ಕಂಪನಿಗಳು ಬಿಡುಗಡೆ ಮಾಡಿರುವ ಅಂಕಿಅಂಶಗಳು ಖುದ್ದು ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಅವರು ಮುನ್ನಂದಾಜಿಸಿದ್ದ ಅಂಕಿಅಂಶಗಳನ್ನೇ ಬುಡಮೇಲು ಮಾಡಿವೆ. ದೇಶದಲ್ಲಿನ್ನು ಆರ್ಥಿಕ ಚಟುವಟಿಕೆ ಪೂರ್ಣಪ್ರಮಾಣದಲ್ಲಿ ಆರಂಭವಾಗಿಲ್ಲ, ರೈಲು, ವಿಮಾನ, ರಸ್ತೆ ಸಾರಿಗೆ ಸಂಚಾರವೂ ಯಥಾಸ್ಥಿತಿಗೆ ಮರಳಿಲ್ಲ. ನಿರುದ್ಯೋಗ ಪ್ರಮಾಣವು ಲಾಕ್ ಡೌನ್ ಘೋಷಣೆ ಆದಾಗ ಇದ್ದ ಸರ್ವಕಾಲಿಕ ಪ್ರಮಾಣಕ್ಕಿಂತ ಕೊಂಚ ತಗ್ಗಿದೆ. ಅಂದರೆ, ಉದ್ಯೋಗ ಸೃಷ್ಟಿ ಶೇ.10-30ರಷ್ಟುಮಾತ್ರ ಆಜುಬಾಜಿನಲ್ಲಿ ಹೆಚ್ಚುತ್ತಿದೆ. ಇಷ್ಟಿದ್ದೂ ವಾಹಾನಗಳ ಮಾರಾಟ ತ್ವರಿತವಾಗಿ ಜಿಗಿದಿದೆ ಎಂಬಂತಹ ಅಂಕಿಅಂಶಗಳನ್ನು ಆಟೋ ಮೊಬೈಲ್ ಕಂಪನಿಗಳು ಬಿಡುಗಡೆ ಮಾಡಿವೆ. ವಿವಿಧ ಕಂಪನಿಗಳ ಅಚ್ಚರಿಯ ಫಲಿತಾಂಶವೂ ಅನುಮಾನಕ್ಕೆಡೆ ಮಾಡಿದೆ. ಇಡೀ ಕಾರ್ಪೊರೆಟ್ ವಲಯವೇ ಮೋದಿ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ತ್ವರಿತವಾಗಿ ಚೇತರಿಸಿಕೊಳ್ಳುತ್ತಿದೆ ಎಂಬುದನ್ನು ಬಿಂಬಿಸಲು ಮುಂದಾಗಿದೆಯೇ ಎಂಬ ಅನುಮಾನ ಬರುತ್ತಿದೆ. ಅತ್ತ ಭಾರತೀಯ ರಿಸರ್ವ್ ಬ್ಯಾಂಕ್, ವಿಶ್ವಬ್ಯಾಂಕ್, ಏಷಿಯಾ ಅಭಿವೃದ್ಧಿ ಬ್ಯಾಂಕ್, ವಿವಿಧ ರೇಟಿಂಗ್ ಏಜೆನ್ಸಿಗಳು ಆರ್ಥಿಕತೆಯು ಇನ್ನೂ ಮೂರು-ನಾಲ್ಕು ತ್ರೈಮಾಸಿಕಗಳ ಕಾಲ ಕುಸಿತದ ಹಾದಿಯಲ್ಲೇ ಇರಲಿದೆ ಎಂಬ ಮುನ್ನಂದಾಜು ಮಾಡಿದ್ದರೂ ಕಾರ್ಪೊರೆಟ್ ಕಂಪನಿಗಳ ಫಲಿತಾಂಶ ಮಾತ್ರ ಬೇರೆಯದೇ ‘ಕತೆ’ಯನ್ನು ಹೇಳುತ್ತಿದೆ.
ಕೋವಿಡ್-19 ಸೋಂಕಿಗೆ ಲಸಿಕೆ ಸಿದ್ದವಾಗುವ ಹಂತದಲ್ಲಿರುವುದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದಲ್ಲಿ ಹೆಚ್ಚಿನ ಹೂಡಿಕೆಗೆ ಆಸಕ್ತಿ ವಹಿಸಿರುವುದು, ಅಮೆರಿಕದಲ್ಲಿ ಟ್ರಂಪ್ ಆಡಳಿತಾವಧಿ ಮುಕ್ತಾಯವಾಗಿ ಜೋ ಬೈಡೆನ್ ಅಧಿಕಾರ ಗ್ರಹಿಸುತ್ತಿರುವುದು, ಆಟೋ ಕಂಪನಿಗಳ ಉತ್ತಮ ಫಲಿತಾಂಶ ಘೋಷಿಸಿರುವುದು ಷೇರುಪೇಟೆ ಜಿಗಿಯಲು ಕಾರಣ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಈ ಅಭಿಪ್ರಾಯಗಳು ಸೂಚ್ಯಂಕಗಳ ಜಿಗಿತಕ್ಕೆ ಸೀಮಿತವಾಗಿರಬಹುದು.
ವಾಸ್ತವವಾಗಿ ಷೇರುಪೇಟೆಯು ದೇಶದ ಆರ್ಥಿಕತೆಯ ದಿಕ್ಸೂಚಿಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುವುವುದು ವಾಡಿಕೆ. ಆದರೆ, ಕಳೆದ ಆರು ವರ್ಷಗಳಲ್ಲಿ ಈ ವಾಡಿಕೆಗೆ ವ್ಯತಿರಿಕ್ತವಾಗಿ ಮಾರುಕಟ್ಟೆ ಜಿಗಿಯುತ್ತಿದೆ. ದೇಶದ ಆರ್ಥಿಕತೆ ಹದಗೆಟ್ಟಿ ಹೋದರೂ ಪ್ರಧಾನಿ ಮೋದಿಯ ಜನಪ್ರಿಯತೆ ಹೆಚ್ಚುತ್ತಲೇ ಇರುವಂತೆ, ಆರ್ಥಿಕ ಅಭಿವೃದ್ಧಿ ಅತ್ಯಂತ ಕನಿಷ್ಠಮಟ್ಟಕ್ಕೆ ಕುಸಿದಿದ್ದರೂ ಷೇರುಪೇಟೆ ಮಾತ್ರ ಜಿಗಿಯುತ್ತಲೇ ಇದೆ.
ಆಡಳಿತಾರೂಢ ಪಕ್ಷ, ಪ್ರಧಾನಿ, ವಿತ್ತ ಸಚಿವರು, ಪ್ರಧಾನಿಗಳ ಮುಖ್ಯ ಆರ್ಥಿಕ ಸಲಹೆಗಾರರು, ಮೋದಿ ಪರ ಮಾಧ್ಯಮ ಮತ್ತು ಮೋದಿ ಭಕ್ತರಿಗೆ ಈ ಬೆಳವಣಿಗೆಯು ಆಶಾದಾಯಕ ಎನಿಸಬಹುದು. ಮೋದಿಯನ್ನು ಮತ್ತೆ ಮತ್ತೆ ಎತ್ತಿ ಮೆರೆಯಲೊಂದು ಕಾರಣವಾಗಿರಬಹುದು. ಆದರೆ, ವಾಸ್ತವಿಕ ಸ್ಥಿತಿಯೇ ಬೇರೆ ಇದೆ. ಮೋದಿ ಸರ್ಕಾರದ ಅಂಕಿಅಂಶಗಳಂತೆ ಷೇರುಪೇಟೆಯ ಸೂಚ್ಯಂಕಗಳ ಪಾವಿತ್ರ್ಯತೆಯೂ ಕ್ಷೀಣಸಿದೆ. ಷೇರುಪೇಟೆ ಜಿಗಿದರೆ, ಮೋದಿ ಆಪ್ತರಾದ, ಅಂಬಾನಿ, ಅದಾನಿ, ಮತ್ತಿತರ ಕಾರ್ಪೊರೆಟ್ ಕುಳಗಳ ಸಂಪತ್ತು ವೃದ್ಧಿಸುತ್ತದೆ. ದೇಶದಲ್ಲಿನ ಜನಸಾಮಾನ್ಯರ ಸಮಸ್ಯೆ ಪರಿಹಾರವಾಗುವುದಿಲ್ಲ. ನಿರುದ್ಯೋಗ ಸಮಸ್ಯೆ ಬಗೆಹರಿಯುವುದಿಲ್ಲ. ಮುಖ್ಯವಾಗಿ ಪೆಟ್ರೋಲ್ ಮತ್ತು ಡಿಸೇಲ್ ಗೆ ಜಗತ್ತಿನಲ್ಲೇ ಅತಿ ಹೆಚ್ಚು ದರ ತೆರುತ್ತರುವ ಭಾರತದ ಬಡಪಾಯಿ ಗ್ರಾಹಕನ ಹೊರೆ ಇಳಿಯುವುದಿಲ್ಲ!